ಡಿಕೆಶಿಗೆ ಸಿಎಂ ಪಟ್ಟ ನೀಡದಿದ್ದರೆ ರಾಜ್ಯಾದ್ಯಂತ ಹೋರಾಟ: ಒಕ್ಕಲಿಗರ ಸಂಘ ಎಚ್ಚರಿಕೆ

ರಾಜ್ಯ ಒಕ್ಕಲಿಗರ ಸಂಘ ಸುದ್ದಿಗೋಷ್ಠಿ
ರಾಜ್ಯ ಒಕ್ಕಲಿಗರ ಸಂಘ ಸುದ್ದಿಗೋಷ್ಠಿ
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಡಿ.ಕೆ. ಶಿವಕುಮಾರ್ ಪಾತ್ರವಿದೆ. ಎರಡೂವರೆ ವರ್ಷ ಅಧಿಕಾರ ಅನುಭವಿಸಿರುವ ಸಿದ್ದರಾಮಯ್ಯನವರು ಕುರ್ಚಿ ಬಿಟ್ಟುಕೊಡಬೇಕು.
  • ಸಂಧಾನ ಸೂತ್ರದಂತೆ ಉಳಿದ ಅವಧಿಯನ್ನು ಡಿ.ಕೆ. ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕು.
  • ಇಲ್ಲವಾದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಡಿ.ಕೆ. ಶಿವಕುಮಾರ್ ಪಾತ್ರವಿದೆ. ಈಗಾಗಲೇ ಎರಡೂವರೆ ವರ್ಷ ಅಧಿಕಾರ ಅನುಭವಿಸಿರುವ ಸಿದ್ದರಾಮಯ್ಯನವರು ಕುರ್ಚಿ ಬಿಟ್ಟುಕೊಡಬೇಕು. ಸಂಧಾನ ಸೂತ್ರದಂತೆ ಉಳಿದ ಅವಧಿಯನ್ನು ಡಿ.ಕೆ. ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕು. ಇಲ್ಲವಾದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಒಕ್ಕಲಿಗರ ಸಂಘ ಎಚ್ಚರಿಕೆ ನೀಡಿತು.
ಸಂಘದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ನೂತನ ಪದಾಧಿಕಾರಿಗಳೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ್, ಡಿ.ಕೆ. ಶಿವಕುಮಾರ್ ಅವರು ಕೇವಲ ಕರ್ನಾಟಕ ಮಾತ್ರವಲ್ಲದೆ, ಹೊರ ರಾಜ್ಯಗಳಲ್ಲಿಯೂ ಕಾಂಗ್ರೆಸ್ ಪಕ್ಷದ ಪರವಾಗಿ ತಮ್ಮದೇ ಹೋರಾಟ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿಯೂ ಪಕ್ಷವನ್ನು ಅಧಿಕಾರಕ್ಕೆ ತರಲು ಅವರ ಕೊಡುಗೆ ಬೇಕಿದೆ. ಇದೆಲ್ಲವನ್ನೂ ಪರಿಗಣಿಸಿ ಕೊಟ್ಟಿರುವ ಮಾತಿನಂತೆ ಅಧಿಕಾರ ನೀಡಬೇಕು ಎಂದು ಒತ್ತಾಯಿಸಿದರು.

ಡಿಕೆಶಿನೇ ಸಿಎಂ ಆಗಬೇಕು:

ಒಕ್ಕಲಿಗರು ಯಾರಾದರೂ ಸಿಎಂ ಆದರೂ ನಡೆಯುತ್ತೋ ಅಥವಾ ಡಿಕೆಶಿ ಅವರೇ ಸಿಎಂ ಆಗಬೇಕಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಲ್. ಶ್ರೀನಿವಾಸ್, ಡಿ.ಕೆ. ಶಿವಕುಮಾರ್ ಅವರೇ ರೇಸ್‌ನಲ್ಲಿದ್ದಾರೆ. ಮೊದಲ ಆದ್ಯತೆಯಾಗಿ ಡಿಕೆಶಿಗೆ ಅವಕಾಶ ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದರು.
ಸಿಎಂ ಯಾರಾಗಬೇಕು ಎಂಬುದನ್ನು ಶಾಸಕರು ನಿರ್ಧರಿಸಲಿ ಸ್ವಾಮೀಜಿಗಳು ಈ ರೀತಿಯ ಹೇಳಿಕೆಗಳನ್ನು ನೀಡಬಾರದೆಂದು ಕಾಗಿನೆಲೆ ಶ್ರೀಗಳು ಹೇಳಿಕೆ ನೀಡಿದ್ದಾರೆಂಬ ಪ್ರಶ್ನೆಗೆ, ಅವರವರ ಸ್ವಾಮೀಜಿಗಳು ಅವರ ಸಮುದಾಯದ ನಾಯಕರ ಕುರಿತು ಮಾತನಾಡುತ್ತಾರೆ. ಹಾಗೆಯೇ, ಚುಂಚಶ್ರೀಗಳು ಡಿಕೆಶಿ ಪರವಾಗಿ ಮಾತನಾಡಿದ್ದಾರೆಂದು ಸಮರ್ಥಿಸಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಸಂಘದ ನೂತನ ಪದಾಧಿಕಾರಿಗಳಾದ ಉಪಾಧ್ಯಕ್ಷರಾದ ಡಾ. ಕೆ.ವಿ ರೇಣುಕಾಪ್ರಸಾದ್, ಎಂ. ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಿ.ಜಿ. ಗಂಗಾಧರ್, ಸಹಾಯಕ ಕಾರ್ಯದರ್ಶಿ ಡಾ. ಡಿ.ಕೆ. ರಮೇಶ್ ಸೇರಿ ಸಂಘದ ಮುಖಂಡರು ಉಪಸ್ಥಿತರಿದ್ದರು.

ಮೊದಲ ಬಾರಿಗೆ ಅವಿರೋಧ ಆಯ್ಕೆ

ರಾಜ್ಯ ಒಕ್ಕಲಿಗರ ಸಂಘವು 1907ರಲ್ಲಿ ಸ್ಥಾಪನೆಯಾಗಿದ್ದು, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಧ್ಯಕ್ಷರು ಸೇರಿ 35 ಮಂದಿ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಸರ್ವಾನುಮತದಿಂದ ಅವಿರೋಧ ಆಯ್ಕೆ ಮಾಡಿರುವುದು ಹೊಸ ದಾಖಲೆಯಾಗಿದೆ.
ಈ ಬಾರಿಯ ಪದಾಧಿಕಾರಿಗಳ ಚುನಾವಣೆಯಲ್ಲಿ ಈ ಹಿಂದೆ ನಡೆಯುತ್ತಿದ್ದಂತೆ ಯಾವುದೇ ಬಣಗಳು, ಗುಂಪುಗಳು, ತಂಡಗಳು ಇರಲಿಲ್ಲ. ಸ್ಪರ್ಧೆಯೂ ಏರ್ಪಡದಿರುವುದು ವಿಶೇಷವಾಗಿದೆ. ಸಂಘದ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಜನಾಂಗದ ಹಿತ ಕಾಪಾಡಲು ಕಾರ್ಯ ನಿರ್ವಹಿಸಲಾಗುತ್ತದೆ ಎಂದು ಅಧ್ಯಕ್ಷ ಎಲ್. ಶ್ರೀನಿವಾಸ್ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net