ಬೆಂಗಳೂರು: ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ನಾಡಿನಾದ್ಯಂತ ಸಡಗರ-ಸಂಭ್ರಮದಿಂದ ಆಚರಿಸಲ್ಪಡುವ ಗೌರಿ-ಗಣೇಶ ಹಬ್ಬವು ಧಾರ್ಮಿಕ ಆಚರಣೆಯಷ್ಟೇ ಅಲ್ಲ. ಭಕ್ತಿ, ಸಂಸ್ಕೃತಿ ಮತ್ತು ಬಾಂಧವ್ಯಗಳ ಅಪೂರ್ವ ಸಂಗಮ. ಮನೆಯಲ್ಲಿ ಗೌರಿ-ಸಿದ್ಧಿ ವಿನಾಯಕನನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ.
ಹಾಗಾಗಿ ಮಾರುಕಟ್ಟೆಗೆ ಬಗೆ ಬಗೆಯ ಗೌರಿ, ಗಣೇಶನ ಮೂರ್ತಿಗಳು ಆಗಮಿಸಿದ್ದು, ಆರ್.ವಿ. ರಸ್ತೆ, ಟ್ಯಾನರಿ ರಸ್ತೆ, ಶಿವಾಜಿನಗರ, ಬಾಣಸವಾಡಿ, ಹಲಸೂರು, ಮಲ್ಲೇಶ್ವರ, ಯಶವಂತಪುರ ಸೇರಿ ವಿವಿಧ ಭಾಗಗಳಲ್ಲಿ ಗೌರಿ-ಗಣೇಶನ ಮೂರ್ತಿಗಳ ತಯಾರಿ ಹಾಗೂ ಮಾರಾಟ ಬಿರುಸುಗೊಂಡಿದೆ. ಅಲ್ಲದೆ
ಗೌರಿ ಮತ್ತು ಗಣೇಶ ಹಬ್ಬ ಎರಡೂ ಈ ಬಾರಿ ಒಂದೇ ದಿನ (ಸೋಮವಾರ) ಬಂದಿದ್ದು, ಇದರೊಂದಿಗೆ ಮೂರು ದಿನಗಳ ನಿರಂತರ ಸರ್ಕಾರಿ ರಜೆ ಹಿನ್ನೆಲೆಯಲ್ಲಿ ಶನಿವಾರ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು.
ಜತೆಗೆ ವಾರಾಂತ್ಯ (ಶನಿವಾರ ಮತ್ತು ಭಾನುವಾರ) ರಜೆ ಇರುವುದರಿಂದ ಬಹುತೇಕರು ಒಳ್ಳೆಯ ಸಮಯ ಹಾಗೂ ಗಳಿಗೆ ನೋಡಿ ಶನಿವಾರವೇ ಗೌರಿ - ಗಣೇಶ ಮೂರ್ತಿಗಳನ್ನು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಲ್ಲದೆ ಬಹುತೇಕ ಕಚೇರಿಗಳಲ್ಲಿ ಶನಿವಾರವೇ ಗೌರಿ - ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಮಾಡಿ ಸಂಭ್ರಮಿಸಲಾಯಿತು. ಸೋಮವಾರ ಹಬ್ಬ ಇರುವುದರಿಂದ ಇನ್ನೂ ಖರೀದಿಸುವವರು ಇದ್ದಾರೆ. ಹಾಗಾಗಿ ಬಹುತೇಕ ಮಾರಾಟ ಮಳಿಗೆಗಳಲ್ಲಿ ವಿಗ್ರಹಗಳಿಗೆ ಬಣ್ಣ ಬಳಿಯುವ ಕಾರ್ಯವೂ ಬಿರುಸುಗೊಂಡಿತ್ತು.
ಪರಿಸರ ಸ್ನೇಹಿ ಗಣಪನಿಗೆ ಬೇಡಿಕೆ:
ಪ್ರತಿ ಬಾರಿಯಂತೆ ಈ ವರ್ಷವೂ ಕರ್ನಾಟಕದ ಪರಿಸರ ಸ್ನೇಹಿ ಮಣ್ಣಿನ ಗಣಪನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದೆ. ಈ ಬಾರಿ ಸರ್ಕಾರ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿಗಳ ಬಳಕೆ ನಿಷೇಧಿಸಿದೆ. ಜತೆಗೆ ವಿದೇಶಿಗರು ಸಹ ಮಣ್ಣಿನ ಗಣಪನ ಮೂರ್ತಿಗಳನ್ನು ತರಿಸಿಕೊಳ್ಳುತ್ತಿದ್ದು, ಪರಿಸರ ಸ್ನೇಹಿ ಗಣಪನ ಪೂಜೆಯೇ ಈ ಬಾರಿಯ ಆಚರಣೆಯ ವಿಶೇಷತೆಯಾಗಿದೆ. ಬೆಂಗಳೂರು ಒಂದರಲ್ಲೇ 100ಕ್ಕೂ ಅಧಿಕ ಗಣೇಶ ಮೂರ್ತಿ ತಯಾರಿ ಮತ್ತು ಮಾರಾಟ ಮಳಿಗೆಗಳಿದ್ದು ಇವರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮಣ್ಣಿನ ಗಣಪನ ಮೂರ್ತಿಗಳು ವಿದೇಶಗಳಿಗೆ ರಫ್ತಾಗಿವೆ.
ಮೂರ್ತಿಗಳ ವಿಶೇಷತೆ:
ಗಖಮುಖ ಹೋಲುವ ದೇವರು ಗಣಪ. ಹಿಂದಿನಿಂದಲೂ ಬಂದಿರುವ ಕಲ್ಪನೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಆಯಾ ವರ್ಷದ ವಿಶೇಷತೆಗಳಿಗೆ ಅನುಗುಣವಾಗಿ ಗಣಪನ ಮೂರ್ತಿಗಳು ತಯಾರಾಗುತ್ತವೆ. ಹಾಗಾಗಿ ಸಾಮೂಹಿಕವಾಗಿ ಬಡಾವಣೆಗಳಲ್ಲಿ ಗಣಪನನ್ನು ಪ್ರತಿಷ್ಠಾಪಿಸಿ ಪೂಜಿಸುವವರು ಏನಾದರು ವಿಶೇಷತೆಯಿಂದ ಕೂಡಿರಬೇಕು ಎಂಬ ಕಾರಣಕ್ಕೆ ಕೆಲ ಥೀಮ್ ಆಧಾರಿತ ಗಣಪನ ಮೂರ್ತಿಗಳನ್ನು ಇಟ್ಟು ಪೂಜಿಸುತ್ತಾರೆ. ಹಾಗಾಗಿ ಈ ಬಾರಿ ಮಾರುಕಟ್ಟೆಗಳಲ್ಲಿ ಕಾಂತಾರ ಗಣಪ, ಬೆಂಗಳೂರು ನಿರ್ಮಾತೃ ಕೆಂಪೇಗೌಡ ಗಣಪ, ಮಲೈ ಮಹದೇಶ್ವರ ಗಣಪ, ತಮಿಳುನಾಡಿನ ಪಿಳ್ಳ್ಯಾರಪಟ್ಟಿ ಪೇಪರ್ ಗಣಪ ಹೀಗೆ ವಿಶೇಷ ಗಣಪನ ಮೂರ್ತಿಗಳು ಜನರನ್ನು ಆಕರ್ಷಿಸುತ್ತಿವೆ.
ವಿನಾಯಕ ವ್ರತಾಚರಣೆ
ಭಾದ್ರಪದ ಮಾಸದ ಶುಕ್ಲಪಕ್ಷದಲ್ಲಿನ ತದಿಗೆ ಗೌರಿ ಪೂಜೆಯನ್ನು ಸೂಕ್ತ ಕಾಲ. ಸೆ. 13ರಂದು ಬೆಳಗ್ಗೆ 6.45ಕ್ಕೆ ತದಿಗೆ ಆರಂಭವಾಗುತ್ತದೆ. ಆದರೆ 14ರಂದು ಸೂರ್ಯೋದಯದ ಆರಂಭದಲ್ಲಿ ತದಿಗೆ ಇರುವುದರಿಂದ ಗೌರಿ ಪೂಜೆಗೆ ಸೂಕ್ತ. ಹೀಗಾಗಿ ಶ್ರೀ ಸ್ವರ್ಣಗೌರಿ ವ್ರತವನ್ನು 14ರಂದು ಆರಂಭಿಸಬೇಕು. ಅದೇ ದಿನದಂದು ಬೆಳಗ್ಗೆ 6.54ರ ನಂತರ ಚೌತಿ ಆರಂಭವಾಗಲಿದ್ದು, ವರಸಿದ್ಧಿ ವಿನಾಯಕನ ಪೂಜೆಯನ್ನು ಅಂದೇ ಆಚರಿಸಬೇಕಿದೆ ಎನ್ನುತ್ತಾರೆ ಜ್ಯೋತಿಷ್ಯರು.