ಹೆದ್ದಾರಿಯಲ್ಲಿ ಎನ್‌ಎಚ್‌ಎಐ ರಸ್ತೆ ಸುರಕ್ಷತಾ ಕ್ರಮ

ಬ್ಯಾಟರಾಯನಪುರ, ಕೊಡಿಗೇಹಳ್ಳಿಯಲ್ಲಿ ಪಾದಚಾರಿ ಮಾರ್ಗ
The NHAI has initiated measures to prevent the increasing number of road accidents near the Kodigehalli and Byatarayanapura junctions on the Bellary Road highway.
ಬಳ್ಳಾರಿ ರಸ್ತೆ ಹೆದ್ದಾರಿಯ ಕೊಡಿಗೆಹಳ್ಳಿ ಮತ್ತು ಬ್ಯಾಟರಾಯನಪುರ ಜಂಕ್ಷನ್ ಬಳಿ ಹೆಚ್ಚುತ್ತಿರುವ ರಸ್ತೆ ಅಪಘಾತ ತಡೆಗೆ ಎನ್​ಎಚ್​ಎಐ ಕ್ರಮಕ್ಕೆ ಮುಂದಾಗಿದೆ
Published on: 

ಬೆಂಗಳೂರು : ಬಳ್ಳಾರಿ ರಸ್ತೆ (ಎನ್‌ಎಚ್ 44) ವ್ಯಾಪ್ತಿಯ ಬ್ಯಾಟರಾಯನಪುರ ಮತ್ತು ಕೊಡಿಗೇಹಳ್ಳಿ ಜಂಕ್ಷನ್‌ಗಳಲ್ಲಿ ರಸ್ತೆ ಅಪಘಾತ ತಡೆಗಟ್ಟುವ ಉದ್ದೇಶದಿಂದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ.

ಉತ್ತರ ಬೆಂಗಳೂರಿನ ಈ ಎರಡೂ ಜಂಕ್ಷನ್‌ಗಳು ಅಪಘಾತದ ಅಪಾಯಕಾರಿ ಸ್ಥಳಗಳೆಂದು ಗುರುತಿಸಲ್ಪಟ್ಟಿದ್ದು, 2019ರಿಂದ 2023ರವರೆಗಿನ ಅವಧಿಯಲ್ಲಿ 17 ಮಂದಿ ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ಸಾವಿಗೀಡಾದವರಲ್ಲಿ ಪಾದಚಾರಿಗಳೇ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಪಾದಚಾರಿಗಳ ಸುರಕ್ಷತೆಗೆ ಕಾಮಗಾರಿ ಕೈಗೊಳ್ಳಲಾಗಿದೆ. ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ಜಂಟಿ ಸಹಯೋಗದೊಂದಿಗೆ ಕಾಮಗಾರಿ ನಡೆಸಲಾಗಿದೆ. ಡಬ್ಲ್ಯುಆರ್‌ಐ ಇಂಡಿಯಾ ಸಂಸ್ಥೆಯು ಬ್ಲೂಮ್‌ಬರ್ಗ್ ಫಿಲಾಂತ್ರಪೀಸ್ ಇನಿಶಿಯೇಟಿವ್ ಫಾರ್ ಗ್ಲೋಬಲ್ ರೋಡ್ ಸೇಫ್ಟಿ (ಬಿಐಜಿಆರ್‌ಎಸ್) ಮತ್ತು ಕಂಪಾರ್ಟ್‌ಮೆಂಟ್ ಎಸ್4 ಯೋಜನೆಯಡಿ ತಾಂತ್ರಿಕ ನೆರವು ನೀಡಿದೆ.

ಎರಡೂ ಜಂಕ್ಷನ್‌ಗಳಲ್ಲಿ ಸುಮಾರು 133 ಮೀಟರ್ ಉದ್ದದ ಸುರಕ್ಷಿತ ಪಾದಚಾರಿ ಮಾರ್ಗಗಳನ್ನು ನಿರ್ಮಿಸಲಾಗಿದೆ. ಹೆದ್ದಾರಿಯ ಮಧ್ಯಭಾಗ ಹಾಗೂ ರಾಷ್ಟ್ರೀಯ ಹೆದ್ದಾರಿ ಮತ್ತು ಸರ್ವಿಸ್ ರಸ್ತೆ ನಡುವಿನ ಪ್ರದೇಶಗಳಲ್ಲಿ 240 ಚದರ ಮೀಟರ್ ವಿಸ್ತೀರ್ಣದ ಪಾದಚಾರಿ ಆಶ್ರಯ ತಾಣಗಳನ್ನು ಅಭಿವೃದ್ಧಿಪಡಿಸಲಾಗಿದೆ. ಜತೆಗೆ 1,600 ಚ.ಮೀ. ವಿಸ್ತೀರ್ಣದಲ್ಲಿ ಹೊಸ ಪಾದಚಾರಿ ಮಾರ್ಗಗಳನ್ನು ನಿರ್ಮಿಸಲಾಗಿದೆ.

ವಾಹನಗಳ ವೇಗ ನಿಯಂತ್ರಣಕ್ಕೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ರಸ್ತೆ ಗುರುತುಗಳು, ರೋಡ್ ಸ್ಟಡ್‌ಗಳು ಹಾಗೂ ಸುರಕ್ಷತಾ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.

ಹೆಚ್ಚುತ್ತಿರುವ ಅಪಘಾತಗಳ ಆತಂಕ:

ರಾಜ್ಯದಲ್ಲಿ ರಸ್ತೆ ಸುರಕ್ಷತೆಯ ಸುಧಾರಣೆಯ ಅಗತ್ಯವನ್ನು ಅಂಕಿಅಂಶಗಳು ಒತ್ತಿಹೇಳುತ್ತವೆ. 2024ರಲ್ಲಿ ಕರ್ನಾಟಕದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿದ ಅಪಘಾತಗಳಿಂದ 4,278 ಮಂದಿ ಮೃತಪಟ್ಟಿದ್ದಾರೆ. ಇದೇ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ಒಟ್ಟು 793 ರಸ್ತೆ ಅಪಘಾತ ಸಾವುಗಳು ವರದಿಯಾಗಿದ್ದು, ಈ ಪೈಕಿ 140 ಸಾವುಗಳು ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಸಂಭವಿಸಿವೆ.

ಅಪಘಾತಗಳ ಅಂಕಿಅಂಶಗಳ ಆಧಾರದಲ್ಲಿ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ, ಅಗತ್ಯ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಮೂಲಕ ರಸ್ತೆ ಸುರಕ್ಷತೆ ಹೆಚ್ಚಿಸಲು ಎನ್‌ಎಚ್‌ಎಐ ಮುಂದಾಗಿದೆ.