ರಾಜ್ಯದ ಆರ್​ಟಿಒ ಚೆಕ್​ಪೋಸ್ಟ್​ಗಳ ತೆರವು ಯಾವಾಗ? ತಿಂಗಳಾದರೂ ಸಭೆ ಮಾಡದ ಅಧಿಕಾರಿಗಳು

rto
ರಾಜ್ಯದ ಆರ್​ಟಿಒ ಚೆಕ್​ಪೋಸ್ಟ್​ಗಳ ತೆರವು ಯಾವಾಗ? ತಿಂಗಳಾದರೂ ಸಭೆ ಮಾಡದ ಅಧಿಕಾರಿಗಳು
Published on: 

| ಕೀರ್ತಿನಾರಾಯಣ ಸಿ. ಬೆಂಗಳೂರು

ಜಿಎಸ್​ಟಿ ಜಾರಿಯಾದ ಬಳಿಕ ದೇಶದ ಬಹುತೇಕ ರಾಜ್ಯಗಳಲ್ಲಿದ್ದ ಪ್ರಾದೇಶಿಕ ಸಾರಿಗೆ ಕಚೇರಿ (ಆರ್​ಟಿಒ) ಚೆಕ್​ಪೋಸ್ಟ್​ಗಳನ್ನು ತೆರವು ಮಾಡಲಾಗಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಚೆಕ್​ಪೋಸ್ಟ್ ವ್ಯವಸ್ಥೆ ಮುಂದುವರಿದಿದೆ. ಇಲ್ಲೂ ತೆರವು ಸಂಬಂಧ ಸಮಿತಿ ರಚಿಸಲಾಗಿದೆಯಾದರೂ ಈವರೆಗೆ ಒಂದೇ ಒಂದು ಸಭೆಯನ್ನೂ ಮಾಡಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.

ಏತನ್ಮಧ್ಯೆ ವಿಜಯಪುರ ಸಮೀಪದ ಮನಗೂಳಿ ಬಳಿ ಅನಧಿಕೃತವಾಗಿ ಚೆಕ್​ಪೋಸ್ಟ್ ಸ್ಥಾಪಿಸಿದ್ದು, ಇದನ್ನು ವಿರೋಧಿಸಿ ಲಾರಿ ಚಾಲಕರು ಶನಿವಾರ (ಅ.3) ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಅಲ್ಲಿದ್ದ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವಿಡಿಯೋಗಳು ಜಾಲತಾಣದಲ್ಲಿ ವೈರಲ್ ಆಗಿವೆ. ಕಿಲೋಮೀಟರ್​ಗಟ್ಟಲೆ ವಾಹನಗಳು ನಿಂತಿದ್ದರಿಂದ ಅದೇ ಮಾರ್ಗದಲ್ಲಿ ಬಂದ ಸಚಿವ ಎಂ.ಬಿ.ಪಾಟೀಲ್ ಅವರಿಗೂ ಬಿಸಿ ತಟ್ಟಿದೆ. ಚೆಕ್​ಪೋಸ್ಟ್ ಕಾರ್ಯಾಚರಣೆ ವಿರುದ್ಧ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದು, ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಸೂಚನೆ ಮೇಲೆ ಚೆಕ್​ಪೋಸ್ಟ್ ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಲಾಗಿದೆ. ಆದರೆ, ದೇಶದಲ್ಲಿ ಎಲ್ಲೂ ಇಲ್ಲದ ಚೆಕ್​ಪೋಸ್ಟ್​ಗಳು ಕರ್ನಾಟಕದಲ್ಲಷ್ಟೇ ಏಕೆ ಎಂಬ ಪ್ರಶ್ನೆ ಎದ್ದಿದೆ.

2017ರಲ್ಲಿ ಜಿಎಸ್​ಟಿ ಜಾರಿಯಾದ ನಂತರ ವಾಣಿಜ್ಯ ತೆರಿಗೆ ಚೆಕ್​ಪೋಸ್ಟ್​ಗಳನ್ನು ತೆರವುಗೊಳಿಸಲಾಗಿದೆ. ಆದರೆ, ರಾಜ್ಯದಲ್ಲಿ 15 ಚೆಕ್​ಪೋಸ್ಟ್​ಗಳು ಕಾರ್ಯಾಚರಣೆ ಮುಂದುವರಿಸಿವೆ. ತೆಲಂಗಾಣದಲ್ಲಿದ್ದ ಆರ್​ಟಿಒ ಚೆಕ್​ಪೋಸ್ಟ್​ಗಳನ್ನು ತೆರವುಗೊಳಿಸಿ 2025ರ ಆ.25ರಂದು ಅಲ್ಲಿನ ಸರ್ಕಾರ ಅಧಿಕೃತವಾಗಿ ಆದೇಶಿಸಿದೆ. ಹೀಗಾಗಿ ಕರ್ನಾಟದಲ್ಲೂ ಚೆಕ್​ಪೋಸ್ಟ್​ಗಳು ಬೇಡ ಎಂದು ವಾಹನ ಮಾಲೀಕರ ಸಂಘಗಳು ಪಟ್ಟುಹಿಡಿದಿವೆ.

ಮಹಾರಾಷ್ಟ್ರದಲ್ಲೂ ಚೆಕ್​ಪೋಸ್ಟ್​ಗಳ ತೆರವುಗೊಳಿಸಬೇಕು ಎಂಬ ಕೂಗು ಎದ್ದಿದೆ. ಕರ್ನಾಟಕದಲ್ಲಿರುವ ಚೆಕ್​ಪೋಸ್ಟ್ ವ್ಯವಸ್ಥೆಯನ್ನು ಮುಕ್ತಾಯಗೊಳಿಸಲು ರಾಮಲಿಂಗಾರೆಡ್ಡಿ ಸಾರಿಗೆ ಸಚಿವರಾಗಿದ್ದಾಗಲೇ ತೀರ್ವನಿಸಿ, ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಸಿ.ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ 6 ಸದಸ್ಯರನ್ನೊಳಗೊಂಡ ಸಮಿತಿ ರಚಿಸಿ ಸರ್ಕಾರ ಆದೇಶಿಸಿತ್ತು. ಯಾವ್ಯಾವ ರಾಜ್ಯದಲ್ಲಿ ಚೆಕ್​ಪೋಸ್ಟ್ ಗಳನ್ನು ತೆರವುಗೊಳಿಸಲಾಗಿದೆಯೋ ಆ ರಾಜ್ಯಗಳಿಗೆ ಭೇಟಿ ಸಾಧಕ-ಬಾಧಕಗಳ ವರದಿ ಪಡೆಯುವಂತೆ ಸಮಿತಿಗೆ ಜವಾಬ್ದಾರಿ ಕೊಡಲಾಗಿತ್ತು. ಆದರೆ, ಸಮಿತಿ ರಚನೆಯಾಗಿ ಹಲವು ತಿಂಗಳಾದರೂ ಯಾವ ರಾಜ್ಯಕ್ಕೂ ಹೋಗಿಲ್ಲ. ಈ ಸಂಬಂಧ ಒಂದೇ ಒಂದು ಸಭೆಯನ್ನೂ ಮಾಡಿಲ್ಲ ಎಂಬುದನ್ನು ಸಮಿತಿಯಲ್ಲಿರುವ ಅಧಿಕಾರಿಗಳೇ ‘ವಿಜಯವಾಣಿ’ಗೆ ಖಚಿತಪಡಿಸಿದ್ದಾರೆ.

ಮನಗೂಳಿ ಚೆಕ್​ಪೋಸ್ಟ್ ಬಳಿ ಚಾಲಕರ ಪ್ರತಿಭಟನೆ, ನಂತರದ ಬೆಳವಣಿಗೆಗಳ ಕುರಿತು ತನಿಖೆ ನಡೆಸಿ ವರದಿ ಕೊಡುವಂತೆ ಹೆಚ್ಚುವರಿ ಆಯುಕ್ತರಿಗೆ ಸೂಚಿಸಲಾಗಿದೆ. ಅವರಿಂದ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. | ಡಾ.ಆರ್. ಸೆಲ್ವಮಣಿ ಸಾರಿಗೆ ಆಯುಕ್ತ

ಚೆಕ್​ಪೋಸ್ಟ್ ತೆರವು ಮಾಡಿರುವ ಗುಜರಾತ್​ಗೆ ಈ ವಾರದಲ್ಲೇ ಸಮಿತಿ ಕಳುಹಿಸುವುದಾಗಿ ಸಚಿವ ಬೈರತಿ ಸುರೇಶ್, ಸಾರಿಗೆ ಆಯುಕ್ತರು ಭರವಸೆ ಕೊಟ್ಟಿದ್ದಾರೆ. ಸಮಿತಿ ಅಧ್ಯಯನ ನಡೆಸಿ ವರದಿ ಕೊಟ್ಟ ನಂತರ ಚೆಕ್​ಪೋಸ್ಟ್ ತೆರವು ಬಗ್ಗೆ ರ್ಚಚಿಸುವ ಭರವಸೆ ಸಿಕ್ಕಿದೆ. | ಜಿ.ಆರ್.ಷಣ್ಮುಗಪ್ಪ, ಅಧ್ಯಕ್ಷ, ರಾಜ್ಯ ಲಾರಿ ಮಾಲೀಕರ ಒಕ್ಕೂಟ

ಚೆಕ್​ಪೋಸ್ಟ್​ಗಳು ಏಕೆ ಬೇಡ?

1. ಪ್ರತಿಯೊಂದೂ ಆನ್​ಲೈನ್ ಆಗಿರುವುದರಿಂದ ಅಗತ್ಯವಿಲ್ಲ

2. ವಾಹನಗಳ ಪರಿಶೀಲನೆ ಹೆಸರಲ್ಲಿ ಲಂಚ ವಸೂಲಿ ಆರೋಪ

3. ಪರಿಶೀಲನೆಯಿಂದ ಗಂಟೆಗಟ್ಟಲೆ ವಾಹನಗಳು ಕ್ಯೂ ನಿಲ್ಲಬೇಕು

4. ಹೆಚ್ಚಿನ ಅಧಿಕಾರಿ- ಸಿಬ್ಬಂದಿ ನಿಯೋಜನೆಯಿಂದ ಸಿಬ್ಬಂದಿ ಕೊರತೆ

ನಿತ್ಯ 10 ಲಕ್ಷ ರೂ. ಶುಲ್ಕ ಸಂಗ್ರಹ

ಮನಗೂಳಿ ಬಳಿ ಅನಧಿಕೃತವಾಗಿ ಚೆಕ್​ಪೋಸ್ಟ್ ಸ್ಥಾಪಿಸಿರುವ ಆರೋಪ ಕೇಳಿ ಬಂದಿದೆ. ಶೆಡೋನ್ ರಸ್ತೆಯಲ್ಲಿ ಅಧಿಕೃತ ಚೆಕ್​ಪೋಸ್ಟ್ ಇದೆ. ಆದರೆ, ನಿಯಮ ಉಲ್ಲಂಘಿಸುವ ವಾಹನಗಳು ಚೆಕ್​ಪೋಸ್ಟ್ ತಪ್ಪಿಸಿ ಓಡಾಡುತ್ತಿದ್ದರಿಂದ ಇತ್ತೀಚೆಗಷ್ಟೇ ಮನಗೂಳಿ ಬಳಿ ಚೆಕ್​ಪಾಯಿಂಟ್ ಆರಂಭಿಸಲಾಗಿತ್ತು. ಪ್ರತಿನಿತ್ಯ 10 ಲಕ್ಷ ರೂ. ಶುಲ್ಕ ಸಂಗ್ರಹವಾಗುತ್ತಿತ್ತು. 16 ದಿನದಲ್ಲೇ 5 ಸಾವಿರಕ್ಕೂ ಹೆಚ್ಚು ಕೇಸ್ ದಾಖಲಾಗಿವೆ. ಇದೇ ಜಾಗದಲ್ಲಿ ಅಧಿಕೃತ ಚೆಕ್​ಪೋಸ್ಟ್ ನಿರ್ವಣಕ್ಕೆ ಸರ್ಕಾರ ಅನುಮತಿ ಕೊಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net