ತೇರಹಳ್ಳಿ ೭ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ವಿಶೇಷ ಅನುದಾನ

ಚಿತ್ರ ೦೯ ಕೆ.ಎಲ್.ಆರ್. ೦೬ : ಎಂ.ಎಲ್. ಅನಿಲ್‌ಕುಮಾರ್ ರವರ ಭಾವಚಿತ್ರ
ಚಿತ್ರ ೦೯ ಕೆ.ಎಲ್.ಆರ್. ೦೬ : ಎಂ.ಎಲ್. ಅನಿಲ್‌ಕುಮಾರ್ ರವರ ಭಾವಚಿತ್ರ
Published on
ವಿಜಯವಾಣಿ ಸುದ್ದಿಜಾಲ ಕೋಲಾರ 
ಕೋಲಾರ ನಗರದಲ್ಲಿ ೩ ಕಿ.ಮೀ ದೂರದಲ್ಲಿರುವ ಕೊಂಡರಾಜನಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ತೇರಹಳ್ಳಿ ಬೆಟ್ಟದ ಮೇಲೆ ಇರುವ ೭ ಗ್ರಾಮಗಳಿಗೂ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ವಿಶೇಷ ಅನುದಾನ ನೀಡಬೇಕೆಂದು ವಿಧಾನಪರಿಷತ್ತು ಸದಸ್ಯ ಎಂ.ಎಲ್.ಅನಿಲ್‌ಕುಮಾರ್ ಮಂಗಳವಾರ ವಿಧಾನಪರಿಷತ್ತಿನಲ್ಲಿ ಸರ್ಕಾರದ ಗಮನ ಸೆಳೆದರು. 
ಶೂನ್ಯ ವೇಳೆಯಲ್ಲಿ ಸದನದಲ್ಲಿ ಸರ್ಕಾರದ ಗಮನ ಸೆಳೆದ ಅನಿಲ್‌ಕುಮಾರ್ ಸ್ವಾತಂತ್ರö್ಯ ಬಂದು ೭೮ ವರ್ಷಗಳಾಗಿದ್ದರೂ ಕೊಂಡರಾಜನಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ತೇರಹಳ್ಳಿ ಬೆಟ್ಟದ ಮೇಲೆ ೬ ರಿಂದ ೭ ಗ್ರಾಮಗಳಿದ್ದು, ಸ್ವಚ್ಛತೆ ಕಾಣದಂತೆ ಆಗಿದೆ. ಹಲವಾರು ವರ್ಷಗಳಿಂದ ಈ ಭಾಗದಲ್ಲಿ ಶುದ್ಧ ನೀರಿನ ಕೊರತೆ ಕಾಣುತ್ತಿದೆ. ಈ ಗ್ರಾಮಗಳಲ್ಲಿ ಸುಮಾರು ೨ ಸಾವಿರ ಜನ ವಾಸಿಸುತ್ತಿದ್ದಾರೆ. 
ಈ ಗ್ರಾಮಗಳಿಗೆ ಬೆಟ್ಟಗಳ ಮೇಲೆ ಹರಿದು ಬರುವ ನೀರೇ ಆಧಾರವಾಗಿದ್ದು, ಆ ನೀರು ಹಸಿರು ಬಣ್ಣಕ್ಕೆ ತಿರುಗಿ ಪಾಚಿಕಟ್ಟಿದ ಸ್ಥಿತಿಗೆ ತಲುಪಿದೆ. ಬೆಟ್ಟದ ಮೇಲೆ ಬೋರ್‌ವೆಲ್ ಕೊರೆಯಲು ಸಾಧ್ಯತೆ ಇರುವುದರಿಂದ ಈ ಭಾಗದಲ್ಲಿ ಬಾವಿ ಮತ್ತು ಕುಂಟೆಗಳೇ ನೀರಿನ ಆಶ್ರಯವಾಗಿದೆ. ಮಳೆ ಬಿದ್ದ ನೀರು ಮಣ್ಣು ಮಿಶ್ರಿತವಾಗಿ ಕುಂಟೆ ಮತ್ತು ಬಾವಿಗಳಲ್ಲಿ ಸೇರುವಂತಾಗಿದೆ. ಈ ನೀರು ಕುಡಿಯಲು ಯೋಗ್ಯವಾಗಿಲ್ಲದಂತೆ ಆಗಿದೆ. ಇದರಿಂದ ಈ ಭಾಗದ ನಿವಾಸಿಗಳು ಅನಾರೋಗ್ಯ ಸಮಸ್ಯೆಯಿಂದ ಬಲಳುವಂತಾಗಿದೆ. 
ಇದರಿಂದ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವಂತಾಗಿದ್ದು, ಈ ನೀರಿನಲ್ಲಿ ಸ್ನಾನ ಮಾಡಿದರೆ ಮಕ್ಕಳ ಮೈಮೇಲೆ ಗುಳ್ಳೆಗಳು ಬರುವಂತಾಗಿದೆ. ಇದು ಪೋಷಕರ ನಿದ್ದೆ ಕೆಡಿಸುವಂತಾಗಿದೆ. ಮಳೆಗಾಲದಲ್ಲಿಯೇ ಈ ಸಮಸ್ಯೆ ಹೆಚ್ಚಾಗಿರುವಾಗ ಇನ್ನು ಬೇಸಿಗೆಯಲ್ಲಿ ಅಲ್ಲಿನ ನಿವಾಸಿಗಳ ಆಹಾಕಾರ ಹೇಳತೀರದಾಗಿದೆ. ಟ್ಯಾಂಕರ್‌ಗಳ ಮೂಲಕ ಬೆಟ್ಟಕ್ಕೆ ನೀರು  ತಂದು ಆ ನಿವಾಸಿಗಳಿಗೆ ನೀಡುವಂತಾಗಿದೆ. ಕೆಲವರು ದೂರದ ಬಾವಿಗಳಿಗೆ ಹೋಗಿ ಬಿಂದಿಗೆಗಳ ಮೂಲಕ ನೀರನ್ನು ತರುವಂತಾಗಿದೆ. ಇದರಿಂದಾಗಿ ಆ ಭಾಗದ ನಿವಾಸಿಗಳು ನೀರಿನ ಸಮಸ್ಯೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 
ಬೆಟ್ಟದ ಮೇಲೆ ತೇರಹಳ್ಳಿ, ಕುಪ್ಪಳ್ಳಿ, ಶಿವಗಂಗೆ, ಪಾಪರಾಜನಹಳ್ಳಿ, ಬೆಟ್ಟದ ಹೊಸಹಳ್ಳಿ, ಬೆಟ್ಟದ ಹೊಸಹಳ್ಳಿ, ಕೆಂಚಗೌಡನಹಳ್ಳಿ ಈ ಗ್ರಾಮಗಳಲ್ಲಿ ೫೦೦ ಮನೆಗಳು ಇದ್ದು, ಈ ಭಾಗದ ಜನರು ಮೂಲಭೂತ ಸೌಲಭ್ಯಗಳು ಸೇರಿದಂತೆ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಗ್ರಾಮಗಳಲ್ಲಿ ಶುದ್ಧ ನೀರಿನ ಘಟನಕಗಳು ಸಹ ಇಲ್ಲ. ಕುಂಟೆ, ಕೆರೆ, ಬಾವಿ ನೀರನ್ನೇ ಆಶ್ರಯಿಸುವಂತಾಗಿದೆ. ಈ ನೀರನ್ನು ತಂದು ಡ್ರಮ್‌ಗಳಲ್ಲಿ ಶೇಖರಣೆ ಮಾಡಿಟ್ಟರೆ ವಾಸನೆ ಬರುವಂತಾಗಿದೆ. ಈ ನೀರನ್ನು ಕುಡಿಯಲು ಮತ್ತು ಅಡುಗೆಗೆ ಉಪಯೋಗಿಸುತ್ತಿದ್ದಾರೆ. ಇದರಿಂದ ಆ ಭಾಗದ ಜನ ಅನಾರೋಗ್ಯಕ್ಕೆ ತುತ್ತಾಗುವಂತಾಗಿದೆ. 
ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ವಿಶೇಷ ಅನುದಾನವನ್ನು ಬಿಡುಗಡೆ ಮಾಡಿ ಆ ಭಾಗದ ಜನರನ್ನು ರಕ್ಷಣೆ ಮಾಡಬೇಕೆಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಸಚಿವರಲ್ಲಿ ಮನವಿ ಮಾಡಿದರು. ಪಂಚಾಯತ್ ರಾಜ್ ಸಚಿವರು ಸದನದಲ್ಲಿ ಹಾಜರಿಲ್ಲದ ಕಾರಣ ಸಣ್ಣ ನೀರಾವರಿ ಸಚಿವ ಬೋಸುರಾಜ್ ಉತ್ತರಿಸಿ ಸಚಿವರ ಗಮನಕ್ಕೆ ತಂದು ಉತ್ತರ ನೀಡುವುದಾಗಿ ಭರವಸೆ ನೀಡಿದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net