ಕೊನೆ ದಿನಗಳನ್ನು ಎಣಿಸುತ್ತಿರುವ ಕಾಂಗ್ರೆಸ್ ಸರ್ಕಾರ!...ಜನರ ಸಮಸ್ಯೆಗಳನ್ನ ಕಣ್ಣಾರೆ ಕಾಣಲು ಬಳ್ಳಾರಿ ಚಲೋ ಅವಕಾಶ ಎಂದ ವಿಜಯೇಂದ್ರ | Ballari Chalo

Ballari Chalo | ಬಳ್ಳಾರಿ ಚಲೋ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ವಿಜಯೇಂದ್ರ
Ballari Chalo | ಬಳ್ಳಾರಿ ಚಲೋ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ವಿಜಯೇಂದ್ರ
Published on
ಬಳ್ಳಾರಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಲಿಂಗಸುಗೂರಿನಿಂದ ಆರಂಭವಾಗಿ ಒಂಬತ್ತು ವಿಧಾನಸಭಾ ಕ್ಷೇತ್ರಗಳ ಮೂಲಕ ಸಾಗಿದ್ದ ಬೃಹತ್ ಬಳ್ಳಾರಿ ಚಲೋ (Ballari Chalo) ಪಾದಯಾತ್ರೆಯು ಬಳ್ಳಾರಿಯಲ್ಲಿ ನಡೆದ ಬೃಹತ್ ಸಮಾವೇಶದೊಂದಿಗೆ ಸಮಾರೋಪಗೊಂಡಿತು.
ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ವಿಜಯೇಂದ್ರ, ಹತ್ತು ದಿನಗಳ ಈ ಸುದೀರ್ಘ ಪಾದಯಾತ್ರೆಯ ಅವಧಿಯಲ್ಲಿ ರೈತರು, ಕೂಲಿ ಕಾರ್ಮಿಕರು, ದಲಿತರು ಹಾಗೂ ಅಲೆಮಾರಿ ಸಮುದಾಯದ ಜನರು ತಮ್ಮ ಕಷ್ಟ-ನಷ್ಟಗಳು ಮತ್ತು ಸಂಕಷ್ಟಗಳನ್ನು ನೇರವಾಗಿ ಹಂಚಿಕೊಂಡಿದ್ದಾರೆ. ರಾಜ್ಯ ಸರ್ಕಾರದ ಶೋಷಣೆ ಹಾಗೂ ನಿರ್ಲಕ್ಷ್ಯವನ್ನು ಕಣ್ಣಾರೆ ಕಾಣಲು ಮತ್ತು ಜನರ ನೈಜ ಸಮಸ್ಯೆಗಳನ್ನು ಅರಿಯಲು ಈ ಪಾದಯಾತ್ರೆ ನಮಗೆ ಪೂರ್ಣ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದರು.

15 ವರ್ಷಗಳ ಬಳಿಕ ಬಳ್ಳಾರಿಯಲ್ಲಿ ಬಿಜೆಪಿ ಬೃಹತ್ ಸಮಾವೇಶ

ಬಳ್ಳಾರಿಯಲ್ಲಿ ಬಿಜೆಪಿ ಬೃಹತ್ ಸಮಾವೇಶ ನಡೆಸಲು 15 ವರ್ಷಗಳೇ ಬೇಕಾಯಿತು. ಕಾಂಗ್ರೆಸ್ ಸರ್ಕಾರವು ಬಿಜೆಪಿ ಪಾದಯಾತ್ರೆ ಹಾಗೂ ಸಮಾವೇಶಗಳಿಗೆ ನಿರಂತರವಾಗಿ ಅಡ್ಡಿಪಡಿಸಿ ಅವಕಾಶ ನೀಡದ ಕಾರಣ, ನಾವು ಪ್ರತಿಭಟನೆ ನಡೆಸಿ ಹಕ್ಕು ಪಡೆದುಕೊಳ್ಳಬೇಕಾಯಿತು ಎಂದು ವಿಜಯೇಂದ್ರ ಆರೋಪಿಸಿದರು. ಹಿಂದೆ ಬೆಂಗಳೂರಿನಿಂದ ಮೈಸೂರು ಹೆದ್ದಾರಿ ಸೇರಿದಂತೆ ಬಿಜೆಪಿ ನಡೆಸಿದ ಐತಿಹಾಸಿಕ ಪಾದಯಾತ್ರೆಗಳ ಸರಣಿಯ ಭಾಗವಾಗಿಯೇ ಇದೀಗ ಬಳ್ಳಾರಿ ಚಲೋ ಯಶಸ್ವಿಯಾಗಿ ನಡೆದಿದೆ ಎಂದು ಅವರು ತಿಳಿಸಿದರು.
ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಸೂಕ್ತ ಆದ್ಯತೆ ನೀಡಿಲ್ಲ. ರೈತರ ಸಮಸ್ಯೆಗಳು, ಭೀಕರ ಬರಗಾಲ ಹಾಗೂ ನೀರಾವರಿ ವಿಚಾರಗಳ ಬಗ್ಗೆ ಸರ್ಕಾರ ಸಂಪೂರ್ಣ ಕಣ್ಣು ಮುಚ್ಚಿ ಕುಳಿತಿದ್ದು, ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸುವ ಬದಲು ಬಿಡದಿ ಟೌನ್‌ಶಿಪ್ ಮತ್ತು ಟನಲ್ ಯೋಜನೆಗಳಂತಹ ವಾಣಿಜ್ಯ ವಿಚಾರಗಳಿಗೆ ಆದ್ಯತೆ ನೀಡುತ್ತಿದ್ದಾರೆ. ನವಲಿ ಜಲಾಶಯದ ಸಮಾನಾಂತರ ನೀರಾವರಿ ಯೋಜನೆಗೆ ಸರ್ಕಾರ ತಕ್ಷಣವೇ ಅನುದಾನ ಕಾಯ್ದಿರಿಸಿ ಆದ್ಯತೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ವಾಲ್ಮೀಕಿ ನಿಗಮದ 187 ಕೋಟಿ ಹಗರಣದ ಹಣ ದಲಿತರಿಗೆ ಸಿಗಲಿ

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂ ಹೆಚ್ಚಿನ ಅಕ್ರಮ ವಹಿವಾಟಿನ ಹಣವನ್ನು ತಕ್ಷಣವೇ ವಾಪಸ್ ಪಡೆದು ದಲಿತರ ಅಭಿವೃದ್ಧಿಗೆ ಬಳಸಬೇಕು. ಎಸ್‌ಸಿಪಿ-ಟಿಎಸ್‌ಪಿ ಯೋಜನೆಯ ಸಾವಿರಾರು ಕೋಟಿ ರೂಪಾಯಿ ಅನುದಾನವನ್ನು ಕಾಂಗ್ರೆಸ್ ಸರ್ಕಾರ ಬೇರೆ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಸ್‌ಸಿ-ಎಸ್‌ಟಿ ಸಮುದಾಯಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಗಿತ್ತು, ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆ ಮೀಸಲಾತಿ ಸೌಲಭ್ಯಗಳಿಗೆ ಕತ್ತರಿ ಹಾಕಿದೆ ಎಂದು ಆಕ್ರೋಶ ಹೊರಹಾಕಿದರು.
ರಾಜ್ಯದಲ್ಲಿ ಅಡಿಕೆ ಬೆಳೆಗಾರರು ಸೇರಿದಂತೆ ವಿವಿಧ ಕೃಷಿಕರು ಸರ್ಕಾರದ ಮಾರಕ ನೀತಿಗಳಿಂದ ಭಾರಿ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಗುಟ್ಕಾ ನಿಷೇಧದ ಪ್ರಸ್ತಾವನೆ ತರುವ ಮುನ್ನ ಅಡಿಕೆ ಬೆಳೆಗಾರರ ಹಿತವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದರ ಜೊತೆಗೆ, ರಾಜ್ಯದ 224 ಶಾಸಕರ ಕ್ಷೇತ್ರಗಳ ರಸ್ತೆ ಅಭಿವೃದ್ಧಿಗೆ ತಲಾ 200 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಹಾಗೂ ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿಯ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಬಿವೈವಿ ಒತ್ತಾಯಿಸಿದರು.

ರಾಜ್ಯದಲ್ಲಿ ಡ್ರಗ್ ಮಾಫಿಯಾ!

ರಾಜ್ಯದಲ್ಲಿ ಯುವಜನತೆಯನ್ನು ಬಲಿ ಪಡೆಯುತ್ತಿರುವ ಡ್ರಗ್ ಮಾಫಿಯಾವನ್ನು ನಿಯಂತ್ರಿಸಲು ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಬರ ಪರಿಹಾರ ಒದಗಿಸುವಲ್ಲಿ ತನ್ನ ಕರ್ತವ್ಯ ಮರೆತು, ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದತ್ತ ಬೆರಳು ತೋರಿಸುವುದು ಸರಿಯಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದ ಅನುದಾನಕ್ಕೆ ಕಾಯದೆ ತಕ್ಷಣವೇ ಸ್ವಂತ ನಿಧಿಯಿಂದ ನೆರೆ ಮತ್ತು ಬರ ಪರಿಹಾರ ಒದಗಿಸಿದ್ದರು. ನೆರೆಯ ಮಹಾರಾಷ್ಟ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿ ಮಾದರಿಯಾಗಿದೆ, ರೈತರನ್ನು ನಿರ್ಲಕ್ಷಿಸಿದ ಯಾವುದೇ ಸರ್ಕಾರ ಉಳಿಯಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಎಚ್ಚರಿಸಿದರು.
ಸಿಎಂ ಡಿ ಕೆ ಶಿವಕುಮಾರ್ ಅವರು ತಾವೊಬ್ಬ ಬಿಸಿನೆಸ್‌ಮ್ಯಾನ್ ಎಂದು ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಾರೆ. ಇಂತಹ ವ್ಯಾಪಾರಿ ಮನೋಭಾವ ಹೊಂದಿರುವವರನ್ನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸಬೇಕೇ..? ಎಂದು ಪ್ರಶ್ನಿಸಿದ ವಿಜಯೇಂದ್ರ, ಪ್ರಧಾನಿ ನರೇಂದ್ರ ಮೋದಿ ಅವರು ಜನಸೇವಕನಾಗಿ ದೇಶದ ಜನರನ್ನು ಒಗ್ಗೂಡಿಸುತ್ತಿದ್ದರೆ, ಮುಖ್ಯಮಂತ್ರಿಗಳು ಭಾರತ್ ಜೋಡೋ ಹೆಸರಿನಲ್ಲಿ ಕಪಟ ನಾಟಕವಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು. ದೇಶದ ಸ್ವಾತಂತ್ರ್ಯ ಹೋರಾಟದ ಪ್ರೇರಣೆಯಾಗಿದ್ದ ವಂದೇ ಮಾತರಂ ಗೀತೆಯನ್ನು ಸಂಪುಟ ಸಭೆಯಲ್ಲಿ ಚರ್ಚಿಸಿ ಕೇವಲ ಎರಡು ಸಾಲುಗಳಿಗೆ ಸೀಮಿತಗೊಳಿಸುವ ಮೂಲಕ ಕಾಂಗ್ರೆಸ್ ತನ್ನ ರಾಷ್ಟ್ರವಿರೋಧಿ ಧೋರಣೆ ಪ್ರದರ್ಶಿಸಿದೆ ಎಂದು ಆರೋಪಿಸಿದರು.

ಸೆಪ್ಟೆಂಬರ್ 17 ರಿಂದ ಸೇವಾ ಸಂಕಲ್ಪ ಅಭಿಯಾನ

ಪ್ರಧಾನಿ ನರೇಂದ್ರ ಮೋದಿ ಅವರು 2001 ರಿಂದ ಮುಖ್ಯಮಂತ್ರಿಯಾಗಿ ಹಾಗೂ 2014 ರಿಂದ ಪ್ರಧಾನಮಂತ್ರಿಯಾಗಿ ಸತತ 25 ವರ್ಷಗಳ ಕಾಲ ಯಾವುದೇ ಕಪ್ಪು ಚುಕ್ಕಿ ಹಾಗೂ ಭ್ರಷ್ಟಾಚಾರದ ಆರೋಪವಿಲ್ಲದೆ ಕಳಂಕರಹಿತವಾಗಿ ಸಾರ್ವಜನಿಕ ಸೇವೆ ಸಲ್ಲಿಸಿದ್ದಾರೆ. 2047 ರ ವೇಳೆಗೆ ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿ ಮಾಡುವ ಅವರ ಸಂಕಲ್ಪಕ್ಕೆ ಬೆಂಬಲವಾಗಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್​ ಅವರ ಮಾರ್ಗದರ್ಶನದಲ್ಲಿ ಸೆಪ್ಟೆಂಬರ್ 17 ರಿಂದ ಒಂದು ತಿಂಗಳ ಕಾಲ ರಾಜ್ಯಾದ್ಯಂತ ಸೇವಾ ಸಂಕಲ್ಪ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ವಿಜಯೇಂದ್ರ ತಿಳಿಸಿದರು.
ಬಳ್ಳಾರಿ ಪಾದಯಾತ್ರೆಗೆ ಹರಿದುಬಂದ ಜನಸಾಗರವೇ ಕಾಂಗ್ರೆಸ್ ಸರ್ಕಾರವನ್ನು ಮುಂಬರುವ ಚುನಾವಣೆಯಲ್ಲಿ ಮನೆಗೆ ಕಳುಹಿಸಲು ರಾಜ್ಯದ ಜನತೆ ನಿರ್ಧರಿಸಿದ್ದಾರೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net