ಕೆಪಿಎಸ್​ಸಿಗೇ ನಿರುದ್ಯೋಗ!

33 ಇಲಾಖೆಗಳ ಹೊಣೆ ಕೆಇಎ ಹೆಗಲಿಗೆ, ಆಯೋಗಕ್ಕೆ ಸಾಲು ಸಾಲು ಹಗರಣಗಳ ಹೊಡೆತ , ವಾರ್ಷಿಕ 20ಕ್ಕೂ ಹೆಚ್ಚು ಅಧಿಸೂಚನೆ ಹೊರಡಿಸುತ್ತಿದ್ದ ಕೆಪಿಎಸ್‌ಸಿ
ಕೆಪಿಎಸ್ಸಿ
ಕೆಪಿಎಸ್ಸಿ
Published on: 

ಬೆಂಗಳೂರು: ಎಪ್ಪತೈದು ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಸಾಲು ಸಾಲು ನೇಮಕಾತಿ ಅಕ್ರಮಗಳ ಆರೋಪಗಳ ಸುಳಿಯಲ್ಲಿ ಸಿಲುಕಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಆಯೋಗದ ಮೂಲಕ ನಡೆಯುತ್ತಿದ್ದ ವಿವಿಧ ಇಲಾಖೆಗಳ ನೇಮಕಾತಿ ಪ್ರಕ್ರಿಯೆಗೆ ಕಡಿವಾಣ ಹಾಕುವ ಮೂಲಕ ಮಹತ್ವದ ಆಡಳಿತಾತ್ಮಕ ಬದಲಾವಣೆಗೆ ಮುಂದಾಗಿದ್ದು, ಈವರೆಗೆ ಕೆಪಿಎಸ್‌ಸಿ ನಿರ್ವಹಿಸುತ್ತಿದ್ದ ಹಲವು ಇಲಾಖೆಗಳ ನೇಮಕಾತಿ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ವಹಿಸಿದೆ.

ಕೆಪಿಎಸ್‌ಸಿ ಪ್ರತಿ ವರ್ಷ 20ಕ್ಕೂ ಹೆಚ್ಚು ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಿ ವಿವಿಧ ಸರ್ಕಾರಿ ಇಲಾಖೆಗಳ ಹುದ್ದೆಗಳನ್ನು ಭರ್ತಿ ಮಾಡುತ್ತಿತ್ತು. ಆದರೆ, 2022ರಿಂದೀಚೆಗೆ ಆಯೋಗದ ಮೂಲಕ ನಡೆದ ಹಲವು ನೇಮಕಾತಿ ಪರೀಕ್ಷೆಗಳಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಪ್ರಶ್ನೆಪತ್ರಿಕೆ ಸೋರಿಕೆ, ನಿಯಮಗಳ ಉಲ್ಲಂಘನೆ ಸೇರಿದಂತೆ ಹಲವು ಗಂಭೀರ ಆರೋಪಗಳು ಕೇಳಿಬಂದಿವೆ.

ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಹಿರಿಯ ಐಎಎಸ್ ಅಧಿಕಾರಿಗಳ ವಿರುದ್ಧವೂ ನೇಮಕಾತಿ ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪಗಳು ಕೇಳಿ ಬಂದಿದ್ದು, ಈ ಬೆಳವಣಿಗೆಗಳು ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲಿಯೂ ಚರ್ಚೆಗೆ ಗ್ರಾಸವಾಗಿವೆ. ಒಂದರ ಹಿಂದೆ ಒಂದರಂತೆ ಕೇಳಿಬರುತ್ತಿರುವ ಹಗರಣಗಳಿಂದಾಗಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಲಕ್ಷಾಂತರ ಯುವಜನರ ವಿಶ್ವಾಸಕ್ಕೆ ಧಕ್ಕೆಯಾಗುತ್ತಿರುವುದನ್ನು ಪರೀಗಣಿಸಿ ಸರ್ಕಾರ ಕೆಪಿಎಸ್‌ಸಿ ನೇಮಕಾತಿಗೆ ಕಡಿವಾಣಕ್ಕೆ ಮುಂದಾಗಿದೆ.

33 ಇಲಾಖೆಗಳ 5,341 ಹುದ್ದೆಗಳ ನೇಮಕಾತಿ:

ಇದೇ ಮೊದಲ ಬಾರಿಗೆ 33 ವಿವಿಧ ಇಲಾಖೆಗಳಲ್ಲಿನ ಖಾಲಿ ಇರುವ ಒಟ್ಟು 5,341 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಲಾಗಿದೆ. ಈ ಹಿಂದೆ ಕೆಇಎ ಕೆಲವೇ ನಿರ್ದಿಷ್ಟ ಇಲಾಖೆಗಳ ನೇಮಕಾತಿ ಪರೀಕ್ಷೆಗಳನ್ನು ನಡೆಸುತ್ತಿತ್ತು. ಆದರೆ, ಕಳೆದ ಆರು ತಿಂಗಳಿಂದ ವಿವಿಧ ಇಲಾಖೆಗಳ ನೇಮಕಾತಿ ಹೊಣೆಗಾರಿಕೆ ನಿರಂತರವಾಗಿ ಕೆಇಎಗೆ ವರ್ಗಾವಣೆಯಾಗುತ್ತಿದೆ.

ಪೊಲೀಸ್ ಇಲಾಖೆಯ ಸಿವಿಲ್ ಕಾನ್‌ಸ್ಟೆಬಲ್, ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್, ಭೂಮಾಪನ ಇಲಾಖೆ, ಪುರಸಭೆ ಆಡಳಿತ, ಗ್ರಾಮ ಆಡಳಿತಾಧಿಕಾರಿ (ವಿಎಒ), ಜೂನಿಯರ್ ಇಂಜಿನಿಯರ್ (ಸಿವಿಲ್), ಕೃಷಿ, ತೋಟಗಾರಿಕೆ ಇಲಾಖೆ, ಕಾರಾಗೃಹ ಇಲಾಖೆ ಹಾಗೂ ಡಿಪ್ಲೊಮಾ ಇನ್ ಫಾರ್ಮಸಿ ಅಪ್ರೆಂಟಿಸ್‌ಶಿಪ್ ಸೇರಿ ವಿವಿಧ ನೇಮಕಾತಿ ಪರೀಕ್ಷೆಗಳನ್ನು ಕೆಇಎ ನಿರ್ವಹಿಸುತ್ತಿದೆ.

ಈ ಹಿಂದೆ ಕೆಪಿಎಸ್‌ಸಿ ಒಂದೊಂದು ಇಲಾಖೆಯ ಹುದ್ದೆಗಳಿಗೆ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಿ, ಸಾಮಾನ್ಯ ಮತ್ತು ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ಪ್ರತ್ಯೇಕ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸುತ್ತಿತ್ತು. ಇದರಿಂದ ಅಧಿಸೂಚನೆ, ಅರ್ಜಿ ಸ್ವೀಕಾರ, ಪರೀಕ್ಷೆ, ಮೌಲ್ಯಮಾಪನ ಹಾಗೂ ಫಲಿತಾಂಶ ಪ್ರಕಟಣೆ ಸೇರಿ ನೇಮಕಾತಿಯ ಪ್ರತಿಯೊಂದು ಹಂತಕ್ಕೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿತ್ತು. ಅಲ್ಲದೇ ಇದರಲ್ಲಿ ಬಹುತೇಕ ನೇಮಕಾತಿಗಳಲ್ಲಿ ಭ್ರಷ್ಟಾಚಾರ ಆರೋಪ ಕೇಳಿಬರುತ್ತಿತ್ತು.

ಆದರೆ, ಇದೀಗ ವಿವಿಧ ಇಲಾಖೆಗಳ ನೇಮಕಾತಿ ಪ್ರಕ್ರಿಯೆಗಳನ್ನು ಒಂದೇ ಅವಧಿಯಲ್ಲಿ ನಡೆಸುವ ಉದ್ದೇಶದಿಂದ ಕೆಇಎಗೆ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ. ಇದರಿಂದ ಪ್ರತ್ಯೇಕ ಅಧಿಸೂಚನೆಗಳ ಸಂಖ್ಯೆ ಕಡಿಮೆಯಾಗುವುದರ ಜತೆಗೆ ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕ ಹಾಗೂ ವ್ಯವಸ್ಥಿತವಾಗಿ ನಡೆಸಬೇಕಾಗಿದೆ.

ಮುಂದಿನ ವರ್ಷದಲ್ಲೂ ಇದೆ ರೀತಿ ಕೆಇಎ ಎಲ್ಲ ಇಲಾಖೆಗಳ ನೇಮಕಾತಿಗೆ ಮುಂದಾದರೆ ಶೇ. 80ರಷ್ಟು ನೇಮಕಾತಿ ಕೆಪಿಎಸ್ಸಿ ಕೈ ತಪ್ಪಿ ಹೋಗಲಿವೆ ಎನ್ನಲಾಗಿದೆ. ಗೆಜೆಟೆಡ್ ಪ್ರೊಬೇಷನರಿ ಹುದ್ದೆ (ಎ ಮತ್ತು ಬಿ)ಗಳನ್ನು ಆಯೋಗ ಮಾತ್ರ ನಡೆಸಲು ಬೇಕಾಗಿದೆ. ಆದರೆ, ರಾಜ್ಯ ಸರ್ಕಾರ ಕೆಪಿಎಸ್‌ಸಿ ಮಾದರಿಯಲ್ಲೇ ಕೆಇಎಗೂ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ನಡೆಸುವ ಸಂವಿಧಾನಿಕ ಅಧಿಕಾರ ನೀಡಿದರೆ ಹಗರಣದ ಸಂಕಷ್ಟದಲ್ಲಿರುವ ಆಯೋಗದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬಿರಲಿದೆ ಎನ್ನಲಾಗಿದೆ.

ನೇಮಕಾತಿ ಸಂಸ್ಥೆಗಳ ಮೇಲಿನ ಹೊರೆ ಕಡಿಮೆ:

ಒಂದೇ ಸಂಸ್ಥೆಯ ಮೇಲೆ ಎಲ್ಲ ನೇಮಕಾತಿಗಳ ಜವಾಬ್ದಾರಿ ಕೇಂದ್ರೀಕೃತವಾದರೆ ಆಡಳಿತಾತ್ಮಕ ಒತ್ತಡ ಹೆಚ್ಚಾಗುವ ಸಾಧ್ಯತೆಯೂ ಇದೆ. ಹೀಗಾಗಿ ಕೆಪಿಎಸ್‌ಸಿ ಮತ್ತು ಕೆಇಎ ನಡುವೆ ನೇಮಕಾತಿ ಹೊಣೆಗಾರಿಕೆಯನ್ನು ಸಮರ್ಪಕವಾಗಿ ಹಂಚಿಕೆ ಮಾಡುವ ಮೂಲಕ ಪರೀಕ್ಷಾ ನಿರ್ವಹಣೆ ಅಕ್ರಮ ನೇಮಕಾತಿ, ಭ್ರಷ್ಟಾಚಾರ ತಗ್ಗಿಸುವುದು ಸರ್ಕಾರದ ಉದ್ದೇಶವಾಗಿದೆ.

ಇಲಾಖೆಗಳ ಹುದ್ದೆಗಳಿಗೆ ಪ್ರತ್ಯೇಕ ಪರೀಕ್ಷೆ ನಡೆಸುವ ಬದಲು, ಸಮನ್ವಯದೊಂದಿಗೆ ನೇಮಕಾತಿ ವೇಳಾಪಟ್ಟಿ ರೂಪಿಸಿ ಪರೀಕ್ಷೆಗಳನ್ನು ನಡೆಸುವುದರಿಂದ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ವೇಗ ದೊರೆಯಲಿದೆ. ಅಲ್ಲದೆ, ಪರೀಕ್ಷಾ ಕೇಂದ್ರಗಳ ವ್ಯವಸ್ಥೆ, ಪ್ರಶ್ನೆಪತ್ರಿಕೆಗಳ ಮುದ್ರಣ, ಭದ್ರತೆ, ಮೌಲ್ಯಮಾಪನ ಮತ್ತು ಫಲಿತಾಂಶ ಪ್ರಕಟಣೆಯಂತಹ ಕಾರ್ಯಗಳನ್ನು ಯೋಜಿತವಾಗಿ ನಿರ್ವಹಿಸಲು ಸಾಧ್ಯವಾಗಲಿದೆ.

ಸರ್ಕಾರಕ್ಕೆ ಕೋಟಿ ಕೋಟಿ ಉಳಿತಾಯ:

ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ತಾಂತ್ರಿಕ ಲೋಪಗಳು ಕಂಡುಬಂದರೆ ಪರೀಕ್ಷೆ ರದ್ದುಗೊಳಿಸಿ ಮರುಪರೀಕ್ಷೆ ನಡೆಸಬೇಕಾಗುತ್ತದೆ. ಇದರಿಂದ ಸರ್ಕಾರಕ್ಕೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತದೆ. ಪರೀಕ್ಷಾ ಕೇಂದ್ರಗಳ ಬಾಡಿಗೆ, ಸಿಬ್ಬಂದಿ ನಿಯೋಜನೆ, ಪ್ರಶ್ನೆಪತ್ರಿಕೆ ಮುದ್ರಣ ಮತ್ತು ಸಾಗಣೆ, ಭದ್ರತಾ ವ್ಯವಸ್ಥೆ, ಮೌಲ್ಯಮಾಪನ ಸೇರಿ ಪ್ರತಿಯೊಂದು ಹಂತದಲ್ಲಿಯೂ ಸರ್ಕಾರ ಹಣ ವೆಚ್ಚ ಮಾಡಬೇಕಾಗುತ್ತದೆ. ಒಂದು ಪರೀಕ್ಷೆ ರದ್ದಾದರೆ ಇದೇ ಪ್ರಕ್ರಿಯೆಯನ್ನು ಮತ್ತೊಮ್ಮೆ ಪುನರಾವರ್ತಿಸಬೇಕಾಗುತ್ತದೆ. ಉದಾರಣೆಗೆ 2024ರಲ್ಲಿ ಕೆಪಿಎಸ್‌ಸಿ ನಡೆಸಿದ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆ ಪರೀಕ್ಷೆಯಲ್ಲಿ ಹಲವು ಲೋಪಗಳು ಕಂಡು ಬಂದಿದ್ದವು. ಇದರಿಂದ ಎರಡು ಬಾರಿ ಪೂರ್ವಭಾವಿ ಪರೀಕ್ಷೆ ನಡೆಸಲಾಯಿತು. ಇದರಿಂದ ಸರ್ಕಾರಕ್ಕೆ 2-3 ಕೋಟಿ ರೂ. ಹೊರೆ ಬಿದ್ದಿತ್ತು.

ಪರೀಕ್ಷಾರ್ಥಿಗಳಿಗೂ ಶುಲ್ಕದ ಹೊರೆ ಕಡಿಮೆ:

ನೇಮಕಾತಿ ಪರೀಕ್ಷೆಗಳು ರದ್ದಾದಾಗ ಅಭ್ಯರ್ಥಿಗಳು ಕೇವಲ ಸಮಯವನ್ನಷ್ಟೇ ಕಳೆದುಕೊಳ್ಳುವುದಿಲ್ಲ. ಅರ್ಜಿ ಶುಲ್ಕ, ಪ್ರಯಾಣ ವೆಚ್ಚ, ವಸತಿ ವೆಚ್ಚ ಸೇರಿ ಹಲವು ರೀತಿಯ ಆರ್ಥಿಕ ಹೊರೆಯನ್ನು ಎದುರಿಸಬೇಕಾಗುತ್ತದೆ. ದೂರದ ಜಿಲ್ಲೆ ಮತ್ತು ಗ್ರಾಮೀಣ ಪ್ರದೇಶದಿಂದ ಪರೀಕ್ಷೆ ಬರೆಯಲು ಬರುವ ಅಭ್ಯರ್ಥಿಗಳಿಗೆ ಈ ಹೊರೆ ಮತ್ತಷ್ಟು ಹೆಚ್ಚಾಗುತ್ತದೆ.