ಸದ್ಯದಲ್ಲೇ ಯುಕೆಟಿಎಲ್ ಯೋಜನೆ ಪೂರ್ಣ: ಅಂತಾರಾಜ್ಯ ವಿದ್ಯುತ್ ಗ್ರಿಡ್ ಬಲವರ್ಧನೆ-UKTL

ಯುಕೆಟಿಎಲ್ ಯೋಜನೆ
ಯುಕೆಟಿಎಲ್ ಯೋಜನೆ
Published on
ಬೆಂಗಳೂರು: ಬಹುನಿರೀಕ್ಷಿತ ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಪ್ರಸರಣ ಮಾರ್ಗ ಯೋಜನೆ (ಯುಕೆಟಿಎಲ್) ಸದ್ಯದಲ್ಲೇ ಪೂರ್ಣಗೊಳ್ಳಲಿದೆ. ಈ ಮೂಲಕ ಕರ್ನಾಟಕ ಮತ್ತು ಕೇರಳಕ್ಕೆ ಅಂತಾರಾಜ್ಯ ವಿದ್ಯುತ್ ಗ್ರೀಡ್ ಬಲವರ್ಧನೆಗೆ ಅನುಕೂಲವಾಗಲಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಈ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ. ಯೋಜನೆಯಡಿ ಕರಾವಳಿ ಪ್ರದೇಶದಾದ್ಯಂತ ವಿದ್ಯುತ್ ಸಂಪರ್ಕ, ದೀರ್ಘಕಾಲೀನ ಇಂಧನ ಭದ್ರತೆಯನ್ನು ಕಲ್ಪಿಸಲಾಗುತ್ತಿದೆ. ಆದ್ಯತೆ ಮೇರೆಗೆ ಯೋಜನೆಯನ್ನು ಪೂರ್ಣಗೊಳಿಸಲಾಗುತ್ತಿದೆ. ಇದರಿಂದಾಗಿ ಆದಾಯ ನಷ್ಟವನ್ನು ಸಂಪೂರ್ಣವಾಗಿ ತಗ್ಗಿಸಲಾಗಿದೆ.
ಯೋಜನೆ ಕಾರ್ಯಾರಂಭದ ಬಳಿಕ 115 ಕಿಲೋಮೀಟರ್ 400 ಕೆವಿ (ಕ್ವಾಡ್) ಡಬಲ್ ಸರ್ಕ್ಯೂರ್ಟ್ ವಿದ್ಯುತ್ ಮಾರ್ಗವು ಒಂದು ಸಾವಿರ ಮೆಗಾ ವ್ಯಾಟ್‌ಗಳಿಗಿಂತ ಅಧಿಕ ವಿದ್ಯುತ್ ರವಾನಿಸುವ ಸಾಮರ್ಥ್ಯ ಹೊಂದಲಿದೆ. ಜೊತೆಗೆ, ನವೀಕರಿಸಬಹುದಾದ ಇಂಧನ ಏಕೀಕರಣವನ್ನು ಪ್ರೋತ್ಸಾಹಿಸಲಿದೆ. ವಿದ್ಯುತ್ ಸಚಿವಾಲಯವು ಅಂತಾರಾಜ್ಯ ಪ್ರಸರಣ ವ್ಯವಸ್ಥೆ (ಐಎಸ್‌ಟಿಎಸ್) ಎಂದು ಪರಿಗಣಿಸುವ ಈ ಯೋಜನೆಯನ್ನು ದೇಶದ ದಕ್ಷಿಣ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ಅಗತ್ಯಗಳಿಗೆ ಸ್ಥಿರತೆ ನೀಡಲು ವಿನ್ಯಾಸಗೊಳಿಸಲಾಗಿದೆ. ಇದು ದಕ್ಷಿಣ ಗ್ರಿಡ್‌ನ ಎಸ್1 ವಲಯ (ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ) ಮತ್ತು ಎಸ್2 ವಲಯ (ತಮಿಳುನಾಡು ಮತ್ತು ಕೇರಳ) ನಡುವಿನ ಪ್ರಸರಣ ಕಾರಿಡಾರ್‌ನ ದಟ್ಟಣೆ ತಗ್ಗಲಿದೆ.
ಪ್ರಸರಣ ಕಾರಿಡಾರ್‌ನಿಂದ ಕರ್ನಾಟಕಕ್ಕೆ ಅಗತ್ಯ ಮೂಲಸೌಕರ್ಯ ಸಿಗಲಿದೆ. ವಿದ್ಯುತ್ ಗ್ರಿಡ್‌ನೊಂದಿಗೆ ಸಂಯೋಜಿಸುವವರೆಗೆ ಪ್ರಮುಖ ಬದಲಾವಣೆ ಇದು ಸೂಚಿಸಲಿದೆ. ದಕ್ಷಿಣ ಭಾರತದ ವಿದ್ಯುತ್ ಜಾಲ ಬಲಪಡಿಸುವ ಪ್ರಮುಖ ಸ್ಥಾನದಲ್ಲಿ ಕರ್ನಾಟಕ ಇದೆ. ಬರುವ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಬೆಂಬಲಿತವಾದ ಪ್ರಸರಣ ಯೋಜನೆಗಳನ್ನು ರೂಪಿಸಲಾಗುತ್ತಿದೆ.ಇದರಿಂದ, ಕರ್ನಾಟಕದ ದಕ್ಷಿಣ ಭಾಗಗಳಿಂದ ಹೆಚ್ಚುವರಿ ವಿದ್ಯುತ್ ನವೀಕರಿಸಿದ ಅಂತಾರಾಜ್ಯ ಪ್ರಸರಣ ವ್ಯವಸ್ಥೆಗಳೊಂದಿಗೆ ಉತ್ತರ ಭಾಗಗಳಿಗೆ ಪರಿಣಾಮಕಾರಿಯಾಗಿ ವಿತರಿಸಬಹುದಾಗಿದೆ.
ಆರ್ಥಿಕ ಮತ್ತು ಕೃಷಿ ಸಹಬಾಳ್ವೆ
ಈ ಯೋಜನೆಯು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡಿನ ಫಲವತ್ತಾದ ಕೃಷಿ ಪ್ರದೇಶಗಳ ಮೂಲಕ ಹಾದುಹೋಗಲಿದೆ. ಸುಸ್ಥಿರ ಅಭಿವೃದ್ಧಿ ಹೊಂದಲು ಮತ್ತು ಕೃಷಿ ಮುಂದುವರಿಸಲು ಅನುವು ಮಾಡಿಕೊಡುವ ಕಾರಿಡಾರ್ ಮಾದರಿ ಅನುಸರಿಸಲಾಗುತ್ತದೆ. ಸುರಕ್ಷತಾ ಕಾರಣಗಳಿಂದ ಎತ್ತರದ ಮರವನ್ನು ಪ್ರಸರಣ ಮಾರ್ಗದ ಅಡಿ ಬೆಳೆಸಲಾಗುವುದಿಲ್ಲ. ಆದರೆ, ರೈತರು ಕಾರಿಡಾರ್‌ನಲ್ಲಿ ಅಲ್ಪಾವಧಿಯ ಬೆಳೆ ಬೆಳೆಯಲು ಅನುಮತಿ ಕೊಡಲಾಗಿದೆ. ಇದೇ ರೀತಿಯ ಪ್ರಸರಣ ಕಾರಿಡಾರ್‌ಗಳನ್ನು ಹೊಂದಿರುವ ಶಿವಮೊಗ್ಗ ಸೇರಿ ಇತರ ಪ್ರದೇಶಗಳಲ್ಲಿ ರೈತರು ತರಕಾರಿ, ಶುಂಠಿ ಮತ್ತು ಜೋಳ ಬೆಳೆಯುತ್ತಿದ್ದಾರೆ. ಯೋಜನೆಯು ರೈತ ಸಮುದಾಯದ ಜೀವನೋಪಾಯಕ್ಕೆ ಅಡ್ಡಿಪಡಿಸುತ್ತಿಲ್ಲ. ಬೆಳೆ ವೈವಿಧ್ಯೀಕರಣ, ಪ್ರದೇಶದ ಮೂಲಸೌಕರ್ಯ ನವೀಕರಣ ಮತ್ತು ಆಧುನೀಕರಿಸಲು ಅವಕಾಶ ನೀಡಲಾಗುತ್ತಿದೆ.
ನಿರಂತರ ವಿದ್ಯುತ್ ಲಭ್ಯತೆ:
ಯುಕೆಟಿಎಲ್ ಯೋಜನೆಯು ದಕ್ಷಿಣ ಭಾರತದ ಇಂಧನ ಜಾಲಕ್ಕೆ ಬಲ ನೀಡಲಿದೆ. ಸಮಗ್ರ, ಪರಿಣಾಮಕಾರಿ ಪ್ರಸರಣದ ಹೆದ್ದಾರಿ ನಿರ್ಮಿಸುವ ಮೂಲಕ ಕರ್ನಾಟಕ ಮತ್ತು ಕೇರಳ ರಾಜ್ಯಗಳಿಗೆ ನಿರಂತರವಾಗಿ ವಿದ್ಯುತ್ ಲಭ್ಯತೆ ದೊರೆಯಲಿದೆ. ಇದು ಕೈಗಾರಿಕಾ ಬೆಳವಣಿಗೆ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ವಿಶ್ಲೇಷಕರ ಅಭಿಪ್ರಾಯವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net