ಕುಲಪತಿಯಾಗಲು ಅನರ್ಹರ ಲಾಭಿ!? Chancellor

ವಿಧಾನಸೌಧ
ವಿಧಾನಸೌಧ
Published on
ಬೆಂಗಳೂರು: ವಿವಿಧ ವಿಶ್ವವಿದ್ಯಾಲಯಗಳ ಕುಲಪತಿ ನೇಮಕದ ಸಂದರ್ಭದಲ್ಲಿ ಬಗ್ಗೆ ಟೀಕೆ, ಟಿಪ್ಪಣಿ, ಆರೋಪ ಪ್ರತ್ಯಾರೋ ಸಹಜ. ತಾಜಾ ಉದಾಹರಣೆಯಾಗಿ ಇದೀಗ ಮೈಸೂರಿನಲ್ಲಿರುವ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ (university Chancellor) ನೇಮಕ ಪ್ರಕ್ರಿಯೆಯ ಬಗ್ಗೆ ಗಂಭೀರ ದೂರೊಂದು ರಾಜಭವನಕ್ಕೆ ಸಲ್ಲಿಕೆಯಾಗಿದೆ. ಜತೆಗೆ ಮುಖ್ಯಮಂತ್ರಿಯವರ ಗಮನಕ್ಕೂ ತರುವ ಪ್ರಯತ್ನ ನಡೆದಿದೆ.
ಕುಲಪತಿ ನೇಮಕ ಪ್ರಕ್ರಿಯೆ ಭಾಗವಾಗಿ ಸರ್ಕಾರ ಅರ್ಜಿ ಆಹ್ವಾನಿಸಿತ್ತು. ಆಕಾಂಕ್ಷಿಗಳು ತಮ್ಮ ಶೈಕ್ಷಣಿಕ ಮಾಹಿತಿಯನ್ನೊಳಗೊಂಡ ಅರ್ಜಿಯನ್ನೂ ಸಲ್ಲಿಸಿದ್ದರು. ಬಳಿಕ ಸರ್ಕಾರ ಶೋಧನಾ ಸಮಿತಿ ರಚಿಸಿತ್ತು. ಈ ಸಮಿತಿ ಮುಂದೆ ಅರ್ಜಿಗಳನ್ನು ಇಟ್ಟು ಆಯ್ಕೆ ಮಾಡುವಂತೆ ಸೂಚಿಸಲಾಗಿದೆ.
ಶಿಫಾರಸು ಮತ್ತು ನೇಮಕಾತಿ ಶೋಧನಾ ಸಮಿತಿಯು ಸಾಮಾನ್ಯವಾಗಿ ಮೂರು ಹೆಸರುಗಳ ಸಮಿತಿಯನ್ನು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ. ನಂತರ ರಾಜ್ಯ ಸರ್ಕಾರವು ಅಂತಿಮ ಹೆಸರನ್ನು ರಾಜ್ಯಪಾಲರಿಗೆ ಕಳಿಸಲಿದ್ದು, ರಾಜ್ಯಪಾಲರು ಅಂತಿಮ ನೇಮಕ ಮಾಡುತ್ತಾರೆ.
ಸರ್ಕಾರ, ರಾಜಭವನ, ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವ ತಜ್ಞರನ್ನೊಳಗೊಂಡ ಸಮಿತಿ ಪ್ರಸ್ತುತ ಆಕಾಂಕ್ಷಿಗಳ ಪಟ್ಟಿಯನ್ನು ಸೋಸಿ ಮೂರು ಹೆಸರನ್ನು ಅಂತಿಮಗೊಳಿಸಿದೆ. ಈ ಪಟ್ಟಿಯಲ್ಲಿರುವ ಮೂರು ಹೆಸರಿನ ಪೈಕಿ ಇಬ್ಬರು ಸೂಕ್ತ ಶೈಕ್ಷಣಿಕ ಅರ್ಹತೆಯನ್ನೇ ಹೊಂದಿಲ್ಲ ಎಂಬುದು ದೂರಿನ ಸಾರಾಂಶ.
ಲಭ್ಯ ಮಾಹಿತಿ ಪ್ರಕಾರ ರಾಜಭವನಕ್ಕೆ ಎರಡು ದೂರು ಸಲ್ಲಿಕೆಯಾಗಿದೆ. ವಕೀಲ ಚಂದ್ರಶೇಖರ್ ಹಾಗೂ ಸಾಮಾಜಿಕ ಕಾರ್ಯಕರ್ತ ಧನುಷ್ ಎಂಬುವರು ಪ್ರತ್ಯೇಕ ದೂರು ಸಲ್ಲಿಸಿ, ಜತೆಗೆ ದಾಖಲೆಯನ್ನೂ ನೀಡಿ ಅನರ್ಹರನ್ನು ಪರಿಗಣಿಸಬೇಡಿ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ.

ಲೋಪವೇನು?

ಕುಲಪತಿಯಾಗಲು ಕನಿಷ್ಠ ಸ್ನಾತಕೋತ್ತರ ಪದವಿಯಲ್ಲಿ ಶೇ.55 ಅಂಕ ಪಡೆದಿರಬೇಕು, ಅದರಲ್ಲಿ ಸಂಗೀತ, ಪ್ರದರ್ಶಕ ಕಲೆಯ ವಿಷಯದಲ್ಲಿ ಅವರು ಸ್ನಾತಕೋತ್ತರ ಪದವಿ ಪಡೆದಿರಬೇಕು. ಅಲ್ಲದೆ ಪದವಿಯನ್ನು ವಿಶ್ವವಿದ್ಯಾಲಯದಿಂದಲೇ ಪಡೆಯಬೇಕು. ಈಗ ಅಂತಿಮ ಸುತ್ತಿಗೆ ಆಯ್ಕೆಯಾದ ಒಬ್ಬರು ವಿಶ್ವವಿದ್ಯಾಲಯದಲ್ಲಿ ಸ್ವಾತಕೋತ್ತರ ಪದವಿ ಪಡೆದಿಲ್ಲ. ಮಹಾರಾಷ್ಟ್ರದ ಅಖಿಲ ಭಾರತ ಗಾಂಧರ್ವ ಮಹಾವಿದ್ಯಾಲಯ ಮಂಡಲ್ ಎಂಬ ಸಂಸ್ಥೆಯಲ್ಲಿ ಎಂಎ ಮಾಡಿದ್ದಾಗಿ ಮಾಹಿತಿ ನೀಡಿದ್ದಾರೆ. ಅದು ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿಲ್ಲ.
ಇನ್ನೊಬ್ಬರದ್ದು, 2002ರಲ್ಲಿ ಅವರು ಅಸೋಸಿಯೇಟ್ ಪ್ರೊೆಸರ್ ಆಗಿ ಬಡ್ತಿ ಹೊಂದಿದ್ದಾರೆ. ಆದರೆ, ಅವರು ಈ ಹುದ್ದೆ ಅಲಂಕರಿಸಲು ಕನಿಷ್ಠ 8 ವರ್ಷವಾದರೂ ಅಸಿಸ್ಟೆಂಟ್ ಪ್ರೊೆಸರ್ (ಖಾಯಂ) ಕೆಲಸ ಮಾಡಿರಬೇಕಾಗಿತ್ತು, ಆದರೆ ಅದು ಪಾಲನೆಯಾಗಿಲ್ಲ. ಅಂದರೆ ಅರ್ಹತೆಯೇ ಬರುವುದಿಲ್ಲ ಎಂದು ದೂರು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಒತ್ತಡ

ಒಂದೊಮ್ಮೆ ದೂರಿನ ಪ್ರಕಾರ ಇಬ್ಬರು ಆಯ್ಕೆ ಪ್ರಕ್ರಿಯೆಗೆ ಪರಿಗಣನೆ ಮಾಡಲು ಬರುವುದಿಲ್ಲ ಎಂದಾದರೆ ಹೊಸದಾಗಿಯೇ ಅರ್ಜಿ ಕರೆಯಬೇಕಾಗುತ್ತದೆ. ಈ ಸ್ಥಿತಿಯಲ್ಲಿ ಮುಂದುವರಿಸಲು ಬರುವುದಿಲ್ಲ. ಇಷ್ಟರ ನಡುವೆ ಹಣದ ಆಮೀಷ ಹಾಗೂ ಒತ್ತಡ ಹಾಕುವ ಕಾರ್ಯವೂ ನಡೆದಿದೆ ಎಂಬ ಮಾತುಗಳು ಕೇಳಿಬಂದಿದೆ.

ಕಳವಳ

ಕುಲಪತಿ ಸ್ಥಾನದ ಅಪೇಕ್ಷಿತರ ಸರ್ಕಾರಕ್ಕೆ ಸಲ್ಲಿಸಿರುವ ಮಾಹಿತಿಯಲ್ಲಿ ಗಂಭೀರ ವ್ಯತ್ಯಾಸವಿದ್ದು, ಅವರ ಶೈಕ್ಷಣಿಕ ಮತ್ತು ವೃತ್ತಿಪರ ಅರ್ಹತೆಗಳ ಸಿಂಧುತ್ವದ ಬಗ್ಗೆ ನಿರ್ಣಾಯಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಕುಲಪತಿಯಂತಹ ಪ್ರತಿಷ್ಠಿತ ಮತ್ತು ಪ್ರಭಾವಶಾಲಿ ಹುದ್ದೆಗೆ ಅನರ್ಹ ವ್ಯಕ್ತಿಯನ್ನು ನೇಮಿಸುವ ಸಾಧ್ಯತೆಯು ಶೈಕ್ಷಣಿಕ ಸಮುದಾಯಕ್ಕೆ ಗಂಭೀರ ಅಪಚಾರವಾಗುತ್ತದೆ, ವಿಶ್ವಾಸಾರ್ಹತೆಗೆ ಹಿನ್ನಡೆಯಾಗುತ್ತದೆ ಎಂದು ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ದೂರಿನ ಸಾರಾಂಶ

  1. ಒಬ್ಬ ಅರ್ಜಿದಾರ ಶೈಕ್ಷಣಿಕ ದಾಖಲೆಯು ಅವರು ಕೇವಲ ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿದ್ದಾರೆ ಮತ್ತು ನಂತರ ಸಂಗೀತದಲ್ಲಿ ಸರ್ಟಿಫಿಕೇಟ್ ಕೋರ್ಸ್ ಪೂರ್ಣಗೊಳಿಸಿದ್ದಾರೆ.
  2. ಸಂಗೀತ ವಿಭಾಗದಲ್ಲಿ ಸ್ನಾತಕೋತ್ತರ ಪಡೆಯಬೇಕಿದ್ದು, ಸರ್ಟಿಫಿಕೇಟ್ ಕೋರ್ಸ್ ಮಾನ್ಯತೆ ಪಡೆದ ಪದವಿಪೂರ್ವ ಅಥವಾ ಸ್ನಾತಕೋತ್ತರ ಪದವಿಗೆ ಸಮನಾಗಿರುವುದಿಲ್ಲ.
  3. ಮಾನದಂಡ ಉಲ್ಲಂಸಿ ನೇರವಾಗಿ ಪಿಎಚ್‌ಡಿಗೆ ನೋಂದಾಯಿಸಿಕೊಂಡಿದ್ದು, ಇದು ಯುಜಿಸಿ ನಿಯಮಗಳನ್ನು ಉಲ್ಲಂಘನೆಯೂ ಆಗುತ್ತದೆ.
  4. ಸರ್ಕಾರ ತನಗೆ ಸಲ್ಲಿಕೆಯಾಗಿರುವ ದಾಖಲಾತಿ ಬಗ್ಗೆ ತನಿಖೆ ಮಾಡಿಸಲಿ. ವಾರ ಹತ್ತು ದಿನ ತಡವಾದರೂ ತೊಂದರೆ ಇಲ್ಲ. ಬಳಿಕವಷ್ಟೇ ನೇಮಕ ಮಾಡಿಕೊಳ್ಳಲಿ. ಅನರ್ಹರ ನೇಮಕ ಕೂಡದು.
"

ಸರ್ಕಾರ ಅರ್ಜಿದಾರರ ಶೈಕ್ಷಣಿಕ ಅರ್ಹತೆಗಳು ಮತ್ತು ನೇಮಕಾತಿ ಬಗ್ಗೆ ಸಂಪೂರ್ಣ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಲಿ. ಯುಜಿಸಿ ಅರ್ಹತಾ ಮಾನದಂಡಗಳನ್ನು ಉಲ್ಲಂಘಿಸಿರುವುದು ಕಂಡುಬಂದರೆ ಹೊಸದಾಗಿಯೇ ಪ್ರಕ್ರಿಯೆ ನಡೆಸಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net