ಧಾರವಾಡ: ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಎಸ್ ವಿ ಸಂಕನೂರ ಅವರು ಭರ್ಜರಿ ಜಯ ಸಾಧಿಸಿದ್ದಾರೆ.
ನಗರದ ಕೃಷಿ ವಿಶ್ವವಿದ್ಯಾಲಯದ ಕಟ್ಟಡದಲ್ಲಿ ಮುಂಜಾನೆ 8 ಗಂಟೆಯಿಂದ ಬಿಗಿ ಭದ್ರತೆಯೊಂದಿಗೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿತ್ತು. ಒಟ್ಟು 14 ಟೇಬಲ್ಗಳಲ್ಲಿ ನಡೆದ ಮತ ಎಣಿಕೆಯಲ್ಲಿ ಪ್ರತಿ ಸುತ್ತಿಗೆ ಅಂದಾಜು 14,000 ಮತಗಳ ಎಣಿಕೆ ಕಾರ್ಯ ನಡೆಯಿತು. ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡ ಎಸ್ ವಿ ಸಂಕನೂರ ಅವರು ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ವಿರುದ್ಧ ನಿರ್ಣಾಯಕ ಗೆಲುವು ದಾಖಲಿಸಿದರು.
ಮೊದಲ ಸುತ್ತು
ಎಸ್ ವಿ ಸಂಕನೂರ (ಬಿಜೆಪಿ): 6,459 ಮತಗಳು
ಮೋಹನ ಲಿಂಬಿಕಾಯಿ (ಕಾಂಗ್ರೆಸ್): 4,394 ಮತಗಳು (2,065 ಮತಗಳ ಹಿನ್ನಡೆ)
ಎರಡನೇ ಸುತ್ತು
ಎಸ್ ವಿ ಸಂಕನೂರ: 6,161 ಮತಗಳು
ಮೋಹನ ಲಿಂಬಿಕಾಯಿ: 4,697 ಮತಗಳು
ಮೂರನೇ ಸುತ್ತು
ಎಸ್ ವಿ ಸಂಕನೂರ: 6,191 ಮತಗಳು
ಮೋಹನ ಲಿಂಬಿಕಾಯಿ: 4,791 ಮತಗಳು
ನಾಲ್ಕನೇ ಸುತ್ತು
ಎಸ್ ವಿ ಸಂಕನೂರ: 6,527 ಮತಗಳು
ಮೋಹನ ಲಿಂಬಿಕಾಯಿ: 4,714 ಮತಗಳು (ಸಂಕನೂರಗೆ 1,813 ಮತಗಳ ಮುನ್ನಡೆ; 4 ಸುತ್ತುಗಳ ಮುಕ್ತಾಯಕ್ಕೆ ಒಟ್ಟು 6,738 ಮತಗಳ ಮುನ್ನಡೆ).
ಐದನೇ ಸುತ್ತು
ಎಸ್ ವಿ ಸಂಕನೂರ: 6,582 ಮತಗಳು
ಮೋಹನ ಲಿಂಬಿಕಾಯಿ: 4,600 ಮತಗಳು
ಆರನೇ ಹಾಗೂ ಕೊನೆಯ ಸುತ್ತು
ಎಸ್ ವಿ ಸಂಕನೂರ: 1,791 ಮತಗಳು
ಮೋಹನ ಲಿಂಬಿಕಾಯಿ: 1,188 ಮತಗಳು
ಅಂತಿಮವಾಗಿ ಎಲ್ಲಾ ಸುತ್ತುಗಳ ಮತ ಎಣಿಕೆ ಪೂರ್ಣಗೊಂಡ ಬಳಿಕ, ಎನ್ಡಿಎ ಅಭ್ಯರ್ಥಿ ಎಸ್ ವಿ ಸಂಕನೂರ ಅವರು ಒಟ್ಟು 9,323 ಮತಗಳ ಭರ್ಜರಿ ಅಂತರದ ಜಯವನ್ನು ತಮ್ಮದಾಗಿಸಿಕೊಂಡರು.
ಸಮಾಜದ ಅತ್ಯಂತ ಪ್ರಜ್ಞಾವಂತರೆನಿಸಿದ ಪದವೀಧರರು ಮತದಾರರಾಗಿರುವ ಈ ಕ್ಷೇತ್ರದಲ್ಲಿ, ಅಭ್ಯರ್ಥಿಗಳ ಮುನ್ನಡೆಯ ನಡುವೆಯೂ ವಿಭಿನ್ನ ಹಾಗೂ ಅಚ್ಚರಿಯ ಬೆಳವಣಿಗೆಯೊಂದು ಕಂಡುಬಂತು. ಚಲಾವಣೆಯಾದ ಒಟ್ಟು 73,658 ಮತಗಳಲ್ಲಿ, ಅಭ್ಯರ್ಥಿಗಳ ಹೆಸರಿನ ಮುಂದೆ ಪಾಸ್ ಮಾರ್ಕ್ ಹಾಕುವುದರಿಂದ ಹಿಡಿದು ಆಕ್ರೋಶಭರಿತ ಬೈಗುಳಗಳನ್ನು ಬರೆದಿರುವ ಪ್ರಸಂಗಗಳು ವರದಿಯಾಗಿವೆ.
ಮುಖ್ಯವಾಗಿ, ಮೊದಲ 3 ಸುತ್ತುಗಳ ಮತ ಎಣಿಕೆ ವೇಳೆ ಅಸಿಂಧುಗೊಂಡ ಅಥವಾ ತಿರಸ್ಕೃತವಾದ ಇಂತಹ ಕುಲಗೆಟ್ಟ ಮತಗಳ ಸಂಖ್ಯೆ ಅಭ್ಯರ್ಥಿಗಳ ಗೆಲುವಿನ ಲೀಡ್ಗಿಂತಲೂ ಹೆಚ್ಚಾಗಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಪ್ರಜ್ಞಾವಂತ ಮತದಾರರಲ್ಲೇ ವ್ಯವಸ್ಥೆಯ ಬಗ್ಗೆ ಇದ್ದ ಅತೃಪ್ತಿ ಅಥವಾ ಆಕ್ರೋಶವು ಮತಪತ್ರಗಳ ಮೂಲಕ ಹೊರಬಿದ್ದಿರುವುದು ಈ ಬಾರಿಯ ಚುನಾವಣೆಯ ವಿಶೇಷತೆಯಾಗಿತ್ತು.