ಸಕಲೇಶಪುರ: ಮಲೆನಾಡು ಪ್ರದೇಶದಲ್ಲಿ ಬಹುವಾರ್ಷಿಕ ವಾಣಿಜ್ಯ ಬೆಳೆ ಪ್ರತಿವರ್ಷ ಸಮೀಕ್ಷೆ ನಡೆಸುವ ಅಗತ್ಯ ಹಾಗೂ ಅದರ ವೈಜ್ಞಾನಿಕ ಮತ್ತು ಆಡಳಿತಾತ್ಮಕ ಪ್ರಯೋಜನಗಳ ಕುರಿತು ಸರ್ಕಾರ ಮರುಪರಿಶೀಲಿಸಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಬೆಳೆ ಸಮೀಕ್ಷೆದಾರರು ಹಾಗೂ ಮೇಲ್ವಿಚಾರಕರ ತರಬೇತಿ ಮತ್ತು ಪೂರ್ವಸಿದ್ಧತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಕಲೇಶಪುರ ತಾಲೂಕು ಸಂಪೂರ್ಣ ಮಲೆನಾಡು ಪ್ರದೇಶವಾಗಿದ್ದು, ಇಲ್ಲಿನ ಹವಾಮಾನಕ್ಕೆ ಅನುಗುಣವಾಗಿ ವಿವಿಧ ಬಹುವಾರ್ಷಿಕ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಈ ಬೆಳೆಗಳನ್ನು ಸ್ಥಾಪಿಸಲು ರೈತರು ಆರಂಭದಲ್ಲಿಯೇ ಹೆಚ್ಚಿನ ಬಂಡವಾಳ ಹೂಡಿಕೆ ಮಾಡುವುದರಿಂದ ವರ್ಷದಿಂದ ವರ್ಷಕ್ಕೆ ಬೆಳೆ ಬದಲಿಸುವ ಪದ್ಧತಿ ಸಾಮಾನ್ಯವಾಗಿಲ್ಲ. ಬಹುತೇಕ ತೋಟಗಳಲ್ಲಿ 30-35 ವರ್ಷಗಳವರೆಗೆ ಯಥಾ ಬೆಳೆ ಪದ್ಧತಿ ಮುಂದುವರಿಯುತ್ತದೆ. ಹೀಗಾಗಿ ಪ್ರತಿವರ್ಷ ಬೆಳೆ ಸಮೀಕ್ಷೆ ನಡೆಸುವ ಅಗತ್ಯದ ಕುರಿತು ಅಧಿಕಾರಿಗಳು ಸರ್ಕಾರದ ಗಮನಕ್ಕೆ ತರಬೇಕು ಎಂದರು.
ನ್ಯಾಯಯುತ ಗೌರವಧನ ನೀಡಲಿ: ಮಲೆನಾಡಿನ ಗುಡ್ಡಗಾಡು ಪ್ರದೇಶಗಳು, ಹಳ್ಳ-ಕಂದಕಗಳು ಹಾಗೂ ಕಾಡುಪ್ರಾಣಿಗಳ ಹಾವಳಿ ಇರುವ ಪ್ರದೇಶಗಳಲ್ಲಿ ಸಮೀಕ್ಷೆದಾರರು ಕಾರ್ಯನಿರ್ವಹಿಸುತ್ತಿರುವುದರಿಂದ ಅವರ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹಾವು, ಆನೆ ಹಾಗೂ ಕಾಡುಕೋಣಗಳ ಹಾವಳಿ ಇರುವ ಪ್ರದೇಶಗಳಲ್ಲಿ ವಿಶೇಷ ಮುನ್ನೆಚ್ಚರಿಕೆ ವಹಿಸಬೇಕು. ಪ್ರತಿದಿನ ಕಾಫಿ ತೋಟಗಳಲ್ಲಿ ಕೂಲಿ ಕೆಲಸ ಮಾಡುವುದಕ್ಕಿಂತಲೂ ಕಡಿಮೆ ಗೌರವಧನಕ್ಕೆ ಸಮೀಕ್ಷೆದಾರರು ಕಾರ್ಯ ನಿರ್ವಹಿಸುತ್ತಿರುವುದು ಕಳವಳಕಾರಿ. ಒಂದು ಸಮೀಕ್ಷೆಗೆ ಗರಿಷ್ಠ 21 ರೂ. ಗೌರವಧನ ದೊರೆಯುತ್ತಿದ್ದು, ಇದನ್ನು ಪರಿಷ್ಕರಿಸಿ ನ್ಯಾಯಯುತ ಗೌರವಧನ ನಿಗದಿಪಡಿಸಬೇಕು ಎಂದು ಶಾಸಕ ಸಿಮೆಂಟ್ ಮಂಜು ಒತ್ತಾಯಿಸಿದರು.
ಕಾಫಿ ಬೆಳೆಗಾರರ ಸಂಘದ ಕಸಬಾ ಹೋಬಳಿ ಅಧ್ಯಕ್ಷ ಮೇಘರಾಜ್ ಮಾತನಾಡಿ, ತೋಟದಿಂದ ತೋಟಕ್ಕೆ ತೆರಳಿ ಸಮೀಕ್ಷೆ ನಡೆಸುವುದು ಸವಾಲಿನ ಕೆಲಸವಾಗಿದ್ದು, ತೋಟಗಳ ಒಳಭಾಗದಲ್ಲಿ ಜಿಪಿಎಸ್ ಸಿಗ್ನಲ್ ಸಮರ್ಪಕವಾಗಿ ದೊರೆಯದಿರುವುದು ಹಾಗೂ ಕೆಲವೆಡೆ ಪ್ರವೇಶಕ್ಕೆ ಅವಕಾಶ ನೀಡದಿರುವುದು ಸಮಸ್ಯೆಯಾಗಿದೆ. ಒಂದು ತಾಕಿನ ಬೆಳೆ ಸಮೀಕ್ಷೆಗೆ ಕನಿಷ್ಠ 50 ರೂ. ಗೌರವಧನ ನಿಗದಿಪಡಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಹೆತ್ತೂರು ದೇವರಾಜು, ಸಹಾಯಕ ಕೃಷಿ ನಿರ್ದೇಶಕ ಪ್ರಕಾಶ್ ಕುಮಾರ್ ಯು.ಎಂ., ಸಹಾಯಕ ತೋಟಗಾರಿಕಾ ಅಧಿಕಾರಿ ನಿತಿನ್ ಹಾಗೂ ಕೃಷಿ ಅಧಿಕಾರಿ ಕೇಶವಮೂರ್ತಿ, ಉಪತಹಸೀಲ್ದಾರ್ ಸುನಿಲ್ ಸೇರಿದಂತೆ ಕೃಷಿ, ಕಂದಾಯ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಕೃಷಿ ಸಖಿಯರು ಮತ್ತು ಬೆಳೆ ಸಮೀಕ್ಷೆದಾರರು ಉಪಸ್ಥಿತರಿದ್ದರು.