ಜಮಖಂಡಿ: ಆಸ್ತಿ, ಸಂಪತ್ತು, ಸಂಸಾರ ಶಾಶ್ವತವಲ್ಲ. ಎಲ್ಲವೂ ಭಗವಂತನ ಸೃಷ್ಟಿ. ಆದರೆ, ಭಗವಂತನನ್ನು ಮರೆತು ಭೌತಿಕ ಸುಖಕ್ಕಾಗಿ ಹಾತೊರೆದು ದುಃಖಿಗಳಾಗಿದ್ದೇವೆ ಎಂದು ತಿಕೋಟಾ ವಿರಕ್ತಮಠದ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಹುಲ್ಯಾಳ ಗ್ರಾಮದ ಗುರುದೇವಾಶ್ರಮದ ಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಪ್ರತಿ ತಿಂಗಳ ನಾಲ್ಕನೆ ಭಾನುವಾರ ಹಮ್ಮಿಕೊಂಡಿದ್ದ ಶ್ರೀಗುರುದೇವ ಸತ್ಸಂಗದ ಆ. 23ರ ಮಾಸಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ‘ನಾವೇಕೆ ದುಃಖಿಗಳಾದೆವು?’ ಎಂಬ ವಿಷಯ ಕುರಿತು ಅನುಭಾವ ಹಂಚಿಕೊಂಡರು.
ಅತಿಯಾಸೆ ಮಾಡಿದರೆ ಮೃತ್ಯುವಿನ ಬಾಯಿಗೆ ತುತ್ತಾಗುತ್ತೇವೆ. ಬಯಕೆಗಳನ್ನು ಕಡಿಮೆ ಮಾಡಿಕೊಂಡು ಗಳಿಕೆ ಮಾಡಿ ಎಲ್ಲವನ್ನು ಭಗವಂತ ಕರುಣಿಸಿದ್ದಾನೆಂದು ತಿಳಿದರೆ ದುಃಖವೇ ಇಲ್ಲ ಎಂದರು.
ಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ಮಾತನಾಡಿ, ಅತಿಯಾದ ನಿರೀಕ್ಷೆ, ಅತಿಯಾದ ಆಸೆ ಮತ್ತು ಮೋಹ, ಸೋಲು ಮತ್ತು ನಷ್ಟ ಹಾಗೂ ಹಿಂದಿನ ಕಹಿ ಘಟನೆಗಳನ್ನು ನೆನಪಿಸಿಕೊಳ್ಳುವುದು ನಾವು ದುಃಖಿಗಳಾಗಲು ಕಾರಣಗಳಾಗಿವೆ ಎಂದು ಆಶೀರ್ವಚನ ನೀಡಿದರು.
ಮಹಾಪ್ರಸಾದದ ದಾಸೋಹ ಸೇವೆಗೈದ ಮುಧೋಳ ತಾಲೂಕಿನ ಮಾಲಾಪುರ ಗ್ರಾಮದ ಶ್ರೀಶೈಲಗೌಡ ಬಾಳಪ್ಪಗೌಡ ಪಾಟೀಲ ದಂಪತಿಯನ್ನು ಸನ್ಮಾನಿಸಲಾಯಿತು.