ಆಟೋ ಎಲ್ಪಿಜಿ ಬದಲು ಪೆಟ್ರೋಲ್ ಬಳಸಿ: ಇಂಡಿಯನ್ ಆಯಿಲ್ ಹೇಳಿಕೆ-LPG

ಇಂಡಿಯನ್ ಆಯಿಲ್
ಇಂಡಿಯನ್ ಆಯಿಲ್
Published on
ಬೆಂಗಳೂರು: ಮಧ್ಯಪ್ರಾಚ್ಯ ಸಂಘರ್ಷದಿಂದ ರಾಜ್ಯದಲ್ಲಿ ಇಂಧನಕ್ಕೆ ದಿನೇದಿನೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿ. (ಐಒಸಿಎಲ್), ತನ್ನ ಆಟೋ ಎಲ್ಪಿಜಿ ವಿತರಣಾ ಬಂಕ್‌ಗಳಲ್ಲಿ ‘ಆಟೋ ಎಲ್ಪಿಜಿ ಗ್ಯಾಸ್’ ವಿತರಣೆಯನ್ನು ಇನ್ನಷ್ಟು ಬಲಪಡಿಸಿದೆ. ಜೊತೆಗೆ, ಪರ್ಯಾಯವಾಗಿ ಪೆಟ್ರೋಲ್ ಬಳಸುವಂತೆ ಆಟೋ ರಿಕ್ಷಾದವರಿಗೆ ಸಲಹೆ ನೀಡಿದೆ.
ತೈಲ ಮಾರುಕಟ್ಟೆ ಕಂಪನಿಗಳ (ಒಎಂಸಿ) ವ್ಯಾಪ್ತಿಯಡಿ ಕರ್ನಾಟಕದಲ್ಲಿ ಒಟ್ಟು 72 ಆಟೋ ಎಲ್ಪಿಜಿ ವಿತರಣಾ ಕೇಂದ್ರಗಳು (ಎಎಲ್‌ಡಿಎಸ್) ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 55 ಇಂಡಿಯನ್ ಆಯಿಲ್ ಆಟೋ ಎಲ್ಪಿಜಿ ಔಟ್‌ಲೆಟ್‌ಗಳಿವೆ. ಆಟೋ ಎಲ್ಪಿಜಿ ಸರಬರಾಜು ಪ್ರಮಾಣ ಹೆಚ್ಚಿಸುವ ಮೂಲಕ ಬೇಡಿಕೆಗೆ ತಕ್ಕಂತೆ ಇಂಧನ ಅವಶ್ಯಕತೆ ಈಡೇರಿಸುತ್ತಿದೆ. ಇಂಡಿಯನ್ ಆಯಿಲ್ ಫೆ.26ರಂದು 43.5 ಮೆಟ್ರಿಕ್ ಟನ್ ಆಟೋ ಎಲ್ಪಿಜಿ ವಿತರಣೆ ಮಾಡುತ್ತಿತ್ತು. ಈಗ ಪ್ರತಿನಿತ್ಯ ಪೂರೈಕೆ ಪ್ರಮಾಣವನ್ನು 68.53 ಮೆಟ್ರಿಕ್ ಟನ್‌ಗೆ ಹೆಚ್ಚಿಸಿದೆ.
ಇಂಧನ ಕೊರತೆ ಕಾರಣ 300ಕ್ಕೂ ಅಧಿಕ ಖಾಸಗಿ ವಿತರಣಾ ಕೇಂದ್ರಗಳು ಸ್ಥಗಿತಗೊಂಡಿವೆ. ಇದರಿಂದಾಗಿ ನಿಗದಿಗಿಂತ ಅಧಿಕವಾಗಿ ಇಂಧನಕ್ಕೆ ಬೇಡಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳಿಗೆ ಪೂರೈಕೆ ಅಂತರ ಸರಿದೂಗಿಸಲು ಕಷ್ಟವಾಗುತ್ತಿದೆ.
ಸ್ವಾಭಾವಿಕವಾಗಿ ಬೆಲೆ ಹೆಚ್ಚಳದಿಂದ ಗ್ರಾಹಕರ ಮೇಲೆ ಪರಿಣಾಮ ಬೀರುತ್ತಿದೆ. ಸರ್ಕಾರಿ ಸ್ವಾಮ್ಯದ ಔಟ್‌ಲೆಟ್‌ಗಳು ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಲೀಟರ್ ಆಟೋ ಎಲ್ಪಿಜಿಗೆ 89.52 ರೂ.ನಂತೆ ಮಾರಾಟ ಮಾಡುತ್ತಿವೆ. ಖಾಸಗಿ ಔಟ್‌ಲೇಟ್‌ಗಳು 99ರೂ.ನಿಂದ 105 ರೂ.ದೊಳಗೆ ಮಾರಾಟ ಮಾಡುತ್ತಿವೆ. ಇದರಿಂದಾಗಿ ಗ್ರಾಹಕರು ಸರ್ಕಾರಿ ಸ್ವಾಮ್ಯದ ಬಂಕ್‌ಗಳಿಗೆ ಧಾವಿಸುತ್ತಿದ್ದಾರೆ.
ಪರ್ಯಾಯ ಇಂಧನದ ಅರಿವು: ರಿಕ್ಷಾಗಳು ಶೇ.70 ಡ್ಯುಯಲ್ ಇಂಧನ ಸಾಮರ್ಥ್ಯ ಹೊಂದಿದ್ದು, ಆಟೋ ಎಲ್ಪಿಜಿ ಮತ್ತು ಪೆಟ್ರೋಲ್ ಎರಡನ್ನೂ ಬಳಸಬಹುದು. ಪ್ರಸ್ತುತ ದಿನಗಳಲ್ಲಿ ಗ್ರಾಹಕರಿಗೆ ತಾತ್ಕಾಲಿಕವಾಗಿ ಪೆಟ್ರೋಲ್‌ಗೆ ಬದಲಾಯಿಸಲು ಪ್ರೋತ್ಸಾಹಿಸಲಾಗುತ್ತಿದೆ. ಕರ್ನಾಟಕದ ಪುತ್ತೂರು ಸೇರಿ ಇತರ ಭಾಗಗಳಲ್ಲಿ ಇದರ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸಲಾಗುತ್ತಿದೆ. ಈ ಮೂಲಕ ದಿನಗಟ್ಟಲೆ ಆಟೋ ಎಲ್ಪಿಜಿಗಾಗಿ ಕಾಯುವಿಕೆಯನ್ನು ತಪ್ಪಿಸಬಹುದು ಎನ್ನುತ್ತಾರೆ ಇಂಡಿಯನ್ ಆಯಿಲ್‌ನ ದಕ್ಷಿಣ ಪ್ರಾದೇಶಿಕ ಕಚೇರಿಯ ಮುಖ್ಯ ಪ್ರಧಾನ ವ್ಯವಸ್ಥಾಪಕ (ಕಾರ್ಪೋರೇಟ್ ಸಂವಹನ) ವಿ. ವೆಟ್ರಿಸೆಲ್ವಕುಮಾರ್.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net