ಸೂಟು-ಬೂಟು ಧರಿಸಿ ಹೆಲಿಕಾಪ್ಟರ್‌ನಲ್ಲಿ ಓಡಾಡುವ ನಿಮ್ಮನ್ನು ಪ್ರಜಾಸೇವಕ ಅನ್ನಲು ಸಾಧ್ಯವೇ..? ಸಿಎಂ ಡಿಕೆಶಿಗೆ ವಿಜಯೇಂದ್ರ ತಿರುಗೇಟು!

Ballari Chalo > ಸೂಟು-ಬೂಟು ಧರಿಸಿ ಹೆಲಿಕಾಪ್ಟರ್‌ನಲ್ಲಿ ಓಡಾಡುವ ನಿಮ್ಮನ್ನು ಪ್ರಜಾಸೇವಕ ಅನ್ನಲು ಸಾಧ್ಯವೇ..? ಸಿಎಂ ಡಿಕೆಶಿಗೆ ವಿಜಯೇಂದ್ರ ತಿರುಗೇಟು!
Ballari Chalo > ಸೂಟು-ಬೂಟು ಧರಿಸಿ ಹೆಲಿಕಾಪ್ಟರ್‌ನಲ್ಲಿ ಓಡಾಡುವ ನಿಮ್ಮನ್ನು ಪ್ರಜಾಸೇವಕ ಅನ್ನಲು ಸಾಧ್ಯವೇ..? ಸಿಎಂ ಡಿಕೆಶಿಗೆ ವಿಜಯೇಂದ್ರ ತಿರುಗೇಟು!
Published on
ಗಂಗಾವತಿ (ಕೊಪ್ಪಳ): ಸೂಟು-ಬೂಟು ಧರಿಸಿ, ಹೆಲಿಕಾಪ್ಟರ್‌ನಲ್ಲಿ ಓಡಾಡುತ್ತಾ ಜನರ ಸಂಕಷ್ಟ ಆಲಿಸಿದ ತಕ್ಷಣವೇ ಯಾರೂ ಪ್ರಜಾಸೇವಕರಾಗಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿಯಲ್ಲಿ ಬಿಜೆಪಿಯ ಬಳ್ಳಾರಿ ಚಲೋ ಪಾದಯಾತ್ರೆಯ ಆರನೇ ದಿನದ ಅಂಗವಾಗಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಪ್ರಜಾಸೇವಕ ಹೇಳಿಕೆಯನ್ನು ಉಲ್ಲೇಖಿಸಿ ರಾಜ್ಯ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದರು.
ನಿನ್ನೆ ಮುಖ್ಯಮಂತ್ರಿಗಳು ತಮ್ಮನ್ನು ನಾಡಿನ ದೊರೆ ಎಂದು ಕರೆಯಬೇಡಿ, ಪ್ರಜಾಸೇವಕ ಎಂದು ಕರೆಯಿರಿ ಎಂದು ಹೇಳಿದ್ದಾರೆ. ಆದರೆ ಕಳೆದ ಮೂರು ತಿಂಗಳಿಂದ ಬೆಂಗಳೂರಿನಲ್ಲೇ ಕುಳಿತಿದ್ದ ಮುಖ್ಯಮಂತ್ರಿಗಳಿಗೆ ನಾವು ಪಾದಯಾತ್ರೆ ಆರಂಭಿಸಿದ ಮೇಲಷ್ಟೇ ಉತ್ತರ ಕರ್ನಾಟಕ ನೆನಪಾಗಿದೆ. ನಾವು ಈ ಹೋರಾಟ ಕೈಗೆತ್ತಿಕೊಳ್ಳದಿದ್ದರೆ ಅವರು ಈ ಭಾಗದತ್ತ ಸುಳಿಯುತ್ತಿದ್ದರೇ ಎಂಬುದನ್ನು ಜನರೇ ಪ್ರಶ್ನಿಸುತ್ತಿದ್ದಾರೆ ಎಂದು ಬಿವೈವಿ ಕಿಡಿಕಾರಿದ್ದಾರೆ.

ಸಿಎಂ ಲೆಕ್ಕಾಚಾರವೇ ಬೇರೆ!...

ಮುಖ್ಯಮಂತ್ರಿಗಳ ಜೀವನದ ಬಹುದೊಡ್ಡ ಆಸೆಯೆಂದರೆ ಅದು ಬಿಡದಿ ಟೌನ್‌ಶಿಪ್ ಮತ್ತು ಕನಕಪುರ ಏರ್‌ಪೋರ್ಟ್ ಯೋಜನೆಗಳನ್ನು ಪೂರ್ಣಗೊಳಿಸುವುದು ಮಾತ್ರ. ಇವೆರಡೂ ಯೋಜನೆಗಳು ಸಕ್ಸಸ್ ಆದರೆ ಸಾಕು, ಮುಂದೆ ತಾವೇ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದರೂ ಒಂದೇ, ಇಲ್ಲದಿದ್ದರೂ ಒಂದೇ ಎಂಬ ಲೆಕ್ಕಾಚಾರದಲ್ಲಿ ಅವರಿದ್ದಾರೆ ಎಂದು ವಿಜಯೇಂದ್ರ ಕುಟುಕಿದ್ದಾರೆ.
ಸರ್ಕಾರವು ಲಕ್ಷಾಂತರ ಬಡವರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಿ ಜನರನ್ನು ಬೀದಿಗೆ ತಳ್ಳುತ್ತಿದೆ, ಈ ಸರ್ಕಾರಕ್ಕೆ ಮನುಷ್ಯತ್ವ ಇದೆಯಾ..? ಎಂದು ಪ್ರಶ್ನಿಸಿದ ವಿಜಯೇಂದ್ರ, ರಾಜ್ಯದಲ್ಲಿ ಇಂದಿಗೂ ಸರಿಯಾಗಿ ಬರ ಪರಿಹಾರ ವಿತರಿಸಿಲ್ಲ, ಗ್ರಾಮೀಣ ಭಾಗದ ಶಾಲೆಗಳಲ್ಲಿ ಶಿಕ್ಷಕರಿಲ್ಲ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ. ಕುರಿಗಾಹಿ ಸಮುದಾಯದ ಮಕ್ಕಳಿಗೆ ಸೂಕ್ತ ಶಿಕ್ಷಣವಾಗಲಿ, ಉಚಿತ ಔಷಧಗಳಾಗಲಿ ಸಿಗುತ್ತಿಲ್ಲ. ಖಾಲಿ ಇರುವ 2.5 ಲಕ್ಷ ಸರ್ಕಾರಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು. ಜನರಿಗೆ ಅನುಕೂಲವಾಗುವ ಪ್ರಜೋಪಯೋಗಿ ಯೋಜನೆಗಳನ್ನು ನೀಡಿದಾಗ ಮಾತ್ರ ಜನರು ನಿಮ್ಮನ್ನು ಪ್ರಜಾಸೇವಕ ಎಂದು ಒಪ್ಪಿಕೊಳ್ಳುತ್ತಾರೆ ಎಂದರು.

187 ಕೋಟಿ ರೂಪಾಯಿ ವಾಪಸ್ ಕೊಡಿ!...

ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಕ್ಲೀನ್ ಚಿಟ್ ದೊರೆತು ಮತ್ತೆ ಸಚಿವರಾಗುತ್ತಾರೆ ಎಂಬ ಸಚಿವ ಯು ಟಿ ಖಾದರ್ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ನಾಗೇಂದ್ರ ಅವರಿಗೆ ಕ್ಲೀನ್ ಚಿಟ್ ನೀಡುವ ಮೊದಲು 187 ಕೋಟಿ ರೂಪಾಯಿ ಹಣವನ್ನು ವಾಪಸ್ ಕೊಡಲಿ. ಹಿಂದಿನ ಸರ್ಕಾರಗಳಲ್ಲಿ ಎಸಿಬಿ ರಚಿಸಿಕೊಂಡು ಹೇಗೆ ಕ್ಲೀನ್ ಚಿಟ್ ಪಡೆಯಲಾಗುತ್ತಿತ್ತು ಎಂಬುದನ್ನು ಜನ ನೋಡಿದ್ದಾರೆ. ಹೀಗಾಗಿ ಇಂತಹ ಕ್ಲೀನ್ ಚಿಟ್ ಮಾತುಗಳನ್ನು ಯಾರೂ ನಂಬುವುದಿಲ್ಲ ಎಂದು ತಿರುಗೇಟು ನೀಡಿದರು.
ಜಂಗಮರ ಕಲ್ಗುಡಿಯಿಂದ ಗಂಗಾವತಿಯತ್ತ ಸಾಗಿದ 6ನೇ ದಿನದ ಬಿಜೆಪಿ ಪಾದಯಾತ್ರೆಯಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಹೆಜ್ಜೆ ಹಾಕಿ ಬೆಂಬಲ ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net