ಡಿಸಿ ದಿಢೀರ್​ ಬಲಾವಣೆಗೆ ಕಾರಣ ಏನು ?

ಹರ್ಷಲ್​ ಬೋಯರ್​
ಹರ್ಷಲ್​ ಬೋಯರ್​
Published on

ಪ್ರಮುಖ ಮುಖ್ಯಾಂಶಗಳು

  • 10 ತಿಂಗಳಲ್ಲಿಯೇ ವಗಾವಣೆಯಾದ ಹರ್ಷಲ್​ ಬೊಯರ್​
  • ಜಿಲ್ಲೆಯಾದ್ಯಂತ ಗುಸು-ಗುಸು ಚರ್ಚೆ ಜೋರು
ಯಾದಗಿರಿ : ಜಿಲ್ಲಾಧಿಕಾರಿಯಾಗಿ ಕೇವಲ 10 ತಿಂಗಳಷ್ಟೇ ಕೆಲಸ ಮಾಡಿದ್ದ ಹರ್ಷಲ್​ ಬೋಯರ್​ ಅವರನ್ನು ರಾಜ್ಯ ಸರ್ಕಾರ ಬುಧವಾರ ದಿಢೀರ್​ ವರ್ಗ ಮಾಡಿದ್ದರಿಂದ ಜಿಲ್ಲೆಯಾದ್ಯಂತ ಈಗ ತೀವ್ರ ಚರ್ಚೆಗೆ ಕಾರಣವಾಗಿದೆ.
ಡಿಸಿ ಹುದ್ದೆಗೆ ಬಂದವರು ಕನಿಷ್ಠ ಎರಡು ವರ್ಷಗಳಾದರೂ ಒಂದು ಜಿಲ್ಲೆಯಲ್ಲಿ ಕೆಲಸ ಮಾಡುವ ರೂಡಿ ಇದೆ. ಆದರೆ ಕಳೆದ 2025 ಜುಲೈ 9ರಂದು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಬೋಯರ್​ ಕೇವಲ 10 ತಿಂಗಳು 11ದಿನಗಳು ಮಾತ್ರ ಕೆಲಸ ಮಾಡಿದ್ದಾರೆ. ಇದೇ ಈಗ ಎಲ್ಲಡೆ ಮಾತಾಡಿಕೊಳ್ಳುವಂತಾಗಿದೆ. ಹೆಚ್ಚುಕಡಿಮೆ ಉನ್ನತ ಅಧಿಕಾರಿಗಳು ಆಯಾಕಟ್ಟಿನ ಜಾಗದಲ್ಲಿ ಸೇವೆಗೆ ಹಾಜರಾಗುತ್ತಲೇ ಅಲ್ಲಿನ ಸಚಿವ, ಶಾಸಕರಿಗೆ ಭೇಟಿ ಮಾಡಿ ಕೆಲಸ ಆರಂಭಿಸುತ್ತಾರೆ. ಇವರ ಕೂಡ ಆರಂಭದಲ್ಲಿ ಹಾಗೇಯೆ ಮಾಡಿದ್ದರೂ ಸಹ ಮುಂದೆ ಅವರೊಂದಿಗೆ ನಿರಂತರವಾಗಿ ಉತ್ತಮ ಸಂಬಂಧ ಹೊಂದುವುದು ಮತ್ತು ಇನ್ನೊಂದು ಕಡೆ ತಮ್ಮ ಇಲಾಖೆ ಅಧೀನದಲ್ಲಿ ಬರುವ ಎಲ್ಲ ಅಧಿಕಾರಿ, ಸಿಬ್ಬಂದಿಯೊಂದಿಗೆ ಸರಿಯಾದ ಒಡನಾಟವಿಟ್ಟುಕೊಂಡು ಕೆಲಸ ಮಾಡಿದರೆ ಎಲ್ಲವೂ ಸರಿ ಹೊಗುತ್ತದೆ.
ಆದರೆ ಇದು ತಪ್ಪಿದರೆ ಸಂಕಟ ಎದುರಾಯಿತೆಂದೇ ತಿಳಿದುಕೊಳ್ಳಬೇಕು. ಆದರೆ ಹರ್ಷಲ್​ ವಿಷಯದಲ್ಲಿ ಏನಾಗಿದೆ ಎಂಬ ಬಗ್ಗೆ ಸ್ಪಷ್ಟನೆ ಬಯಲಾಗದಿದ್ದರೂ ವರ್ಗವಾದ ಒಂದು ಗಂಟೆಯಲ್ಲಿಯೇ ಡಿಸಿ ಕಚೇರಿ ಕಟ್ಟಡದಲ್ಲಿ ತರೆವಾರಿ ಮಾತು ಕೇಳಿಬಂದಿದ್ದು, ಅದು ಏನೆಂದರೆ ಸಾಹೇಬರು ಸಿಟ್ಟಿನ ಸ್ವಭಾವದವರಾಗಿದ್ದರು. ಸಣ್ಣ, ಸಣ್ಣ ವಿಷಯಕ್ಕೂ ಎದುರಿನವರ ಮೇಲೆ ಸುಮ್ಮನೆ ರೇಗಾಡುತ್ತಿದ್ದರು. ಬೇರೆಯವರು ಮಾಡುವ ಕೆಲಸ ಅಷ್ಟು ಇಷ್ಟವಾಗುತ್ತಿರಲಿಲ್ಲ. ಕೆಲಸದ ವಿಷಯದಲ್ಲಿ ಬೇರೆ, ಬೇರೆ ಅಧಿಕಾರಿಗಳಿಗೆ ಮುಕ್ತವಾಗಿ ಕೆಲಸ ಮಾಡಲು ಬಿಡುತ್ತಿರಲಿಲ್ಲ ಎಂಬ ಆರೋಪ ಕೇಳಿಬಂದಿವೆ ಎನ್ನಲಾಗಿದೆ.
ತಮ್ಮ ವ್ಯಾಪ್ತಿಯಲ್ಲಿ ಒಂದೆರಡು ಕೆಲಸ ಅವರೇ ಮಾಡಿದರೂ ನನ್ನ ಗಮನಕ್ಕೆ ಇಲ್ಲದೇ ನೀವೇ ಹೇಗೆ ನಿರ್ಧಾರ ತೆಗೆದುಕೊಂಡು ಮಾಡಿದ್ದಿರಿ ಎಂದು ಮುಖದ ಮೇಲೆಯೇ ಕೇಳಿ ಸಿಟ್ಟಿಗೆ ಬರುತ್ತಿದ್ದರು. ಇನ್ನೂ ಮಹತ್ವದ ವಿಷಯ ಎಂದರೆ ಜಿಲ್ಲಾ ಉಸ್ತುವಾರಿ ಸಚಿವರು ಸೇರಿ ಶಾಸಕರ ಮಾತು, ಸೂಚನೆ ಮತ್ತು ಆದೇಶ ಸಕಾಲಕ್ಕೆ ಜಾರಿ ಮಾಡದೇ ವಿಳಂಬ ಮಾಡುವುದು, ಅವರು ಹೇಳಿದ್ದನ್ನು ಮಾಡದೇ ಇರುವುದು ಹೀಗೆ ಆಡಳಿತದಲ್ಲಿ ಅವರೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಸಾಕಷ್ಟು ವಿರೋಧಕ್ಕೆ ಕಾರಣ ಎನ್ನುವ ಮಾತು ಈಗ ಕೇಳಿ ಬರುತ್ತಿದೆ.
ರಾಜಕೀಯ ಮತ್ತು ಗುತ್ತಿಗೆದಾರರ ವಲಯದಲ್ಲಿ ಇವರ ಬಗ್ಗೆ ಸ್ವಲ್ಪ ವಿರೋಧಕ್ಕೆ ಕಾರಣವಾಗಿದ್ದರ ಫಲವಾಗಿ ಹತ್ತೇ ತಿಂಗಳಲ್ಲಿಯೇ ಇಲ್ಲಿಂದ ವರ್ಗವಾಗಬೇಕಾಯಿತು ಎಂಬ ಮಾತು ಚಾಲ್ತಿಯಲ್ಲಿವೆ. ಇವರ ಕಾರ್ಯವೈಖರಿ ಗಮನಿಸಿದ ಅನುಭವಿ ಅಧಿಕಾರಿಗಳು ಮತ್ತು ರಾಜಕಾರಣಿಗಳು, ಡಿಸಿ ಸಾಹೇಬರು ಬಹಳ ದಿನಗಳ ಕಾಲ ಇಲ್ಲಿ ಉಳಿಯುದಿಲ್ಲ ಎಂದು ಕೆಲ ದಿನಗಳ ಹಿಂದೆಯೇ ತಮ್ಮ, ತಮ್ಮಲ್ಲಿ ಮಾತಾಡಿಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತಿದೆ.
ಶಾಸಕಾಂಗ ಮತ್ತು ಕಾರ್ಯಾಂಗದ ನಡುವೆ ಹೊಂದಾಣಿಕೆ ಇದ್ದರೆ ಇಂತಹ ಸಮಸ್ಯೆಗಳು ಎದುರಾಗುವುದು ಅತ್ಯಂತ ವಿರಳ. ಆದರೆ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಶಾಸಕಾಂಗ ಮೇಲುಗೈ ಇರುವುದು ಸಹಜವೇ ಆಗಿದ್ದು, ಜಿಲ್ಲೆಯ ಜನಪ್ರತಿನಿಧಿಗಳ ಮಾತಿಗೆ ಓಕೆ ಎನ್ನುತ್ತ ಸಾಗಿದ್ದರೆ ಇವರ ವರ್ಗ ಆಗುತ್ತಿರಲಿಲ್ಲ. ಆದರೆ ಸಚಿವ, ಶಾಸಕರ ಮತ್ತು ಇವರ ನಡುವೆ ಹೊಂದಾಣಿಕೆ ತಪ್ಪಿದ್ದೇ ಬಹುಬೇಗನೇ ವರ್ಗಕ್ಕೆ ಕಾರಣ ಎಂದು ಈಗ ವಿಶ್ಲೇಷಿಸಲಾಗುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net