ಕಾಲುವೆಗೆ ಹರಿದ ನೀರು ಜಮೀನಿಗಿಲ್ಲ

 ಆಳಂದ ತಾಲೂಕಿನ ಅಮರ್ಜಾ ಎಡದಂಡೆ ಕಾಲುವೆಯಲ್ಲಿ ಹೂಳು ತುಂಬಿಕೊಂಡಿದ್ದು, ಇದರ ಮಧ್ಯೆಯೇ ನೀರು ಹರಿದುಹೋಗುತ್ತಿದೆ.
ಆಳಂದ ತಾಲೂಕಿನ ಅಮರ್ಜಾ ಎಡದಂಡೆ ಕಾಲುವೆಯಲ್ಲಿ ಹೂಳು ತುಂಬಿಕೊಂಡಿದ್ದು, ಇದರ ಮಧ್ಯೆಯೇ ನೀರು ಹರಿದುಹೋಗುತ್ತಿದೆ.
Published on

ಪ್ರಮುಖ ಮುಖ್ಯಾಂಶಗಳು

  • ಅಮರ್ಜಾ ಎಡದಂಡೆ ಕೆನಾಲ್​ಗಳಲ್ಲಿ ಹೂಳು
  • ದುರಸ್ತಿಯಿಂದ ಸೋರಿಕೆಯಾಗುತ್ತಿರುವ ಜಲ
ಆಳಂದ: "ದೇವರು ವರ ಕೊಟ್ಟರು ಪೂಜಾರಿ ಕೊಡಲಿಲ್ಲ' ಎಂಬ ಗಾದೆ ಮಾತಿನಂತೆ ಆಳಂದ ತಾಲೂಕಿನ ವಿವಿಧ ಗ್ರಾಮಗಳ ಹಳ್ಳಿಗಳ ರೈತರ ಹಾಗೂ ಸಾರ್ವಜನಿಕರ ಸ್ಥಿತಿಯಾಗಿದೆ. ನಿರಂತರ ಮನವಿ ಮೇರೆಗೆ ಜಿಲ್ಲಾಡಳಿತ ಅಮರ್ಜಾ ಅಣೆಕಟ್ಟಿನಿಂದ ಎಡದಂತೆ ಕಾಲುವೆಗೆ ನೀರು ಹರಿಸಿದೆ, ಆದರೆ ಕಾಲುವೆಗಳ ನಿರ್ವಹಣ ಕೊರತೆಯಿಂದ ಈವರೆಗೂ ಹನಿ ನೀರು ರೈತನ ಜಮೀನಿಗೆ ತಲುಪಿಲ್ಲ.
ಎಡದಂಡೆ ಕಾಲುವೆಯೂ ಕೊರಳ್ಳಿ, ಭೂಸನೂರ, ಧಂಗಾಪುರ, ಬಟ್ಟರಗಾ, ನಿಂರ್ಬಗಾ, ಗಾಣಗಾಪುರ ಸ್ಟೇಷನ್​, ಬೈರಾಮಡಗಿವರೆಗೂ ಹರಡಿದೆ. ಆದರೆ ಕಾಲುವೆಯ ಸಮರ್ಪಕ ನಿರ್ವಹಣೆ ಇಲ್ಲದಿರುವುದರಿಂದ ನೀರು ಸರಾಗವಾಗಿ ಹರಿದು ಮುಂದೆ ಹೋಗುತ್ತಿಲ್ಲ. ಬಹುತೇಕ ಕಾಲುವೆಯಲ್ಲಿ ಹೂಳು ತುಂಬಿಕೊಂಡಿದೆ, ಮುಳ್ಳು&ಕಂಟಿ ಬೆಳೆದಿವೆ. ಅಲ್ಲದೆ ಅಲ್ಲಲ್ಲಿ ಕುಸಿದಿದ್ದು, ನೀರು ಸೋರಿಕೆಯಾಗುತ್ತಿವೆ.
ಭೂಸನೂರಿನಲ್ಲಿ ಎನ್​ಎಸ್​ಎಲ್​ ಸಕ್ಕರೆ ಕಾರ್ಖಾನೆ ಇರುವುದರಿಂದ ರೈತಾಪಿ ವರ್ಗ ಕಬ್ಬು ಬೆಳೆದಿದೆ. ಬಿಸಿಲಿನ ತಾಪಕ್ಕೆ ಕೊಳವೆಬಾವಿ, ತೆರೆದ ಬಾವಿಗಳು ಬತ್ತಿ ಹೋಗಿದ್ದರಿಂದ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕುಡಿಯುವುದಕ್ಕೆ ಸರಿಯಾಗಿ ನೀರು ಸಿಗುತ್ತಿಲ್ಲ, ಹೀಗಿರುವಾಗ ಕೃಷಿ ಕಾರ್ಯ ಕಷ್ಟಕರವಾಗಿದೆ. ಈ ನಿಟ್ಟಿನಲ್ಲಿ ರೈತರು ಹಾಗೂ ಸಾರ್ವಜನಿಕರು ಶಾಸಕರು, ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತಕ್ಕೆ ಕಾಲುವೆಗಳಿಗೆ ನೀರು ಹರಿಸುವಂತೆ ಮನವಿ ಮಾಡಿದ್ದರು.
ಮನವಿಗೆ ಸ್ಪಂದಿಸಿರುವ ಅಮರ್ಜಾ ಅಣೆಕಟ್ಟು ಅಧಿಕಾರಿಗಳು ಕಾಲುವೆಗೆ ನೀರು ಹರಿಸಿದ್ದು, ಆದರೆ ನಿರ್ವಹಣೆ ಕೊರತೆಯಿಂದ ಕೊನೆಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಇತ್ತ ಕಾಲುವೆ ನೀರಿನಿಂದ ಬೆಳೆ ಉಳಿಸಿಕೊಂಡರಾಯಿತು ಎಂಬ ಯೋಚನೆಯಲ್ಲಿದ್ದ ರೈತರು ಚಿಂತಾಕ್ರಾಂತರಾಗಿದ್ದಾರೆ. ಬಿಸಿಲಿಗೆ ಬೆಳೆ ಬಾಡುತ್ತಿದ್ದು, ಮುಂದೇನು ಮಾಡಬೇಕು ಎಂಬುದು ತೋಚದಂತಾಗಿದೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಹೂಳು ತುಂಬಿಕೊಂಡಿರುವ ಹಾಗೂ ಒಡೆದು ಹೋಗಿರುವ ಕಾಲುವೆಗಳನ್ನು ದುರಸ್ತಿ ಮಾಡಿ ರೈತರ ಜಮೀನಿಗೆ ನೀರು ತಲುಪಿಸುವ ಕೆಲಸ ಮಾಡಬೇಕಿದೆ ಎಂಬುದು ಅನ್ನದಾತರ ಒಕ್ಕೊಲರ ಒತ್ತಾಯವಾಗಿದೆ.
"

ಅಮರ್ಜಾ ಕೆಳಭಾಗದ ಬಲ ಮತ್ತು ಎಡದಂಡೆ ಕಾಲುವೆಗಳಿಗೆ ಈಗಾಗಲೇ ನೀರು ಹರಿಬಿಟ್ಟಿದ್ದು, ಕೊರಳ್ಳಿ ರೈತರು ಎಡದಂಡೆ ಕಾಲುವೆ ಮೇಲ್ಭಾಗದಲ್ಲಿ ಪಂಪ್​ಸೆಟ್​ ಬಳಸಿ ಅನಧಿಕೃತವಾಗಿ ನೀರು ಪಡೆಯುತ್ತಿದ್ದಾರೆ. ಇದರಿಂದ ತೊಂದರೆ ಆಗುತ್ತಿದೆ. ಕೊರಳ್ಳಿ ಹತ್ತಿರ ಕಾಲುವೆಯಿಂದ ನೀರು ಸೋರಿಕೆ ಆಗುತ್ತಿರುವುದು ಗಮನಕ್ಕೆ ಬಂದಿದ್ದು, ಕೂಡಲೇ ಸರಿಪಡಿಸಲಾಗುವುದು.

— > ರಾಜಕುಮಾರ ಜಲಾದೆ, ಎಇಇ, ಅಮರ್ಜಾ ಅಣೆಕಟ್ಟು


"

ಅಮರ್ಜಾ ಅಣೆಕಟ್ಟು ಆಳಂದ ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಕುಡಿಯುವ ನೀರು ಕಲ್ಪಿಸುವುದಕ್ಕೆ ಸೀಮಿತವಾಗಿದೆ. ರೈತರಿಗೆ ನೀರೇ ಇಲ್ಲ ಅಂದ ಮೇಲೆ ಅಣೆಕಟ್ಟು ಇದ್ದು ಏನು ಪ್ರಯೋಜನ ? ನಾವು ನೀರು ಕೇಳುವುದು ಕೇವಲ ಬೇಸಿಗೆಯಲ್ಲಿ ಮಾತ್ರ. ಈಗಲಾದರೂ ಅಣೆಕಟ್ಟು ಅಧಿಕಾರಿಗಳು ಗಾಢ ನಿದ್ದೆಯಿಂದ ಎದ್ದೇಳಬೇಕು. ಹಾಳಾಗಿರುವ ಕಾಲುವೆಗಳನ್ನು ದುರಸ್ತಿ ಮಾಡಿ, ಸಮರ್ಪಕವಾಗಿ ನೀರು ಹರಿಸಬೇಕು. ಅಂದಾಗಲೇ ನಮ್ಮ ಬೆಳೆ ಉಳಿಯಲು ಸಾಧ್ಯ.

— > ಭೀಮಶಾ ದೊಂಡಿ, ರೈತ, ಧಂಗಾಪುರ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net