ಯಳಂದೂರು: ತಾಲೂಕಿನ ಪ್ರಸಿದ್ಧ ಬಿಳಿಗಿರಿರಂಗನಬೆಟ್ಟಕ್ಕೆ ಗುರುವಾರ ಕ್ರಿಸ್ಮಸ್ ಸೇರಿದಂತೆ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಪ್ರವಾಸಿಗರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರಲ್ಲದೇ ಪ್ರಕೃತಿ ಸೌಂದರ್ಯವನ್ನು ಸವಿದರು.
ಪ್ರಸಿದ್ಧ ಬಿಳಿಗಿರಿರಂಗನಬೆಟ್ಟದಲ್ಲಿ ಗುರುವಾರ ಬೆಳಗ್ಗೆಯಿಂದ ಬಹುತೇಕ ಪ್ರವಾಸಿಗರು ದೂರದ ಊರುಗಳಾದ ಮೈಸೂರು, ಬೆಂಗಳೂರು, ಮಂಡ್ಯ ಸೇರಿದಂತೆ ಇತರೆ ಕಡೆಗಳಿಂದ ಬೆಟ್ಟಕ್ಕೆ ಆಗಮಿಸಿದ್ದರು. ಇದರಿಂದ ಬೆಟ್ಟದ ರಥದ ಬೀದಿ ಹಾಗೂ ದೇವಸ್ಥಾನದ ಪಾದದ ಸಮೀಪ ವಾಹನಗಳು ಹೆಚ್ಚಾಗಿ ಕಂಡುಬಂದವು. ಅಲ್ಲದೆ ದೇವಸ್ಥಾನದಲ್ಲಿಯೂ ಸಹ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು. ದೇವಸ್ಥಾನದಲ್ಲಿ ದೇವರ ದರ್ಶನ ಪಡೆದ ಜನರು ನಂತರ ದೇವಸ್ಥಾನದ ಹಿಂಭಾಗವಿರುವ ಕಮರಿಯಲ್ಲಿ ಪ್ರಾಕೃತಿಕ ಸೌಂದರ್ಯ ಸವಿದರು. ಜತೆಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ನಂತರ ಕೆ.ಗುಡಿಗೂ ಪ್ರವಾಸಿಗರು ತೆರಳಿ ಪ್ರಕೃತಿ ಸೌಂದರ್ಯ ಸವಿದರು.
ದೇಗುಲದ ದಾಸೋಹ ಭವನದಲ್ಲೂ ಭಕ್ತರ ಸಂಖ್ಯೆ ಹೆಚ್ಚಿತ್ತು. ಸರತಿ ಸಾಲಿನಲ್ಲಿ ಭಕ್ತರು ಪ್ರಸಾದವನ್ನು ಪಡೆಯಲು ನಿಂತಿದ್ದ ದೃಶ್ಯ ಕಂಡುಬಂತು. ವಾಹನ ದಟ್ಟಣೆ ಅಧಿಕವಾಗಿದ್ದರಿಂದ ದೇಗುಲದ ಸಮೀಪ ತೆರಳುವ ರಸ್ತೆಯಲ್ಲಿ ಕೆಲ ಕಾಲ ವಾಹನ ಸವಾರರು ಪರದಾಡುವ ಸ್ಥಿತಿ ಕಂಡು ಬಂತು. ಯಳಂದೂರು ಪಟ್ಟಣದ ಬಸ್ ನಿಲ್ದಾಣದಲ್ಲೂ ಕೂಡ ಬಿಳಿಗಿರಿರಂಗನಬೆಟ್ಟಕ್ಕೆ ತೆರಳುವ ಬಸ್‌ಗಳಲ್ಲಿ ಜನಸಂದಣಿ ಕಂಡುಬಂತು.