ಎಡೆದೊರೆ ನಾಡಿಗೆ ಸಿಗಬಹುದ ಸಿದ್ದು ಕೃಪೆ ?

ರಾಯಚೂರು ವಿಮಾನ ನಿಲ್ದಾಣದ ಕಾಮಗಾರಿ ನಡೆದಿರುವುದು
ರಾಯಚೂರು ವಿಮಾನ ನಿಲ್ದಾಣದ ಕಾಮಗಾರಿ ನಡೆದಿರುವುದು
Published on

ಪ್ರಮುಖ ಮುಖ್ಯಾಂಶಗಳು

  • ಹೊಸ ಯೋಜನೆಗಳು ಜಾರಿಯಾಗಲಿ
  • ಹಳೆ ಯೋಜನೆಗಳು ಅನುಷ್ಠಾನವಾಗಲಿ
  • ಅಭಿವೃದ್ಧಿಗೆ ಹೊತ್ತು ನೀಡಲಿ

ರಾಯಚೂರು ಹಿಂದುಳಿದ ಜಿಲ್ಲೆ ಎನ್ನುವ ಹಣೆ ಪಟ್ಟಿ ಹೊಂದಿದ ಜಿಲ್ಲೆಗೆ ಯಾವುದೇ ಬಜೆಟ್ ಮಂಡನೆಯಾದರು ಸರ್ಕಾರ ಮಾತ್ರ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದು, ಈ ಬಾರಿಯು ಸಿಎಂ ಸಿದ್ದರಾಮಯ್ಯ ಮಂಡನೆ ಮಾಡುವ ಬಜೆಟ್‌ನಲ್ಲಿ ಜಿಲ್ಲೆಯ ಜನರಿಗೆ ಹೆಚ್ಚಿನ ನಿರೀಕ್ಷೆ ಇದ್ದು, ಈ ಭಾಗದಲ್ಲಿ ಗುಳೆ ತಪ್ಪಿಸಲು ಯಾವೇಲ್ಲ ಯೋಜನೆಗಳನ್ನು ಜಾರಿ ಮಾಡುತ್ತಾರೆ ಕಾದು ನೋಡಬೇಕಿದೆ.

ರಾಜ್ಯದಲ್ಲಿ ಸುಮಾರು ವರ್ಷಗಳಿಂದ ಆನೇಕ ಬಜೆಟ್ ಮಂಡನೆ ಸಂದರ್ಭದಲ್ಲಿ ಅನೇಕ ಯೋಜನೆಗಳು ಜಾರಿ ಮಾಡಿವೆ ಆದರೆ ಯೋಜನೇಗಳು ಮಾತ್ರ ಪೂರ್ಣಗೊಳ್ಳದೆ ನೆನೆಗುದ್ದಿಗೆ ಬಿದ್ದಿವೆ. ಅವುಗಳಿಗೆ ಕಾಯಕಲ್ಪ ನೀಡುವ ಕೆಲಸವಾಗುತ್ತಿಲ್ಲ. ಈ ಹಿಂದೆ ಘೋಷಣೆಯಾಗಿರುವ ಯೋಜನೆಗಳಿಗೆ ಅನುದಾನ ನೀಡದಿರುವುದರಿಂದ ಯೋಜನೆಗಳು ಪೂರ್ಣಗೊಳ್ಳದೆ ಕುಂಟುತ್ತಾ ಸಾಗುವಂತಾಗಿದೆ.

ಸಿಂಧನೂರು ಜಿಲ್ಲೆ ಘೋಷಣೆಯ ನಿರೀಕ್ಷೆ

ರಾಯಚೂರು ಜಿಲ್ಲೆಯೊಂದಿಗಿದ್ದ ಕೊಪ್ಪಳ ಜಿಲ್ಲೆ ವಿಭಜನೆಗೊಂಡ ಬಳಿಕ ಈಗ ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರ ಎನಿಸಿಕೊಂಡ ಸಿಂಧನೂರು ಪ್ರತ್ಯೇಕ ಜಿಲ್ಲೆಯ ಕೂಗು ಎದ್ದಿದೆ. ಭೌಗೋಳಿಕವಾಗಿ ಜಿಲ್ಲಾ ಕೇಂದ್ರದಿಂದ 90 ಕಿಮೀ ದೂರದಲ್ಲಿರುವ ಸಿಂಧನೂರು ಸಾಕಷ್ಟು ಪ್ರಗತಿ ಪಥದಲ್ಲಿದೆ. ಹೀಗಾಗಿ ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಕೆಲ ಭಾಗಗಳನ್ನು ಒಳಗೊಂಡು ಸಿಂಧನೂರು ಪ್ರತ್ಯೇಕ ಜಿಲ್ಲೆ ರಚಿಸಬೇಕೆನ್ನುವ ಕೂಗು ಆಡಳಿತ ಪಕ್ಷದ ಶಾಸಕರಾದಿಯಾಗಿ ಎಲ್ಲರಿಂದ ಕೇಳಿ ಬರುತ್ತಿದೆ. ಈ ದಿಸೆಯಲ್ಲಿ ಈಗಾಗಲೇ ಸಭೆಗಳು, ಹಕ್ಕೊತ್ತಾಯಗಳು ಕೂಡ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್ನಲ್ಲಿ ಹೊಸ ಜಿಲ್ಲೆ ಘೋಷಿಸುವರೇ ಕಾದು ನೋಡಬೇಕಿದೆ.

ರಿಂಗ್ ರೋಡ್ ನಿರ್ಮಾಣವಾಗಲಿ

ರಾಯಚೂರು ಜಿಲ್ಲೆಯ ಟ್ರಾಫಿಕ್ ಸಮಸ್ಯೆ ನಿರ್ವಾಹಣೆ ಮಾಡಲು ರಿಂಗ್ ರೋಡ್ ಘೋಷಣೆ ಮಾಡಿದ್ದೇವೆಂದು ಕಾಂಗ್ರೆಸ್ ಬಿಜೆಪಿ ನಾಯಕರು ಕ್ರೆಡಿಟ್ ಪಡೆಯಲು ನಾನಾ ಕಸರತ್ತು ನಡೆಸಿದರು. ಆದರೆ, ಈವರೆಗೂ ಅದು ಕಾರ್ಯಗತಗೊಂಡಿಲ್ಲ. ನಗರದಲ್ಲಿ ಟ್ರಾಫಿಕ್ ಸಮಸ್ಯೆ ದಿನೇ ದಿನೆ ಉಲ್ಬಣಗೊಳ್ಳುತ್ತಿದೆ. ರಾಯಚೂರು ಈಗ ಮಹಾನಗರ ಪಾಲಿಕೆಯಾಗಿಯೂ ಮೇಲ್ದರ್ಜೆಗೆ ಏರಿದೆ. ಇಂಥ ವೇಳೆ ರಿಂಗ್ ರೋಡ್ ನಿರ್ಮಾಣ ಮೊದಲ ಕೆಲಸ ಆಗಬೇಕು. ಭಾರೀ ವಾಹನಗಳು ನಗರದಲ್ಲಿ ಓಡಾಡುತ್ತಿದ್ದು, ಅಮಾಯಕ ಜೀವಗಳು ಬಲಿಯಾಗುತ್ತಿವೆ. ನಗರದಲ್ಲಿ ಹಾಡಹಗಲೇ ಭೀಕರ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಸರ್ಕಾರವರ್ತುಲ ರಸ್ತೆಗೆ ಬಜೆಟ್‌ನಲ್ಲಿ ಅನುದಾನ ಘೋಷಿಸಿ ಕೂಡಲೇ ಕಾರ್ಯಾರಂಭಿಸಬೇಕಿದೆ.

ಮೆಗಾ ಟೆಕ್ಸ್‌ಟೈಲ್ ಪಾರ್ಕ್

ಏಷ್ಯಾದಲ್ಲೇ ಎರಡನೇ ಅತಿಹೆಚ್ಚು ಹತ್ತಿ ಬೆಳೆಯುವ ರಾಯಚೂರು ಜಿಲ್ಲೆಯಲ್ಲಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪಿಸಲು ರಾಜ್ಯ ಸರ್ಕಾರವು ಮರುಪ್ರಸ್ತಾವನೆ ಕಳುಹಿಸಬೇಕು. ಈ ಹಿಂದಿನ ಬಿಜೆಪಿ ಸರ್ಕಾರ ಜವಳಿ ಪಾರ್ಕ್ ನಿರ್ಮಾಣ ಮಾಡಲು ಬಜೆಟ್‌ನಲ್ಲಿ ಘೋಷಣೆ ಮಾಡಿ ಸಲಹಾ ಸೇವೆ ಪಡೆಯಲು ಖಾಸಗಿ ಸಂಸ್ಥೆಗಳಿಂದ ಟೆಂಡರ್ ಕರೆದಿತು. ರಾಯಚೂರು ತಾಲ್ಲೂಕಿನ ಬೀಜನಗೇರಾ ಭಾಗದಲ್ಲಿ 15 ಎಕರೆ ಜಮೀನು ಜವಳಿ ಪಾರ್ಕ್ ನಿರ್ಮಾಣ ಮಾಡಲು ಸರ್ಕಾರಿ ಜಮೀನನ್ನು ಮೀಸಲಿಟ್ಟಿದೆ. ಇದರಲ್ಲಿ ಕೇವಲ ಒಂದು ಸಾವಿರ ಜನರಿಗೆ ಮಾತ್ರ ಉದ್ಯೋಗ ನೀಡಬಹುದಾಗಿದೆ. ಆದರೆ ಕೇಂದ್ರದ ಪ್ರಧಾನ ಮಂತ್ರಿ ಮೇಗಾ ಜವಳಿ ಪಾರ್ಕ್ ಮಂಜೂರು ಮಾಡಿದರೆ ಜಿಲ್ಲೆಯಲ್ಲಿ ಹೆಚ್ಚಿನ ಜನರಿಗೆ ಉದ್ಯೋಗ ದೊರಕಿಸಿಸುವುದರ ಜತೆಗೆ ಗುಳೆ ತಪ್ಪಿಸಬಹುದು.

ತಾಲೂಕಿನ ಚಿಕ್ಕಮಂಚಾಲಿ ಏತ ನೀರಾವರಿಗೆ 206 ಕೋಟಿ ಕೋಟಿ ರೂ. ಅನುದಾನ ಘೋಷಣೆ ಮಾಡಬೇಕು. ಕಾರ್ಮಿಕರ ಮಕ್ಕಳಿಗಾಗಿ ವಸತಿ ಶಾಲೆ. ಕೃಷ್ಣಾನದಿಯಿಂದ ಕೆರೆಗಳ ಭರ್ತಿ ಮಾಡಲು 50 ಕೋಟಿ ಅನುದಾನ ಘೋಷಣೆ. ರಾಯಚೂರು ತಾಲೂಕಿನ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಬಾಲಕಿಯರ ವಸತಿ ನಿಲಯಗಳನ್ನು ಘೋಷಣೆ ಮಾಡಬೇಕು. ರಾಯಚೂರು ತಾಲ್ಲೂಕಿನ ಯರಗೇರಾ ಗ್ರಾಮವನ್ನು ತಾಲೂಕು ಕೇಂದ್ರ ಮಾಡಬೇಕು ಎಂಬ ಬೇಡಿಕೆಗಳು ಇವೆ. ರಾಯಚೂರಿನ ಮಹರ್ಷಿ ವಾಲ್ಮೀಕಿ ವಿವಿ ಆಡಳಿತ ಹಾಗೂ ಪರೀಕ್ಷಾ ಮತ್ತು ಮೌಲ್ಯ ಮಾಪನಾ ಕಟ್ಟಡ ನಿರ್ಮಾಣ ಮಾಡುವ ನಿರೀಕ್ಷೆ ಇದೆ.

ಸಮತೋಲನ ಜಲಾಶಯವಾಗಲಿ

ತುಂಗಭದ್ರಾ ಎಡದಂಡೆ ಕಾಲುವೆಯ ಕೊನೆಭಾಗದ ರೈತರು ಎದುರಿಸುತ್ತಿರುವ ನೀರಿನ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆ ಯ ನವಲಿ ಹತ್ತಿರ ಸಮತೋಲನ ಜಲಾಶಯ ನಿರ್ಮಾಣ ಮಾಡುವ ಕುರಿತಂತೆ ಹಲವಾರು ಬಜೆಟ್‌ನಲ್ಲಿ ಪ್ರಸ್ತಾಪವಾಗಿದೆ. ಆದರೆ ಯಾರು ಕ್ರಮ ಕೈಗೊಂಡಿಲ್ಲ. ಈ ಬಾರಿಯಾದರು ಸಮತೋಲನ ಜಲಾಶಯ ನಿರ್ಮಾಣ ಮಾಡಿದರೆ ಅನುಕೂಲವಾಗಲಿದೆ. ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿ ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವ ಭರವಸೆ ನೀಡಿತ್ತು. ಸಿಎಂ ಸಿದ್ದರಾಮಯ್ಯ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದು ಕೈತೊಳೆದು ಕೊಂಡಿದ್ದು, ಏಮ್ಸ್ ಸ್ಥಾಪನೆಗೆ ಬೇಕಾದ ಮೂಲ ಸೌಕರ್ಯ ಕಲ್ಪಿಸುವ ಬಗ್ಗೆ ಬಜೆಟ್‌ನಲ್ಲಿ ಖಾತ್ರಿ ನೀಡುವ ಮೂಲಕ ಅನುದಾನ ಘೋಷಣೆ ಮಾಡುತ್ತಾರಾ ಎಂದು ಕಾದು ನೋಡಬೇಕಾಗಿದೆ.

ಈ ಬಾರಿಯಾದರು ರಾಜ್ಯ ಸರ್ಕಾರದಿಂದ ರೈತರಿಗೆ ಉತ್ತಮವಾದ ಯೋಜನೆಗಳನ್ನು ಜಾರಿ ಮಾಡಲಿ. ರೈತರ ಅಭಿವೃದ್ದಿಗಾಗಿ ನವಲಿ ಜಲಾಶಯ ನಿರ್ಮಾಣ ಮಾಡಬೇಕು. ನೀರಾವರಿ ಸಮಸ್ಯೆ ಬಗೆಹರಿಸಿಸಬೇಕು.

ಜಿಲ್ಲೆಯಲ್ಲಿ ಜವಳಿ ಪಾರ್ಕ್ ಸೇರಿದಂತೆ ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಅನುದಾನ ಹಾಗೂ ಈ ಭಾಗದಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಲು ಸೂಕ್ತ ಯೋಜನೆ ಘೋಷಿಸಿದರೆ ಜಿಲ್ಲೆಯು ಅಭಿವೃದ್ದಿ ಹೊಂದುತ್ತದೆ. ಗುಳೆ ತಪ್ಪಿಸಲು ವಿಶೇಷ ಅನುದಾನ ಸರ್ಕಾರ ಘೋಷಣೆ ಮಾಡಲಿ.

ವಿ. ಲಕ್ಷ್ಮೀರೆಡ್ಡಿ ಅಧ್ಯಕ್ಷರು ಕಾಟನ್ ಮಿಲ್ಲರ್ಸ್ ಅಸೋಸಿಯೇಷನ್ ರಾಯಚೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net