ಎಸ್‌ಐಆರ್‌ಗೆ ಬಂದ ಶಿಕ್ಷಕರಿಗೆ ಗ್ರಾಮಸ್ಥರ ಮುತ್ತಿಗೆ

Villagers lay siege to teachers who arrived at the SIR.
Villagers lay siege to teachers who arrived at the SIR.
Published on
ಮಾಗಡಿ: ಕಾಡು ರಾಮನಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ. ಅಧಿಕಾರಿ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಬೇಸತ್ತಿರುವ ಗ್ರಾಮಸ್ಥರು, ಮತಪಟ್ಟಿ ಪರಿಷ್ಕರಣೆ ಕೆಲಸಕ್ಕೆ ಬಂದ ಶಿಕ್ಷಕರಿಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು.
ಗ್ರಾಮಸ್ಥರ ಆಕ್ರೋಶದ ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತಿರುವ ಮಾಗಡಿ ತಾಪಂ ಕಾರ್ಯನಿರ್ವಹಣಾಧಿಕಾರಿ ಜೈಪಾಲ್ ವಾರದೊಳಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಕಾಡು ರಾಮನಹಳ್ಳಿಯ ಸ್ಥಿತಿಯನ್ನು ಬೇಸಿಗೆಯಿಂದಲೂ ಗಮನಿಸುತ್ತಿದ್ದೇವೆ.
ಈ ಹಿಂದೆ ಕೊರೆಸಿದ ಕೊಳವೆಬಾವಿಯಲ್ಲಿ ನೀರು ಸಿಗಲಿಲ್ಲ. ಹೊಸ ಕೊಳವೆಬಾವಿ ಕೊರೆಸುವ ಕೆಲಸ ಮಾಡಲಿದ್ದೇವೆ. ಅಲ್ಲಿಯವರೆಗೆ ಪ್ರತಿದಿನ ತಪ್ಪದೇ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಜೈಪಾಲ್ ತಿಳಿಸಿದರು.
ಅಧಿಕಾರಿಗಳು ಕೇವಲ ಭರವಸೆ ನೀಡಿ ಸುಮ್ಮನಿರಬಾರದು. ವಾರದ ಒಳಗೆ ಹೊಸ ಕೊಳವೆಬಾವಿ ಕಾರ್ಯಗತಗೊಂಡು, ಎರಡು ವರ್ಷಗಳಿಂದ ನಿಂತಿರುವ ಕಿರು ನೀರು ಪೂರೈಕೆ ಘಟಕಕ್ಕೆ ಜೀವ ಬರಬೇಕಿದೆ. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಗ್ರಾಮಸ್ಥರು ತಾಲೂಕು ಕಚೇರಿಗೆ ಮುತ್ತಿಗೆ ಹಾಕುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಹನಿ ನೀರಿಗೂ ಅಲೆದಾಟ: ಮರಳಿಗುಡ್ಡೆ ಅರಣ್ಯ ಪ್ರದೇಶದ ತಪ್ಪಲಿನಲ್ಲಿರುವ ಕಾಡು ರಾಮನಹಳ್ಳಿ ಗ್ರಾಮದಲ್ಲಿ 80ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಕಳೆದ ಐದು ತಿಂಗಳಿಂದ ಈ ಗ್ರಾಮದಲ್ಲಿ ನೀರಿನ ಸಮಸ್ಯೆ ಕಾಡುತ್ತಿದ್ದು, ಸಾರ್ವಜನಿಕರು ಹಾಗೂ ಜಾನುವಾರುಗಳು ಹನಿ ನೀರಿಗಾಗಿ ಅಲೆಯುವಂತಾಗಿದೆ.
ಧೂಳು ಹಿಡಿದಿರುವ ಕಿರು ನೀರು ಪೂರೈಕೆ ಘಟಕ ಗ್ರಾಮದ ದೇವಸ್ಥಾನದ ಬಳಿ ಇರುವ ಕಿರು ನೀರು ಪೂರೈಕಾ ಘಟಕವು ನೀರಿಲ್ಲದೆ ಕಳೆದ ಎರಡು ವರ್ಷಗಳಿಂದ ಸಂಪೂರ್ಣ ಸ್ಥಗಿತಗೊಂಡಿದೆ. ಈ ವ್ಯವಸ್ಥೆಯನ್ನು ಸರಿಪಡಿಸಲು ಮನಸ್ಸು ಮಾಡದ ಅಧಿಕಾರಿಗಳು, ಈಗ ಟ್ಯಾಂಕರ್ ನೀರು ಕೊಟ್ಟು ಅವ್ಯವಸ್ಥೆಯನ್ನು ಮುಚ್ಚಿ ಹಾಕಲು ನೋಡುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net