ಗುಬ್ಬಿ :ರಿಶಿಷ್ಟ ಜಾತಿ, ಪಂಗಡ ಸಮುದಾಯದ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಗರದಲ್ಲಿ ಗುರುವಾರ ಶ್ರೀಮಹರ್ಷಿ ವಾಲ್ಮೀಕಿ ನಾಯಕ ಸಮಾಜದಿಂದ ಪ್ರತಿಭಟನೆ ನಡೆಸಿ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿವರೆಗೂ ಮೆರವಣಿಗೆ ಮಾಡಲಾಯಿತು.
ತಾಲೂಕು ಆಡಳಿತ ತಲುಪಿದ ಪ್ರತಿಭಟನಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 2022ರಲ್ಲಿ ಪ.ಜಾತಿಗೆ ಶೇ.15ರಿಂದ 17, ಪ.ಪಂಗಡಕ್ಕೆ ಶೇ.3 ರಿಂದ 7 ರಷ್ಟು ಮೀಸಲಾತಿ ಹೆಚ್ಚಿಸಿದೆ. ಆದರೆ ಸರ್ಕಾರಗಳು ಇದನ್ನು ಅಳವಡಿಸಿಕೊಳ್ಳಲು ವಿಳಂಬ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು
.
ಸಮಾಜದ ಮುಖಂಡ ರಾಮಚಂದ್ರಪ್ಪ ಮಾತನಾಡಿ, ಕಳೆದ 70 ವರ್ಷಗಳಿಂದ ಮೀಸಲಾತಿ ಹೆಚ್ಚಿಸುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ. ಆದರೆ ಸರ್ಕಾರ ಮೀಸಲಾತಿ ಹೆಚ್ಚಿಸದೆ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಇದರಿಂದಾಗಿ ಹಿಂದಿನ ಮೀಸಲಾತಿ ಶೇ.3ರಂತೆ 1600 ಹುದ್ದೆ ಮಾತ್ರ ದೊರೆಯಲಿದೆ. ಹೊಸ ಮೀಸಲಾತಿ ಶೇ.7ರಷ್ಟು ಹೆಚ್ಚಿಸಿದಲ್ಲಿ ನಮ್ಮವರಿಗೆ 3 ಸಾವಿರಕ್ಕೂ ಅಧಿಕ ಹುದ್ದೆಗಳು ಲಭಿಸಲಿವೆ ಎಂದರು.
ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಸೌಭಾಗ್ಯಮ್ಮಮಾತನಾಡಿ, ಎಸ್ಸಿ, ಎಸ್ಟಿ ಸಮುದಾಯಗಳಿಗಾಗಿ ಮೀಸಲಾಗಿದ್ದ ಹಣವನ್ನು ಅನ್ಯ ಕಾರ್ಯಗಳಿಗೆ ಬಳಕೆ ಮಾಡಿರುವುದು ಅನ್ಯಾಯ. ನಮ್ಮ ಸಮುದಾಯಗಳಿಗೆ ಮೀಸಲಿದ್ದ ಹಣವನ್ನು ಸಮಾಜದ ಅಭಿವೃದ್ಧಿಗೆ ಬಳಕೆ ಮಾಡಬೇಕು. ಹೊಸ ಮೀಸಲಾತಿ ಜಾರಿಯಾಗುವವರೆಗೆ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬಾರದು ಎಂದು ಆಗ್ರಹಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತರುವಂತೆ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.
ವಾಲ್ಮೀಕಿ ನಾಯಕ ಸಮಾಜದ ಮುಖಂಡ ಜಿ.ಎಲ್.ರಂಗನಾಥ್ ಮಾತನಾಡಿದರು. ಮುಖಂಡರಾದ ಲಕ್ಷ್ಮೀರಂಗಯ್ಯ, ರಾಘವೇಂದ್ರ, ನಾಗರಾಜು, ಲಕ್ಷ$್ಮಣಪ್ಪ, ರಮೇಶ್, ಹೊಸಹಳ್ಳಿ ರಂಗನಾಥ್, ರವೀಶ್, ಹೇರೂರು ನಾಗಣ್ಣ, ರಾಧಮಣಿ ಮತ್ತಿತರರಿದ್ದರು.