ಸಾಮಾಜಿಕ ಬಹಿಷ್ಕಾರಕ್ಕೆ ಮೂರು ವರ್ಷ ಕಾರಾಗೃಹ ಶಿಕ್ಷೆ

ಎಚ್​.ಸಿ. ಮಹದೇವಪ್ಪ
ಎಚ್​.ಸಿ. ಮಹದೇವಪ್ಪ
Published on

ಪ್ರಮುಖ ಮುಖ್ಯಾಂಶಗಳು

  • ದಂಡದ ಮೊತ್ತ ಬಾಧಿತರಿಗೆ ಪರಿಹಾರವಾಗಿ ಪಾವತಿ
  • ಕರ್ನಾಟಕ ಸಾಮಾಜಿಕ ಬಹಿಷ್ಕಾರ ಬಿಲ್ ಮಂಡನೆ
ಬೆಳಗಾವಿ: ರಾಜ್ಯದಲ್ಲಿ ಇನ್ಮುಂದೆ ಯಾವುದೇ ವ್ಯಕ್ತಿ ಅಥವಾ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರವು ಕೆಟ್ಟ ಆಚರಣೆಯಾಗಲಿದೆ. ಇಂತಹ ಕೃತ್ಯದಲ್ಲಿ ಭಾಗಿಯಾದವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ, ಒಂದು ಲಕ್ಷ ರೂ. ದಂಡ ವಿಧಿಸಲಾಗುತ್ತದೆ.

ನ್ಯಾಯಾಲಯದ ಹೊರಗೆ ನಡೆಯುವ ಸಾಮಾಜಿಕ ಬಹಿಷ್ಕಾರ, ಜಾತಿ ಅಥವಾ ಸಮುದಾಯ ಪಂಚಾಯಿತಿಗಳು ಸಂವಿಧಾನಬಾಹಿರ, ಸಾಮಾಜಿಕ ಸ್ವಾಸ್ಥ್ಯ, ಸಾಮರಸ್ಯ ಹಾಳುಗೆಡಹುವ ಕೃತ್ಯಗಳು ಎಂದು ರಾಜ್ಯ ಸರ್ಕಾರ ಪರಿಗಣಿಸಿದೆ. ಇದಕ್ಕಾಗಿ ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ- 2025’ ಅನ್ನು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ವಿಧಾನಸಭೆಯಲ್ಲಿ ಗುರುವಾರ ಮಂಡಿಸಿದರು.

ಸಾಮಾಜಿಕ ಬಹಿಷ್ಕಾರ, ಜಾತಿ ಪಂಚಾಯಿತಿಗಳೆಂಬ ಅನಿಷ್ಠಗಳು ಇನ್ನೂ ಆಚರಣೆಯಲ್ಲಿದ್ದು, ಸಾಮಾಜಿಕ ಅಸಮಾನತೆ, ಅಸಮರ್ಥತೆಯೇ ನೆಲೆಯಾಗಿದೆ. ಸಾಮಾಜಿಕ ಬಹಿಷ್ಕಾರ ವಿಧಿಸುವ ಕೆಟ್ಟ ಕೃತ್ಯಗಳನ್ನು ತಡೆಯಲು ಚಾಲ್ತಿ ಕಾನೂನು ಸಾಲದು ಎಂಬ ಕಾರಣಕ್ಕೆ ಶಿಕ್ಷೆ, ದಂಡನೆಗೆ ಒಳಪಡಿಸುವ ಹೊಸ ಕಾಯ್ದೆ ಜಾರಿಗೆ ಸರ್ಕಾರ ಮುಂದಾಗಿದೆ.

ಅಪರಾಧಿಗಳೆಂದು ಪರಿಗಣನೆ: ಜಾತಿ ಅಥವಾ ಸಮುದಾಯ ಪಂಚಾಯಿತಿ ನಡೆಸಿ, ಯಾವುದೇ ವ್ಯಕ್ತಿ ಇಲ್ಲವೇ ಕುಟುಂಬ ಸದಸ್ಯರನ್ನು ಸಾಮಾಜಿಕ ಬಹಿಷ್ಕಾರ ಹಾಕುವವರನ್ನು ಅಪರಾಧಿಗಳೆಂದು ಈ ಮಸೂದೆ ಪರಿಗಣಿಸಿದೆ. ಸಾಮಾಜಿಕ ಬಹಿಷ್ಕಾರಕ್ಕೆ ಪ್ರಚೋದನೆ, ಸಹಾಯಗಳು ಕೂಡ ಶಿಕ್ಷಾರ್ಹ ಅಪರಾಧಗಳಾಗಿವೆ. ಇದಕ್ಕೂ ಮೂರು ವರ್ಷಗಳ ಶಿಕ್ಷೆ, ಒಂದು ಲಕ್ಷ ರೂ. ದಂಡ ಇಲ್ಲವೇ ಎರಡನ್ನೂ ವಿಧಿಸಬೇಕೆಂದು ಪ್ರಸ್ತಾಪಿಸಲಾಗಿದೆ.

ಸಾಮಾಜಿಕ ಬಹಿಷ್ಕಾರಕ್ಕೆ ಸಭೆ, ಗುಂಪು ಸೇರುವುದು, ಸಮಾವೇಶ ನಡೆಸುವುದು ಅಕ್ರಮ. ಇಂತಹ ಸಭೆಯಲ್ಲಿ ಹಾಜರಿಲ್ಲದಿದ್ದರೂ ಸಾಮಾಜಿಕ ಬಹಿಷ್ಕಾರ ನಿರ್ಧಾರಕ್ಕೆ ಒತ್ತಡ ಹೇರಿದವರು, ಚರ್ಚೆ, ಮತ ಹಾಕಿದವರನ್ನು ಅಪರಾಧಿಗಳು ಎಂದೂ ವಿಧೇಯಕದಲ್ಲಿ ಅಡಕಗೊಳಿಸಲಾಗಿದೆ.

ನಿಷೇಧಿಸಿದ ಬಹಿಷ್ಕಾರಗಳು

  • ಸಂಬಂಧ ಕಡಿತಗೊಳಿಸಲು ಪ್ರಚೋದನೆ
  • ಮಾನವ ಹಕ್ಕುಗಳ ನಿರಾಕರಣೆ
  • ಗ್ರಾಮ ಇಲ್ಲವೇ ಸಮುದಾಯದಿಂದ ಹೊರ ಹಾಕುವುದು
  • ಸಾಮಾಜಿಕ, ಧಾರ್ವಿುಕ ಆಚರಣೆಗಳಲ್ಲಿ ಭಾಗವಹಿಸುವುದಕ್ಕೆ ತಡೆ
  • ಪೂಜಾ ಸ್ಥಳಗಳ ಪ್ರವೇಶಕ್ಕೆ ಅಡ್ಡಿ
  • ಧಾರ್ವಿುಕ, ಸಾರ್ವಜನಿಕ ಸ್ಥಳಗಳ ಬಳಕೆಗೆ ನಿರ್ಬಂಧ
  • ಶಾಲೆ, ಆಸ್ಪತ್ರೆ, ಸಮುದಾಯ ಭವನಗಳ ಪ್ರವೇಶ ನಿರಾಕರಣೆ
  • ವ್ಯಾಪಾರ, ಸಾಮಾಜಿಕ ಸಂಬಂಧಗಳಿಗೆ ತಡೆ
  • ಮದುವೆ, ಅಂತ್ಯಕ್ರಿಯೆಗಳಲ್ಲಿ ಪಾಲ್ಗೊಳ್ಳುವುದಕ್ಕೆ ತಡೆ
  • ಬಟ್ಟೆ, ಭಾಷೆ, ಸಾಂಸ್ಕೃತಿಕ ಭೇದ ಮಾಡುವುದು
  • ವ್ಯವಹಾರ ಅಥವಾ ಉದ್ಯೋಗ ತಿರಸ್ಕಾರ
  • ಸೇವೆಗಳು, ಅವಕಾಶಗಳನ್ನು ನಿರಾಕರಿಸುವುದು
  • ಮಕ್ಕಳನ್ನು ಒಟ್ಟಿಗೆ ಆಡಲು ಬಿಡದಿರುವುದು
  • ಲೈಂಗಿಕತೆ ಆಧಾರದಲ್ಲಿ ತಾರತಮ್ಯ

ಬಹಿಷ್ಕಾರ ತಡೆ ಅಧಿಕಾರಿ ನೇಮಕ

ಗ್ರೂಪ್-ಎ ಶ್ರೇಣಿ ಅಧಿಕಾರಿಗಳನ್ನು ಸಾಮಾಜಿಕ ಬಹಿಷ್ಕಾರ ತಡೆ ಅಧಿಕಾರಿಗಳನ್ನಾಗಿ ನಿಯೋಜಿಸಲು ಅವಕಾಶ ಕಲ್ಪಿಸಲಾಗಿದೆ. ಕಾಯ್ದೆ ಅನುಷ್ಠಾನ, ಪ್ರಕರಣ ಪತ್ತೆ, ನ್ಯಾಯಾಲಯಕ್ಕೆ ಸಹಕರಿಸುವುದು ಈ ಅಧಿಕಾರಿ ಜವಾಬ್ದಾರಿಯಾಗಿದೆ. ಪರಿಸ್ಥಿತಿಗೆ ತಕ್ಕಂತೆ ಪೊಲೀಸರಿಗೆ ಸಲಹೆ ನೀಡಬಹುದಾಗಿದೆ. ಸಾಮಾಜಿಕ ಬಹಿಷ್ಕಾರ ನಿರ್ಧಾರ ತೆಗೆದುಕೊಳ್ಳಲು ನಡೆಸುವ ಸಭೆಗಳ ಬಗ್ಗೆ ಮಾಹಿತಿ ಲಭಿಸಿದರೆ ಆಯಾ ಜಿಲ್ಲಾಧಿಕಾರಿಗಳು ನಿಷೇಧ ಆದೇಶ ಹೊರಡಿಸಬಹುದು ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.

ಪೀಡಿತರಿಗೆ ಪರಿಹಾರ

ಬಹಿಷ್ಕಾರಕ್ಕೆ ಒಳಗಾದ ವ್ಯಕ್ತಿ ಅಥವಾ ವ್ಯಕ್ತಿಗಳು ನೇರವಾಗಿ ಪೊಲೀಸ್ ಠಾಣೆ ಅಥವಾ ನ್ಯಾಯಾಧೀಶರಿಗೆ ದೂರು ಸಲ್ಲಿಸಲು ಅವಕಾಶವಿದೆ. ಪ್ರಥಮ ದರ್ಜೆ ನ್ಯಾಯಾಧೀಶರಿಗೆ ಇಂತಹ ಪ್ರಕರಣಗಳ ವಿಚಾರಣೆ ನಡೆಸುವ ಅಧಿಕಾರ ನೀಡಲಾಗಿದೆ. ನೇರವಾಗಿ ಸ್ವೀಕರಿಸಿದ ದೂರುಗಳ ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶಿಸಿ, ಬಾಧಿತರಿಗೆ ನೆರವಾಗಲು ನ್ಯಾಯಾಧೀಶರು ಆದೇಶಿಸಬಹುದಾಗಿದೆ. ಜತೆಗೆ ದಂಡದ ಮೊತ್ತವನ್ನು ನೊಂದವರಿಗೆ ಪರಿಹಾರ ರೂಪದಲ್ಲಿ ಪಾವತಿಗೆ ಸೂಚಿಸಬಹುದು ಎಂದು ಮಸೂದೆಯಲ್ಲಿ ಸೇರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net