

ಬೆಂಗಳೂರು : ಕರ್ತವ್ಯ ಮತ್ತು ಕಾಯಕದ ನಡುವೆ ವ್ಯತ್ಯಾಸವಿದೆ. ನಮ್ಮ ಕರ್ತವ್ಯವನ್ನು ಸಮಾಜಕ್ಕಾಗಿ ನಿರ್ವಹಿಸುವುದು ಸಹಜ. ಆದರೆ ಕರ್ತವ್ಯದ ಫಲವನ್ನು ಸಮಾಜದೊಂದಿಗೆ ಹಂಚಿಕೊಂಡಾಗ ಅದು ಕಾಯಕವಾಗಿ ಪರಿವರ್ತನೆಯಾಗುತ್ತದೆ. ಅದು ನಿಜವಾದ ಸಾಧನೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ಲೇಷಿಸಿದ್ದಾರೆ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ರಮಣಶ್ರೀ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಿದ್ದ ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಅಂಕಿಗಳ (ಹಣ) ಸಂಬಂಧ ಹೆಚ್ಚಾದಂತೆ ಅಕ್ಷರ ಹಾಗೂ ಚಿಂತನೆಯೊಂದಿಗಿನ ಸಂಬಂಧ ಕಡಿಮೆಯಾಗಬಾರದು. ಬುದ್ಧಿಶಕ್ತಿ, ವಿವೇಕ ಮತ್ತು ಚಿಂತನೆ ಬೆಳೆಸುವ ಅಕ್ಷರ ಸಂಸ್ಕೃತಿಯನ್ನು ಜೀವನದುದ್ದಕ್ಕೂ ಉಳಿಸಿಕೊಳ್ಳಬೇಕು. ಆರ್ಥಿಕ ಸಾಧನೆಯ ಜತೆಗೆ ಸಾಮಾಜಿಕ ಜವಾಬ್ದಾರಿಯನ್ನೂ ನಿರ್ವಹಿಸಬೇಕು. ವ್ಯಾಪಾರದ ಅಂತಿಮ ಉದ್ದೇಶ ಲಾಭ ಗಳಿಸುವುದಾದರೂ; ತತ್ತ್ವಶಾಸ್ತ್ರದ ಆಶಯ ಮಾನವೀಯ ಮೌಲ್ಯಗಳನ್ನು ಬೆಳೆಸುವುದಾಗಿದೆ. ರಮಣಶ್ರೀ ಸಮೂಹದ ಷಡಕ್ಷರಿ ಅವರು ವ್ಯಾಪಾರದ ಮೂಲಕ ಲಾಭ ಗಳಿಸುವುದರ ಜತೆಗೆ ಸಮಾಜಮುಖಿ ಕಾರ್ಯಗಳಿಂದ ಪುಣ್ಯವನ್ನೂ ಸಂಪಾದಿಸುತ್ತಿದ್ದಾರೆ. ಆರ್ಥಿಕ ಚಿಂತನೆ ಮತ್ತು ತಾತ್ವಿಕ ಚಿಂತನೆಗಳನ್ನು ಸಮನ್ವಯಗೊಳಿಸಿರುವ ಅವರ ಬದುಕು ಅನುಕರಣೀಯ. ಅವರು ತಮ್ಮ ಕಾರ್ಯಚಟುವಟಿಕೆಗಳ ಮೂಲಕ ಕರ್ತವ್ಯವನ್ನು ಕಾಯಕವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.
ಪಾಶ್ಚಿಮಾತ್ಯರು ವಿಜ್ಞಾನವನ್ನು ಆಳವಾಗಿ ಅಧ್ಯಯನ ಮಾಡಿದರೆ, ಭಾರತ ಆಧ್ಯಾತ್ಮ ಮತ್ತು ತತ್ತ್ವಚಿಂತನೆಯಲ್ಲಿ ಆಳವಾದ ಪರಂಪರೆ ಹೊಂದಿದೆ. ಜಗತ್ತನ್ನೇ ಗೆಲ್ಲಬೇಕೆಂಬುದು ಒಂದು ಚಿಂತನೆಯಾದರೆ, ಇರುವ ಬದುಕಿನಲ್ಲಿ ಸಂತೋಷ ಮತ್ತು ನೆಮ್ಮದಿಯನ್ನು ಕಂಡುಕೊಳ್ಳುವುದು ಭಾರತೀಯ ದರ್ಶನದ ವಿಶೇಷತೆ. ಬಸವಣ್ಣನವರ ಕಲ್ಯಾಣ ಸಮಾಜದ ಪರಿಕಲ್ಪನೆಯೂ ಇಂತಹ ಸಾಮಾಜಿಕ ಮತ್ತು ಲೌಕಿಕ ಕಲ್ಯಾಣದ ಆಶಯವನ್ನು ಒಳಗೊಂಡಿದೆ ಎಂದು ಬೊಮ್ಮಾಯಿ ವಿವರಿಸಿದರು.
ಸಮಾರಂಭದಲ್ಲಿ ಎಸ್.ಷಡಕ್ಷರಿಯವರ ಪ್ರಸಿದ್ಧ ‘ಕ್ಷಣಹೊತ್ತು ಆಣಿಮುತ್ತು’ ಪುಸ್ತಕದ 16ನೇ ಆವೃತ್ತಿಯನ್ನು ಕೇಂದ್ರ ಸಚಿವ ವಿ.ಸೋಮಣ್ಣ ಬಿಡುಗಡೆ ಮಾಡಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ್, ಕಸಾಪ ಮಾಜಿ ಅಧ್ಯಕ್ಷ ಮನು ಬಳಿಗಾರ್, ಹಿರಿಯ ಪತ್ರಕರ್ತರಾದ ವಿಶ್ವೇಶ್ವರ ಭಟ್, ರವಿಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
ರಮಣಶ್ರೀ ಪ್ರಶಸ್ತಿ ಪುರಸ್ಕೃತರು
21 ವರ್ಷದ ರಮಣಶ್ರೀ ಶರಣ ಪ್ರಶಸ್ತಿ ಜೀವಮಾನ ಸಾಧನೆಗಾಗಿ ಡಾ. ಗಂಗಾಂಬಿಕಾ ಅಕ್ಕ, ಹಿರಿಯ ಶ್ರೇಣಿಯಲ್ಲಿ ಡಾ. ಕೆ.ರವೀಂದ್ರನಾಥ, ಡಾ.ರಾಜೇಂದ್ರ ಎಸ್ ಗಡಾದ್, ಪಂಡಿತ್ ಕೈವಲ್ಯ ಕುಮಾರ್ ಗುರುವ, ಡಾ. ಬಸವರಾಜ ಗುರಪ್ಪ ಕೊನೇಕ್ ಉತ್ತೇಜನ ಪ್ರಶಸ್ತಿ ವಿಭಾಗದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಕೆ.ಎಂ. ವಸುಂಧರಾ, ನಗರ್ಲೆ ಶಿವಕುಮಾರ್, ರಾಜೇಶ್ವರಿ ಸಾದರ, ಕವಿತಾ ಸಾದರ, ಡಾ.ವಿಜಯಲಕ್ಷ್ಮಿ ಪೂಚೇರ, ವಚನ ಕುಮಾರಸ್ವಾಮಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೀವನ ಮಾನ ಸಾಧನೆಗೆ 50 ಸಾವಿರ, ಹಿರಿಯ ಶ್ರೇಣಿಗೆ 40 ಸಾವಿರ, ಉತ್ತೇಜನ ವಿಭಾಗದ ಪ್ರಶಸ್ತಿಗೆ 20 ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ನೀಡಲಾಯಿತು.