ದೂರದೃಷ್ಟಿಯ ಮೇಧಾವಿ: ಇಂದು ನಾಡಪ್ರಭು ಕೆಂಪೇಗೌಡರ ಜಯಂತಿ...! Nadaprabhu Kempegowda Jayanthi

ದೂರದೃಷ್ಟಿಯ ಮೇಧಾವಿ: ಇಂದು ನಾಡಪ್ರಭು ಕೆಂಪೇಗೌಡರ ಜಯಂತಿ...! Nadaprabhu Kempegowda Jayanthi
ದೂರದೃಷ್ಟಿಯ ಮೇಧಾವಿ: ಇಂದು ನಾಡಪ್ರಭು ಕೆಂಪೇಗೌಡರ ಜಯಂತಿ...! Nadaprabhu Kempegowda Jayanthi
Published on
ಬೆಂಗಳೂರಿನ ನಿರ್ವತೃವಾದ ನಾಡಪ್ರಭು ಕೆಂಪೇಗೌಡರ (1510-1569) ದೂರದೃಷ್ಟಿ ನಿಜಕ್ಕೂ ಅದ್ಭುತವಾದದ್ದು. ಇಂದು ಜಾಗತಿಕ ಮಟ್ಟದಲ್ಲಿ ಸಿಲಿಕಾನ್ ವ್ಯಾಲಿ ಎಂದು ಗುರುತಿಸಲ್ಪಟ್ಟಿರುವ ಬೆಂಗಳೂರಿಗೆ, 489 ವರ್ಷಗಳ ಹಿಂದೆಯೇ (1537) ಕೆಂಪೇಗೌಡರು ಯೋಜನಾಬದ್ಧವಾದ ಬುನಾದಿ ಹಾಕಿದ್ದರು ಮತ್ತು ನಗರ ನಿರ್ವಣಕ್ಕೆ ಅದ್ಭುತವಾದ ಮಾದರಿಯೊಂದನ್ನು ನೀಡಿದರು. ಕೆಂಪೇಗೌಡರು ಅಂದು ಬಿತ್ತಿದ ಯೋಜನಾಬದ್ಧ ಆಡಳಿತ, ವಾಣಿಜ್ಯೋದ್ಯಮಕ್ಕೆ ನೀಡಿದ ಪೋ›ತ್ಸಾಹ ಮತ್ತು ಪ್ರಕೃತಿಸ್ನೇಹಿ ನಗರ ನಿರ್ವಣದ ಆಲೋಚನೆಗಳೇ ಇಂದು ಬೆಂಗಳೂರು ವಿಶ್ವದ ಅತ್ಯಂತ ಆಕರ್ಷಕ ನಗರಗಳಲ್ಲಿ ಒಂದಾಗಿ ಬೆಳೆಯಲು ಗಟ್ಟಿ ಬುನಾದಿಯಾಗಿದೆ.
ನಾಡಪ್ರಭು ಕೆಂಪೇಗೌಡರು ಅಂದು ನಿರ್ವಿುಸಿದ ‘ಬೆಂಗಳೂರು ಕಲ್ಯಾಣನಗರಿ’ ಕೇವಲ ಒಂದು ಆಡಳಿತ ಕೇಂದ್ರವಾಗಿರಲಿಲ್ಲ. ಅದೊಂದು ವ್ಯವಸ್ಥಿತ, ಸ್ವಾವಲಂಬಿ ಮತ್ತು ಇಂದಿನ ಆಧುನಿಕ ನಗರಾಭಿವೃದ್ಧಿ ತಜ್ಞರನ್ನೂ ಆಶ್ಚರ್ಯಚಕಿತರನ್ನಾಗಿಸುವಂತಹ ವೈಶಿಷ್ಟ್ಯಗಳನ್ನು ಹೊಂದಿದ್ದ ನಗರವಾಗಿತ್ತು. ಆಸಕ್ತಿದಾಯಕ ಸಂಗತಿಯೆಂದರೆ, ಕೆಂಪೇಗೌಡರು ನಗರದ ರಸ್ತೆಗಳನ್ನು ಎಷ್ಟು ಅಗಲವಾಗಿ ನಿರ್ವಿುಸಿದ್ದರೆಂದರೆ, ಅಂದಿನ ಕಾಲದ ದೊಡ್ಡ ಆನೆಗಳು ಒಂದಕ್ಕೊಂದು ತಾಗದೆ ಸುಲಭವಾಗಿ ಸಂಚರಿಸಬಹುದಿತ್ತು ಎಂದು ಇತಿಹಾಸಕಾರರು ಉಲ್ಲೇಖಿಸಿದ್ದಾರೆ. ಅಂದರೆ, ಭವಿಷ್ಯದ ವಾಹನ ದಟ್ಟಣೆಯನ್ನು ಅವರು ಅಂದೇ ಪರೋಕ್ಷವಾಗಿ ಊಹಿಸಿದ್ದರು! ನಾಡಪ್ರಭು ಕೆಂಪೇಗೌಡರು 1537ರಲ್ಲಿ ಕೋಟೆಯನ್ನು ಕಟ್ಟಿದಾಗ ಬೆಂಗಳೂರಿನ ವಿಸ್ತೀರ್ಣ ಇದ್ದದ್ದು ಕೇವಲ 2 ಚ.ಕಿ.ಮೀ.; ಈಗ 800 ಚ.ಕಿ.ಮೀ.ಗೆ ವ್ಯಾಪಿಸಿದ್ದು, 489 ವರ್ಷಗಳಲ್ಲಿ 400 ಪಟ್ಟು ಬೆಳೆದಿದೆ. ಅಂದು ಬೆಂಗಳೂರು ದಟ್ಟವಾದ ಕಾಡುಗಳು, ತೋಟಗಳು, ಕೆರೆಗಳು, ಕೃಷಿ ಭೂಮಿ ಮತ್ತು ಬಂಡೆಗಳಿಂದ ಕೂಡಿದ ಗುಡ್ಡಗಾಡು ಪ್ರದೇಶವಾಗಿತ್ತು. ಕೆೆಂಪೇಗೌಡರು ಇತಿಹಾಸವನ್ನು ಸುಂದರ, ಭದ್ರ, ಭವ್ಯ ಅಡಿಗಲ್ಲಿನ ಮೇಲೆ ಸೃಷ್ಟಿಸಿದರು. ಕೆಂಪೇಗೌಡರು ಮಾಡಿರುವ ಆದರ್ಶ ಸೇವಾಕೈಂಕರ್ಯದ ಸತ್ಪಲವನ್ನು ಬೆಂಗಳೂರಿನ ಜನತೆ ಇಂದಿಗೂ ಅನುಭವಿಸುತ್ತಿದ್ದಾರೆ. ಮಾತ್ರವಲ್ಲ, ಬೆಂಗಳೂರು ಜಾಗತಿಕ ಮಟ್ಟದಲ್ಲಿ ವರ್ಚಸ್ಸು ಹೆಚ್ಚಿಸಿಕೊಂಡಿದ್ದು, ಎಲ್ಲ ಜಾತಿ, ಧರ್ಮದವರಿಗೆ ಆಶ್ರಯ ನೀಡಿದೆ.

ಕನಸು ಸಾಕಾರವಾದ ಬಗೆ

ನಾಡಪ್ರಭು ಕೆಂಪೇಗೌಡರಲ್ಲಿ ಬೆಂಗಳೂರು ನಗರವನ್ನು ನಿರ್ವಿುಸಬೇಕೆಂಬ ಕನಸು ಮೂಡಿದ ಹಿನ್ನೆಲೆ ಮತ್ತು ಅದು ನನಸಾದ ಹಾದಿ ಒಂದು ರೋಚಕ ಇತಿಹಾಸ. ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಅವರು, ತಮ್ಮ ಹಳೆಯ ರಾಜಧಾನಿಯಾಗಿದ್ದ ಯಲಹಂಕದಿಂದ ಒಂದು ಭವ್ಯವಾದ, ಸುಸಜ್ಜಿತವಾದ ಹೊಸ ನಗರವನ್ನು ಕಟ್ಟಲು ಸಂಕಲ್ಪಿಸಿದರು. ಐತಿಹಾಸಿಕ ದಾಖಲೆಗಳ ಪ್ರಕಾರ, ಕೆಂಪೇಗೌಡರು ಒಮ್ಮೆ ತಮ್ಮ ಮಂತ್ರಿಗಳು ಹಾಗೂ ಸೈನಿಕರೊಂದಿಗೆ ಇಂದಿನ ಸೆಂಟ್ರಲ್ ಕಾಲೇಜು ಮತ್ತು ಕಂಠೀರವ ಕ್ರೀಡಾಂಗಣದ ಸುತ್ತಮುತ್ತಲಿನ ದಟ್ಟವಾದ ಅರಣ್ಯ ಪ್ರದೇಶಕ್ಕೆ ಬೇಟೆಯಾಡಲು ಬಂದಿದ್ದರು. ಅಲ್ಲಿ ಅವರು ಒಂದು ಅಚ್ಚರಿಯ ದೃಶ್ಯವನ್ನು ನೋಡಿದರು. ಸಾಮಾನ್ಯ ಮೊಲವೊಂದು ಹಸಿರು ಹುಲ್ಲುಗಾವಲಿನಲ್ಲಿ ತನಗಿಂತ ಬಲಿಷ್ಠವಾಗಿದ್ದ ಬೇಟೆ ನಾಯಿಗಳನ್ನು ಎದುರಿಸಿ, ಅವುಗಳನ್ನು ಬೆನ್ನಟ್ಟುತ್ತಿತ್ತು! ಈ ಮಣ್ಣಿನಲ್ಲಿ ಏನೋ ವಿಶಿಷ್ಟವಾದ ಶಕ್ತಿ ಇದೆ, ಇದು ಧೀರರ ಮತ್ತು ವೀರರ ಭೂಮಿ ಎಂದು ಭಾವಿಸಿದರು. ಸಾಮ್ರಾಜ್ಯದ ಭದ್ರತೆಗೆ, ವ್ಯಾಪಾರದ ಬೆಳವಣಿಗೆಗೆ ಮತ್ತು ಭವಿಷ್ಯದ ಪೀಳಿಗೆಗೆ ಇದೇ ಸೂಕ್ತವಾದ ಜಾಗ ಎಂದು ನಿರ್ಧರಿಸಿದರು.

ಭೌಗೋಳಿಕ ಮತ್ತು ರಾಜತಾಂತ್ರಿಕ ಕಾರಣಗಳು

ಬೇಟೆಯ ಘಟನೆ ಮಾತ್ರವಲ್ಲದೆ, ಕೆಂಪೇಗೌಡರ ತಲೆಯಲ್ಲಿ ರಾಜತಾಂತ್ರಿಕ ಲೆಕ್ಕಾಚಾರಗಳೂ ಇದ್ದವು. ಅಂದಿನ ಯಲಹಂಕ ಮತ್ತು ಶಿವನಸಮುದ್ರ ಕೋಟೆಗಳು ರಕ್ಷಣೆಯ ದೃಷ್ಟಿಯಿಂದ ಅಷ್ಟೊಂದು ವಿಸ್ತಾರವಾಗಿರಲಿಲ್ಲ. ಆದರೆ ಈ ಹೊಸ ಜಾಗವು ಪ್ರಸ್ಥಭೂಮಿಯ ಎತ್ತರದ ಪ್ರದೇಶದಲ್ಲಿದ್ದು, ವೈರಿಗಳ ದಾಳಿಯನ್ನು ತಡೆಯಲು ಮತ್ತು ನಿಗಾವಹಿಸಲು ಸೂಕ್ತವಾಗಿತ್ತು. ವಿಜಯನಗರದ ದೊರೆ ಅಚ್ಯುತರಾಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಕೆಂಪೇಗೌಡರು, ದಕ್ಷಿಣ ಭಾರತದಲ್ಲಿ ಒಂದು ಪ್ರಮುಖ ವಾಣಿಜ್ಯ ಕೇಂದ್ರವನ್ನು ಸ್ಥಾಪಿಸಲು ಅವರ ಅನುಮತಿಯನ್ನು ಪಡೆದರು. 1537ರಲ್ಲಿ ಕೆಂಪೇಗೌಡರು ತಮ್ಮ ಕನಸಿನ ನಗರದ ನಿರ್ಮಾಣ ಕಾರ್ಯವನ್ನು ಯೋಜನಾಬದ್ಧವಾಗಿ ಆರಂಭಿಸಿದರು.

ಆರ್ಥಿಕ ದೂರದೃಷ್ಟಿ

ಕೆಂಪೇಗೌಡರು ಕೇವಲ ಒಂದು ಕೋಟೆಯನ್ನು ಕಟ್ಟಲಿಲ್ಲ; ಅದನ್ನೊಂದು ಸ್ವಾವಲಂಬಿ ಆರ್ಥಿಕ ಕೇಂದ್ರವನ್ನಾಗಿ ಮಾಡಿದರು. ಕೋಟೆಯ ಒಳಭಾಗದಲ್ಲಿ ಜನರ ಆರ್ಥಿಕ ಸಬಲೀಕರಣಕ್ಕಾಗಿ 64ಕ್ಕೂ ಹೆಚ್ಚು ವಿಭಿನ್ನ ವೃತ್ತಿ ಆಧಾರಿತ ‘ಪೇಟೆಗಳನ್ನು’ ವ್ಯವಸ್ಥಿತವಾಗಿ ರೂಪಿಸಿದರು. ಜನವಸತಿಗಾಗಿ ಕೆರೆಗಳನ್ನು ತೋಡಿಸಿ ನೀರಾವರಿ ಕಲ್ಪಿಸಿದರು, ರೈತರಿಗೆ ಅನುಕೂಲ ಮಾಡಿಕೊಟ್ಟರು.
* ಚಿಕ್ಕಪೇಟೆ ಮತ್ತು ದೊಡ್ಡಪೇಟೆ: ಮುಖ್ಯ ವಾಣಿಜ್ಯ ಕೇಂದ್ರಗಳಾದವು. 
* ಅಕ್ಕಿಪೇಟೆ, ರಾಗಿಪೇಟೆ, ಅರಳೆಪೇಟೆ, ಬಳೇಪೇಟೆ, ಕುಂಬಾರಪೇಟೆ: ಆಯಾ ನಿರ್ದಿಷ್ಟ ವಸ್ತುಗಳ ವ್ಯಾಪಾರಕ್ಕೆ ಮೀಸಲಾಗಿದ್ದವು. ಈ ವ್ಯವಸ್ಥಿತ ಮಾರುಕಟ್ಟೆ ಯೋಜನೆ ಇಂದಿಗೂ ಬೆಂಗಳೂರಿನ ಹಳೇ ಭಾಗಗಳಲ್ಲಿ ಜೀವಂತವಾಗಿದೆ.
* ತಿಗಳರಪೇಟೆ: ತರಕಾರಿ ಮತ್ತು ಹೂವು ಬೆಳೆಯುವವರಿಗಾಗಿ.
* ಗಾಣಿಗರಪೇಟೆ: ಎಣ್ಣೆ ತೆಗೆಯುವ ಕಾಯಕದವರಿಗಾಗಿ.
* ಉಪ್ಪಾರಪೇಟೆ: ಉಪ್ಪು ಮಾರಾಟಗಾರರು ಮತ್ತು ಗಾರೆ ಕೆಲಸದವರಿಗಾಗಿ.
* ನಗರ್ತಪೇಟೆ: ಚಿನ್ನ ಹಾಗೂ ಅಮೂಲ್ಯ ರತ್ನಗಳ ವ್ಯಾಪಾರಿಗಳಿಗಾಗಿ ಮೀಸಲಾಗಿತ್ತು.
ಈ ವ್ಯವಸ್ಥೆಯಿಂದಾಗಿ ಇಡೀ ನಗರವು ಪರಸ್ಪರ ಅವಲಂಬಿತವಾಗಿದ್ದರೂ, ತನ್ನದೇ ಆದ ಆರ್ಥಿಕ ಶಕ್ತಿಯನ್ನು ಹೊಂದಿತ್ತು.

ಪರಿಸರ ಕಾಳಜಿ

ಬೆಂಗಳೂರಿಗೆ ಯಾವುದೇ ದೊಡ್ಡ ನದಿಯ ಸಂಪರ್ಕವಿಲ್ಲ ಎಂಬುದನ್ನು ಅರಿತಿದ್ದ ಕೆಂಪೇಗೌಡರು, ನಗರದ ಜನರಿಗೆ ನೀರಿನ ಕೊರತೆಯಾಗದಂತೆ ನೂರಾರು ಕೆರೆಗಳನ್ನು ನಿರ್ವಿುಸಿದರು. ಮಳೆನೀರನ್ನು ಸಂಗ್ರಹಿಸಲು ಅವರು ರೂಪಿಸಿದ ಕೆರೆಗಳ ಸರಪಳಿ ವ್ಯವಸ್ಥೆ ಅತ್ಯಾಧುನಿಕವಾಗಿತ್ತು. ಕೆಂಪಾಂಬುಧಿ ಕೆರೆ, ಧರ್ವಂಬುಧಿ ಕೆರೆ (ಇಂದಿನ ಮೆಜೆಸ್ಟಿಕ್ ಬಸ್ ನಿಲ್ದಾಣವಿರುವ ಜಾಗ), ಹಲಸೂರು ಕೆರೆ, ಕೆಂಪಾಂಬುಧಿಕೆರೆ, ಕಾರಂಜಿಕೆರೆ, ಸಂಪಂಗಿಕೆರೆ, ಸಿದ್ಧನಕಟ್ಟೆ, ಗಿಡ್ಡಪ್ಪನಕೆರೆ, ಜಕ್ಕರಾಯನಕೆರೆ, ದೊಮ್ಮಲೂರುಕೆರೆ, ಬೆಳ್ಳಂದೂರುಕೆರೆ, ಲಾಲ್ಬಾಗ್ ಕೆರೆ ಮುಂತಾದವುಗಳನ್ನು ನಿರ್ವಿುಸಿ ನಗರದ ಅಂತರ್ಜಲ ಮಟ್ಟ ಕಾಯ್ದುಕೊಳ್ಳುವಂತೆ ಮಾಡಿದರು. ಹಾಗಾಗಿಯೇ, ಹಳೇ ಬೆಂಗಳೂರು ಎಂದಾಕ್ಷಣ ಜಲಸಮೃದ್ಧಿಯ ಚಿತ್ರಣ ಸ್ಮೃತಿಪಟಲದಲ್ಲಿ ಹಾದುಹೋಗುತ್ತದೆ.

ಸಾಂಸ್ಕೃತಿಕ ಸಹಿಷ್ಣುತೆ

ನಗರದ ಸಾಂಸ್ಕೃತಿಕ ಬೆಳವಣಿಗೆಗೆ ಪೂರಕವಾಗಿ ಅವರು ಅನೇಕ ಭವ್ಯ ದೇವಾಲಯಗಳನ್ನು ನಿರ್ವಿುಸಿದರು ಹಾಗೂ ಜೀಣೋದ್ಧಾರ ಮಾಡಿದರು. ಬಸವನಗುಡಿಯ ಕಾಡು ಮಲ್ಲೇಶ್ವರ, ಬುಲ್ ಟೆಂಪಲ್ (ದೊಡ್ಡ ಗಣೇಶ ಮತ್ತು ಬಸವಣ್ಣನ ಗುಡಿ) ಮತ್ತು ಗವಿಗಂಗಾಧರೇಶ್ವರ ಸನ್ನಿಧಿಗಳು ಇದಕ್ಕೆ ಸಾಕ್ಷಿ. ಕಲೆ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಗೆ ಅವರು ಸಮಾನ ಆದ್ಯತೆ ನೀಡಿದ್ದರು.

ಗಡಿ ಗೋಪುರಗಳು

ಕೆಂಪೇಗೌಡರು ತಮ್ಮ ಆಡಳಿತಾವಧಿಯಲ್ಲಿ ಬೆಂಗಳೂರು ಭವಿಷ್ಯದಲ್ಲಿ ಎಷ್ಟು ಬೆಳೆಯಬಹುದು ಎಂದು ಅಂದಾಜಿಸಿ, ನಗರದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಸುಪ್ರಸಿದ್ಧ ಗಡಿ ಗೋಪುರಗಳನ್ನು ನಿರ್ವಿುಸಿದರು.
* ಉತ್ತರ: ರಮಣ ಮಹರ್ಷಿ ಆಶ್ರಮದ ಬಳಿ (ಸದಾಶಿವನಗರ)
* ದಕ್ಷಿಣ: ಲಾಲ್ಬಾಗ್ ಗುಡ್ಡದ ಮೇಲೆ
* ಪೂರ್ವ: ಹಲಸೂರು ಕೆರೆಯ ಹತ್ತಿರ
* ಪಶ್ಚಿಮ: ಗವಿಗಂಗಾಧರೇಶ್ವರ ದೇವಸ್ಥಾನದ ಬಳಿ (ಗವಿಪುರಂ)
ಅಂದು ಅವರು ಗುರುತಿಸಿದ್ದ ಗಡಿಯನ್ನು ಮೀರಿ ಇಂದು ಬೆಂಗಳೂರು ಮಹಾನಗರವಾಗಿ ಬೆಳೆದಿದ್ದರೂ, ಅಂದಿನ ಕಾಲಕ್ಕೆ ಅವರ ಆಲೋಚನೆ ವಿಸ್ತಾರವಾಗಿತ್ತು.

ವೈಶಿಷ್ಟ್ಯಗಳು

* ಕೆಂಪೇಗೌಡರು ನಗರದ ಸುರಕ್ಷತೆಗಾಗಿ ಮೊದಲು ಮಣ್ಣಿನ ಭದ್ರವಾದ ಕೋಟೆಯನ್ನು ನಿರ್ವಿುಸಿದರು. ಕೋಟೆಯ ಸುತ್ತಲೂ ಆಳವಾದ ಕಂದಕಗಳನ್ನು ತೋಡಿ, ಅದರಲ್ಲಿ ಮೊಸಳೆಗಳನ್ನು ಬಿಡಲಾಗಿತ್ತು ಎನ್ನಲಾಗುತ್ತದೆ. ನಗರ ಪ್ರವೇಶಿಸುವ ಪ್ರಮುಖ ದಿಕ್ಕುಗಳಲ್ಲಿ ಯಲಹಂಕ ದ್ವಾರ, ಹಲಸೂರು ದ್ವಾರ, ಸೋನಾರಬೇಸ್ ದ್ವಾರ ಮುಂತಾದ ರಕ್ಷಣಾತ್ಮಕ ದ್ವಾರಗಳನ್ನು ಸ್ಥಾಪಿಸಲಾಗಿತ್ತು.
* ಅಂದಿನ ಬೆಂಗಳೂರಿನ ರಸ್ತೆಗಳನ್ನು ನೇರ ಹಾಗೂ ಸಮಾನಾಂತರವಾಗಿ ಕತ್ತರಿಸಲಾಗಿತ್ತು. ಪ್ರತಿಯೊಂದು ವೃತ್ತಿಪರ ಸಮುದಾಯಕ್ಕೂ ಒಂದೊಂದು ಪ್ರತ್ಯೇಕ ‘ಪೇಟೆ’ಯನ್ನು ಗುರುತಿಸಿಕೊಟ್ಟಿದ್ದು ಜಗತ್ತಿನಲ್ಲೇ ಅಪರೂಪದ ನಗರಾಭಿವೃದ್ಧಿ ಮಾದರಿ.
* ಬೆಂಗಳೂರಿನಲ್ಲಿ ನೀರಿನ ನೈಸರ್ಗಿಕ ಹರಿವನ್ನು ಸೂಕ್ಷ್ಮವಾಗಿ ಗಮನಿಸಿದ ಕೆಂಪೇಗೌಡರು, ಒಂದು ಕೆರೆ ತುಂಬಿದರೆ ಅದರ ಹೆಚ್ಚುವರಿ ನೀರು ರಾಜಕಾಲುವೆಯ ಮೂಲಕ ಮತ್ತೊಂದು ಕೆರೆಗೆ ಸೇರುವಂತಹ ಸರಪಳಿ ಕೆರೆ ವ್ಯವಸ್ಥೆಯನ್ನು ರೂಪಿಸಿದರು. ಇದು ನಗರಕ್ಕೆ ಕುಡಿಯುವ ನೀರನ್ನು ಒದಗಿಸುವುದರ ಜೊತೆಗೆ, ಸುತ್ತಮುತ್ತಲಿನ ಕೃಷಿ ಭೂಮಿಗೆ ನೀರಾವರಿ ಹಾಗೂ ಅಂತರ್ಜಲದ ಮಟ್ಟವನ್ನು ಸದಾ ಕಾಯ್ದುಕೊಳ್ಳಲು ನೆರವಾಯಿತು.
* ನಗರದ ನಾಲ್ಕೂ ಮೂಲೆಗಳಲ್ಲಿ ಮತ್ತು ಮಧ್ಯಭಾಗದಲ್ಲಿ ಸಾಂಸ್ಕೃತಿಕ ಒಗ್ಗಟ್ಟಿಗಾಗಿ ದೇವಸ್ಥಾನಗಳನ್ನು ಸ್ಥಾಪಿಸಿದರು. ಇವು ಕೇವಲ ಪೂಜಾ ಸ್ಥಳಗಳಾಗಿರದೆ, ಅಂದಿನ ಸಮಾಜದ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರಗಳಾಗಿದ್ದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net