20 ವರ್ಷದಲ್ಲಿ ರೇವೂರ ಗೌಡರ ಸಾಧನೆ ಏನು?

ಅಲ್ಲಮಪ್ರಭು ಪಾಟೀಲ್​)
ಅಲ್ಲಮಪ್ರಭು ಪಾಟೀಲ್​)
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್​ ವಿರುದ್ಧ ಶಾಸಕ ಅಲ್ಲಮಪ್ರಭು ಕಿಡಿ
  • ನನ್ನ ರೈತಪರ ಕಾಳಜಿ ಕ್ಷೇತ್ರದ ಜನತೆಗೆ ಗೊತ್ತು
ಕಲಬುರಗಿ: ರೈತರ ಪರ ಸದನದಲ್ಲಿ ಮಾತನಾಡಿದ ತಮ್ಮನ್ನು ನಾಟಕ ಮಾಡುತ್ತಿದ್ದಾರೆ ಎಂದು ಆಪಾದಿಸಿರುವ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್​ ರೇವೂರ ಹೇಳಿಕೆ ಖಂಡನೀಯ. 20 ವರ್ಷಗಳಲ್ಲಿ ರೈತಪರ, ಜನಸಾಮಾನ್ಯರ ಪರ ಸದನದಲ್ಲಿ ಒಮ್ಮೆಯಾದರೂ ಧ್ವನಿ ಎತ್ತಿದ್ದೀರಾ? ನಾಟಕ ಮಾಡುತ್ತಾ ರಾಜಕಾರಣ ಮಾಡಿರುವ ನಿಮಗೆ ಇನ್ನೊಬ್ಬರು ನಾಟಕೀಯವಾಗಿಯೇ ಕಾಣುತ್ತಾರೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್​ ತಿರುಗೇಟು ನೀಡಿದರು.
ಜಿಲ್ಲೆಯಲ್ಲಿ ಬರ ಎದುರಾಗಿದೆ. ರೈತರು, ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಬ್ಬ ಆಡಳಿತ ಪಕ್ಷದ ಶಾಸಕನಾಗಿ ರೈತಾಪಿ ವರ್ಗದ ಪರ ಜೋರು ದನಿಯಲ್ಲಿ ಮಾತನಾಡಿ, ಬರ ಘೋಷಿಸಿ ಪರಿಹಾರ ಕೊಡಿ, ಬೆಳೆವಿಮೆ ಪರಿಹಾರ ಕೊಡಿ ಎಂದು ಆಗ್ರಹಿಸಿದ್ದು ರೇವೂರ ಗೌಡರಿಗೆ ನಾಟಕದಂತೆ ಕಂಡಿದೆ. ನನ್ನ ರಾಜಕೀಯ ಜೀವನದಲ್ಲಿ ನಾಟಕ ಮಾಡಿ ಮುಂದೆ ಬಂದಿಲ್ಲ. ಜನಪರ, ರೈತಪರ ಕಾಳಜಿಯಿಂದಾಗಿ ಮತದಾರರು ನನ್ನ ಕೈ ಹಿಡಿದಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸದನದಲ್ಲಿ ನಾನು ರೈತರ ಪರ ಮಾತನಾಡಿದ್ದು ರೇವೂರ ಗೌಡರಿಗೆ ಹಿಡಿಸಿಲ್ಲ. ಹೀಗಾಗಿ ರೈತರ ಹೆಸರಿನಲ್ಲಿ ಡ್ರಾಮಾ ಮಾಡುತ್ತಿದ್ದೇನೆ ಎಂದು ಆಪಾದಿಸಿದ್ದಾರೆ. ನನ್ನ ರೈತಪರ ಕಾಳಜಿ ನಾಡಿನ ರೈತಾಪಿ ವರ್ಗಕ್ಕೆ ಗೊತ್ತಿದೆ. ನಾನು ಜಿಪಂ ಅಧ್ಯಕ್ಷನಾಗಿದ್ದಾಗ ತೊಗರಿಗೆ ನೆಟೆರೋಗ ಬಂದು 2 ಸಾವಿರಕ್ಕೂ ಹೆಚ್ಚು ಹೆಕ್ಟೇರ್​ ತೊಗರಿ ಹಾನಿಯಾಗಿತ್ತು. ಆಗ ರೈತರಪರ ನಿಂತು ದನಿ ಎತ್ತಿದ್ದಕ್ಕೆ ಸರ್ಕಾರ ಸ್ಪಂದಿಸಿ ಪರಿಹಾರ ನೀಡಿದ್ದು, ಇದನ್ನು ರೈತರಂತೂ ಮರೆತಿಲ್ಲ. ಕೆರೆ ತುಂಬುವ ಕಾರ್ಯ ಜಾರಿಯಲ್ಲಿದೆ. ಅನೇಕ ಕೆರೆ ನಿರ್ಮಾಣ ಮಾಡಲಾಗಿದೆ. ಮಳೆ ಅಭಾವದಿಂದ ನೀರು ಬಂದಿಲ್ಲ. ಚೆಕ್​ಡ್ಯಾಮ್​ಗಳು, ಅಣೆಕಟ್ಟುಗಳು ನಿರ್ಮಾಣಗೊಂಡಿವೆ. ಸರಡಗಿ ಬ್ಯಾರೇಜ್​ನಲ್ಲಿ ಹೂಳೆತ್ತುವ ಕಾರ್ಯ ಕೈಗೊಳ್ಳಲಾಗಿದೆ ಎಂದರು.
ಮೇಲ್ಮನೆ ಸದಸ್ಯನಾಗಿದ್ದಾಗ ಜಿಲ್ಲೆಯ ರೈತರು ಬೆಳೆದ ತೊಗರಿ ಸೂಕ್ತ ಬೆಲೆ ಇರಲಿಲ್ಲ. ಆಗ ಸದನದಲ್ಲಿ ಕಣ್ಣೀರು ಹಾಕಿದ್ದೆ. ಸಿಎಂ ಗಮನಕ್ಕೆ ತಂದಾಗ ತಕ್ಷಣ ತೊಗರಿ ಖರೀದಿ ಶುರುವಾಯ್ತು. ರಾಜ್ಯ ಸರ್ಕಾರ ಬೆಂಬಲ ಬೆಲೆ ಜತೆಗೆ ಪ್ರೋತ್ಸಾಹಧನ ಸೇರಿಸಿ ರೈತರ ನೆರವಿಗೆ ಧಾವಿಸಿತ್ತು. ಮಾಜಿ ಶಾಸಕ ರೇವೂರ ಗೌಡರಿಗೆ ಇದ್ಯಾವುದೂ ಕಾಣುತ್ತಿಲ್ಲ. ಆದರೆ ಸದನದಲ್ಲಿ ನಾನು ಕೈ ಮಾಡಿ ಮಾತನಾಡಿದ್ದು ನಾಟಕ ಎಂಬಂತೆ ಭಾಸವಾಗಿದೆ. ಇದು ಅವರ ರೈತಪರ ಧೋರಣೆಗೆ ಹಿಡಿದ ಕನ್ನಡಿ ಎಂದು ಲೇವಡಿ ಮಾಡಿದರು.
ಚಂದ್ರಿಕಾ ಪರಮೇಶ್ವರ್​, ಮೇಯರ್​ ವರ್ಷಾ ಜಾನೆ, ಬಾಬು ಒಂಟಿ, ಸಂಗಮೇಶ ನಾಗನಹಳ್ಳಿ, ಭೀಮರಾವ ಮೇಳಕುಂದಾ, ಪ್ರಶಾಂತ ಕೊರಳ್ಳಿ, ಸಂತೋಷ ಪಾಟೀಲ್​ ಧನ್ನೂರ್​, ಶಿವಕುಮಾರ ಬಾಳಿ ಇತರರಿದ್ದರು.
"

ರಾಜ್ಯದಲ್ಲಿ ಅತಿಹೆಚ್ಚು ಬೆಳೆವಿಮೆ ಪರಿಹಾರ ಕಲಬುರಗಿ ಜಿಲ್ಲೆಗೆ 640 ಕೋಟಿ ರೂ. ಬಂದರೆ, ದಕ್ಷಿಣ ಮತಕ್ಷೇತ್ರಕ್ಕೆ 130 ಕೋಟಿ ರೂ. ಬಂದಿದೆ. ಹಿಂದೂಪರ ಎಂದು ಹೇಳಿಕೊಂಡು ತಿರುಗಾಡುವ ನೀವು ಜಿಲ್ಲೆಯಲ್ಲಿ ಒಂದು ಗುಡಿ ನಿರ್ಮಾಣ, ಪುನರುತ್ಥಾನ ಮಾಡಿದ ಉದಾಹರಣೆ ತೋರಿಸಿ. ಆದರೆ ನಮ್ಮ ಅವಧಿಯಲ್ಲಿ ಅನೇಕ ದೇವಸ್ಥಾನ, ಭವನ ನಿರ್ಮಾಣ ಮಾಡಲಾಗಿದೆ.

— > ಅಲ್ಲಮಪ್ರಭು ಪಾಟೀಲ್​, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net