ವಿಜಯಪುರ: ಚಿತ್ರದುರ್ಗದ ಕೋಟೆಗೆ ಸಂಕಷ್ಟ ಎದುರಾದಾಗ ವನಕೆಯನ್ನೇ ಶಸ್ತ್ರವಾಗಿಸಿಕೊಂಡು ಹೋರಾಡಿದ ವನಕೆ ಓಬವ್ವಳ್ಳ ಧೀರತನ ಎಲ್ಲರಿಗೂ ಸೂರ್ತಿದಾಯಕ ಎಂದು ಅಪರ ಜಿಲ್ಲಾಧಿಕಾರಿ ಸೋಮನಿಂಗ ಗೆಣ್ಣೂರ ಹೇಳಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವೀರವನಿತೆ ವನಕೆ ಓಬವ್ವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಓಬವ್ವ ಓರ್ವ ಮಹಿಳೆಯಾಗಿದ್ದರೂ ಧೈರ್ಯ, ಸಾಹಸದಿಂದ ಶತ್ರುಗಳ ದಾಳಿಗೆ ಎದೆಗುಂದದೆ ವನಕೆ ಹಿಡಿದು ಹೋರಾಡಿದ್ದರು. ಅವರ ಧೀರತನದ ಜೀವನ ಇಂದಿನ ಯುವಜನತೆಗೆ ಮಾದರಿಯಾಗಿದೆ. ಸಂಕಷ್ಟದಲ್ಲಿ ಸ್ವಯಂಪ್ರೇರಿತವಾಗಿ ಸೂಕ್ತ ನಿರ್ಧಾರ ಕೈಗೊಳ್ಳುವ ಓಬವ್ವರಂತಹ ವೀರರ ಕಥೆಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಸಹಕಾರಿಯಾಗಲಿದೆ. ಅಲ್ಲದೆ, ಭವಿಷ್ಯದಲ್ಲಿ ಸಮಾಜಕ್ಕೆ ಉತ್ತಮ ಪ್ರಜೆ ನೀಡಬಹುದಾಗಿದೆ ಎಂದು ತಿಳಿಸಿದರು.
ಉಜ್ವಲಾ ಸರನಾಡಗೌಡ ವಿಶೇಷ ಉಪನ್ಯಾಸ ನೀಡಿ, ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯದ ಪ್ರತೀಕವಾಗಿರುವ ವೀರ ಮಹಿಳೆಯರ ಧೈರ್ಯ ಸಾಹಸದ ಜೀವನವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ಕಷ್ಟದಲ್ಲಿ ಪರಿಸ್ಥಿತಿಯಲ್ಲಿ ತನ್ನ ಕೋಟೆ ರಕ್ಷಣೆಯ ಹೊಣೆಯನ್ನು ಸ್ವಯಂಪ್ರೇರಿತವಾಗಿ ಹೊತ್ತು ಧೈರ್ಯ ಹಾಗೂ ಛಲದಿಂದ ಹೋರಾಡಿದ ವೀರವನಿತೆ ಓಬವ್ವ ನಮ್ಮಗೆಲ್ಲ ಆದರ್ಶಪ್ರಾಯರಾಗಿದ್ದಾರೆ ಎಂದರು.
ವೈಷ್ಣವಿ ನಾಯ್ಕೋಡಿ ತಂಡದಿಂದ ವೀರವನಿತೆ ಒನಕೆ ಓಬವ್ವ ಕುರಿತ ನೃತ್ಯ ರೂಪಕ ನಡೆಯಿತು. ಜಿಪಂ ಉಪಕಾರ್ಯದರ್ಶಿ ಪ್ರಕಾಶ ವಡ್ಡರ, ಡಿವೈಎಸ್‌ಪಿ ಸುನೀಲ ಕಾಂಬಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಮುಖಂಡರಾದ ಅಡಿವೆಪ್ಪ ಸಾಲಗಲ್ಲ ಮತ್ತಿತರರಿದ್ದರು.
ಇದಕ್ಕೂ ಮುನ್ನ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನ ಬಳಿ ಹಮ್ಮಿಕೊಂಡಿದ್ದ ವೀರ ವನಿತೆ ವನಕೆ ಓಬವ್ವರ ಭಾವಚಿತ್ರ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಸೋಮನಿಂಗ ಗೆಣ್ಣೂರ ಚಾಲನೆ ನೀಡಿದರು. ವಿವಿಧ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಸಂಚರಿಸಿ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಸಮಾವೇಶಗೊಂಡಿತ್ತು.