ತಾಯ್ನುಡಿ ಉಳಿಸಲು ಸಾಗಬೇಕಾದ ದಾರಿ ಬಲು ದೂರ

mother tongue
mother tongue
Published on

ಲೇಖಕರು, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಪ್ರಪಂಚದ ಇತಿಹಾಸದುದ್ದಕ್ಕೂ ತಾಯ್ನುಡಿಗಳು ಬಗೆ ಬಗೆಯ ಬಿಕ್ಕಟ್ಟುಗಳನ್ನು ಇದಿರಿಸುತ್ತಲೇ ಬಂದಿವೆ. ತಮ್ಮದೇ ಭಾಷೆಯಲ್ಲಿ ಮಾತಾಡುತ್ತಿದ್ದ ಬುಡಕಟ್ಟುಗಳು ನಾಶವಾಗಿ ಸಾಮ್ರಾಜ್ಯಗಳು ಉದಯವಾದಾಗ, ಸಾಮ್ರಾಜ್ಯಗಳು ನಶಿಸಿ ರಾಷ್ಟ್ರಗಳು ಹುಟ್ಟಿಕೊಂಡಾಗ ಪ್ರಬಲವಾದ ಭಾಷೆಯೊಂದು ಆಡಳಿತದ ಕಾರಣ ನೀಡಿ ಪ್ರಭುತ್ವದ ಪರವಾಗಿ ನಿಲ್ಲುತ್ತದೆ.
ಆಗ ಪ್ರಭುತ್ವದಿಂದ ದೂರವಿರುವ, ಅಷ್ಟೇನೂ ಪ್ರಭಾವಶಾಲಿಯಲ್ಲದ ತಾಯ್ನುಡಿಗಳು ನಲುಗುತ್ತವೆ. ಅಂತಹ ಸಂದರ್ಭಗಳಲ್ಲಿ ಪ್ರಭುತ್ವದ ಭಾಷೆಯ ವಿರುದ್ಧವಾಗಿ ನಡೆದ ಹೋರಾಟಗಳು ಪ್ರತ್ಯೇಕ ರಾಜ್ಯಗಳನ್ನೋ, ದೇಶಗಳನ್ನೋ ನಿರ್ಮಾಣ ಮಾಡಿದ್ದುಂಟು. ಇದಕ್ಕೆ ಒಳ್ಳೆಯ ಉದಾಹರಣೆಯೆಂದರೆ ಪೂರ್ವ ಪಾಕಿಸ್ತಾನ (ಇವತ್ತಿನ ಬಾಂಗ್ಲಾದೇಶ) ಮತ್ತು ಪಶ್ಚಿಮ ಪಾಕಿಸ್ಥಾನಗಳ (ಇವತ್ತಿನ ಪಾಕಿಸ್ತಾನ) ನಡುವೆ ನಡೆದ ಸಂಘರ್ಷ. 1947ರಲ್ಲಿ ಪಾಕಿಸ್ತಾನ ರಚನೆಯಾದಾಗ, ಅದು ಮೇಲೆ ಹೇಳಿದ ಎರಡು ಪ್ರತ್ಯೇಕ ಭೂಭಾಗಗಳನ್ನು ಹೊಂದಿತ್ತು. 1948ರಲ್ಲಿ ಅಂದಿನ ಪಶ್ಚಿಮ ಪಾಕಿಸ್ತಾನ ಸರ್ಕಾರ ಉರ್ದು ಭಾಷೆಯನ್ನು ಪಾಕಿಸ್ತಾನದ ಏಕೈಕ ರಾಷ್ಟ್ರೀಯ ಭಾಷೆ ಎಂದು ಘೊಷಿಸಿತು.
ಇದನ್ನು ಪೂರ್ವ ಪಾಕಿಸ್ತಾನೀಯರು ಒಪ್ಪಲಿಲ್ಲ, ಏಕೆಂದರೆ ಅಲ್ಲಿನ ಜನರು ಹೆಚ್ಚಾಗಿ ಬಂಗಾಳಿ ಅಥವಾ ಬಾಂಗ್ಲಾ ಭಾಷೆಯಲ್ಲಿ ವ್ಯವಹರಿಸುತ್ತಿದ್ದರು. ಉರ್ದು ಜತೆಗೆ ಬಾಂಗ್ಲಾವನ್ನು ಕೂಡ ರಾಷ್ಟ್ರೀಯ ಭಾಷೆಯನ್ನಾಗಿ ಪರಿಗಣಿಸಬೇಕು ಎಂಬ ಬೇಡಿಕೆಯನ್ನು ಅವರು ಪಾಕಿಸ್ತಾನ ಸರಕಾರದ ಮುಂದಿಟ್ಟರು. ಜನರ ಬೇಡಿಕೆಗೆ ಕಿವಿಗೊಡದ ಸರಕಾರ ಹೋರಾಟಗಾರರನ್ನು ದಮನಿಸಲು ಎಷ್ಟೇ ಪ್ರಯತ್ನಿಸಿದರೂ ಅದು ಯಶಸ್ವಿಯಾಗಲಿಲ್ಲ.
ಢಾಕಾ ವಿಶ್ವವಿದ್ಯಾಲಯ ಹೋರಾಟದ ಕೇಂದ್ರವಾಯಿತು. 1952ರ ಫೆ. 21ರಂದು, ಪೊಲೀಸರು ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದರು. ಗುಂಡೇಟಿಗೆ ಸಿಕ್ಕ ರಫೀಕ್ ಅಹಮದ್, ಅಬುಲ್ ಬರ್ಕತ್, ಅಬ್ದುಲ್ ಜಬ್ಬಾರ್, ಅಬ್ದುಸ್ ಸಲಾಮ್ ಮತ್ತು ಶಫಿಉರ್ ರಹಮಾನ್ ಅಸು ನೀಗಿದರು. ನೂರಾರು ಜನರು ಗಾಯಗೊಂಡರು. ತಾಯ್ನುಡಿಗಾಗಿ ನಡೆದ ಈ ದುರಂತ ಘಟನೆ ಇತಿಹಾಸದಲ್ಲಿ ಬಹಳ ಅಪೂರ್ವವೆಂದು ಭಾವಿಸಲಾಯಿತು.
ಈ ಘಟನೆಯ ನೆನಪನ್ನು ಶಾಶ್ವತವಾಗಿರಿಸಲು ಮತ್ತು ತಾಯ್ನುಡಿಗಳ ಮಹತ್ವವನ್ನು ಜಗತ್ತಿಗೆ ಸಾರಲು, 1999ರ ನ. 17ರಂದು ನಡೆದ ಯುನೆಸ್ಕೋದ 30ನೇ ಸಾಮಾನ್ಯ ಸಭೆ ಫೆ. 21ನ್ನು ‘ಅಂತಾರಾಷ್ಟ್ರೀಯ ಮಾತೃಭಾಷಾ ದಿನ’ ವೆಂದು ಸರ್ವಾನುಮತದಿಂದ ಘೊಷಿಸಿತು. ಅಂದಿನಿಂದ ಮುಂದೆ ಮಾತೃಭಾಷಾ ವಿಷಯ ಅಂತಾರಾಷ್ಟ್ರೀಯ ಮನ್ನಣೆ ಪಡೆಯಿತು. ಜನರು ಮತ್ತು ನೂರಾರು ಸಂಸ್ಥೆಗಳು ಕೂಡ ವಿಶ್ವದ ಭಾಷೆಗಳನ್ನು ಅಳಿವಿನಿಂದ ರಕ್ಷಿಸಲು ಒಂದೊಂದೇ ಹೆಜ್ಜೆ ಮುಂದಿಡಲು ಆರಂಭಿಸಿದರು. ಈ ನಡುವೆ ಭಾಷೆಯೇ ಪ್ರಧಾನ ವಿಷಯವಾಗಿ ಪಶ್ಚಿಮ ಪಾಕಿಸ್ತಾನದಿಂದ ಬೇರ್ಪಟ್ಟ ಪೂರ್ವ ಪಾಕಿಸ್ತಾನ 1972ರಲ್ಲಿ ಬಾಂಗ್ಲಾದೇಶವೆಂಬ ಹೆಸರಿನಲ್ಲಿ ಹೊಸ ದೇಶವಾದದ್ದು ನಮಗೆಲ್ಲ ತಿಳಿದೇ ಇದೆ.
ಕುಸಿಯುತ್ತಿರುವ ತಾಯ್ನುಡಿಗಳು: 1990ರ ಆನಂತರ ತೀವ್ರವಾಗಿ ಕಾಣಿಸಿಕೊಂಡ ಮಾರುಕಟ್ಟೆ ಕೇಂದ್ರಿತವಾದ ಜಾಗತೀಕರಣವು ರಾಷ್ಟ್ರಗಳು, ವ್ಯವಹಾರಗಳು ಮತ್ತು ವ್ಯಕ್ತಿಗಳು ಸಂಪರ್ಕ ಸಾಧಿಸುವ ವಿಧಾನಗಳನ್ನು ಸಂಪೂರ್ಣವಾಗಿ ಪರಿವರ್ತಿಸಿ, ಜಾಗತಿಕ ಮಟ್ಟದಲ್ಲಿ ಆರ್ಥಿಕ, ಸಾಂಸ್ಕೃತಿಕ ಮತ್ತು ತಾಂತ್ರಿಕ ಏಕೀಕರಣವನ್ನು ಬೆಳೆಸಿತು. ಇದರ ಪರಿಣಾಮವಾಗಿ, ಕಳೆದ ಸುಮಾರು 3 ದಶಕಗಳಲ್ಲಿ ಜಗತ್ತಿನಾದ್ಯಂತ ಹಲವು ತಾಯ್ನುಡಿಗಳು ನಾಶವಾಗಿವೆ.
ಉದಾಹರಣೆಗೆ, ಬ್ರೆಜಿಲ್ ನ ಔರೆ, ಇಂಡೋನೇಷ್ಯಾದ ಮಾವೆಸ್, ಬೊಲಿವಿಯಾದ ಇಟೋನಾಮ, ರಷ್ಯಾದ ಮೆಡ್ನಿಜ್, ಚಿಲಿಯ ಯಹ್ಗಾನ್, ಅಫ್ಘಾನಿಸ್ಥಾನದ ಮೊಗೋಲ್, ಭಾರತದ ಸೆರಾ ಮತ್ತು ಅಕಾಬೊ, ಜಪಾನಿನ ಐನು, ಪೆರುವಿನ ಅಂಡೋವಾ ಮೊದಲಾದ ಭಾಷೆಗಳು ಇವತ್ತು ಬದುಕುಳಿದಿಲ್ಲ. ಕೇಂದ್ರ ಸರಕಾರದ ವರದಿಯೇ ತಿಳಿಸುವಂತೆ, 1947ರ ಆನಂತರದ ಭಾರತದಲ್ಲಿ 253ಕ್ಕೂ ಹೆಚ್ಚು ಭಾಷೆಗಳು ಸತ್ತು ಹೋಗಿವೆ. ಸುಮಾರು 300ಕ್ಕೂ ಹೆಚ್ಚು ಭಾಷೆಗಳು ಅಪಾಯದ ಹಂತ ತಲುಪಿವೆ.
ಒಂದು ವರದಿಯ ಪ್ರಕಾರ ಮುಂದಿನ ನೂರು ವರ್ಷಗಳಲ್ಲಿ ವಿಶ್ವದ 92% ಜನರು 8% ಜನರ ಭಾಷೆಗಳನ್ನು ಮಾತಾಡುತ್ತಿರುತ್ತಾರೆ. ಶಿಕ್ಷಣದ ಅಂತಾರಾಷ್ಟ್ರೀಕರಣ ಸ್ಥಳೀಯ ಭಾಷೆಗಳನ್ನು ಮೂಲೆಗೆ ತಳ್ಳಿ ಇಂಗ್ಲಿಷನ್ನು ಮುನ್ನೆಲೆಗೆ ತಂದಿದೆ. ಹೊಸ ತಲೆಮಾರಿನ ಜನರು ಇಂಗ್ಲಿಷನ್ನು ಅನ್ನದ ಭಾಷೆಯಾಗಿ ಗ್ರಹಿಸಿದ್ದಾರೆ. ಇಂಥ ಸಂದರ್ಭಗಳಲ್ಲಿ ತಾಯ್ನುಡಿಗಳು ತಬ್ಬಲಿಗಳಾಗಿವೆ.
2011 ಜನಗಣತಿ ಪ್ರಕಾರ ಭಾರತದಲ್ಲಿ ಒಟ್ಟು 19569 ತಾಯ್ನುಡಿಗಳಿವೆ. ಇವುಗಳಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನರು ಮಾತಾಡುವ ಭಾಷೆಗಳ ಸಂಖ್ಯೆ 40. ಒಂದು ಲಕ್ಷಕ್ಕಿಂತ ಹೆಚ್ಚು ಜನರು ಮಾತಾಡುವ ಭಾಷೆಗಳ ಸಂಖ್ಯೆ 60. ಹತ್ತು ಸಾವಿರಕ್ಕಿಂತ ಹೆಚ್ಚು ಜನರು ಮಾತಾಡುವ ಭಾಷೆಗಳ ಸಂಖ್ಯೆ 122. ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿದ ಭಾಷೆಗಳ ಸಂಖ್ಯೆ ಕೇವಲ 22. ಸಂವಿಧಾನದ ಮನ್ನಣೆ ಪಡೆಯಲು ಕಾದು ಕುಳಿತಿರುವ ತಾಯ್ನುಡಿಗಳ ಸಂಖ್ಯೆ 99.
ಈ ನಡುವೆ ಯೂನೆಸ್ಕೋ ಸಿದ್ಧಪಡಿಸಿದ ಭಾಷೆಗಳ ಜಾಗತಿಕ ಭೂಪಟ ಭಾರತದಲ್ಲಿನ 172 ಭಾಷೆಗಳನ್ನು ಅಪಾಯದ ಅಂಚಿನಲ್ಲಿರುವ ಭಾಷೆಗಳೆಂದೂ, ಅದರಲ್ಲಿ 101 ಭಾಷೆಗಳನ್ನು ಅತೀವ ಅಪಾಯದಲ್ಲಿರುವ ಭಾಷೆಗಳೆಂದೂ 71 ಭಾಷೆಗಳನ್ನು ಎಲ್ಲ ಬಗೆಯ ಅಪಾಯಗಳಿಗೆ ಬಲಿಯಾಗುತ್ತಿರುವ ಭಾಷೆಗಳೆಂದೂ ಗುರುತಿಸಿದೆ. ಆಶ್ಚರ್ಯವೆಂದರೆ ಇಷ್ಟೊಂದು ಸಮಸ್ಯೆಗಳಿದ್ದರೂ ಸರಕಾರಗಳು ಅವುಗಳ ಕಡೆಗೆ ಗಂಭೀರವಾಗಿ ಗಮನ ಕೊಡದಿರುವುದು. ಜಗತ್ತಿನ ಅರ್ಧದಷ್ಟು ಭಾಷೆಗಳನ್ನು ಹೊಂದಿರುವ ಭಾರತಕ್ಕೆ ಒಂದು ಸಮರ್ಪಕವಾದ ಭಾಷಾ ನೀತಿಯೇ ಇಲ್ಲ.
ಕನ್ನಡ ಕರ್ನಾಟಕ: ಉತ್ತರ ದಕ್ಷಿಣಗಳ ನಡುವೆ ಸೇತುವೆಯಂತಿರುವ ಕರ್ನಾಟಕ ರಾಜ್ಯ ತನ್ನ ಭೌಗೋಳಿಕ ಕಾರಣಗಳಿಂದಾಗಿಯೇ ಅನೇಕ ಭಾಷೆಗಳ ಆವಾಸ ಸ್ಥಾನವಾಗಿದೆ. 2011ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ಒಟ್ಟು 290 ಭಾಷೆಗಳಿವೆ. ಜಾಗತೀಕರಣದ ಆನಂತರದ ದಿನಗಳಲ್ಲಿ ರಾಜ್ಯ ಭಾಷೆಯಾದ ಕನ್ನಡವೂ ಸೇರಿದಂತೆ ಕರ್ನಾಟಕದ ಅನೇಕ ಭಾಷೆಗಳು ನಿರೀಕ್ಷಿತ ವೇಗದಲ್ಲಿ ಬೆಳೆಯುತ್ತಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಕೊಡವ, ಕೊರಗ, ಕೊಂಕಣಿ, ಗೌಳಿ, ಯರವ ಮೊದಲಾದ ಭಾಷೆಗಳು ಅವನತಿಯತ್ತ ಸಾಗುತ್ತಿವೆ.
ಈ ನಡುವೆ ಕರ್ನಾಟಕ ರಾಜ್ಯದ ವೇಗವಾದ ಆರ್ಥಿಕ ಬೆಳವಣಿಗೆಗೆ ಇಲ್ಲಿರುವ ಬೃಹತ್ ಪ್ರಮಾಣದ ಉದ್ಯಮಗಳು ಕಾರಣವಾಗಿವೆ. ಬೆಂಗಳೂರನ್ನು ಏಷ್ಯಾದ ಸಿಲಿಕಾನ್ ವ್ಯಾಲಿ ಎಂದು ಕೊಂಡಾಡಲಾಗಿದೆ. ಇವುಗಳ ಜತೆಗೆ ಕೇಂದ್ರೀಯ ಉದ್ಯಮಗಳೂ ರಾಜ್ಯದಲ್ಲಿ ಕೆಲಸ ಮಾಡುತ್ತಿವೆ. ಇಲ್ಲಿ ಎಲ್ಲ ಕಡೆಯೂ ಕನ್ನಡ ಮಾತಾಡುವವರ ಸಂಖ್ಯೆ ಕ್ಷೀಣಿಸುತ್ತಲೇ ಇದೆ. ಬೃಹತ್ ಉದ್ಯಮಗಳು, ರಾಷ್ಟ್ರೀಕೃತ ಬ್ಯಾಂಕುಗಳು, ರೈಲ್ವೇ ಇಲಾಖೆಗಳು, ಅಂಚೆ ಕಚೇರಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಮೊದಲಾದೆಡೆಗಳಲ್ಲಿ ಇವತ್ತು ಕನ್ನಡ ಕಾಣುತ್ತಿಲ್ಲ. ಕನ್ನಡ ಮಾತಾಡುವ ಮಕ್ಕಳಿಗೆ ದಂಡ ವಿಧಿಸುವ ಶಾಲೆಗಳೂ ಇವೆ. ಹೋಟೆಲ್ ಉದ್ಯಮ, ಕಟ್ಟಡ ನಿರ್ವಣ, ಆನ್​ಲೈನ್ ಸೇವೆಗಳು ಮತ್ತಿತರ ಕಡೆಗಳಲ್ಲಿ ಅನ್ಯ ಭಾಷಿಕರೇ ಕೆಲಸ ಮಾಡುತ್ತಿದ್ದಾರೆ.
ಇಂಥ ಸಾಧ್ಯತೆಗಳನ್ನು ಗಮನಿಸಿದ್ದ ಡಾ. ಸರೋಜಿನಿ ಮಹಿಷಿಯವರು 1986ರಲ್ಲಿ, ‘ಸ್ಥಳೀಯರಿಗೆ ಉದ್ಯೋಗ’ ಎಂದು ಘೊಷಿಸುವುದರ ಜತೆಗೆ, ರೈತರು ನೀರಾವರಿ ಜಮೀನನ್ನು ಪರಪ್ರಾಂತದವರಿಗೆ ಮಾರುವುದು, ಬೆಂಗಳೂರಲ್ಲಿ ಅನ್ಯಪ್ರಾಂತೀಯರು ಪಡೆಯುವ ನಿವೇಶನಗಳಿಗೆ ಕಡಿವಾಣ ಹಾಕುವುದು, ಪ್ರತ್ಯೇಕ ರೈಲ್ವೇ ವಲಯದ ಸ್ಥಾಪನೆ, ಮೊದಲಾದ 58 ಶಿಫಾರಸುಗಳನ್ನುಸರಕಾರಕ್ಕೆ ಸಲ್ಲಿಸಿದ್ದರು. ಆದರೆ ಮಹಿಷಿ ವರದಿಗೆ ಕಾನೂನಿನ ಬೆಂಬಲ ಇಲ್ಲದ್ದರಿಂದ ಅದು ವರದಿಯಾಗಿಯಷ್ಟೇ ಉಳಿದಿದೆ.
‘ಮಹಿಷಿ ವರದಿಗೆ ಶಾಸನಾಧಾರ ಇಲ್ಲದಿರುವುದರಿಂದ ಅದನ್ನು ಅನುಸರಿಸಿ ಎಂದು ನಾವು ಹೇಳುವಂತಿಲ್ಲ’ ಎಂದು ಕರ್ನಾಟಕದ ಉಚ್ಚ ನ್ಯಾಯಾಲಯ 2013ರಲ್ಲಿಯೇ ಹೇಳಿದೆ. ಹೀಗಾಗಿ ಇದರ ಪ್ರಯೋಜನವೂ ಕನ್ನಡಿಗರಿಗೆ ಆಗಲಿಲ್ಲ. ಕಾನೂನಿನ ಮೂಲಕ ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಿಡುವುದು ಇವತ್ತಿನ ಸಂದರ್ಭದಲ್ಲಿ ಸುಲಭ ಸಾಧ್ಯವಾದ ವಿಷಯವೂ ಅಲ್ಲ. ದೊಡ್ಡ ಮಟ್ಟದ ಬಂಡವಾಳ ಹೂಡಿ, ಕೇವಲ ಲಾಭದ ಮೇಲೆ ಕಣ್ಣಿಟ್ಟ ಕಂಪೆನಿಗಳು ಸ್ಥಳೀಯತೆಯನ್ನು ಅಥವಾ ಸ್ಥಳೀಯ ಭಾಷೆಯನ್ನು ಒಂದು ಅರ್ಹತೆಯಾಗಿ ಪರಿಗಣಿಸುವುದು ಅಷ್ಟರಲ್ಲೇ ಇದೆ.
2014ರ ಆನಂತರದ ರಾಜಕೀಯ ಬೆಳವಣಿಗೆಗಳು ಸ್ಥಳೀಯತೆಯನ್ನು ಗೌಣಗೊಳಿಸಿ ರಾಷ್ಟ್ರೀಯತೆಯನ್ನು ಬಲಗೊಳಿಸುತ್ತಿರುವುದರಿಂದ, ರಾಜ್ಯಗಳ ಅಸ್ಮಿತೆಯ ಪ್ರಶ್ನೆ ಹಿಂದೆ ಸರಿದು ರಾಷ್ಟ್ರೀಯ ಅಸ್ಮಿತೆ ಪ್ರಬಲವಾಗುತ್ತಿದೆ. ಹೀಗಾಗಿ ‘ಕನ್ನಡಿಗರಿಗೆ ಉದ್ಯೋಗ’ ಎಂಬ ಜಾಗದಲ್ಲಿ ’ಭಾರತೀಯರಿಗೆ ಉದ್ಯೋಗ’ಎಂಬ ಕೂಗು ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಬೆಳೆಯುತ್ತಿರುವ ರಾಜಕೀಯವು ಹಿಂದಿಯನ್ನು ಕನ್ನಡದ ತಲೆಯ ಮೇಲೆ ಕುಳ್ಳಿರಿಸಿದೆ. ಇದೂ ಕನ್ನಡದ ಹಿನ್ನಡೆಗೆ ಕಾರಣವಾಗಿದೆ. ತಾಯ್ನುಡಿಗಳು ಉಳಿಯುವಂತೆ ಮಾಡಲು ನಾವು ಬಹುದೂರ ಸಾಗಬೇಕಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net