ಮುಖ್ಯಮಂತ್ರಿ ಸ್ಥಾನದಲ್ಲಿರುವ ಸಿದ್ದರಾಮಯ್ಯ ಅವರೇ, ವಾಚ್ ವಿಚಾರದಲ್ಲಿ ಸುಳ್ಯಾಕೆ ಹೇಳುತ್ತೀರಿ? ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಒಂದೇ ಕಂಪೆನಿಯ ವಾಚ್ ಧರಿಸಿದ್ದಾರೆ. ಇದೊಂದು ಕಾಂಗ್ರೆಸ್ ಕಂಪೆನಿ ಇದ್ದಂತೆ ಎಂದು ಟೀಕಿಸಿದರು.
ಚುನಾವಣೆಗೆ ಡಿ.ಕೆ.ಶಿವಕುಮಾರ್ ನೀಡಿರುವ ಅಫಿಡವಿಟ್‌ನಲ್ಲಿ ಒಂದು ರೋಲೆಕ್ಸ್ ವಾಚ್ 9 ಲಕ್ಷ. ಹೂಬ್ಲೋಟ್ ವಾಚ್ 23,90,246 ರೂ. ಎಂದಿದ್ದಾರೆ. ಅವರಿಬ್ಬರ ಕೈಯಲ್ಲಿ ಕಾರ್ಟಿಯರ್ ಕಂಪೆನಿಯ ವಾಚ್ ಇದೆ. ಯಾಕೆ ಈ ಮಾಹಿತಿ ತಿಳಿಸಿಲ್ಲ ಎಂದು ಕೇಳಿದರು.
ವಾಚ್‌ಗೆ ಇವತ್ತಿನ ದರ 43 ಲಕ್ಷ. ತೆರಿಗೆ ಸೇರಿ 46 ರಿಂದ 47 ಲಕ್ಷ ಆಗುತ್ತದೆ. ಇದು ಕದ್ದ ಮಾಲೇ? ಕೊಂಡ ಮಾಲೇ? ಒಂದುವೇಳೆ ನೀವು ರಾಜ್ಯಕ್ಕೆ ಸುಳ್ಳು ಹೇಳಿದ್ದೀರಾ? ಕಾರ್ಡಿನಿಂದ ಪಾವತಿ ಆಗಿದ್ದರೆ ದಾಖಲೆ ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಅವರು ವಾಚ್‌ಗಳ ಪ್ರಿಯರು. ಅವರ ವಾಚ್‌ಗಳು ಕೋಟ್ಯಂತರ ರೂ. ಮೌಲ್ಯದ್ದು. ಅವರ ಶೂ ಕೂಡ ಲಕ್ಷಾಂತರ ರೂ. ಬೆಲೆಯದು ಎಂದು ವಿವರಿಸಿದರು.
ಒಂದೂವರೆ ವರ್ಷ ಹಿಂದೆ ನಾನು ವಾಚ್‌ಗಳ ಬಗ್ಗೆ ಹೇಳಿದ್ದಾಗ, 8 ವಾಚ್ ಇತ್ತು. ಈಗ 18- 19 ವಾಚ್ ಗಳು ಇವೆ ಎಂಬ ಮಾಹಿತಿ ಲಭಿಸಿದೆ ಎಂದರು.
ವಾಚೇನೋ ಸರಿ ಇರಬಹುದು. ಅದರಲ್ಲಿ ತೋರಿಸುವ ಸಮಯ ಸರಿ ಇಲ್ಲ. ನಿಮ್ಮ ಸಮಯ ಸರಿ ಇದ್ದರೆ ಇವೆಲ್ಲ ಬರುತ್ತಿರಲಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಅವರು ವ್ಯಂಗ್ಯವಾಗಿ ತಿಳಿಸಿದರು.
*ಚುನಾವಣಾ ಅಫಿಡವಿಟ್‌ನಲ್ಲಿ ನನ್ನ ಬಳಿ ರೋಲೆಕ್ಸ್, ಹೂಬ್ಲೋಟ್ ವಾಚ್ ಸೇರಿ 2 ವಾಚ್ ಇದೆ ಎಂದು ಹೇಳಿದ್ದಾರೆ. ಈಗ ಕಾರ್ಟಿಯರ್ ಕಂಪೆನಿ ವಾಚ್ ಹೇಗೆ? ಎಲ್ಲಿಂದ ಬಂತು? -ಛಲವಾದಿ ನಾರಾಯಣಸ್ವಾಮಿ, ವಿರೋಧ ಪಕ್ಷದ ನಾಯಕ, ವಿಧಾನ ಪರಿಷತ್