ಮನೆಯ ನಿರ್ಮಾಣದಲ್ಲಿ ತಂತ್ರಜ್ಞಾನದ ಪಾತ್ರ

ಮನೆ ನಿರ್ಮಾಣದಲ್ಲಿ  ತಂತ್ರಜ್ಞಾನ
ಮನೆ ನಿರ್ಮಾಣದಲ್ಲಿ ತಂತ್ರಜ್ಞಾನ
Published on

ಪ್ರಮುಖ ಮುಖ್ಯಾಂಶಗಳು

  • ಮಕ್ಕಳಿಗೆ ತಂತ್ರಜ್ಞಾನದಲ್ಲೇ ಆಟ-ಪಾಠ
  • ಮನೆಯಿಂದಲೇ ಕಚೇರಿ ಕೆಲಸ
  • ಮೊಬೈಲ್ ಲೋಕ
ಬೆಂಗಳೂರು: ಕೈಗಾರಿಕೆಗಳು, ಆಸ್ಪತ್ರೆಗಳು, ಶಾಲೆ-ಕಾಲೇಜು ಮಾತ್ರವಲ್ಲದೆ ಇಂದು ಪ್ರತಿ ಮನೆಯಲ್ಲೂ ತಂತ್ರಜ್ಞಾನದ್ದೇ ಕಾರುಬಾರು. ಹಿಂದೆಲ್ಲಾ ಪ್ರಾಕೃತಿಕ ವಸ್ತುಗಳಿಂದ ಅಲಂಕಾರಗೊಳ್ಳುತ್ತಿದ್ದ ಮನೆ ಇಂದು ತಂತ್ರಜ್ಞಾನ ಆಧಾರಿತ ಯಂತ್ರಗಳಿಂದ ಕಂಗೊಳಿಸುತ್ತಿದೆ. ಮಾತ್ರವಲ್ಲ ಮನೆ ನಿರ್ಮಾಣಕ್ಕೂ ಮೊದಲು ತಂತ್ರಜ್ಞಾನ ಬಳಸಿ ನಕ್ಷೆ ಸಿದ್ಧಪಡಿಸಲಾಗುತ್ತಿದೆ.
ಇನ್ನು ದುಡಿಯುವ ಮಹಿಳೆಯರಿಗಂತೂ ಇದು ಬಹಳಷ್ಟು ಉಪಯೋಗವಾಗಿದೆ. ಮನೆ ಗುಡಿಸಿ ಒರೆಸಲು ವ್ಯಾಕ್ಯೂಮ್ ಕ್ಲೀನರ್, ಖಾರ ಹಾಗೂ ಹಿಟ್ಟು ರುಬ್ಬಲು ಮಿಕ್ಸರ್ ಗ್ರೈಂಡರ್, ಬಟ್ಟೆ ಒಗೆಯಲು ವಾಷಿಂಗ್ ಮಷಿನ್, ಪಾತ್ರೆ ತೊಳೆಯಲು ಡಿಶ್ ವಾಶ್ ಮಷಿನ್, ಟಿವಿ, ಲೈಟ್ ಸೇರಿ ಯಾವುದೇ ವಸ್ತುಗಳು ಚಾಲನೆಯಾಗಲು ರಿಮೋಟ್ ಸ್ವಿಚ್‌ಗಳು ಹೀಗೆ ಮನೆಯ ಬಹುಪಾಲು ಕೆಲವನ್ನೂ ಮನುಷ್ಯರ ಬದಲಿಗೆ ಯಂತ್ರಗಳು ಮಾಡುತ್ತಿವೆ.
ಹಿಂದೆಲ್ಲ ಮನುಷ್ಯ ಮಾಡುತ್ತಿದ್ದ ಕೆಲಸಗಳನ್ನು ಇಂದು ಯಂತ್ರಗಳು ಮಾಡುತ್ತಿವೆ. ದಿನವಿಡೀ ಮಾಡಬೇಕಾದ ಕೆಲಸಗಳನ್ನು ಇವು ಕೆಲವೇ ಸೆಕೆಂಡುಗಳಲ್ಲಿ ಮಾಡಿ ಮುಗಿಸುತ್ತಿವೆ. ಇದರ ದೀರ್ಘಾವಧಿ ಪರಿಣಾಮ ಏನೇ ಇರಬಹುದು. ಆದರೆ ಗಂಡ ಹೆಂಡತಿ ಇಬ್ಬರ ದುಡಿಮೆಯೂ ಅನಿವಾರ್ಯವಾಗಿರುವ ಸದ್ಯದ ಪರಿಸ್ಥಿತಿಯಲ್ಲಿ ಇವುಗಳ ಬಳಕೆ ಬಹಳಷ್ಟು ಉಪಯೋಗಕರವಾಗಿವೆ.
ಹಿಂದೆಲ್ಲ ಮನೆ ಕಾಯಲು ನಾಯಿ ಸಾಕುತ್ತಿದ್ದರು. ಕೆಲವರು ಕಾವಲುಗಾರರನ್ನು ನೇಮಿಸಿಕೊಳ್ಳುತ್ತಿದ್ದರು. ಆದರೆ ಇಂದು ಆ ಜಾಗವನ್ನು ಸಿಸಿ ಕ್ಯಾಮರಾ ತುಂಬಿದೆ. ಮನೆಯ ಯಜಮಾನ ಸಿಸಿ ಕ್ಯಾಮರಾದ ಸಂಪರ್ಕವನ್ನು ಮೊಬೈಲ್‌ಗೆ ಲಿಂಕ್ ಮಾಡಿಕೊಂಡರೆ ತಾನಿರುವಲ್ಲಿಯೇ ಮನೆಗೆ ಯಾರು ಬಂದರು, ಹೋದರು ಎಂಬುದನ್ನೆಲ್ಲ ತಿಳಿಯಬಹುದಾಗಿದೆ. ಮನೆಯ ಬಾಗಿಲು ಒಡೆಯಲು ಪ್ರಯತ್ನಿಸಿದರೆ ಸೂಚನೆ ನೀಡುವ ಸೈರೆನ್ ನಂತಹ ತಂತ್ರಜ್ಞಾನವೂ ಇಂದು ಬಳಕೆಯಲ್ಲಿವೆ.

ಮಕ್ಕಳಿಗೆ ತಂತ್ರಜ್ಞಾನದಲ್ಲೇ ಆಟ-ಪಾಠ:

ನಗರ ಪ್ರದೇಶಗಳಲ್ಲಿ ಮಕ್ಕಳಿಗೆ ಆಟವಾಡಲು ಮೈದಾನಗಳ ಕೊರತೆ ಇದೆ. ಮನೆ ಮುಂದಿನ ರಸ್ತೆಯಲ್ಲಿ ಆಡಲು ಹೋದರೆ ವಾಹನಗಳೇ ತುಂಬಿರುತ್ತವೆ. ಹಾಗಾಗಿ ನಗರದಲ್ಲಿ ವಾಸಿಸುವ ಶೇ. 70 ಮಕ್ಕಳು ಟಿವಿ, ಕಂಪ್ಯೂಟರ್ ಹಾಗೂ ಮೊಬೈಲ್‌ಗಳೆ ಗೆಳೆಯರಂತಾಗಿವೆ. ಹೀಗೆ ವಿವಿಧ ರೀತಿಯಲ್ಲಿ ತಂತ್ರಜ್ಞಾನ ದೈನಂದಿನ ಬಳಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಮನೆಯಿಂದಲೇ ಕಚೇರಿ ಕೆಲಸ

ಮಕ್ಕಳಿಗೆ ಆಡಲು - ಕಲಿಯಲು ಮಾತ್ರವಲ್ಲದೆ, ಇಂದು ಬಹಳಷ್ಟು ಕಂಪನಿಗಳ ಉದ್ಯೋಗಿಗಳು ಮನೆಯಲ್ಲೇ ಕುಳಿತು ಕಚೇರಿ ಕೆಲಸ ಮಾಡುವಷ್ಟರ ಮಟ್ಟಿಗೆ ಮನೆಗಳಲ್ಲಿ ತಂತ್ರಜ್ಞಾನ ಬಳಕೆಯಾಗುತ್ತಿದೆ. ಉದ್ಯೋಗ ನಿಮಿತ್ತ ಬೇರೆ ಬೇರೆ ರಾಜ್ಯ ಹಾಗೂ ದೇಶಗಳಿಗೆ ಹೋಗಿ ಸಭೆ ಸಮ್ಮೇಳನಗಳಲ್ಲಿ ಭಾಗವಹಿಸಬೇಕಿತ್ತು. ಆದರೆ ಇಂದು ವೆಬಿನಾರ್, ಝೂಮ್ ಮೀಟಿಂಗಳು ಅದನ್ನೂ ಸಹ ಮನೆಯಿಂದಲೇ ಮಾಡುವಷ್ಟು ಅನುಕೂಲ ಕಲ್ಪಿಸಿವೆ.

ಮೊಬೈಲ್ ಲೋಕ

ಈ ಎಲ್ಲ ಯಂತ್ರಗಳ ಹೊರತಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮೊಬೈಲ್ ತನ್ನದೇ ಲೋಕ ಸೃಷ್ಟಿಸಿದೆ. ದೂರದ ಊರು, ದೇಶಗಳಲ್ಲಿ ನೆಲೆಸಿರುವ ಸಂಬಂಧಿಕರೊಂದಿಗೆ ಯಾವಾಗ ಬೇಕಾದರೂ ಮಾತನಾಡುವ ವ್ಯವಸ್ಥೆ ಒದಗಿಸಿದೆ. ಅದರಲ್ಲೂ ವಿಡಿಯೋ ಕಾಲ್ ಮೂಲಕ ಅವರ ಜೊತೆಯಲ್ಲಿಯೇ ಇರುವ ಅನುಭವ ನೀಡುತ್ತದೆ. ವಿವಾಹ, ನಾಮಕರಣ, ಗೃಹಪ್ರವೇಶ, ಮಾತ್ರವಲ್ಲದೆ ದೇವಾಲಯಗಳಲ್ಲಿ ನಡೆಯುವ ವಿಶೇಷ ಪೂಜೆ, ಅಲಂಕಾರಗಳನ್ನೂ ಇರುವಲ್ಲಿಯೇ ಮೊಬೈಲ್ ಮೂಲಕ ವೀಕ್ಷಿಸುವ ಅವಕಾಶ ಒದಗಿಸಿದೆ. ಇದಕ್ಕೆ ಪೂರಕವಾಗಿ ಮನೆ ನಿರ್ಮಾಣ ಕಾರ್ಯ ಸಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net