ಎಸ್‌ಐಆರ್ ಅರ್ಜಿ ಭರ್ತಿಗೆ ಸ್ವಯಂಸೇವಕರ ಬಳಕೆ

ಹುಣಸೂರು ನಗರದ ಡೀಡ್ ಸಂಸ್ಥೆ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಡಾ.ಎಸ್.ಶ್ರೀಕಾಂತ್ ಮಾತನಾಡಿದರು. ವಿಠಲ್ ನಾಣಾಚ್ಚಿ, ಕೊಳವಿಗೆ ಜಯಪ್ಪ, ಹರ್ಷಮತ್ತು ವಿದ್ಯಾರ್ಥಿಗಳು ಇದ್ದಾರೆ.
ಹುಣಸೂರು ನಗರದ ಡೀಡ್ ಸಂಸ್ಥೆ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಡಾ.ಎಸ್.ಶ್ರೀಕಾಂತ್ ಮಾತನಾಡಿದರು. ವಿಠಲ್ ನಾಣಾಚ್ಚಿ, ಕೊಳವಿಗೆ ಜಯಪ್ಪ, ಹರ್ಷಮತ್ತು ವಿದ್ಯಾರ್ಥಿಗಳು ಇದ್ದಾರೆ.
Published on
ಹುಣಸೂರು: ತಾಲೂಕಿನ ಗಿರಿಜನ ಹಾಡಿಗಳಲ್ಲಿ ಚುನಾವಣಾ ಅಯೋಗ ನೀಡಿರುವ ಎನ್ಯುಮರೇಷನ್ ಫಾರ್ಮ್‌ಗಳನ್ನು ಭರ್ತಿ ಮಾಡಲು ಸ್ವಯಂಸೇವಕರು, ವಿದ್ಯಾರ್ಥಿಗಳ ತಂಡವನ್ನು ಬಳಸಿಕೊಳ್ಳಲಾಗುವುದು ಎಂದು ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ ತಿಳಿಸಿದರು.
ಶುಕ್ರವಾರ ತಾಲೂಕು ಬುಡಕಟ್ಟು ಕೃಷಿಕರ ಸಂಘ, ಆದಿವಾಸಿ ಜನತಾ ಪಾರ್ಲಿಮೆಂಟ್ ಸಮಿತಿ ಸಹಯೋಗದಲ್ಲಿ ಡೀಡ್ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ನೆರಳಕುಪ್ಪೆ ಬಿ ಹಾಡಿ, ತೆಕ್ಲ ಹಾಡಿ, ಬಿಲ್ಲನಹೊಸಹಳ್ಳಿ, ಮಾದೇವಪುರ, ಶಂಕರ್‌ಪುರ ಹಾಡಿಗಳಿಗೆ ಇಂದಿಗೂ ಎನ್ಯುಮರೇಷನ್ ಫಾರ್ಮ್ ವಿತರಿಸಿಲ್ಲ. ಫಾರಂ ಕೊಟ್ಟ ಹಾಡಿಗಳಿಗೆ ಫಾರ್ಮ್ ತುಂಬುವವರಿಲ್ಲ. ಚುನಾವಣಾ ಅಧಿಕಾರಿಗಳು ಆದಿವಾಸಿ ಹಾಡಿಗಳತ್ತ ಗಮನಹರಿಸಬೇಕಿದ್ದರೂ ಯಾರೂ ಗಮನಹರಿಸುತ್ತಿಲ್ಲವೆಂದು ಬೇಸರಿಸಿದರು.
ಆದಿವಾಸಿ ಸಂಘಟನೆಗಳ ಸಹಯೋಗದಲ್ಲಿ ಜು.12ರಂದು ಡೀಡ್ ಸಂಸ್ಥೆ ಆವರಣದಲ್ಲಿ ಎನ್ಯೂಮರೇಷನ್ ಫಾರ್ಮ್ ಭರ್ತಿಮಾಡುವ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳಿಂದ ತಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಮೈಸೂರು ವಿವಿಧ ಕಾಲೇಜುಗಳ ಸಾಮಾಜಿಕ ಸೇವಾ ಕಾರ್ಯ ಪದವಿ(ಎಂಎಸ್‌ಡಬ್ಲ್ಯೂ)ವಿದ್ಯಾರ್ಥಿಗಳು, ಸ್ವಯಂಸೇವಕರು, ಆದಿವಾಸಿ ಸಮುದಾಯದ ವಿದ್ಯಾವಂತ ಯುವಕರು ಹಾಗೂ ತಾಲೂಕಿನ ಎಲ್ಲ 33 ಹಾಡಿಗಳ ಪ್ರತಿನಿಧಿಗಳು ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ತರಬೇತಿ ನಂತರ ಪ್ರತಿ ಹಾಡಿಗೆ ತೆರಳಿ ಫಾರ್ಮ್ ಭರ್ತಿ ಮಾಡುವ, ಅಗತ್ಯ ದಾಖಲೆಗಳ ಅವಶ್ಯಕತೆ ಕುರಿತು ಆದಿವಾಸಿಗಳಿಗೆ ಅರಿವು ಮೂಡಿಸುವ ಕಾರ್ಯ ಆಯೋಜಿಸಲಾಗಿದೆ. ಸ್ಥಳೀಯ ಬಿಎಲ್‌ಒಗಳಿಗೆ ನಮ್ಮಿಂದಲೂ ಸಹಾಯವಾಗುವಂತೆ ಕ್ರಮವಹಿಸಲಾಗುವುದು. ತರಬೇತಿಯಲ್ಲಿ ಇತರ ಸಮುದಾಯದ ಆಸಕ್ತ ಯುವಕರೂ ಕೂಡ ಪಾಲ್ಗೊಳ್ಳಬಹುದಾಗಿದೆ. ಇದು ನಮ್ಮ ಹಕ್ಕಿನ ಪ್ರಶ್ನೆಯಾಗಿದ್ದು, ಸರ್ಕಾರ ನೀಡಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ ಎಂದರು.
ಆದಿವಾಸಿ ಜನತಾ ಪಾರ್ಲಿಮೆಂಟ್ ಅಧ್ಯಕ್ಷ ಹರ್ಷ, ಆದಿವಾಸಿ ಹಿರಿಯ ಮುಖಂಡ ವಿಠಲ್ ನಾಣಾಚ್ಚಿ, ಕೊಳವಿಗೆ ಜಯಪ್ಪ ಸೇರಿದಂತೆ ಎಂಎಸ್‌ಡಬ್ಲ್ಯೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿಜಯವಾಣಿ ವರದಿಗೆ ಮೆಚ್ಚುಗೆ: ಆದಿವಾಸಿ ಪಾರ್ಲಿಮೆಂಟ್ ಜನತಾ ಸಮಿತಿ ಅಧ್ಯಕ್ಷ ಹರ್ಷ ಮಾತನಾಡಿ, ಜು.10ರ ‘ವಿಜಯವಾಣಿ’ಯಲ್ಲಿ ‘ಹಾಡಿಗಳಿಗೆ ತಲುಪದ ಎನ್ಯೂಮರೇಷನ್ ಫಾರ್ಮ್’ ಶೀರ್ಷಿಕೆಯಡಿ ಹಾಡಿಗಳ ಮುಗ್ಧ ಜನರ ಪರಿಸ್ಥಿತಿಯನ್ನು ಅರ್ಥಪೂರ್ಣವಾಗಿ ಲೇಖನ ಪ್ರಕಟಿಸುವ ಮೂಲಕ ತಾಲೂಕು ಆಡಳಿತವನ್ನು ಎಚ್ಚರಿಸಿದೆ. ಪತ್ರಿಕೆಗೆ ಆದಿವಾಸಿಗಳು ಆಭಾರಿಯಾಗಿದ್ದಾರೆ. ತಾಲೂಕು ಆಡಳಿತ ಮತ್ತು ಚುನಾವಣಾ ಆಯೋಗ ಈ ಕುರಿತು ಸೂಕ್ತ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net