ಒಗ್ಗಟ್ಟು ಸಾರಿದ ಸೌಗಂಧಿಪುರ ಜಾತ್ರೆ

ಸವದತ್ತಿ ಗ್ರಾಮದೇವಿ ಜಾತ್ರೆಯ 8ನೇ ದಿನದ ಉಡಿತುಂಬಲು ಕಾದುನಿಂತ ಭಕ್ತರು.
ಸವದತ್ತಿ ಗ್ರಾಮದೇವಿ ಜಾತ್ರೆಯ 8ನೇ ದಿನದ ಉಡಿತುಂಬಲು ಕಾದುನಿಂತ ಭಕ್ತರು.
Published on
ವಿಜಯವಾಣಿ ಸುದ್ದಿಜಾಲ ಸವದತ್ತಿ
ಐತಿಹಾಸಿಕ ಗ್ರಾಮದೇವಿ ಜಾತ್ರಾ ಮಹೋತ್ಸವ ಭಕ್ತಿ, ಶಿಸ್ತು ಹಾಗೂ ಒಗ್ಗಟ್ಟಿನ ಸಂದೇಶ ಸಮಾಜಕ್ಕೆ ಸಾರುತ್ತಿದೆ ಎಂದು ನಿವೃತ್ತ ಪೊಲೀಸ್​ ಮಹಾನಿರ್ದೇಶಕ ಶಂಕರ ಬಿದರಿ ಹೇಳಿದರು.
ನಗರದ ಐತಿಹಾಸಿಕ ಗ್ರಾಮದೇವಿ ಜಾತ್ರಾ ಮಹೋತ್ಸವದ ಏಳನೇ ದಿನ ಭಾನುವಾರ ನಡೆದ ಧಾರ್ಮಿಕ ಸಭೆ ಹಾಗೂ ಸಾಂಸತಿಕ ಸಮಾರಂಭದಲ್ಲಿ ಮಾತನಾಡಿ, ಓಣಿಗೊಂದು ಆಚರಣೆ, ಊರಿಗೊಂದು ಸಂಪ್ರದಾಯ ಎಂಬಂತೆ ಎಲ್ಲ ಧರ್ಮ, ಜಾತಿ, ಮತ&ಪಂಥಗಳ ಜನರು ಒಂದಾಗಿ ಗ್ರಾಮದೇವಿಯರ ಆರಾಧನೆ ಮಾಡುತ್ತಿರುವುದು ವಿಶೇಷವಾಗಿದೆ. ಇಂತಹ ಜಾತ್ರೆಗಳು ನಮ್ಮ ಸಂಸತಿ, ಪರಂಪರೆ ಹಾಗೂ ಸಹೋದರತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಕಾರ್ಯ ಮಾಡುತ್ತಿವೆ ಎಂದರು.
ಉಪ್ಪಿನಬೆಟಗೇರಿಯ ಹೊಸಮಠದ ಶಾಂತವೀರ ಸ್ವಾಮೀಜಿ, ಸುಖದೇವಾನಂದ ಆಶ್ರಮದ ಸಿದ್ಧಲಿಂಗ ಸ್ವಾಮೀಜಿ, ಮೂಲಿಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಬಿದರಿ ಕಲ್ಮರದ ಬಸವಲಿಂಗದೇವರು, ಗವಿಮಠದ ಚಿದಾನಂದ ಸ್ವಾಮೀಜಿ, ಸಂಗಮೇಶ ಸ್ವಾಮಿಜಿ, ವೀರಭದ್ರ ಶಾಸ್ತ್ರಿ ಹಾಗೂ ಬಸಯ್ಯ ಅಜ್ಜನವರು ಆಶೀರ್ವಚನ ನೀಡಿದರು.
ಜಾತ್ರೆ ಯಶಸ್ಸಿಗೆ ಶ್ರಮಿಸಿದ ಪುರಸಭೆ ಕಾರ್ಮಿಕರು, ಅಧಿಕಾರಿಗಳು ಹಾಗೂ ದಾನಿಗಳನ್ನು ವಿರೂಪಾ ಮಾಮನಿ ಹಾಗೂ ವಿಶ್ವಾಸ ವೈದ್ಯ ಸನ್ಮಾನಿಸಿದರು. ಮಧ್ಯಾಹ್ನ ನಡೆದ ರಾಗ ಸಂಜೀವಿನಿ ತಂಡದ ಭಕ್ತಿ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ಜನರ ಮೆಚ್ಚುಗೆಗೆ ಪಾತ್ರವಾಯಿತು. ರಾತ್ರಿ ನಡೆದ ಗಂಗಾವತಿ ಪ್ರಾಣೇಶ್​ ಹಾಗೂ ತಂಡದ ಹಾಸ್ಯ ರಸಾಯನ ಕಾರ್ಯಕ್ರಮದಲ್ಲಿ ಪ್ರೇಕರು ನಗೆಯಲ್ಲಿ ತೇಲಿದರು. ವಿಧಾನ ಪರಿಷತ್​ ಸದಸ್ಯ ಹಣಮಂತ ನಿರಾಣಿ, ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ಮಲ್ಲಣ್ಣ ಯಾದವಾಡ, ಮಾಜಿ ಶಾಸಕ ವಿಶ್ವನಾಥ ಪಾಟೀಲ, ಅಶೋಕ ಮುರಗೋಡ, ಮಂಜುನಾಥ ಪಾಚಂಗಿ,
ಗಂಗಾವತಿ ಪ್ರಾಣೇಶ, ಬಸವರಾಜ ಮಹಾಮನಿ, ನರಸಿಂಹ ಜೋಶಿ ಇತರರಿದ್ದರು.
ದೇವಿಗೆ ಉಡಿ ಅರ್ಪಿಸಿ ಕೃತಾರ್ಥರಾದ ಭಕ್ತರು
ಗ್ರಾಮದೇವಿ ಜಾತ್ರಾ ಮಹೋತ್ಸವದ ಎಂಟನೇ ದಿನ ಸೋಮವಾರ ನಗರದಲ್ಲಿ ಭಕ್ತಿ, ಧಾರ್ಮಿಕ ವಿಧಿವಿಧಾನಗಳು ಹಾಗೂ ಉಡಿ ತುಂಬುವ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು. ವೈಶಾಖ ಕೃಷ್ಣ ನವಮಿ ಅಂಗವಾಗಿ ಬೆಳಗ್ಗೆ 4 ಗಂಟೆಯಿಂದ ದೇವಿಕಟ್ಟೆಯಲ್ಲಿ ಮಹಾಗಣಪತಿ ಪೂಜೆ ಹಾಗೂ ಸ್ಕಂದಮಾತಾ ದೇವಿ, ಕಾತ್ಯಾಯನಿ ದೇವಿ ಹೋಮಗಳು ವೈದಿಕ ಮಂತ್ರೋಚ್ಚಾರಗಳೊಂದಿಗೆ ಜರುಗಿದವು. ಭಕ್ತರ ಜೀವನದಲ್ಲಿ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿ ವೃದ್ಧಿಯಾಗಲೆಂಬ ಉದ್ದೇಶದಿಂದ ವಿಶೇಷ ಪೂಜೆ ನೆರವೇರಿದವು. ಬೆಳಗ್ಗೆ 8 ಗಂಟೆಯಿಂದ ನಗರದ ವಿವಿಧ ಓಣಿಗಳ ಭಕ್ತರು ವಾದ್ಯಮೇಳಗಳೊಂದಿಗೆ ದೇವಿಕಟ್ಟೆಗೆ ಆಗಮಿಸಿ ದೇವಿಗೆ ಉಡಿ ತುಂಬಿದರು. ಶಾಂತಿನಗರ, ವಾಟರ್​ ಸಪ್ಲೆ ಭಾಗ, ಬಸವಸದನ, ಬೈಪಾಸ್​ ರಸ್ತೆ, ಕೊಳ್ಳಾರ ಓಣಿ, ಮೇದಾರ ಓಣಿ, ಕಂಬಾರ ಓಣಿ, ಸಮಗಾರ ಓಣಿ, ಆನಿ ಆಗಸಿ, ಅಲಾರಕಿ ಓಣಿ, ಚಿನಿವಾಲರ ಓಣಿ, ದಾಸರ ಓಣಿ, ಅಂಬೇಡ್ಕರ ನಗರ, ಮಾದರ ಓಣಿ, ವಕ್ಕುಂದದೇವರ ಓಣಿ, ಮೊಕಾಶಿ ಓಣಿ ಹಾಗೂ ಬಂಡಿ ಓಣಿಗಳ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಭಕ್ತಿಭಾವ ಮೆರೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net