ಉಸಿರಿರುವ ತನಕ ಕೋಲಾರ ಕ್ಷೇತ್ರ ಬಿಡುವುದಿಲ್ಲ

ಚಿತ್ರ ೧೧ ಕೆ.ಎಲ್.ಆರ್. ೦೩ : ಮಾಜಿ ಸಚಿವ ವರ್ತೂರು ಪ್ರಕಾಶ್ ಕೋಗಿಲಹಳ್ಳಿ ನಿವಾಸದಲ್ಲಿ ಕಸಬಾ ಹೋಬಳಿಯ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಉದ್ದೇಶಿಸಿ ಮಾತನಾಡಿದರು. ಮುಖಂಡರಾದ ಬೆಗ್ಲಿ ಸೂರ್ಯಪ್ರಕಾಶ್, ಸಿ.ಎಸ್.ವೆಂಕಟೇಶ್, ಸೂಲೂರು ಆಂಜಿನಪ್ಪ ಮುಂತಾದವರು ಇದ್ದರು.
ಚಿತ್ರ ೧೧ ಕೆ.ಎಲ್.ಆರ್. ೦೩ : ಮಾಜಿ ಸಚಿವ ವರ್ತೂರು ಪ್ರಕಾಶ್ ಕೋಗಿಲಹಳ್ಳಿ ನಿವಾಸದಲ್ಲಿ ಕಸಬಾ ಹೋಬಳಿಯ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಉದ್ದೇಶಿಸಿ ಮಾತನಾಡಿದರು. ಮುಖಂಡರಾದ ಬೆಗ್ಲಿ ಸೂರ್ಯಪ್ರಕಾಶ್, ಸಿ.ಎಸ್.ವೆಂಕಟೇಶ್, ಸೂಲೂರು ಆಂಜಿನಪ್ಪ ಮುಂತಾದವರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಕೋಲಾರ
ನಾನು ಯಾವುದೇ ಕಾರಣಕ್ಕೂ ಕೋಲಾರ ಬಿಟ್ಟು ಹೋಗುವುದಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆ. ನಾನು ಬಾಗಲಕೋಟೆಗೆ ವಲಸೆ ಹೋಗುತ್ತೇನೆ ಎಂದು ಕಾಂಗ್ರೇಸ್ ಪಕ್ಷದವರು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಕಾರ್ಯಕರ್ತರು ಕಿವಿಕೊಡಬೇಡಿ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ತಿಳಿಸಿದರು.
ತಾಲ್ಲೂಕಿನ ಕೋಗಿನಹಳ್ಳಿ ನಿವಾಸದಲ್ಲಿ ಬುಧವಾರ ಮಾರ್ಜೇನಹಳ್ಳಿ, ಹೊನ್ನೇನಹಳ್ಳಿ, ಅರಹಳ್ಳಿ, ಕೊಂಡರಾಜನಹಳ್ಳಿ, ತೊರದೇವಂಡಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳ ಬಿಜೆಪಿ ಕಾರ್ಯಕರ್ತರು ಸಭೆಯಲ್ಲಿ ಮಾತನಾಡಿ, ಕಾಂಗ್ರೇಸ್ ಪಕ್ಷದವರು ಸೋಲಿನ ಭೀತಿಯಿಂದ ನಮ್ಮ ಕಾರ್ಯಕರ್ತರ ತಲೆ ಕೆಡಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಕೋಲಾರ ವಿಧಾನಪರಿಷತ್ತು ಕ್ಷೇತ್ರದ ಮತದಾರರು ನನ್ನನ್ನು ನಂಬಿ ೨೦೦೮ರಲ್ಲಿ ಶಾಸಕರನ್ನಾಗಿ ಆಯ್ಕೆ ಮಾಡಿದರು. ೨ನೇ ಅವಧಿಗೆ ಶಾಸಕರನ್ನಾಗಿ ಮಾಡಿದರು. ಮತ್ತೆ ೨ ಬಾರಿ ಸೋತರೂ ಕೂಡ ನನಗೆ ೫೦ ಸಾವಿರ ಮತಗಳನ್ನು ಕೊಟ್ಟಿದ್ದಾರೆ. ಈ ಕ್ಷೇತ್ರದ ಮತದಾರರನ್ನು ನನ್ನ ಉಸಿರಿರುವ ತನಕ ಮರೆಯುವುದಿಲ್ಲ ಎಂದರು.
ನಾನು ಶಾಸಕನಾಗಿದ್ದಾಗ ಪ್ರತಿ ಗ್ರಾಮದಲ್ಲಿಯೂ ಅಭಿವೃದ್ಧಿಯಾಗಿತ್ತು. ನಂತರ ಬಂದ ಶಾಸಕ ಶ್ರೀನಿವಾಸಗೌಡರು ಗ್ರಾಮಗಳನ್ನು ಅಭಿವೃದ್ಧಿಪಡಿಸಲಿಲ್ಲ. ಕೊತ್ತೂರು ಮಂಜುನಾಥ್ ಶಾಸಕನಾದ ನಂತರ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತಗೊAಡಿದೆ. ಕೋಲಾರ ಕ್ಷೇತ್ರವನ್ನು ಅಭಿವೃದ್ದಿಪಡಿಸುವುದಾಗಿ ಕಾಲಹರಣ ಮಾಡುತ್ತಾ ಗುದ್ದಲಿ ಪೂಜೆಗಳನ್ನು ಅನುದಾನ ಇಲ್ಲದೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಶಾಸಕರಿಗೆ ಗ್ರಾಮಗಳೇ ಗೊತ್ತಿಲ್ಲ :
ಕೋಲಾರ ಕ್ಷೇತ್ರದ ಶಾಸಕ ಕೊತ್ತೂರು ಮಂಜುನಾಥ್ ರವರಿಗೆ ಗ್ರಾಮಗಳ ಹೆಸರುಗಳೇ ಗೊತ್ತಿಲ್ಲ. ಯಾವ ಗ್ರಾಮದಲ್ಲಿ ಏನು ತೊಂದರೆಗಳಿವೆ ಎಂಬುದು ಅವರಿಗೆ ಮನವರಿಕೆ ಮಾಡುವ ನಾಯಕರು ಕೂಡಾ ಇಲ್ಲ. ಎಂ.ಎಲ್.ಸಿ.ಅನಿಲ್‌ಕುಮಾರ್ ರವರ ಕಡೆ ಕೈತೋರಿಸುತ್ತಿದ್ದಾರೆ ಎಂದು ವರ್ತೂರು ಪ್ರಕಾಶ್ ದೂರಿದರು.
ಎಂ.ಎಲ್.ಸಿ.ಅನಿಲ್‌ಕುಮಾರ್ ರವರ ಅನುಮತಿ ಇಲ್ಲದೆ ಶಾಸಕರು ಏನೂ ಕೆಲಸವೂ ಮಾಡುವುದಿಲ್ಲ. ನಾನು ಶಾಸಕನಾಗಿದ್ದ ವೇಳೆ ಮಾತ್ರ ಅಭಿವೃದ್ಧಿಯಾಗಿತ್ತು. ಹಾಲಿ ಶಾಸಕ ಮಾತೆತ್ತಿದರೆ ಕ್ಷೇತ್ರಕ್ಕೆ ೨೦೦ ಕೋಟಿ ಅನುದಾನ ತಂದಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ಅವರ ಮಾತುಗಳನ್ನು ನಂಬಬೇಡಿ. ಮುಂದೆ ಬರಲಿರುವ ಗ್ರಾಮಪಂಚಾಯ್ತಿ ಚುನಾವಣೆ ಮತ್ತು ತಾಲ್ಲೂಕು ಪಂಚಾಯ್ತಿ ಹಾಗೂ ಜಿಲ್ಲಾಪಂಚಾಯ್ತಿ ಚುನಾವಣೆ ಕಾಂಗ್ರೇಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.
ರಾಜ್ಯದಲ್ಲಿ ಮೈತ್ರಿ ಮುಂದುವರೆಯುತ್ತದೆ :
ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ನೇತೃತ್ವದಲ್ಲಿ ಮತ್ತು ಬಿಜೆಪಿ ಪಕ್ಷದಿಂದ ನಾವು ಎಲ್ಲರೂ ಸೇರಿಕೊಂಡು ಕಾಂಗ್ರೇಸ್ ಪಕ್ಷವನ್ನು ಅಧಿಕಾರದಿಂದ ದೂರ ಇಟ್ಟಾಗ ಮಾತ್ರ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಸಾಧ್ಯ. ಮೈತ್ರಿಯಲ್ಲಿ ಯಾರನ್ನೇ ಅಭ್ಯರ್ಥಿಯನ್ನಾಗಿ ಮಾಡಿದರು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.
ಮುಖಂಡರಾದ ಬೆಗ್ಲಿ ಸೂರ್ಯಪ್ರಕಾಶ್, ಮಾಜಿ ಜಿಲ್ಲಾಪಂಚಾಯ್ತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಮಾಜಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸೂಲೂರು ಆಂಜನಪ್ಪ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸಿಡಿ ರಾಮಚಂದ್ರೇಗೌಡ, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಮಂಜುನಾಥ್, ತಂಬಳ್ಳಿ ಮುನಿಯಪ್ಪ, ಬೀಚಗೊಂಡಹಳ್ಳಿ ದಿಲೀಪ್ ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net