ಮಾಗಡಿ: ತಾಲೂಕು ಆಡಳಿತದ ವಿರುದ್ಧ ಭ್ರಷ್ಟಾಚಾರದ ಆರೋಪ ಹಾಗೂ ಕೆಆರ್‌ಎಸ್ ಪಕ್ಷದ ಪ್ರತಿಭಟನೆ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಮತ್ತು ತಹಸೀಲ್ದಾರ್ ಸಮ್ಮುಖದಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಸೋಮವಾರ ತುರ್ತು ಸಭೆ ನಡೆಸಿದರು.ID card
ಕಚೇರಿಯಲ್ಲಿನ ಅವ್ಯವಸ್ಥೆ ಕಂಡು ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿ ಬಿನೋಯ್‌ಗೆ ಸೂಚಿಸಿದರು.
ಪ್ರತಿಭಟಿಸುವುದು ಎಲ್ಲರ ಹಕ್ಕು. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ. ಆದರೆ ವೈಯಕ್ತಿಕ ನಿಂದನೆ ಬೇಡ. ದಳ್ಳಾಳಿಗಳ ಹಾವಳಿಯಿಂದ ರೈತರ ಕೆಲಸ ಆಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಶಾಸಕನಾಗಿ ನನಗೆ ಕೆಟ್ಟ ಹೆಸರು ಬರದಂತೆ ಕೆಲಸ ಮಾಡಿ ಎಂದು ಬಾಲಕೃಷ್ಣ ಹೇಳಿದರು.
ಸಾರ್ವಜನಿಕರಿಗೆ ಅನುಕೂಲವಾಗಲೆಂದೇ ಪ್ರತಿ ತಿಂಗಳು ಜನಸಂಪರ್ಕ ಸಭೆ ನಡೆಸಲಾಗುತ್ತಿದೆ. ನಿಮ್ಮ ಸಮಸ್ಯೆಗಳಿದ್ದರೆ ಒಂದು ತಿಂಗಳ ಮುಂಚೆಯೇ ಅರ್ಜಿ ನೀಡಿ, ಪರಿಹಾರ ಸಿಗದಿದ್ದರೆ ಪ್ರತಿಭಟಿಸಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಕೆಆರ್‌ಎಸ್ ಮುಖಂಡರಿಗೆ ತಿಳಿಸಿದರು.
ಅಧಿಕಾರಿಗಳಿಗೆ ಛೀಮಾರಿ: ತಾಲೂಕು ಕಚೇರಿ ಸಿಬ್ಬಂದಿ ಕರ್ತವ್ಯದ ವೇಳೆ ಗುರುತಿನ ಚೀಟಿ (ಐಡಿ ಕಾರ್ಡ್) ಧರಿಸದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಐಡಿ ಕಾರ್ಡ್ ಹಾಕಿಕೊಳ್ಳಲು ನಿಮಗೇನು ರೋಗ? ಎಂದು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಪೌತಿ ಖಾತೆ ವಿಚಾರದಲ್ಲಿ ಕಾನೂನು ಮೀರಿ ವರ್ತಿಸಿದ ತಹಸೀಲ್ದಾರ್ ಶರತ್ ಕುಮಾರು ಅವರಿಗೆ, ಕೂಡಲೇ ಅರ್ಜಿದಾರರಲ್ಲಿ ಕ್ಷಮೆಯಾಚಿಸುವಂತೆ ಸೂಚಿಸಿದರು.
ಮುಂಜಾಗ್ರತಾ ಕ್ರಮವಾಗಿ ತಾಲೂಕು ಕಚೇರಿ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಹಾಗೂ ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿತ್ತು.
ಉಪವಿಭಾಧಿಕಾರಿ ಬಿನೋಯ್, ತಹಸೀಲ್ದಾರ್ ಶರತ್ ಕುಮಾರು, ಉಪತಹಸೀಲ್ದಾರ್ ಪ್ರಭಾಕರ್, ಎಡಿಎಲ್‌ಆರ್ ಆನಂದ್, ಇನ್‌ಸ್ಪೆಕ್ಟರ್ ಶ್ರೀನಿವಾಸ್, ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ಗಂಗಾಧರ್ ಗೌಡ, ತಾಲೂಕು ಅಧ್ಯಕ್ಷ ಚಂದ್ರಯ್ಯ ಇದ್ದರು.