ಶಿಕ್ಷಣ ಇಲಾಖೆಯಲ್ಲಿ ಸಮಗ್ರ ತನಿಖೆಯಾಗಲಿ

ವಿಜಯಪುರ ಜಿಲ್ಲಾಡಳಿತಕ್ಕೆ ಕರ್ನಾಟಕ ರಾಜ್ಯ ಕನ್ನಡಿಗರ ವೇದಿಕೆಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಅಧ್ಯಕ್ಷ ಲಕ್ಷ್ಮಣ ಕಂಬಾಗಿ, ಭೋಗೇಶ ಸೋಲಾಪೂರ, ಮಲ್ಲಿಕಾರ್ಜುನ ಬಟಗಿ ಇತರರಿದ್ದಾರೆ.
ವಿಜಯಪುರ ಜಿಲ್ಲಾಡಳಿತಕ್ಕೆ ಕರ್ನಾಟಕ ರಾಜ್ಯ ಕನ್ನಡಿಗರ ವೇದಿಕೆಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಅಧ್ಯಕ್ಷ ಲಕ್ಷ್ಮಣ ಕಂಬಾಗಿ, ಭೋಗೇಶ ಸೋಲಾಪೂರ, ಮಲ್ಲಿಕಾರ್ಜುನ ಬಟಗಿ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಮಾನ್ಯತೆ ನವೀಕರಣದಲ್ಲಿ ಭ್ರಷ್ಟಾಚಾರ
  • ಅಕ್ರಮದ ವಿರುದ್ಧ ಭುಗಿಲೆದ್ದ ಆಕ್ರೋಶ
  • ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ
ವಿಜಯಪುರ: ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ನಡೆದಿರುವ ಅಕ್ರಮಗಳು, ನಿಯಮ ಉಲ್ಲಂಘನೆಗಳು ಹಾಗೂ ಭ್ರಷ್ಟಾಚಾರದ ಕುರಿತು ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಕನ್ನಡಿಗರ ವೇದಿಕೆಯ ಪದಾಧಿಕಾರಿಗಳು ಗುರುವಾರ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ವೇದಿಕೆಯ ಅಧ್ಯಕ್ಷ ಲಕ್ಷ್ಮಣ ಕಂಬಾಗಿ ಮಾತನಾಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಮಾಜದ ಅಭಿವೃದ್ಧಿ ಹಾಗೂ ಭವಿಷ್ಯದ ಪೀಳಿಗೆಯ ಶಿಕ್ಷಣದ ಗುಣಮಟ್ಟವನ್ನು ರೂಪಿಸುವ ಅತ್ಯಂತ ಪ್ರಮುಖ ಇಲಾಖೆ ಆಗಿದೆ. ಈ ಇಲಾಖೆಯ ಆಡಳಿತ ಕ್ರಮಗಳು ಪಾರದರ್ಶಕತೆ, ನಿಷ್ಠೆ ಹಾಗೂ ಕಾನೂನುಬದ್ಧತೆಯ ಆಧಾರದ ಮೇಲೆ ನಡೆಯುವುದು ಅನಿವಾರ್ಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾರ್ಯವೈಖರಿಯಲ್ಲಿ ಕೆಲವು ಗಂಭೀರ ಅಕ್ರಮಗಳು ಮತ್ತು ನಿಯಮ ಉಲ್ಲಂಘನೆಗಳು ನಡೆದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಹಾಗೂ ಸಂಬಂಧಿತ ದಾಖಲೆಗಳು ನಮ್ಮ ಗಮನಕ್ಕೆ ಬಂದಿವೆ. ಹೀಗಾಗಿ ಇಲಾಖೆಯಲ್ಲಿ ಸಮಗ್ರ ತನಿಖೆ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ದೈಹಿಕ ಶಿಕ್ಷಕರ ಬಡ್ತಿ ಪ್ರಕ್ರಿಯೆಯಲ್ಲಿ ಸರ್ಕಾರ ಹೊರಡಿಸಿದ ಸುತ್ತೋಲೆಗಳಲ್ಲಿರುವ ನಿಯಮಾವಳಿಗಳನ್ನು ಮೀರಿ ಕ್ರಮ ಕೈಗೊಳ್ಳಲಾಗಿದೆ ಎಂಬ ಗಂಭೀರ ಆರೋಪಗಳು ವ್ಯಕ್ತವಾಗಿವೆ. ಈ ಸಂಬಂಧಿತ ಸರ್ಕಾರಿ ಸುತ್ತೋಲೆಗಳ ಪ್ರತಿಗಳು ಹಾಗೂ ಇತರ ದಾಖಲೆಗಳು ನಮ್ಮ ಬಳಿ ಲಭ್ಯವಿದ್ದು ಅಗತ್ಯವಿದ್ದಲ್ಲಿ ಪರಿಶೀಲನೆಗಾಗಿ ಸಲ್ಲಿಸಲು ಸಿದ್ಧರಾಗಿದ್ದೇವೆ. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ 14 ಜನರ ನಿಯೋಜನೆ ಮಾಡುವ ಪ್ರಕ್ರಿಯೆಯಲ್ಲಿ ಶಿಕ್ಷಣ ಇಲಾಖೆಯ ಆಯುಕ್ತರ ಅನುಮತಿ ಪಡೆಯದೇ ಇಬ್ಬರನ್ನು ತಾತ್ಕಾಲಿಕವಾಗಿ ನಿಯೋಜಿಸಿರುವುದು ಎಂಬ ಆರೋಪಗಳು ಕೇಳಿಬರುತ್ತಿವೆ. ಇಂತಹ ಕ್ರಮಗಳು ಸರ್ಕಾರದ ನಿಗದಿತ ಆಡಳಿತಾತ್ಮಕ ನಿಯಮಗಳಿಗೆ ವಿರುದ್ಧವಾಗಿರುವ ಸಾಧ್ಯತೆ ಇದೆ. 353 ಶಾಲೆಗಳಿಗೆ ಮಾನ್ಯತೆ ನವೀಕರಣ ನೀಡಿರುವ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆಗಳು ಮತ್ತು ಅಕ್ರಮಗಳು ನಡೆದಿರುವ ಸಾಧ್ಯತೆ ಇದ್ದು ಈ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಆಮ್ ಆದ್ಮಿ ಪಕ್ಷದ ಮುಖಂಡ ಭೋಗೇಶ ಸೋಲಾಪೂರ ಮಾತನಾಡಿ, ಡಿಡಿಪಿಐ ಲಾಗಿನ್ ಐಡಿ ಕದ್ದು ಮಾನ್ಯತೆ ನವೀಕರಣಗೊಳಿಸಿದ್ದಾರೆ ಎಂದು ಡಿಡಿಪಿಐ ಅವರೇ ಹೇಳಿದ್ದಾರೆ. ಈ ಸಂಬಂಧ ಡಿಡಿಪಿಐ ಅವರು ಎಫ್‌ಐಆರ್ ದಾಖಲು ಮಾಡಿದ್ದಾರೆ. ಕೂಡಲೇ ಡಿಡಿಪಿಐ ಅವರು ನವೀಕರಿಸಿದ ಎಲ್ಲ ಶಾಲೆಗಳನ್ನು ರದ್ದುಪಡಿಸಬೇಕು. ಹೋದ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕಡಿಮೆಮಟ್ಟದಲ್ಲಿ ಬಂದ ಕಾರಣ ವಿಜಯಪುರದ ಮಾನ ಮರ್ಯಾದೆ ರಾಜ್ಯ ಮಟ್ಟದಲ್ಲಿ ಹರಾಜ್ ಆಗಿದೆ. ಫಲಿತಾಂಶ ಸುಧಾರಣೆ ಮಾಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಶ್ರಮಿಸದೆ ಇಂತಹ ಭ್ರಷ್ಟಾಚಾರದಲ್ಲಿ ಮೂಗು ತೂರಿಸಿ ವೈಯಕ್ತಿಕ ಸ್ವಾರ್ಥ ಮೆರೆಯುತ್ತಿರುವುದು ದುರಾದೃಷ್ಟಕರ ಸಂಗತಿ ಎಂದರು.
ವಾಲ್ಮೀಕಿ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಬಟಗಿ, ಕರ್ನಾಟಕ ರಾಜ್ಯ ಕನ್ನಡಿಗರ ವೇದಿಕೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪೂಜಾ ಜುಮ್ಮೆವಾಲೆ, ಇಂದುಮತಿ ಜಾಲವಾದಿ, ಪ್ರೇಮಾ ಲೋನಾರಮಠ ಇತರರಿದ್ದರು.
"

ಅಧಿಕಾರಿ-ಸಿಬ್ಬಂದಿ ಮೇಲೆ ಕ್ರಮ !

ಶಾಲೆ ಮಾನ್ಯತೆ ನವೀಕರಣದಲ್ಲಾದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಡಿಪಿಐ ನೀಡಿದ ದೂರು, ಶಿಕ್ಷಣ ಇಲಾಖೆ ನಿರ್ದೇಶಕರು ಕಾರಣ ಕೇಳಿ ನೀಡಿದ ನೋಟಿಸ್‌ನಲ್ಲಿರುವ ಅಂಶಗಳನ್ನು ಗಮನಿಸಲಾಗಿ ಸಾಕಷ್ಟು ಗೊಂದಲ ಇದೆ. ಪ್ರಕರಣದಲ್ಲಿ ಇಲಾಖೆಯ ಕೈವಾಡ ಎದ್ದು ಕಾಣುತ್ತಿದೆ. ಪ್ರಾದೇಶಿಕ ಆಯುಕ್ತರು ಬರೆದಿರುವ ಪತ್ರದಲ್ಲಿ ತನಿಖೆ ಆಧರಿಸಿ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಗುವುದೆಂದು ಉಲ್ಲೇಖಿಸಲಾಗಿದೆ. ಹೀಗಾಗಿ ಇಲಾಖೆಯ ಅಧಿಕಾರ ಹಾಗೂ ಸಿಬ್ಬಂದಿಯೇ ಇದರಲ್ಲಿ ಶಾಮೀಲಾಗಿರುವ ಶಂಕೆ ಅಪರ ಆಯುಕ್ತರ ಪತ್ರದಿಂದ ವೇದ್ಯವಾಗುತ್ತದೆ. ಇನ್ನು ಡಿಡಿಪಿಐ ವೀರಯ್ಯ ಸಾಲಿಮಠ ಅವರಿಂದ ಸ್ಪಷ್ಟ ಮಾಹಿತಿ, ಪ್ರತಿಕ್ರಿಯೆ ಲಭ್ಯವಾಗುತ್ತಿಲ್ಲ. ಮೂಲಗಳ ಪ್ರಕಾರ 200ಕ್ಕೂ ಅಧಿಕ ಶಾಲೆಗಳ ಮಾನ್ಯತೆ ನವೀಕರಿಸಲಾಗಿದ್ದು, ಇದರಲ್ಲಿ ರಾಜಕೀಯ ನಾಯಕರ ಒತ್ತಡವೋ...ಭ್ರಷ್ಟಾಚಾರದ ಪರಿಣಾಮವೋ ಅನರ್ಹ ಶಾಲೆಗಳಿಗೂ ಮಾನ್ಯತೆ ನೀಡಿರುವ ಆರೋಪವಿದೆ. ಹೀಗಾಗಿ ಪ್ರಸಕ್ತ ಸಾಲಿನ ಶಾಲೆಗಳ ಮಾನ್ಯತೆಯನ್ನು ರದ್ದುಗೊಳಿಸಿ ಮತ್ತೊಮ್ಮೆ ಪರಿಶೀಲಿಸಿ ನವೀಕರಣಗೊಳಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ. ಅಲ್ಲದೇ, ಮಾನ್ಯತೆ ನವೀಕರಣದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದ್ದು, ಸಮಗ್ರ ತನಿಖೆಯಾಗಬೇಕೆಂಬ ಒತ್ತಾಯ ಬಲಗೊಂಡಿದೆ.

ಅಪರ ಆಯುಕ್ತರಿಂದ ಸ್ಪಷ್ಟನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net