ಸ್ಕಾರ್ಪಿಯೋ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ‘ನೀವು ಭಯೋತ್ಪಾದಕರಾ’ ಎಂದು ಪ್ರಶ್ನಿಸಿ ಯುವಕರಿಬ್ಬರ ಮೇಲೆ ಏಕಾಏಕಿ ಬ್ಯಾಟ್‌ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಎಇಸಿಎಸ್ ಲೇಔಟ್ ನಿವಾಸಿ ಸಂದೀಪ್ ಕುಮಾರ್ ಹಾಗೂ ರೋಹಿತ್ ಕುಮಾರ್ ಹಲ್ಲೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಯ ವಿರುದ್ಧ ಎಚ್‌ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆ.6ರಂದು ಬೆಳಗ್ಗೆ 4.15ರ ವೇಳೆಗೆ ಎಇಸಿಎಸ್ ಲೇಔಟ್‌ನಲ್ಲಿನ ಇಂಡಿಯನ್ ಬ್ಯಾಂಕ್ ಕಟ್ಟಡದ ಎದುರು ಹಲ್ಲೆಗೊಳಗಾದ ಇಬ್ಬರು ತಮ್ಮ ಸ್ನೇಹಿತರಿಗಾಗಿ ಕಾಯುತ್ತಿದ್ದರು. ಈ ವೇಳೆ ಮಹಿಂದ್ರಾ ಸ್ಕಾರ್ಪಿಯೋ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬನಿಂದ ಕೃತ್ಯ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.
ಕಾರಿನಿಂದ ಇಳಿದ ಆರೋಪಿ, ಏಯ್ ಬನ್ನಿ ಇಲ್ಲಿ ‘ನೀವು ಭಯೋತ್ಪಾದಕರೇ ಎಂದಿದ್ದಾನೆ. ಆಗ ಸಂತ್ರಸ್ತರು, ನಾವು ಭಾರತೀಯರು ಎಂದಿದ್ದರು. ಆಗ ಆರೋಪಿ ಗುರುತಿನ ಚೀಟಿ ತೋರಿಸು ಎಂದಿದ್ದಾರೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಬೇಸ್ ಬಾಲ್ ಬ್ಯಾಟ್‌ನಿಂದ ಹಲ್ಲೆ ಮಾಡಿದ್ದಾನೆ. ದೃಶ್ಯವು ಸ್ಥಳದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಠಾಣೆಗೆ ದೂರು ಸಲ್ಲಿಸಲಾಗಿದೆ.
ಸಂತ್ರಸ್ತ ಯುವಕರು ನೀಡಿದ ದೂರಿನ ಮೇರೆಗೆ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿ ಬಂದಿದ್ದ ಕಾರಿನ ನೋಂದಣಿ ಸಂಖ್ಯೆ ಹಾಗೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ದೃಶ್ಯಗಳನ್ನು ಸಂಗ್ರಹಿಸಿ ತನಿಖೆ ನಡೆಸಿದ್ದಾರೆ.