ಹೊಸ ಲೇಖಕರಿಗೆ ತತ್ವಜ್ಞಾನದ ತಿಳಿವಳಿಕೆ ಅತ್ಯಗತ್ಯ: ಡಾ. ಎಸ್.ಆರ್.ವಿಜಯಶಂಕರ ಅಭಿಮತ!

ವಿಜಯವಾಣಿ ‘ದೀಪಾವಳಿ ಕಥಾ ಸ್ಪರ್ಧೆ - 2025’ರ ವಿಜೇತರೊಂದಿಗೆ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ವಿಮರ್ಶಕ ಡಾ. ಎಸ್.ಆರ್. ವಿಜಯಶಂಕರ, ಸಾಹಿತ್ಯ ಪ್ರಕಾಶನದ ಮುಖ್ಯಸ್ಥ ಸುಬ್ರಹ್ಮಣ್ಯ, ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ.
ವಿಜಯವಾಣಿ ‘ದೀಪಾವಳಿ ಕಥಾ ಸ್ಪರ್ಧೆ - 2025’ರ ವಿಜೇತರೊಂದಿಗೆ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ವಿಮರ್ಶಕ ಡಾ. ಎಸ್.ಆರ್. ವಿಜಯಶಂಕರ, ಸಾಹಿತ್ಯ ಪ್ರಕಾಶನದ ಮುಖ್ಯಸ್ಥ ಸುಬ್ರಹ್ಮಣ್ಯ, ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ.
Published on
ಬೆಂಗಳೂರು: ಲೇಖಕ ತನ್ನ ಬೆನ್ನ ಹಿಂದೆ ಕಾಣದ ವಿಷಯವನ್ನೂ ಓದುಗನಿಗೆ ಅರ್ಥಪೂರ್ಣವಾಗಿ ಬರಹದ ಮೂಲಕ ದಾಟಿಸಬೇಕು. ಇದಕ್ಕಾಗಿ ಭಾಷಾ ತಂತ್ರಗಳ ಬಳಕೆ ಜತೆಗೆ ತತ್ವಜ್ಞಾನದ ತಿಳಿವಳಿಕೆಯೂ ಅಗತ್ಯವಿದ್ದು, ಈ ಒಳನೋಟ ಹೊಂದುವತ್ತ ಹೊಸ ಕಥೆಗಾರರು ದೃಷ್ಟಿ ಹರಿಸಬೇಕಿದೆ ಎಂದು ಹಿರಿಯ ವಿಮರ್ಶಕ ಡಾ. ಎಸ್.ಆರ್. ವಿಜಯಶಂಕರ ಅಭಿಪ್ರಾಯಪಟ್ಟರು.
ವಿಜಯವಾಣಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಜಯವಾಣಿ ‘ದೀಪಾವಳಿ ಕಥಾ ಸ್ಪರ್ಧೆ - 2025’ರ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಇತ್ತೀಚಿನ ಬರಹಗಾರರು ಭಾಷಾ ಬಳಕೆಯಲ್ಲಿ ಪ್ರಬುದ್ಧತೆ ತೋರಿಸುತ್ತಿದ್ದಾರೆ ಎಂಬ ಮೆಚ್ಚುಗೆಯ ಮಾತುಗಳು ಬರಲಾರಂಭಿಸಿವೆ. ಇದು ಕನ್ನಡ ಸಾಹಿತ್ಯದಲ್ಲಿ ಸಕಾರಾತ್ಮಕ ಬೆಳವಣಿಗೆಯಾಗಿದೆ. ಲೇಖಕನಿಗೆ ಸಾಹಿತ್ಯದ ಅರಿವಿನ ಜತೆಗೆ ತಾತ್ವಿಕತೆಯೂ ಇರಬೇಕು. ತತ್ವಶಾಸ್ತ್ರ ಎಂದರೆ ಭಜನೆ ಮಾಡುವುದು, ಧಾರ್ವಿುಕತೆಗೆ ಸೀಮಿತವಾಗದೆ ಇಡೀ ಫಿಲಾಸಫಿಯನ್ನು ತಿಳಿದುಕೊಳ್ಳುವುದು ತಾತ್ವಿಕತೆಯ ತಿರುಳು. ಇಂತಹ ಜ್ಞಾನದ ಬಲದಿಂದ ಲೇಖಕನೊಬ್ಬ ತನ್ನ ಬೆನ್ನ ಹಿಂದಿನ ಬದುಕನ್ನು ಓದುಗನಿಗೆ ಕಾಣಿಸುವ ದೃಷ್ಟಿಕೋನವನ್ನು ಬರಹದಲ್ಲಿ ಮೂಡಿಸಬೇಕು. ಇದರಿಂದ ಸಮಾಜದ ಹಾಗೂ ವ್ಯಕ್ತಿತ್ವದ ಸ್ಪಷ್ಟ ಚಿತ್ರಣ ಸಿಗುವಂತಾಗುತ್ತದೆ ಎಂದು ವಿಶ್ಲೇಷಿಸಿದರು.
ಖ್ಯಾತ ದಾರ್ಶನಿಕ ಪ್ಲೇಟೋ ತನ್ನ ರಾಜ್ಯದಿಂದ ಕವಿಗಳನ್ನು ಬಡಿದಟ್ಟಬೇಕು ಎಂದಿದ್ದನಂತೆ. ಏಕೆಂದರೆ ಲೇಖಕರು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವವರಾಗಿದ್ದಾರೆ. ಉತ್ಪ್ರೇಕ್ಷೆ ಮಾಡಿ ಬರೆಯುವುದರಿಂದ ಸಮಾಜ ಕೆಡುತ್ತದೆ ಎಂದಿದ್ದನಂತೆ. ಹಾಗಾಗಿ ಸಮಾಜವನ್ನು ಕೆಡಿಸದೆ ಸನ್ಮಾರ್ಗದಲ್ಲಿ ಕೊಂಡೊಯ್ಯಲು ಲೇಖಕನಿಗೆ ಫಿಲಾಸಫಿಯ ಜ್ಞಾನ ಅತ್ಯಗತ್ಯ ಎಂದು ವಿಜಯಶಂಕರ ತಿಳಿಸಿದರು.
ಬರಹಗಾರರಿಗೆ ಪ್ರೋತ್ಸಾಹ ಸ್ವಾಗತ: ಬದಲಾದ ಕಾಲಘಟ್ಟದಲ್ಲಿ ಹಿಂದಿನಂತೆ ದಿನಪತ್ರಿಕೆಗಳಲ್ಲಿ ಈಗ ದೊಡ್ಡ ಕಥೆಯನ್ನು ಪ್ರಕಟಿಸಲು ಜಾಗದ ಕೊರತೆ ಉಂಟಾಗುತ್ತಿದೆ. ಆದರೆ, ಪತ್ರಿಕೆಯ ವೆಬ್​ಸೈಟ್​ನಲ್ಲಿ ದೊಡ್ಡ ಲೇಖನಗಳನ್ನು ಪ್ರಕಟಿಸಲು ಸಾಧ್ಯವಿದೆ. ಇಂತಹ ಪ್ರಯತ್ನಕ್ಕೂ ಓದುಗ ಬಳಗ ಇದೆ. ಕಥೆ, ಕವನಗಳಿಗಿಂತ ಹೆಚ್ಚು ಕನ್ನಡ ನೆಲ, ಜಲ, ಭಾಷೆ, ಸಂಸ್ಕೃತಿ ಹಾಗೂ ಕನ್ನಡ ಸಂಸ್ಕೃತಿ, ಭಾಷೆ ಕಟ್ಟಲು ‘ವಿಜಯವಾಣಿ’ ಪತ್ರಿಕೆಯಲ್ಲಿ ಹೆಚ್ಚು ಜಾಗವನ್ನು ಕಲ್ಪಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ಕೆ ನೀರೆರೆಯುತ್ತಿರುವುದು ಅಭಿನಂದನೀಯ ಎಂದು ವಿಜಯಶಂಕರ ಮೆಚ್ಚುಗೆ ವ್ಯಕ್ತಪಡಿಸಿದರು.

ಗೆಲುವಿಗೆ ಸತತ ಪ್ರಯತ್ನ ಅಗತ್ಯ

ಬದುಕಿನಲ್ಲಿ ಮೊದಲ ಯತ್ನಕ್ಕೆ ಫಲ ಸಿಗದಿದ್ದರೂ ಮತ್ತೆಮತ್ತೆ ಪ್ರಯತ್ನ ಮಾಡುವುದರಿಂದ ಗೆಲುವನ್ನು ಸಿದ್ಧಿಸಿಕೊಳ್ಳಬಹುದು ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಕಿವಿಮಾತು ಹೇಳಿದರು. ಕಥಾ ಸ್ಪರ್ಧೆಗೆ 1,200ಕ್ಕೂ ಹೆಚ್ಚು ಪ್ರವೇಶಗಳು ಬಂದಿವೆ. ಇವುಗಳಲ್ಲಿ ಉತ್ತಮ ಕಥೆ ಆಯ್ಕೆ ಮಾಡುವುದು ಅತೀ ಸವಾಲಿನ ಕೆಲಸ. ಬಹಳ ಕಷ್ಟಪಟ್ಟು 3-4 ತಿಂಗಳಲ್ಲಿ ತೀರ್ಪಗಾರರು ಕಥೆ ಆಯ್ಕೆ ಮಾಡಿಕೊಡುತ್ತಾರೆ. ಆದರೆ, ಯಾರಿಗೆ ಪ್ರಶಸ್ತಿ ಬಂದಿಲ್ಲ, ಲೇಖನ ಪ್ರಕಟವಾಗಿಲ್ಲ, ಅವರ್ಯಾರೂ ಬೇಸರ ಪಡಬೇಕಿಲ್ಲ. ಮತ್ತೆಮತ್ತೆ ಪ್ರಯತ್ನಿಸುತ್ತಿರಬೇಕು. ಅಮಿತಾಬ್ ಬಚ್ಚನ್ ನಟನಾಗಬೇಕೆಂಬ ಉದ್ದೇಶದಿಂದ ನಿರ್ದೇಶಕ, ನಿರ್ವಪಕರ ಬಳಿ ಚಾನ್ಸ್ ಕೇಳಿದರೂ ಫೇಲಾಗುತ್ತಿದ್ದರು. ಏಕೆಂದು ಕಾರಣ ಕೇಳಿದಾಗ ನೀನೊಬ್ಬ ಉತ್ತಮ ನಟ, ಆದರೆ ಧ್ವನಿ ಸರಿಯಿಲ್ಲ ಎಂಬ ಉತ್ತರ ಸಿಗುತ್ತಿತ್ತು. 15ನೇ ಬಾರಿಯೂ ಸಫಲತೆ ಹೊಂದಲಿಲ್ಲ. ಕೊನೆಗೆ 16ನೇ ನಿರ್ವಪಕ ಇವರೊಂದಿಗೆ ಸಿನಿಮಾ ಮಾಡಲು ಒಪ್ಪಿದಾಗ, ತನ್ನನ್ನು ಏಕೆ ಆಯ್ಕೆ ಮಾಡಿದ್ದೀರೆಂದು ಅಮಿತಾಬ್ ಪ್ರಶ್ನಿಸಿದರು. ಅದಕ್ಕೆ ಆ ನಿರ್ವಪಕ ‘ನೀನೊಬ್ಬ ಉತ್ತಮ ನಟನಲ್ಲ, ಆದರೆ ನಿನ್ನ ಧ್ವನಿ ಅದ್ಭುತ’ ಎಂದರಂತೆ. ಈಗಲೂ ಅಮಿತಾಬ್ ಡೈಲಾಗ್​ಗೆ ಆಯಸ್ಕಾಂತೀಯ ಗುಣವಿದೆ. ಎಲ್ಲಿಯಾದರೂ ದಾರಿಯಲ್ಲಿ ಹೋಗುವಾಗ ಬಚ್ಚನ್ ದನಿ ಕೇಳಿದರೆ ನಮ್ಮ ಕಾಲುಗಳು ಅಲ್ಲೇ ನಿಂತುಬಿಡುತ್ತವೆ. ಒಮ್ಮೆ ಆಲಿಸಿ ಮುಂದೆ ಸಾಗೋಣ ಎನಿಸುತ್ತದೆ. ಹಾಗಾಗಿ ಛಲ ಬಿಡದೆ ಪ್ರಯತ್ನ ಮುಂದುವರಿಸಬೇಕು ಎಂದು ಪ್ರಸಂಗವನ್ನು ಸ್ಮರಿಸಿದರು.

ಪ್ರಸ್ತುತ ಜಗತ್ತಿನೆಲ್ಲೆಡೆ ಕನ್ನಡದ ಓದುಗರ ಸಂಖ್ಯೆತುಂಬಾ ವಿಸ್ತಾರಗೊಂಡಿದೆ. ಡಿಜಿಟಲ್ ಮಾಧ್ಯಮ ಮುಂಚೂಣಿಗೆ ಬಂದಿದೆ. ಸಣ್ಣ ಸುದ್ದಿಯೂ ವಾಟ್ಸ್​ಆಪ್ ಮೂಲಕ ಕ್ಷಣಾರ್ಧದಲ್ಲಿ ಜಗತ್ತಿನಾದ್ಯಂತ ಹರಡಿಬಿಡುತ್ತದೆ. ಹಾಗಾಗಿ ಉತ್ತಮವಾಗಿ ಬರೆಯುವ ಪ್ರಯತ್ನ ಮುಂದುವರಿಸಬೇಕು. ಯಶಸ್ಸಿನ ನಂತರ ಗುರುತರ ಜವಾಬ್ದಾರಿಯನ್ನೂ ಹೊರಬೇಕಿದೆ.

2003-04ರಲ್ಲಿ ನೀನಾಸಂನಲ್ಲಿ ಕೋರ್ಸ್ ಮಾಡಿಕೊಂಡ ಬಳಿಕ ಬರವಣಿಗೆ ಆರಂಭಿಸಿದೆ. ಇಲ್ಲಿಯವರೆಗೆ ಹಲವು ಮಂದಿ ನನಗೆ ಬೆಂಬಲ ನೀಡಿದ್ದಾರೆ. ತಂದೆ-ತಾಯಿ ಇಲ್ಲದ ನನಗೀಗ ಪತ್ನಿ, ಮಗಳು ಬೆಂಬಲವಾಗಿ ನಿಂತಿದ್ದಾರೆ. ಪ್ರಶಸ್ತಿಯನ್ನು ಡಾ. ವಿಜಯ ಸಂಕೇಶ್ವರ ಅವರಿಂದ ಸ್ವೀಕರಿಸಿದ್ದಕ್ಕೆ ಹೆಚ್ಚು ಸಂತೋಷ ಕೊಟ್ಟಿದೆ. ಸದ್ಯ ‘ಅಜ್ಞಾನ ವ್ಯಕ್ತಿ’ ಕಾದಂಬರಿ ಬರೆಯಲು ಆರಂಭಿಸಿದ್ದು, ಶೀಘ್ರ ಪೂರ್ಣಗೊಳಿಸುವ ವಿಶ್ವಾಸ ಇದೆ. ವಿಮರ್ಶಕರು ನೀಡಿರುವಂತೆ ಹೊಸ ಒಳನೋಟವನ್ನು ಪಾಲಿಸುವತ್ತ ದೃಷ್ಟಿ ಹರಿಸುವೆ.

ವೃತ್ತಿಯಿಂದ ಶಿಕ್ಷಕಿಯಾಗಿದ್ದು ಪ್ರವೃತ್ತಿಯಿಂದ ಕಥೆಗಳನ್ನು ಬರೆಯುವಲ್ಲಿ ತೊಡಗಿಸಿಕೊಂಡಿದ್ದೇನೆ. ಶಿವಮೊಗ್ಗದಲ್ಲಿ ಸಮಾನಮನಸ್ಕ ಸ್ನೇಹಿತರು ಸೇರಿ ಬಳಗ ರಚಿಸಿಕೊಂಡು ಬರವಣಿಗೆಯಲ್ಲಿ ನಿರತರಾಗಿದ್ದೇವೆ. ಸಣ್ಣ ಕಥೆಗಳನ್ನು ಬರೆಯುತ್ತಿದ್ದ ನನಗೆ ಸ್ಪರ್ಧೆಗೆ ಕಳುಹಿಸಲು ಭಯವಿತ್ತು. ಕೊನೇ ಗಳಿಗೆಯಲ್ಲಿ ‘ಸಂಕರ’ ಕಥೆ ಕಳುಹಿಸಿದೆ. ಫಲಿತಾಂಶ ಬಂದಾಗ ತುಂಬಾ ಖುಷಿಯಾಯಿತು. ಪ್ರಶಸ್ತಿ ಸಿಕ್ಕಿದ್ದು ಜೀವಮಾನದ ಅಮೂಲ್ಯ ಉಡುಗೊರೆಯಾಗಿದೆ.

"

ಕನ್ನಡದ ಹೊಸ ತಲೆಮಾರಿನ ಬರಹಗಾರರಲ್ಲಿ ಕಥೆ ಬರೆಯುವ ಐಡಿಯಾ ಹೇಗೆ ಹುಟ್ಟುತ್ತದೆ ಎಂಬ ಕುತೂಹಲ ಇತ್ತು. ವಿಜಯವಾಣಿಯ ಕಥಾ ಸ್ಪರ್ಧೆಗೆ ಬಂದಂತಹ ಕಥೆಗಳನ್ನು ಓದಿ ಆ ಕುತೂಹಲ ತಣಿಯಿತು. ಕಥೆಗಾರರು ಕಾದಂಬರಿಯನ್ನೂ ಬರೆಯುವಂತಾಗಬೇಕು. ಬರಹಗಾರರು ಇನ್ನಷ್ಟು ಸತ್ವಯುತವಾಗಿ ಬರವಣಿಗೆ ಕೈಗೊಳ್ಳಬೇಕು. ಜತೆಗೆ ಸೃಜನಶೀಲತೆಯನ್ನೂ ಬೆಳೆಸಿಕೊಳ್ಳುವತ್ತ ಗಮನ ಹರಿಸಬೇಕಿದೆ.

ಕಥಾ ಸ್ಪರ್ಧೆ ವಿಜೇತರು
* ಪ್ರಥಮ ಬಹುಮಾನ ಮೌನದ ದೀಪ - ಅಜೇಯಸಿಂಹ ಕೆ.ವಿ., ಶಿವಮೊಗ್ಗ
* ದ್ವಿತೀಯ ಬಹುಮಾನ ದೀಪಾಲಕ್ಷ್ಮಿಯ ಕೈಗಳು - ಚಂದ್ರಿಕಾ ಹೆಗಡೆ ಮತ್ತಿಹಳ್ಳಿ, ಬೆಂಗಳೂರು
* ತೃತೀಯ ಬಹುಮಾನ ಸಂಕರ - ಸುಮಾ ಕಳಸಾಪುರ, ಶಿವಮೊಗ್ಗ

ಸಮಾಧಾನಕರ ಬಹುಮಾನ

* ಮಾಯಾ ಕೋಲಾಹಲ- ಜಿ.ಪಿ.ಬಸವರಾಜು, ಮೈಸೂರು,
* ಕಾಯಾ . . . ಮನಸಾ - ನಂದಿನಿ ಹೆದ್ದುರ್ಗ, ಸಕಲೇಶಪುರ,
* ಆಸ್ಟ್ರೇಲಿಯಾದಲ್ಲೊಂದು ಊರಾಯಣ - ದತ್ತು ಕುಲಕರ್ಣಿ, ಆಸ್ಟ್ರೇಲಿಯಾ ನಿವಾಸಿ

ಕಥಾ ಸಂಕಲನ ಬಿಡುಗಡೆ

ಸಾಹಿತ್ಯ ಪ್ರಕಾಶನ ಹೊರತಂದಿರುವ ವಿಜಯವಾಣಿ ದೀಪಾವಳಿ ಕಥಾ ಸ್ಪರ್ಧೆ -2024ರ ವಿಜೇತರು, ಮೆಚ್ಚುಗೆ ಪಡೆದವರು, ತೀರ್ಪಗಾರರು ಆಯ್ಕೆ ಮಾಡಿರುವ 18 ಕಥೆಗಳುಳ್ಳ ಸಂಕಲನವನ್ನು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಬಿಡುಗಡೆ ಮಾಡಿದರು. ಶ್ರೀಮತಿ ಲಲಿತಾ ಸಂಕೇಶ್ವರ, ಹಿರಿಯ ವಿಮರ್ಶಕ ಡಾ. ಎಸ್.ಆರ್. ವಿಜಯಶಂಕರ, ಸಾಹಿತ್ಯ ಪ್ರಕಾಶನದ ಮುಖ್ಯಸ್ಥ ಸುಬ್ರಹ್ಮಣ್ಯ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net