ದೋಣಿ ಮಗುಚಿ ಇಬ್ಬರು ಯುವಕರು ನೀರುಪಾಲು

ಮೃತ ರಾಯಲ್ ಮತ್ತು ಗಣೇಶ್
ಮೃತ ರಾಯಲ್ ಮತ್ತು ಗಣೇಶ್
Published on
ಮಂಗಳೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜತ್ತಬೈಲ್‌ನಲ್ಲಿ ಬುಧವಾರ ಮುಂಜಾನೆ ಮೀನುಗಾರಿಕೆಗೆ ತೆರಳಿದ್ದಾಗ ದೋಣಿ ಮಗುಚಿ ಬಿದ್ದ ಪರಿಣಾಮ ಇಬ್ಬರು ಯುವಕರು ಫಲ್ಗುಣಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಕುಂಜತ್ತಬೈಲ್ ನಿವಾಸಿಗಳಾದ ಗಣೇಶ್ (28) ಮತ್ತು ವಿನ್ಸೆಂಟ್ ಫರ್ನಾಂಡಿಸ್ ಹಾಗೂ ಜಸಿಂತಾ ಫರ್ನಾಂಡಿಸ್ ದಂಪತಿಯ ಪುತ್ರ ರಾಯಲ್ (24) ಮೃತಪಟ್ಟವರು.
ಬುಧವಾರ ಮುಂಜಾನೆ ಸುವಾರು 1.30ರ ವೇಳೆಗೆ ಗಣೇಶ್, ರಾಯಲ್ ಮತ್ತು ನಿತೇಶ್ (29) ಈ ಮೂವರು ಯುವಕರು ಸಣ್ಣ ನಾಡದೋಣಿಯಲ್ಲಿ ಮೀನುಗಾರಿಕೆಗಾಗಿ ನದಿಯಲ್ಲಿ ಹೋಗುತ್ತಿದ್ದರು. ದೋಣಿಯು ನದಿಯ ಮಧ್ಯಭಾಗಕ್ಕೆ ತಲುಪಿದಾಗ ಹಠಾತ್ತಾಗಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಈ ವೇಳೆ ದೋಣಿಯಲ್ಲಿದ್ದ ಮೂವರೂ ನೀರಿನಲ್ಲಿ ಮುಳುಗಿದ್ದಾರೆ.
ದೋಣಿಯಲ್ಲಿದ್ದ ನಿತೇಶ್ ಹೇಗೋ ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಗಣೇಶ್ ಮತ್ತು ರಾಯಲ್ ಅವರಿಗೆ ಈಜು ಬಾರದ ಕಾರಣ ಅವರು ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ.

ಓರ್ವನ ಮೃತದೇಹ ಪತ್ತೆ

ಘಟನೆ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯ ಈಜು ತಜ್ಞರು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದರು. ಬುಧವಾರ ಮಧ್ಯಾಹ್ನದ ವೇಳೆಗೆ ಗಣೇಶ್ ಅವರ ಮೃತದೇಹ ಪತ್ತೆಯಾಗಿದ್ದು, ರಾಯಲ್ ಅವರ ಮೃತದೇಹಕ್ಕಾಗಿ ಹುಡುಕಾಟ ಮುಂದುವರಿದಿದೆ.
ಕದ್ರಿ ಅಗ್ನಿಶಾಮಕ ಠಾಭೆಯ 6 ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿದಂತೆ ಮೂರು ದೋಣಿಗಳಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೂ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬಡಕುಟುಂಬದ ಯುವಕ

ಬಡಕುಟುಂಬದ ಗಣೇಶ ಡೆಲಿವರಿ ಬಾಯ್ ಆಗಿ ಕೆಲಸ ವಾಡಿಕೊಂಡಿದ್ದರು. ಇವರು ತಂದೆ, ತಾಯಿ, ತಂಗಿ ಮತ್ತು ತಮ್ಮನನ್ನು ಅಗಲಿದ್ದಾರೆ. ರಾಯಲ್ ಒಬ್ಬನೇ ಪುತ್ರ. ಈತ ಕ್ಯಾಟರಿಂಗ್ ಕೆಲಸ ವಾಡಿಕೊಂಡಿದ್ದರು. ತಾಯಿ ಕೂಡ ಕ್ಯಾಟರಿಂಗ್‌ನಲ್ಲೇ ಕೆಲಸ ಮಾಡಿಕೊಂಡಿದ್ದು, ತಂದೆ ಕೂಲಿ ಕಾರ್ಮಿಕರಾಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net