ಬಸವನಬಾಗೇವಾಡಿ: ಸುಮಾರು 1300 ಕೋಟಿ ರೂ.ಗಳಲ್ಲಿ ಜಿಲ್ಲೆಯ ಇಂಡಿ, ವಿಜಯಪುರ, ಬಸವನಬಾಗೇವಾಡಿ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ 2027ಕ್ಕೆ ಜಲಧಾರೆ ಯೋಜನೆಯಲ್ಲಿ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದು ಶಾಸಕ, ಮಾಜಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಸೋಮವಾರ ತಾಲೂಕಿನ ನಾಗೂರು ಗ್ರಾಮದಲ್ಲಿ ಬಾಂದಾರಕ್ಕೆ ಬಾಗಿನ ಅರ್ಪಣೆ ಮಾಡಿ ಮಾತನಾಡಿದ ಅವರು, ಕೃಷ್ಣಾ ನದಿಯ ಜಲಧಾರೆ ಯೋಜನೆ ಮೂಲಕ ಮನೆ ಮನೆಗಳಿಗೆ ನೀರು ಪೂರೈಕೆಯಾಗಲಿದೆ. ಈ ಯೋಜನೆಯ ಕಾಮಗಾರಿಯನ್ನು ಶೇ.90ರಷ್ಟು ಪೂರ್ಣಗೊಂಡಿದ್ದು ಉಳಿದ ಕಾಮಗಾರಿ ಆದಷ್ಟು ಬೇಗ ಮುಗಿಸಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದರು.
ಕೆರೆ ನಿರ್ಮಾಣ ಮಾಡಬೇಕೆಂಬುವುದು ಗ್ರಾಮಸ್ಥರ ಪ್ರಮುಖ ಬೇಡಿಕೆಗನುಗುಣವಾಗಿ ಪೂರ್ಣ ಪ್ರಮಾಣ ಕೆರೆ ನಿರ್ಮಾಣಕ್ಕೆ ಸರ್ಕಾರದಿಂದ ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಹಲವಾರು ಕೆರೆ ನಿರ್ಮಿಸಿದ್ದು. ಬರುವ ಬೇಸಿಗೆ ಒಳಗಾಗಿ ನಾಗೂರು ಗ್ರಾಮದಲ್ಲಿ ಕೆರೆ ನಿರ್ಮಿಸಿ ಅದರ ಸುತ್ತಲೂ ಉದ್ಯಾನವನ ನಿರ್ಮಿಸಿ ಒಂದು ಪ್ರವಾಸಿ ತಾಣವಾಗಿ ನಿರ್ಮಾಣ ಮಾಡಲಾಗುವುದು. ಈಗಲೇ ಮನಗೂಳಿ ಪಟ್ಟಣದಲ್ಲಿ ಬೃಹತ್ ಕೆರೆ ನಿರ್ಮಿಸಿ ಸುತ್ತಲೂ ಉದ್ಯಾನವನ ನಿರ್ಮಿಸಲಾಗಿದೆ ಎಂದು ಹೇಳಿದರು.
ಜಲ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿನ ಜಲ ಮೂಲ ಸಂರಕ್ಷಿಸಿ ರೈತರ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವುದರೊಂದಿಗೆ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಸದಾ ಬದ್ಧನಾಗಿದ್ದೇನೆ ಎಂದು ತಿಳಿಸಿದರು.
ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ವಿ.ಎಸ್. ಸನಗದಾಳ, ತಾಪಂ. ಇ.ಒ ವೆಂಕಟೇಶ ವಂದಾಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಪುರಸಭೆಯ ಮಾಜಿ ಅಧ್ಯಕ್ಷ ಜಗದೇವಿ ಗುಂಡಳ್ಳಿ, ಎಪಿಎಂಸಿ ಮಾಜಿ ಅಧ್ಯಕ್ಷ ಶೇಖರ ಗೊಳಸಂಗಿ, ಗ್ರಾಪಂ. ಮಾಜಿ ಸದಸ್ಯ ಹೈದರಸಾಬ ಚಪ್ಪರಬಂದ, ಬಸಲಿಂಗಪ್ಪ ಮುಳವಾಡ ಮತ್ತಿತರರಿದ್ದರು.