ರಾಜ್ಯದಲ್ಲಿ ಬಿತ್ತನೆ ಬೀಜದ ಕೊರತೆ ಇಲ್ಲ

 ಕೃಷಿ ಸಚಿವ ಎನ್.ಚಲುವರಾಯಸ್ವಾಮಿ
ಕೃಷಿ ಸಚಿವ ಎನ್.ಚಲುವರಾಯಸ್ವಾಮಿ
Published on
ಬೆಂಗಳೂರು: ಮುಂಗಾರು ಹಂಗಾಮಿಗೆ ಅಗತ್ಯ ಪ್ರಮಾಣದ ಬಿತ್ತನೆ ಬೀಜ ಲಭ್ಯವಿದ್ದು, ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರಿಗೆ ಮಾಹಿತಿ ನೀಡಿದ ಸಚಿವರು, ಹಾವೇರಿ ಜಿಲ್ಲೆಯಲ್ಲಿ ಮಳೆ ಆಗುತ್ತಿರುವುದರಿಂದ ರೈತ ಸಂಪರ್ಕ ಕೇಂದ್ರಗಳಿಗೆ ಹೆಚ್ಚಿನ ರೈತರು ಭೇಟಿ ನೀಡಿ ಬಿತ್ತನೆ ಬೀಜಗಳನ್ನು ಪಡೆಯುತ್ತಿದ್ದಾರೆ. ಈ ಹಿನ್ನೆಲೆ ಬಿತ್ತನೆ ಬೀಜಗಳ ಪೂರೈಕೆಗೆ ಕೃಷಿ ಇಲಾಖೆ ಕ್ರಮ ಕೈಗೊಂಡಿದೆ. ಹಾವೇರಿ ಜಿಲ್ಲೆಯಲ್ಲಿ ಸೋಯಾಬೀನ್‌ಗೆ 8,960 ಕ್ವಿಂಟಾಲ್ ಹಾಗೂ ಶೇಂಗಾ (ನೆಲಗಡಲೆ) ಬೀಜಕ್ಕೆ 1,344 ಕ್ವಿಂಟಾಲ್ ಬೇಡಿಕೆ ಅಂದಾಜಿಸಲಾಗಿದೆ. ಅದರ ಅನುಸಾರ ಈಗಾಗಲೇ 2,733 ಕ್ವಿಂಟಾಲ್ ಸೋಯಾಬೀನ್ ಹಾಗೂ 305 ಕ್ವಿಂಟಾಲ್ ಶೇಂಗಾ ಬೀಜ ದಾಸ್ತಾನು ಮಾಡಲಾಗಿದೆ ಎಂದರು.
ರಾಜ್ಯ ಮಟ್ಟದಲ್ಲಿಯೂ ಸೋಯಾಬೀನ್ ಬೀಜಕ್ಕೆ 1.80 ಲಕ್ಷ ಕ್ವಿಂಟಾಲ್ ಬೇಡಿಕೆ ಅಂದಾಜಿಸಲಾಗಿದ್ದು, 2.09 ಲಕ್ಷ ಕ್ವಿಂಟಾಲ್ ಬೀಜ ಲಭ್ಯವಿದೆ.
ನೆಲಗಡಲೆ ಬೀಜಕ್ಕೆ 0.70 ಲಕ್ಷ ಕ್ವಿಂಟಾಲ್ ಬೇಡಿಕೆ ಇದ್ದು, 0.74 ಲಕ್ಷ ಕ್ವಿಂಟಾಲ್ ದಾಸ್ತಾನು ಲಭ್ಯವಿದೆ. ಒಟ್ಟಾರೆ ಎಲ್ಲಾ ಬೆಳೆಗಳು ಸೇರಿ 4.71 ಲಕ್ಷ ಕ್ವಿಂಟಾಲ್ ಬೇಡಿಕೆಗೆ ಅನುಗುಣವಾಗಿ 5.46 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ಲಭ್ಯವಿದೆ. ರೈತ ಸಂಪರ್ಕ ಕೇಂದ್ರಗಳ ಮೂಲಕ ಕ್ಯೂ ಆರ್ ಕೋಡ್ ವ್ಯವಸ್ಥೆ ಅಳವಡಿಸಿ ಅರ್ಹ ರೈತರಿಗೆ ಬೀಜ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಬೀಜ ಲಭ್ಯತೆಯಲ್ಲಿ ಕೊರತೆ ಇಲ್ಲದೇ ಇರುವುದರಿಂದ ರೈತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಕೃಷಿ ಇಲಾಖೆ ಸ್ಪಷ್ಟಪಡಿಸಿದೆ. ಹೆಚ್ಚಿನ ಮಾಹಿತಿಗೆ ರೈತರು ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಉಪ ಕೃಷಿ ನಿರ್ದೇಶಕರ ಕಚೇರಿ ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಚಿವರು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net