ನದಿ ತೀರದಲ್ಲೇ ಜಲಕ್ಕೆ ಹಾಹಾಕಾರ

ಜಮಖಂಡಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್‌ನಲ್ಲಿ ಕಡಿಮೆ ಪ್ರಮಾಣದಲ್ಲಿ ನೀರಿನ ಸಂಗ್ರಹವಿರುವುದು.
ಜಮಖಂಡಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್‌ನಲ್ಲಿ ಕಡಿಮೆ ಪ್ರಮಾಣದಲ್ಲಿ ನೀರಿನ ಸಂಗ್ರಹವಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಹಿಪ್ಪರಗಿ ಬ್ಯಾರೇಜ್ ನೀರಿನ ಸ್ಥಿತಿ ಗಂಭೀರ
  • ಕುಸಿಯುತ್ತಿರುವ ಮಟ್ಟ
ಜಮಖಂಡಿ: ತಾಲೂಕಿನ ಹಿಪ್ಪರಗಿ ಬ್ಯಾರೇಜ್‌ನಲ್ಲಿ ನೀರಿನ ಮಟ್ಟ ಡೆಡ್ ಸ್ಟೋರೆಜ್ ಹಂತಕ್ಕೆ ಕುಸಿಯುತ್ತಿರುವುದರಿಂದ ನದಿಯ ಕೆಳಭಾಗದ ಗ್ರಾಮಸ್ಥರಲ್ಲಿ ಹಾಗೂ ರೈತರಲ್ಲಿ ತೀವ್ರ ಆತಂಕ ಮನೆಮಾಡಿದೆ. ಬಿಸಿಲಿನ ತಾಪ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಪ್ರಸ್ತುತ ಹಿಪ್ಪರಗಿ ಬ್ಯಾರೇಜ್‌ನಲ್ಲಿ ಕೇವಲ 1 ಟಿಎಂಸಿ ಮಾತ್ರ ನೀರಿನ ಸಂಗ್ರಹವಿದೆ. ಇದರಲ್ಲಿ 0.8 ಟಿಎಂಸಿ ನೀರು ಡೆಡ್ ಸ್ಟೋರೆಜ್ ಆಗಿದ್ದು, ಬಳಕೆಗೆ ಲಭ್ಯವಿರುವುದು ಕೇವಲ 0.2 ಟಿಎಂಸಿ ಮಾತ್ರ. ಜಮಖಂಡಿ, ಅಥಣಿ, ತೇರದಾಳ, ರಬಕವಿ-ಬನಹಟ್ಟಿ ಸೇರಿ ಹಲವು ನಗರಗಳು ಮತ್ತು ನೂರಾರು ಗ್ರಾಮಗಳಿಗೆ ಇದೇ ಆಸರೆಯಾಗಿದೆ. ಆದರೆ, ತೀವ್ರ ಬಿಸಿಲಿನ ತಾಪಕ್ಕೆ ಬಳಕೆಯಿಂದಾಗಿ ಪ್ರತಿದಿನ ಅಂದಾಜು 0.05 ಟಿಎಂಸಿ ನೀರು ಖರ್ಚಾಗುತ್ತಿದೆ.
ಬ್ಯಾರೇಜ್‌ನ ಕೆಳಹಂತದಲ್ಲಿರುವ ಹಿಪ್ಪರಗಿ, ಶಿರಗುಪ್ಪಿ, ಮೈಗೂರ, ಮುತ್ತೂರ, ಕಂಕಣವಾಡಿ, ಕಡಕೋಳ, ತುಬಚಿ ಹಾಗೂ ಅಥಣಿ ತಾಲೂಕಿನ ದರ್ಗಾ, ಶಿರಹಟ್ಟಿ, ಸವದಿ, ಝುಂಜರವಾಡ ಸೇರಿ 40 ಕ್ಕೂ ಅಧಿಕ ಗ್ರಾಮಗಳ ಜನ-ಜಾನುವಾರುಗಳು ಹನಿ ನೀರಿಗಾಗಿ ಹಪಹಪಿಸುತ್ತಿವೆ.
ನದಿ ಬತ್ತುತ್ತಿರುವುದರಿಂದ ಮಹಾರಾಷ್ಟ್ರದಿಂದ ನೀರು ಬಿಡಿಸಲು ಮುಂಜಾಗೃತ ಕ್ರಮ ತೆಗೆದುಕೊಳ್ಳದೇ ಇರುವುದರಿಂದ ನದಿ ತೀರದಲ್ಲಿ ಜೀವನ ನಡೆಸುವುದು ದುಸ್ತರವಾಗಿದೆ. ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ನೇರ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದಿಂದ ನೀರು ಬಿಡಿಸಿ: ಕರ್ನಾಟಕ ಸರ್ಕಾರವು ಮಹಾರಾಷ್ಟ್ರ ಸರ್ಕಾರಕ್ಕೆ ಒಪ್ಪಂದದಂತೆ ಹಣ ಪಾವತಿಸಿ, ಕೋಯ್ನ ಜಲಾಶಯದಿಂದ ಕನಿಷ್ಠ 2 ಟಿಎಂಸಿ ನೀರನ್ನು ತಕ್ಷಣವೇ ಬಿಡಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಜೂನ್ ಸಾಥ್‌ಗೆ ಮಹಾರಾಷ್ಟ್ರದ ಬ್ಯಾರೇಜ್‌ಗಳ ಗೇಟ್ ತೆರೆದಾಗ ನೀರು ಹರಿದು ಬರುವುದು ಸಾಮಾನ್ಯ. ಆದರೆ, ಅಲ್ಲಿಯವರೆಗೆ ಕಾಯುವ ತಾಳ್ಮೆ ಮತ್ತು ಶಕ್ತಿ ಜನರಿಗಿಲ್ಲ. ಈ ಕೂಡಲೇ ಜನಪ್ರತಿನಿಧಿಗಳು ಕಾಲಹರಣ ಮಾಡದೆ ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ನೀರು ಬಿಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಪ್ರಸ್ತುತ ಇರುವ ನೀರು ಬ್ಯಾರೇಜ್ ವ್ಯಾಪ್ತಿಯ ನಗರ, ಗ್ರಾಮಾಂತರ ಪ್ರದೇಶಗಳಿಗೆ ಒಂದು ತಿಂಗಳ ಕಾಲ ಸಾಕಾಗಬಹುದು. ಆದರೆ, ಬ್ಯಾರೇಜ್ ಕೆಳಹಂತದ ನದಿ ತೀರದ ಹಳ್ಳಿಗಳಲ್ಲಿ ಉಂಟಾಗಿರುವ ಸಂಕಷ್ಟಕ್ಕೆ ಪರಿಹಾರ ಯಾವಾಗ ಎನ್ನುವಂತಾಗಿದೆ. ನದಿಯನ್ನೇ ನಂಬಿಕೊಂಡಿರುವ ನಮಗೆ ಈಗ ಕುಡಿಯುವ ನೀರಿಗೂ ಗತಿಯಿಲ್ಲದಂತಾಗಿದೆ. ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗಲಿದೆ ಎಂದು ಕೃಷ್ಭಾ ತೀರದ ಗ್ರಾಮಸ್ಥರು ‘ವಿಜಯವಾಣಿ’ ಎದುರು ಅಳಲು ತೋಡಿಕೊಂಡರು.
"

ಉಸ್ತುವಾರಿ ಸಚಿವರು ಭೇಟಿ ನೀಡಲಿಜಮಖಂಡಿ ಕ್ಷೇತ್ರದ ಪಕ್ಕದ ಮುಧೋಳ ಕ್ಷೇತ್ರದ ಸಚಿವರಾದ ಆರ್.ಬಿ. ತಿಮ್ಮಾಪೂರ ಅವರಿಗೆ ಕೃಷ್ಣಾ ನದಿಯ ಒಡಲು ಖಾಲಿಯಾಗಿ ಒಂದು ತಿಂಗಳು ಗತಿಸುತ್ತಾ ಬಂದಿದ್ದರೂ ಇಲ್ಲಿ ಜನರು ಅನುಭವಿಸುತ್ತಿರುವ ಸಂಕಷ್ಟ ಗಮನಕ್ಕೆ ಬಂದಿಲ್ಲವೇ? ಒಂದು ಸಾರಿಯಾದರೂ ನದಿ ಸ್ಥಳಕ್ಕೆ ಭೇಟಿ ನೀಡಿ ನಮ್ಮ ಸಂಕಷ್ಟಕ್ಕೆ ಸ್ಪಂದಿಸಿ ಪುಣ್ಯಕಟ್ಟಿಕೊಳ್ಳಿ ಎಂದು ನದಿ ತೀರದ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net