ಪ್ರಿಯಕರನ ಮಾತು ಕೇಳಿ ಪತಿಯನ್ನೇ ಸಾಯಿಸಿದ ಪತ್ನಿ

accused
accused
Published on

ಪ್ರಮುಖ ಮುಖ್ಯಾಂಶಗಳು

  • ಪ್ರಕರಣ ಸಂಬಂಧ ಮೂವರನ್ನು ಬಂಧಿಸಿದ ಪೊಲೀಸ್
  • ಆವಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು
  • ಕೊಲೆ ಬಳಿಕ ಹೃದಯಾಘಾತವೆಂದು ನಾಟಕ
ಬೆಂಗಳೂರು: ಅನಾರೋಗ್ಯ ಪೀಡಿತ ಪತಿಗೆ ಉಸಿರುಗಟ್ಟಿಸಿ ಕೊಲೆ ಮಾಡಿದ್ದಲ್ಲದೇ ಹೃದಯಾಘಾತವಾಗಿದೆ ಎಂದು ಬಿಂಬಿಸಲು ಯತ್ನಿಸಿದ್ದ ಪತ್ನಿ ಸೇರಿ ಮೂವರನ್ನು ಆವಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಿತ್ತಗನೂರಿನ ಯಲ್ಲಪ್ಪ ಗಾರ್ಡನ್‌ನಲ್ಲಿ ವಾಸವಾಗಿದ್ದ ಮೃತನ ಪತ್ನಿ ಶಾಹಿನಾ ಬಾನು, ಈಕೆಯ ತಾಯಿ ಹಸೀನಾ ಹಾಗೂ ಪ್ರಿಯಕರ ನಹೀಂ ವುದ್ದೀನ್ ಖುರೇಶಿ ಬಂಧಿತರು. ಈ ಮೂವರು ಸೇರಿ ಮುಬಾರಕ್‌ನನ್ನು ಕೊಲೆಮಾಡಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆಯಾದ ಮುಬಾರಕ್ 20 ವರ್ಷಗಳ ಹಿಂದೆ ಶಾಹಿನಾಳನ್ನು ಮದುವೆಯಾಗಿದ್ದ. 2 ವರ್ಷಗಳ ಹಿಂದೆ ಆತನಿಗೆ ಪಾಶ್ವವಾಯು ಸಂಭವಿಸಿ, ಹಾಸಿಗೆ ಹಿಡಿದಿದ್ದ. ಈ ಅವಧಿಯಲ್ಲಿ ಇವರ ಮಗಳಿಗೂ ಅನಾರೋಗ್ಯ ಸಮಸ್ಯೆ ಕಾಡುತ್ತಿತ್ತು. ಮಗಳ ಆರೋಗ್ಯ ಸರಿಪಡಿಸುವುದಾಗಿ ಮನೆಗೆ ಬಂದಿದ್ದ ನಹೀಂ ವುದ್ದೀನ್ ಮೇಲೆ ಶಾಹಿನಾಳಿಗೆ ಅಕ್ರಮ ಸಂಬಂಧ ಉಂಟಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಶಾಹಿನಾಳು ತನ್ನ ಪ್ರಿಯಕರ ನಹೀಂವುದ್ದೀನ್ ಬಳಿ ತನ್ನ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದಳು. ಆಗ ಪತಿಯ ಆರೋಗ್ಯ ಸುಧಾರಿಸುತ್ತಿಲ್ಲ. ಆತನ ಆರೈಕೆ ಮಾಡುವುದು ಕಷ್ಟವಾಗುತ್ತಿದೆ ಎಂದು ತನ್ನ ನೋವನ್ನು ಹೇಳಿಕೊಂಡಿದ್ದಳು. ಆಗ ಅವನು ಸಾಯಿಸುವ ಸಲಹೆ ನೀಡಿದ್ದ. ಹಾಗಾಗಿ ಪ್ರಿಯಕರನ ಸಲಹೆ ಮೇರೆಗೆ ಸೆ.9ರಂದು ಶಾಹಿನಾ ಮತ್ತು ಹಸೀನಾ ಮುಬಾರಕ್‌ಗೆ ಉಸಿಗಟ್ಟಿಸಿ ಖಾಸಗಿ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದರು.
ಹೃದಯಾಘಾತ ಆಗಿದೆಯೆಂದು ನಾಟಕ: ಕೊಲೆ ಮಾಡಿದ ಬಳಿಕ ಶಾಹಿನಾ ತನ್ನ ಸಂಬಂಧಿಕರೆಲ್ಲರಿಗೂ ಸಾವಿನ ಸುದ್ದಿ ತಿಳಿಸಿ, ಹೃದಯಾಘಾತವಾಗಿದೆ ಎಂದು ನಾಟಕವಾಡಿದ್ದಳು. ಈ ಬಗ್ಗೆ ಕೆಲ ಸಂಬಂಧಿಕರಿಗೆ ಅನುಮಾನ ಬಂದಿತ್ತು. ಅವರು ಠಾಣೆಗೆ ದೂರು ಸಲ್ಲಿಸಿದ ಬಳಿಕ ಪೊಲೀಸ್ ತನಿಖೆಯಲ್ಲಿ ಸತ್ಯಾಂಶ ಗೊತ್ತಾಗಿದೆ. ಮರಣೋತ್ತರ ಪರೀಕ್ಷೆಯಲ್ಲೂ ಕೊಲೆಯ ಬಗ್ಗೆ ಪ್ರಸ್ತಾಪವಾಗಿತ್ತು. ಈ ಹಿನ್ನೆಲೆ ಪೊಲೀಸರು ಮೂವರನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net