ಕಲೆಕ್ಷನ್‌, ಕರಪ್ಷನ್‌, ಕಮಿಷನ್‌ನಲ್ಲಿಯೇ 3 ವರ್ಷ ದೂಡಿ ಈಗ ರಾಜೀನಾಮೆ ಎಂಬ ಅಲ್ಪ ವಿರಾಮ: ಕಾಂಗ್ರೆಸ್​ ವಿರುದ್ಧ ಬಿಜೆಪಿ ವಾಗ್ದಾಳಿ! BJP Attack On Congress

ಕಲೆಕ್ಷನ್‌, ಕರಪ್ಷನ್‌, ಕಮಿಷನ್‌ನಲ್ಲಿಯೇ 3 ವರ್ಷ ದೂಡಿ ಈಗ ರಾಜೀನಾಮೆ ಎಂಬ ಅಲ್ಪ ವಿರಾಮ: ಕಾಂಗ್ರೆಸ್​ ವಿರುದ್ಧ ಬಿಜೆಪಿ ವಾಗ್ದಾಳಿ! BJP Attack On Congress
ಕಲೆಕ್ಷನ್‌, ಕರಪ್ಷನ್‌, ಕಮಿಷನ್‌ನಲ್ಲಿಯೇ 3 ವರ್ಷ ದೂಡಿ ಈಗ ರಾಜೀನಾಮೆ ಎಂಬ ಅಲ್ಪ ವಿರಾಮ: ಕಾಂಗ್ರೆಸ್​ ವಿರುದ್ಧ ಬಿಜೆಪಿ ವಾಗ್ದಾಳಿ! BJP Attack On Congress
Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಸಲ್ಲಿಸುತ್ತಿದ್ದಂತೆ ಕಾಂಗ್ರೆಸ್​ ವಿರುದ್ಧ ವಿಪಕ್ಷ ಬಿಜೆಪಿ ವಾಗ್ದಾಳಿ
  • ಕಲೆಕ್ಷನ್, ಕರಪ್ಷನ್ ಮತ್ತು ಕಮಿಷನ್ ದಂಧೆಯಲ್ಲೇ ಕಾಲ ದೂಡಿದ ಕಾಂಗ್ರೆಸ್ ಎಂದು ಕಿಡಿಕಾರಿದ ಬಿಜೆಪಿ
  • ನೂತನವಾಗಿ ಯಾರೇ ಸಿಎಂ ಆಗಿ ಬಂದರೂ ಕರ್ನಾಟಕಕ್ಕೆ ನಯಾಪೈಸೆ ಪ್ರಯೋಜನ ಇಲ್ಲ ಎಂದ ವಿಪಕ್ಷ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಸಲ್ಲಿಸುತ್ತಿದ್ದಂತೆ ಇತ್ತ ವಿಪಕ್ಷ ಬಿಜೆಪಿ, ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ( BJP Attack On Congress ) ನಡೆಸಿದೆ. ಕಳೆದ ಮೂರು ವರ್ಷಗಳಿಂದ ಕೇವಲ ಕಲೆಕ್ಷನ್, ಕರಪ್ಷನ್ ಮತ್ತು ಕಮಿಷನ್ ದಂಧೆಯಲ್ಲೇ ಕಾಲ ದೂಡಿದ ಕಾಂಗ್ರೆಸ್ ಸರ್ಕಾರ, ಈಗ ರಾಜೀನಾಮೆ ಎಂಬ ನಾಟಕವಾಡಿ ಅದಕ್ಕೊಂದು ಅಲ್ಪವಿರಾಮ ಇಟ್ಟಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.
ಸಿಎಂ ಕುರ್ಚಿಯಿಂದ ಕೆಳಗಿಳಿಯುತ್ತಿರುವುದು ನೈತಿಕತೆಯಿಂದಲ್ಲ, ಬದಲಿಗೆ ಸಾಲು ಸಾಲು ಹಗರಣಗಳ ಆಡಳಿತದ ವೈಫಲ್ಯದಿಂದ ಎಂದು ಜರೆದಿರುವ ಕೇಸರಿ ಪಡೆ, ಈ ರಾಜೀನಾಮೆ ಪ್ರಹಸನವು ಸರ್ಕಾರದ ಭ್ರಷ್ಟಾಚಾರದ ಸರಣಿಗೆ ಮುಕ್ತಿ ನೀಡಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ತೀಕ್ಷ್ಣವಾಗಿ ಕಿಡಿಕಾರಿದೆ.
ಸಿಎಂ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ತನ್ನ ಎಕ್ಸ್​ ಖಾತೆಯಲ್ಲಿ ಕಾಂಗ್ರೆಸ್​ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ, ಕರ್ನಾಟಕ ಕಾಂಗ್ರೆಸ್ಸಿನ ಕುರ್ಚಿ ಕಚ್ಚಾಟದ ಪ್ರಹಸನಕ್ಕೆ ತಾತ್ಕಾಲಿಕ ಅಂತ್ಯ ದೊರೆತಿದೆ. ಆದರೆ ಇದರಿಂದ ಕನ್ನಡಿಗರಿಗೆ ನಯಾಪೈಸೆ ಪ್ರಯೋಜನ ಇಲ್ಲ ಎಂದು ಜರಿದಿದೆ.
ಕಾಂಗ್ರೆಸ್​ ಸರ್ಕಾರದ ಮೂರು ವರ್ಷಗಳ ಸಾಧನೆ ಎಂದರೆ ಅದು ದಲಿತರ ಹಣ ದುರ್ಬಳಕೆ, ವಾಲ್ಮೀಕಿ ನಿಗಮದ ಹಣ ಲೂಟಿ, ಯುವಕರಿಗೆ ಟೋಪಿ, ರೈತರಿಗೆ ನೇಣು ಕುಣಿಕೆ, ಜನಸಾಮಾನ್ಯರಿಗೆ ಬೆಲೆ ಏರಿಕೆ, ಕರ್ನಾಟಕಕ್ಕೆ ಸಾಲದ ಶೂಲ ಹೊದಿಕೆ. ಕರ್ನಾಟಕದ ಅಭಿವೃದ್ಧಿಯನ್ನು ಸಂಪೂರ್ಣ ಸ್ತಬ್ಧಗೊಳಿಸಿ, ಕಲೆಕ್ಷನ್‌-ಕರಪ್ಷನ್‌-ಕಮಿಷನ್‌ನಲ್ಲಿಯೇ ಮೂರು ವರ್ಷ ದೂಡಿ, ಈಗ ರಾಜೀನಾಮೆ ಎಂಬ ಅಲ್ಪ ವಿರಾಮ ಇಟ್ಟಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.
ನೂತನವಾಗಿ ಯಾರೇ ಸಿಎಂ ಆಗಿ ಬಂದರೂ, ಕನ್ನಡಿಗರಿಗಾಗಲಿ, ಕರ್ನಾಟಕಕ್ಕಾಗಲಿ ನಯಾಪೈಸೆ ಪ್ರಯೋಜನ ಇಲ್ಲ. ಬಡವರು, ಶ್ರಮಿಕರು, ರೈತರು, ಯುವಕರು, ಮಹಿಳೆಯರು, ದೀನ-ದಲಿತರು, ಹಿಂದುಳಿದವರನ್ನು ಹಿಂಸಿಸಿ, ಶೋಷಿಸಿ ಸರ್ಕಾರ ನಡೆಸುವ ಇವರ ಪ್ರವೃತ್ತಿ ಮುಂದುವರೆಯುತ್ತದೆ ಹೊರತು ಬದಲಾಗುವುದಿಲ್ಲ. ಕರ್ನಾಟಕವನ್ನು ಸಂಪೂರ್ಣ ದಿವಾಳಿ ಮಾಡುವುದು ಹಾಗೂ ಕಾಂಗ್ರೆಸ್‌ ಹೈಕಮಾಂಡಿಗೆ ಕರ್ನಾಟಕವನ್ನು ಎಟಿಎಂ ಮಾಡುವುದು ಎರಡೇ ಇವರ ಅಜೆಂಡಾ. ಹಾಗಾಗಿ, ಆದಷ್ಟು ಬೇಗ ಈ ಜನವಿರೋಧಿ ಸರ್ಕಾರ ತೊಲಗಿದರೆ ಕನ್ನಡಿಗರಿಗೆ ನೆಮ್ಮದಿಯ ದಿನ ಸಿಗಲಿದೆ ಎಂದು ಬಿಜೆಪಿ ಎಕ್ಸ್​ ಖಾತೆಯಲ್ಲಿ ವಾಗ್ದಾಳಿ ನಡೆಸಿದೆ.
ರಾಜ್ಯಪಾಲರ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ( CM Siddaramaiah ) ಅವರು ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ತೀವ್ರ ರಾಜಕೀಯ ಚರ್ಚೆ ಹಾಗೂ ವದಂತಿಗಳಿಗೆ ತೆರೆ ಎಳೆದಿರುವ ಸಿದ್ದರಾಮಯ್ಯ, ಇಂದು ರಾಜಭವನಕ್ಕೆ ತೆರಳಿ ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದಾರೆ. ಆದರೆ, ರಾಜೀನಾಮೆ ಸಲ್ಲಿಕೆಯ ಈ ಮಹತ್ವದ ಕ್ಷಣದಲ್ಲಿ ರಾಜಪಾಲರು ಸ್ಥಳದಲ್ಲಿ ಲಭ್ಯವಿಲ್ಲದ ಕಾರಣ, ಸಿಎಂ ತಮ್ಮ ಪತ್ರವನ್ನು ರಾಜ್ಯಪಾಲರ ಅನುಪಸ್ಥಿತಿಯಲ್ಲೇ ಅವರ ವಿಶೇಷ ಕಾರ್ಯದರ್ಶಿಗೆ (ಸೆಕ್ರೆಟರಿ) ಸಲ್ಲಿಕೆ ಮಾಡಿದ್ದಾರೆ.
ಸದ್ಯ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ತಲುಪಿಸಿದ್ದಾರಾದರೂ, ತಾಂತ್ರಿಕವಾಗಿ ಸಿಎಂ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಸಾಂವಿಧಾನಿಕ ನಿಯಮಗಳ ಪ್ರಕಾರ ರಾಜ್ಯಪಾಲರು ಖುದ್ದಾಗಿ ಈ ಪತ್ರವನ್ನು ಪರಿಶೀಲಿಸಿ, ಅಂಗೀಕರಿಸುವವರೆಗೂ ಸಿದ್ದರಾಮಯ್ಯ ಅವರ ರಾಜೀನಾಮೆ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ. ರಾಜ್ಯಪಾಲರು ಈ ಪತ್ರವನ್ನು ಅಧಿಕೃತವಾಗಿ ಸ್ವೀಕರಿಸಿ, ಅಂಗೀಕಾರದ ಮುದ್ರೆ ಒತ್ತಿದ ನಂತರವಷ್ಟೇ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯ ಅಥವಾ ಮುಂದಿನ ಪರ್ಯಾಯ ರಾಜಕೀಯ ವ್ಯವಸ್ಥೆಯ ಅಧಿಕೃತ ಪ್ರಕ್ರಿಯೆಗಳು ಆರಂಭವಾಗಲಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net