ಬೆಂಗಳೂರು: ಇತ್ತೀಚೆಗಷ್ಟೇ ಕೇರಳ ಮೂಲದ ಶರಣ್ಯ ಎಂಬ ಟೆಕ್ಕಿ, ಕೊಡಗಿನ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದರು. ನಾಲ್ಕು ದಿನಗಳ ಸತತ ಹುಡುಕಾಟ ಬಳಿಕ ಈಕೆ ಸುರಕ್ಷಿತವಾಗಿ ವಾಪಾಸ್ ಆಗಿದ್ದು, ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಕೇರಳದ ಶ್ರೀನಂದಾ (15) ಎಂಬ ಬಾಲಕಿ, ತನ್ನ 40 ಮಂದಿಯ ಕುಟುಂಬದೊಂದಿಗೆ ಚಿಕ್ಕಮಗಳೂರಿನ ಮಾಣಿಕ್ಯಧಾರಾ ಜಲಪಾತದ ಬಳಿ ಪ್ರವಾಸಕ್ಕೆ ಬಂದಾಗ 2000 ಅಡಿ ಕೆಳಗೆ ಬಿದ್ದು ಸಾವನ್ನಪ್ಪಿದ ಪ್ರಕರಣಗಳಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಅರಣ್ಯ ಇಲಾಖೆ, ಇದೀಗ ಚಾರಣ ಪ್ರಿಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಒಂದಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ.