5 ಕೋಟಿ ರೂ. ನಕಲಿ ಔಷಧಿ ಜಾಲ ಪತ್ತೆ: ವಿಧಾನಸೌಧದಲ್ಲಿ ಆರೋಗ್ಯ ಸಚಿವ ಯುಟಿ ಖಾದರ್ ಹೇಳಿದ್ದಿಷ್ಟು

ಆರೋಗ್ಯ ಸಚಿವ ಯುಟಿ ಖಾದರ್
ಆರೋಗ್ಯ ಸಚಿವ ಯುಟಿ ಖಾದರ್
Published on

ಪ್ರಮುಖ ಮುಖ್ಯಾಂಶಗಳು

  • ಬಿಡದಿ ತೋಟದ ಮನೆಯಲ್ಲಿ ನಕಲಿ ಔಷಧ ಕೃಷಿ
  • ಪ್ರತಿಷ್ಠಿತ ಬ್ರಾಂಡ್​ಗಳ ಹೆಸರಿನ ಲೇಬಲ್ ಅಂಟಿಸಿ ಮಾರಾಟ
  • ಈ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಯುಟಿ ಖಾದರ್​ ಪ್ರತಿಕ್ರಿಯೆ
ಬೆಂಗಳೂರು: ಬೇರೆ ಬೇರೆ ರಾಜ್ಯಗಳಿಂದ ಕಡಿಮೆ ಬೆಲೆಯ ಔಷಧಗಳನ್ನು ತಂದು, ಅವುಗಳನ್ನು ಹೊಸ ಬಾಟಲಿಗಳಿಗೆ ತುಂಬಿಸಿ, ದುಬಾರಿ ಬಹುರಾಷ್ಟ್ರೀಯ ಕಂಪನಿಗಳ ಹಾಗೂ ಆಮದು ಮಾಡಿಕೊಂಡ ಪ್ರತಿಷ್ಠಿತ ಬ್ರಾಂಡ್​ಗಳ ಹೆಸರಿನ ಲೇಬಲ್​ಗಳನ್ನು ಅಂಟಿಸಿ ಮಾರಾಟ ಮಾಡುತ್ತಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌಧದದಲ್ಲಿ ಆರೋಗ್ಯ ಸಚಿವ ಯುಟಿ ಖಾದರ್​ ಅವರು ಪ್ರತಿಕ್ರಿಯಿಸಿದ್ದಾರೆ.
ನಕಲಿ ಔಷಧಿ ಜಾಲ ಪತ್ತೆಯಾಗಿದೆ. ಇದು ಬಹಳಷ್ಟು ಗಂಭೀರವಾಗಿ ಪರಿಗಣಿಸಬೇಕಾದ ವಿಷಯ. ಅಂತರರಾಜ್ಯ ಮಟ್ಟದಲ್ಲಿ ಜಾಲವಿರುವ ಬಗ್ಗೆ ಮಾಹಿತಿಯಿದೆ. ನಮ್ಮ ರಾಜ್ಯದಲ್ಲಿ ಬೇರೆ ಎಲ್ಲೆಲ್ಲಿ ಇದೆ ಎಂಬುದನ್ನು ಪತ್ತೆಹಚ್ಚಬೇಕಿದೆ. ಕೇಂದ್ರ ಅರೋಗ್ಯ ಮಂತ್ರಿಗೆ ಈಗಾಗಲೇ ಘಟನಗೆ ಸಂಬಂಧಿಸಿದಂತೆ ಪತ್ರ ಬರೆದಿದ್ದೇನೆ. ಸಂಬಂಧಪಟ್ಟ ರಾಜ್ಯದ ಮಂತ್ರಿಗಳಿಗೂ ಪತ್ರವನ್ನು ಕಳುಹಿಸಿದ್ದೇನೆ ಎಂದರು.
ಆ ಫ್ಯಾಕ್ಟರಿ ಮೇಲೆ ಅವರೇ ಕ್ರಮ ಜರುಗಿಸಬೇಕು. ಎಸ್​ಐಟಿ ಮುಖಾಂತರ ತನಿಖೆ ಕೈಗೊಳ್ಳಬೇಕು. ಈಗಾಗಲೇ ರಾಮನಗರ ಎಸ್ಪಿ ಮತ್ತು ಪೊಲೀಸರು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಾರೆ. ಸದ್ಯದಲ್ಲೇ ಎಸ್​ಐಟಿ ರಚನೆ ಆಗಲಿದೆ ಎಂದರು. ಇನ್ನು, ಹಿಂದಿನ ಅರೋಗ್ಯ ಸಚಿವರಿಗೆ ಇದರ ಬಗ್ಗೆ ಮಾಹಿತಿ ಇರಲಿಲ್ಲ? ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಖಾದರ್, ಹಿಂದಿನ ಎಲ್ಲ ಸಚಿವರು ಪ್ರಾಮಾಣಿಕತೆಯಿಂದಲೇ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

6.5 ಕೋಟಿ ಜನಸಂಖ್ಯೆ ಇದೆ

ಈಗ ನಾವು ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ಇದು ಕೇವಲ ಅರೋಗ್ಯ ಇಲಾಖೆ ಅಥವಾ ಆಹಾರ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ. ನಮ್ಮಲ್ಲಿ 6.5 ಕೋಟಿ ಜನಸಂಖ್ಯೆ ಇದೆ. ಇಲಾಖೆಯಲ್ಲಿರುವ 150 ಜನರಿಂದ ಇದನ್ನು ಗಮನಿಸುವುದು ಕಷ್ಟಸಾಧ್ಯ. ಹೀಗಾಗಿ, ಸಮಾಜದಲ್ಲಿ ಎಲ್ಲರೂ ಸಹಕರಿಸಬೇಕು. ಒಂದೇ ಔಷಧಿ ಎರಡು ಅಂಗಡಿಗಳಲ್ಲಿ ಬೇರೆ ಬೇರೆ ದರದಲ್ಲಿ ಮಾರಾಟ ಆಗ್ತಿದ್ರೆ, ಜನರು ನಮಗೆ ಮಾಹಿತಿ ಕೊಡಬೇಕು ಎಂದರು.

ಎಷ್ಟು ವರ್ಷಗಳಿಂದ ಮಾರುಕಟ್ಟೆಯಲ್ಲಿದೆ?

ಈ ಎಲ್ಲ ವಿಚಾರಗಳು ತನಿಖೆಯ ಬಳಿಕವೇ ಹೊರಬೀಳಲಿದೆ. ಯಾವ್ಯಾವ ಆಸ್ಪತ್ರೆಗಳಿಗೆ ಇದು ತಲುಪಿದೆ, ಯಾವ ರೋಗಿಗಳಿಗೆ ಇದನ್ನು ಕೊಟ್ಟಿದ್ದಾರೆ? ಎಂಬ ಬಹು ವಿಷಯಗಳು ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ. ಸಾವಿಗೆ ಪ್ರೇರಣೆಯಾಗುವ ಎಂಬ ಕಾನೂನಿನಲ್ಲಿ ಒಂದೂ ಸೆಕ್ಷನ್ ಇದೆ 302. ಅದನ್ನು ಕೂಡ ಹಾಕಲು ಸೂಚಿಸಿದ್ದೇನೆ. ಸದ್ಯಕ್ಕೆ 6 ಕಂಪನಿಗಳನ್ನು ಲೇಬಲ್ ಮಾಡಲಾಗಿದೆ. ಯಾರು ತಂದು ಮಾರಾಟ ಮಾಡುತ್ತಿದ್ದರೋ, ಅವರ ಮೇಲೆ ಕೇಸ್ ದಾಖಲಾಗಿದೆ. ಇದರಲ್ಲಿ ಇನ್ನೂ ಯಾರೆಲ್ಲ ಶಾಮಿಲಾಗಿದ್ದಾರೋ ಅವರ ಮೇಲೂ ಕೇಸ್ ಆಗಲಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net