ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳ ನ್ಯಾಯಸಮ್ಮತ ಹೋರಾಟಕ್ಕೆ ಬೆಂಬಲ ನೀಡಿದ್ದಕ್ಕಾಗಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಶಾಸಕ ಯಶ್ಪಾಲ್ ಸುವರ್ಣ ಅವರು "ರಾಹುಲ್ ಗಾಂಧಿ 24 ಗಂಟೆಗಳ ಕಾಲ ಡ್ರಗ್ಸ್ ನಶೆಯಲ್ಲಿರುತ್ತಾರೆ" ಎಂಬ ನಿರಾಧಾರ ಹಾಗೂ ಅವಹೇಳನಕಾರಿ ಆರೋಪ ಮಾಡಿರುವುದು ಮಾತ್ರವಲ್ಲದೆ, "ರಾಹುಲ್ ಗಾಂಧಿ ವಂಶವನ್ನು ಧ್ವಂಸ ಮಾಡುತ್ತೇವೆ" ಎಂದು ಬಹಿರಂಗವಾಗಿ ಬೆದರಿಕೆಯ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ. ಈ ಭಾಷಣದ ವಿಡಿಯೋ ಸಾಕ್ಷ್ಯವೂ ಲಭ್ಯವಿದ್ದು, ಸಂಬಂಧಪಟ್ಟ ತನಿಖಾ ಸಂಸ್ಥೆಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಬೇಕು. ಅಷ್ಟೇ ಅಲ್ಲದೆ, ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಇತರ ಬಿಜೆಪಿ ಶಾಸಕರು ಉಪಸ್ಥಿತರಿದ್ದರೂ ಇಂತಹ ದ್ವೇಷಪೂರಿತ ಹಾಗೂ ಬೆದರಿಕೆ ಒಡ್ಡುವ ಹೇಳಿಕೆಯನ್ನು ಖಂಡಿಸದೆ ಮೌನ ವಹಿಸಿರುವುದು ಸಹ ಅಷ್ಟೇ ಖಂಡನೀಯ. ಜನಪ್ರತಿನಿಧಿಗಳ ಈ ಮೌನವನ್ನು ಪರೋಕ್ಷ ಬೆಂಬಲವೆಂದೇ ಸಾರ್ವಜನಿಕರು ಅರ್ಥೈಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಾದ ನೈತಿಕ ಹೊಣೆಗಾರಿಕೆ ಹೊಂದಿದ್ದಾರೆ.