ನಾಡಹಬ್ಬ ಜಿಲ್ಲೆಗೊಂದು ಯಾಕೆ..? ಮೈಸೂರು ಮಾದರಿ ಆಚರಣೆ ನೆಪದಲ್ಲಿ ಎಡವಟ್ಟುಗಳ ಸರಮಾಲೆ!

ಬೆಂಗಳೂರು: ನಾನೂರು ವರ್ಷಗಳಿಗೂ ಮೀರಿದ ಐತಿಹಾಸಿಕ ಹಿನ್ನೆಲೆ, ಭವ್ಯ ಪರಂಪರೆ ಹೊಂದಿರುವ ಕರ್ನಾಟಕದ ನಾಡಹಬ್ಬ ಮೈಸೂರು ದಸರಾ ಜಗತ್ಪ್ರಸಿದ್ಧ ಆಚರಣೆ ಎಂಬ ವರ್ಚಸ್ಸು ಉಳಿಸಿಕೊಂಡಿದೆ. ಆದರೆ ಇತ್ತೀಚೆಗೆ ಪ್ರತಿ ಜಿಲ್ಲೆಯಲ್ಲೂ ಮೈಸೂರು ಮಾದರಿ ದಸರಾ ಆಚರಣೆ ಶುರುವಾಗಿರುವ ಪರಿಣಾಮ ನಾಡಹಬ್ಬದ ಮಹತ್ವವೇ ಕಡಿಮೆಯಾಗುತ್ತಿರುವ ಭಾವನೆಗೆ ಆಸ್ಪದ ಕೊಟ್ಟಂತಾಗಿದೆ.
ನಾಡಹಬ್ಬ ಜಿಲ್ಲೆಗೊಂದು ಯಾಕೆ..? ಮೈಸೂರು ಮಾದರಿ ಆಚರಣೆ ನೆಪದಲ್ಲಿ ಎಡವಟ್ಟುಗಳ ಸರಮಾಲೆ!
Published on: 

ಬೆಂಗಳೂರು: ನಾನೂರು ವರ್ಷಗಳಿಗೂ ಮೀರಿದ ಐತಿಹಾಸಿಕ ಹಿನ್ನೆಲೆ, ಭವ್ಯ ಪರಂಪರೆ ಹೊಂದಿರುವ ಕರ್ನಾಟಕದ ನಾಡಹಬ್ಬ ಮೈಸೂರು ದಸರಾ ಜಗತ್ಪ್ರಸಿದ್ಧ ಆಚರಣೆ ಎಂಬ ವರ್ಚಸ್ಸು ಉಳಿಸಿಕೊಂಡಿದೆ. ಆದರೆ ಇತ್ತೀಚೆಗೆ ಪ್ರತಿ ಜಿಲ್ಲೆಯಲ್ಲೂ ಮೈಸೂರು ಮಾದರಿ ದಸರಾ ಆಚರಣೆ ಶುರುವಾಗಿರುವ ಪರಿಣಾಮ ನಾಡಹಬ್ಬದ ಮಹತ್ವವೇ ಕಡಿಮೆಯಾಗುತ್ತಿರುವ ಭಾವನೆಗೆ ಆಸ್ಪದ ಕೊಟ್ಟಂತಾಗಿದೆ.

ಜಿಲ್ಲಾ ಕೇಂದ್ರಗಳಲ್ಲಿ ದಸರಾ ಆಚರಣೆಗೆ ವಿವಿಧ ಸರ್ಕಾರಿ ಇಲಾಖೆಗಳಿಂದ ಹಣ ಬಿಡುಗಡೆ ಮಾಡಿಸಿ ದುಂದುವೆಚ್ಚ ಒಂದೆಡೆ ನಡೆಯುತ್ತಿದ್ದರೆ, ಮತ್ತೊಂದೆಡೆ ಮುನ್ನೆಚ್ಚರಿಕೆ ಕ್ರಮಗಳ ವಿಚಾರದಲ್ಲಿ ಜಿಲ್ಲಾಡಳಿತ ವಿಫಲವಾಗುತ್ತಿವೆ. ಪ್ರತಿ ಜಿಲ್ಲೆಯಲ್ಲೂ ಭದ್ರತೆ ಕೊಡುವ ಜತೆಗೆ ಇಡೀ ಅಧಿಕಾರಿ ವರ್ಗ ತೊಡಗಿಸಿಕೊಳ್ಳುವುದರಿಂದ ಮೈಸೂರು ದಸರಾ ಹಬ್ಬಕ್ಕೆ ಕೊಡಬೇಕಾಗಿದ್ದ ಪ್ರಾಶಸ್ತ್ಯ ಕಡಿಮೆಯಾಗುತ್ತಿದೆ.

750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಮೂರ್ತಿಯನ್ನಿಟ್ಟು ಅರಮನೆಯಿಂದ ಬನ್ನಿಮಂಟಪದ ವರೆಗಿನ ಜಂಬೂಸವಾರಿ ಮೆರವಣಿಗೆ ನೋಡಲು ರಾಜ್ಯವಷ್ಟೇ ಅಲ್ಲ, ದೇಶ, ವಿದೇಶದಿಂದ ಜನರು ಆಗಮಿಸುತ್ತಾರೆ. ಮೈಸೂರು ಅರಮನೆ, ನಗರದ ಪ್ರಮುಖ ಬೀದಿಗಳಲ್ಲಿ ಲಕ್ಷಾಂತರ ವಿದ್ಯುತ್​ ದೀಪಗಳಿಂದ ಅಲಂಕಾರ, ದಸರಾ ವಸ್ತು ಪ್ರದರ್ಶನ, ಪಂಜಿನ ಕವಾಯತು ನೋಡಲು ಜನಸಾಗರ ಸೇರುತ್ತದೆ. ಮೈಸೂರು ದಸರಾ ನೋಡಲು ಬರುವ ಲಕ್ಷಾಂತರ ಜನರಿಗೆ ಭದ್ರತೆ ಒದಗಿಸುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿರುತ್ತದೆ. ಆದರಿಂದ ಅಕ್ಕಪಕ್ಕದ ಜಿಲ್ಲೆಗಳಿಂದ ಪೊಲೀಸರನ್ನು ಮತ್ತು ಅಧಿಕಾರಿ ವರ್ಗವನ್ನು ನಿಯೋಜನೆ ಮಾಡುತ್ತಾರೆ. ಆದರೆ, ಅಕ್ಕಪಕ್ಕದ ಜಿಲ್ಲೆಗಳಲ್ಲಿಯೂ ದಸರಾ ಆಚರಣೆಗೆ ಭದ್ರತೆ ಒದಗಿಸುವ ಹಿನ್ನೆಲೆಯಲ್ಲಿ ಮೈಸೂರು ದಸರಾಗೆ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲು ಸಾಧ್ಯವಾಗದೆ ಇದ್ದವರ ಕೈಯಲ್ಲಿಯೇ ಡಬಲ್​ ಡ್ಯೂಟಿ ಮಾಡಿಸುವ ಪರಿಸ್ಥಿತಿ ಎದುರಾಗಿದೆ. ಮತ್ತೊಂದೆಡೆ ಸಚಿವರು, ಶಾಸಕರು ಪ್ರಭಾವ ಬಳಸಿ ಅಂಬಾರಿ ಹೊರಲು ಆನೆಗಳನ್ನು ಕಳುಹಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಾರೆ.

ಎಲ್ಲೆಲ್ಲಿ ಆಚರಣೆ?

ಶಿವಮೊಗ್ಗ, ತುಮಕೂರು, ಚಾಮರಾಜನಗರ, ಮಡಿಕೇರಿ, ವಿಜಯನಗರ, ರಾಯಚೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮೈಸೂರು ಮಾದರಿಯಲ್ಲಿ ದಸರಾ ಆಚರಣೆ ನಡೆಸಲಾಗುತ್ತಿದೆ.

ಆಡಳಿತ ವರ್ಗ ಎದುರಿಸುವ ಪ್ರಮುಖ ಸವಾಲು

  • ಮೈಸೂರಿಗೆ ವಿವಿಧ ಜಿಲ್ಲಾ ಕೇಂದ್ರಗಳಿಂದ ಅಧಿಕಾರಿಗಳ ನಿಯೋಜನೆ

  • ಲಕ್ಷಾಂತರ ಜನರಿಗೆ ಸೂಕ್ತ ಭದ್ರತೆ ಒದಗಿಸುವಲ್ಲಿ ಪೊಲೀಸರು ಹೈರಾಣ

  • ಬೇರೆ ಬೇರೆ ಜಿಲ್ಲೆಗಳಲ್ಲೂ ದಸರಾಚರಣೆಯಿಂದ ಭದ್ರತೆಯದ್ದೇ ಚಿಂತೆ

  • ಎಲ್ಲ ಕಡೆ ಒಟ್ಟೊಟ್ಟಿಗೆ ಕೆಲಸ ಮಾಡುವುದರಿಂದ ಅಧಿಕಾರಿಗಳಿಗೆ ಒತ್ತಡ

  • ಅಂಬಾರಿಗೆ ಆನೆ ಕಳಿಸುವಂತೆ ಅರಣ್ಯಾಧಿಕಾರಿಗಳ ಮೇಲೆ ಒತ್ತಡ

  • ತರಬೇತಿ ಪಡೆಯದ ಆನೆ ಬಳಕೆಯಿಂದ ಶಿವಮೊಗ್ಗ ಮಾದರಿ ಅವಘಡ

ಮಾರ್ಗಸೂಚಿ ಪ್ರಕಾರ ತರಬೇತಿ ಇಲ್ಲದ ಆನೆಗಳನ್ನು ದಸರಾದಲ್ಲಿ ಬಳಸಿಕೊಳ್ಳುವುದರಿಂದ ಅನಾಹುತ ಹೆಚ್ಚಾಗುತ್ತಿವೆ. ಶಿವಮೊಗ್ಗದಲ್ಲಿ ಬೆಳ್ಳಿ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಮೆರವಣಿಗೆ ವೇಳೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ದಾಟುತ್ತಿದ್ದಂತೆ ಮಾವುತನ ಆಜ್ಞೆಯನ್ನು ಬಿಟ್ಟು ಅಡ್ಡಾದಿಡ್ಡಿ ಓಡಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಉಂಟು ಮಾಡಿ ಆತಂಕ ಸೃಷ್ಟಿಸಿದ್ದು ಇದಕ್ಕೆ ತಾಜಾ ಉದಾಹರಣೆ.

ಕಲ್ಯಾಣದಲ್ಲೂ ದಸರಾ ಕೂಗು: ಕಲ್ಯಾಣ ಕರ್ನಾಟಕ ಭಾಗದಲ್ಲಿಯೂ ಮುಂದಿನ ವರ್ಷದಿಂದ ಮೈಸೂರು ಮಾದರಿ ದಸರಾ ಆಚರಿಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ. ಇದೇ ರೀತಿಯಾಗಿ ಮುಂದಿನ ದಿನಗಳಲ್ಲಿ ಪ್ರತಿಯೊಂದು ಜಿಲ್ಲೆಯಲ್ಲೂ ದಸರಾ ಆಚರಣೆ ಶುರುವಾದರೆ ಮೈಸೂರಿನ ದಸರಾದ ವೈಭವ ಕುಗ್ಗಲಿದೆ.

ಪರಂಪರೆ: ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಶುರುವಾದ ದಸರಾ ಮಹೋತ್ಸವ, ಮೈಸೂರು ಮಹಾರಾಜರಿಂದ ಔನ್ನತ್ಯ ಕಂಡಿತು. ಸ್ವಾತಂತ್ರ್ಯಾನಂತರ ರಾಜ್ಯ ಸರ್ಕಾರಗಳು ಈ ಆಚರಣೆಯನ್ನು ಪರಂಪರೆಗೆ ಅನುಗುಣವಾಗಿ ಮುಂದುವರಿಸಿಕೊಂಡು ಬಂದಿವೆ. ಇತ್ತೀಚಿನ ವರ್ಷಗಳಲ್ಲಿ ಜಿಲ್ಲಾ ದಸರಾ ನೆಪದಲ್ಲಿ ಅಂಬಾರಿ, ಜಂಬೂ ಸವಾರಿ ಎಲ್ಲದರಲ್ಲೂ ಮೈಸೂರಿನ ಅನುಕರಣ ಮಾಡುವ ಮೂಲಕ ನಾಡ ಹಬ್ಬದ ಮಹತ್ವ ತಗ್ಗಿಸಿದಂತ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ತೆರಿಗೆ ಹಣ ಬಳಕೆ: ಪ್ರತಿ ಜಿಲ್ಲೆಯಲ್ಲೂ ಮಣ್ಣಿನ ಸೊಗಡಿನ ಸಂಸ್ಕೃತಿ, ಹಬ್ಬ ಇರುತ್ತವೆ. ಆದರೆ ಇದೀಗ ಪ್ರತಿ ಜಿಲ್ಲೆಗಳಲ್ಲೂ ದಸರಾ ಆಚರಣೆಗೆ ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತಂದು ಅನುದಾನ ಬಿಡುಗಡೆ ಮಾಡಿಸಿಕೊಂಡು ದುಂದುವೆಚ್ಚ ಮಾಡುತ್ತಿದ್ದಾರೆ. ಬರಗಾಲ ಇದ್ದಾಗಲೂ ದುಂದುವೆಚ್ಚ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ನಮಗಿದು ಎಚ್ಚರಿಕೆ ಗಂಟೆ ಎಂದ ಸಿಎಂ

ಶಿವಮೊಗ್ಗ ದಸರಾದಲ್ಲಿ ನಡೆದಂತಹ ದುರ್ಟನೆಗಳ ಬಗ್ಗೆ ಅರಿವಿದ್ದ ಕಾರಣಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ (ಅಥವಾ ಅರಣ್ಯ ಸಚಿವರ) ನೇತೃತ್ವದಲ್ಲಿ ಸಭೆ ನಡೆಸಿ ಮೈಸೂರು ದಸರಾದಲ್ಲಿ ಎಚ್ಚರಿಕೆ ತೆಗೆದುಕೊಳ್ಳಲಾಗಿತ್ತು. ಅಂಬಾರಿ ಹೊರಲು ಕೊನೆಗೆ ಪ್ರಶಾಂತನನ್ನು ಆಯ್ಕೆ ಮಾಡಲಾಯಿತು. ಶಿವಮೊಗ್ಗದಲ್ಲಿ ಸ್ವಲ್ಪ ಎಡವಿದ್ದಾರೆ. ಮುಂದಿನ ಬಾರಿ ಇನ್ನಷ್ಟು ಎಚ್ಚರಿಕೆ ವಹಿಸಲಾಗುವುದು. ನಮಗಿದು ಎಚ್ಚರಿಕೆ ಗಂಟೆ ಎಂದು ಸಿಎಂ ಹೇಳಿದರು.

ರಾಜ್ಯೋತ್ಸವದ್ದೂ ಇದೇ ಸ್ಥಿತಿ

ನಾಡಹಬ್ಬ ಮಾತ್ರವಲ್ಲ, ನಾಡಿನ ಅತ್ಯುನ್ನತ ಪ್ರಶಸ್ತಿ ರಾಜ್ಯೋತ್ಸವ ಪ್ರಶಸ್ತಿಯದ್ದೂ ಇದೇ ಸ್ಥಿತಿ ಆಗಿದೆ. ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಮಾತ್ರವೇ ಕೊಡುವುದರಿಂದ ಮಹತ್ವ. ರಾಜ್ಯಗಳೂ, ಸಂಘಟನೆಗಳೂ ಪದ್ಮ ಪ್ರಶಸ್ತಿ ವಿತರಿಸಲು ಶುರು ಮಾಡಿದರೆ ಅದಕ್ಕೆ ಮಹತ್ವ ಇರುವುದಿಲ್ಲ. ಅದೇ ರೀತಿ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಕೊಡುತ್ತಿದ್ದರೆ ಮಾತ್ರ ಮಹತ್ವವಿರುತ್ತಿತ್ತು. ಆದರೆ, ಜಿಲ್ಲೆ, ತಾಲೂಕು ಮಟ್ಟದಲ್ಲೂ ರಾಜ್ಯೋತ್ಸವ ಪ್ರಶಸ್ತಿ ವಿತರಿಸುತ್ತಿರುವುದರಿಂದ ಎಲ್ಲರೂ ರಾಜ್ಯೋತ್ಸವ ಪುರಸ್ಕೃತರು ಎಂದು ಹೇಳಿಕೊಳ್ಳುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net