ನಿಲ್ಲದ ತುಂಡು ಜಮೀನು ಸೇಲ್ ದಂಧೆ

ಅಧಿಕಾರಿಗಳೊಂದಿಗೆ ಸಚಿವ ಕೃಷ್ಣಬೈರೇಗೌಡ ಸಭೆ ನಡೆಸುತ್ತಿರುವುದು
ಅಧಿಕಾರಿಗಳೊಂದಿಗೆ ಸಚಿವ ಕೃಷ್ಣಬೈರೇಗೌಡ ಸಭೆ ನಡೆಸುತ್ತಿರುವುದು
Published on
ಬೆಂಗಳೂರು: ರಾಜ್ಯದಲ್ಲಿ ಹೊಸ ಲೇಔಟ್ ನಿರ್ಮಿಸುವ ಉದ್ದೇಶದಿಂದ ಕೃಷಿ ಜಮೀನನ್ನು ಉದ್ದೇಶಪೂರ್ವಕವಾಗಿ ತುಂಡು ಭೂಮಿಗಳನ್ನಾಗಿ ಮಾಡಿ ಮಾರಾಟ ಮಾಡುತ್ತಿರುವುದಕ್ಕೆ ಕಡಿವಾಣ ಬಿದ್ದಿಲ್ಲ. ಇಂಥದೊಂದು ಮಾಹಿತಿ ಕಂದಾಯ ಇಲಾಖೆ ವರದಿಯಿಂದಲೇ ಬಹಿರಂಗವಾಗಿದೆ.
ಕೃಷಿ ಜಮೀನನ್ನು ವಸತಿ ಪ್ರದೇಶಕ್ಕೆ ಮಾರಾಟ ಮಾಡುವ ದಂಧೆಯನ್ನು ತಪ್ಪಿಸುವ ಸಲುವಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 108ರ ಅನ್ವಯ ಯಾವುದೇ ಸರ್ವೇ ನಂಬರಿನಲ್ಲಿ ಕನಿಷ್ಠ ವಿಸ್ತೀರ್ಣವನ್ನು ನಿಗದಿಪಡಿಸಿ ಆದೇಶ ಹೊರಡಿಸಲಾಗಿತ್ತು. ಅಂದರೆ, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ 3 ಗುಂಟೆ ಮತ್ತು ಇನ್ನುಳಿದ ಜಿಲ್ಲೆಗಳಲ್ಲಿ 5 ಗುಂಟೆ ವಿಸ್ತೀರ್ಣಕ್ಕಿಂತ ಕಡಿಮೆ ಜಾಗಕ್ಕೆ 11ಇ (ಕ್ರಯ ಮತ್ತು ದಾನ) ನಕ್ಷೆಗಳನ್ನು ತಯಾರಿಸುವಂತೆ ಮಾರ್ಗಸೂಚಿ ಹೊರಡಿಸಲಾಗಿತ್ತು. ಆದರೂ ಕೆಲವು ಹಿಡುವಳಿದಾರರು ದುರುದ್ದೇಶಪೂರ್ವಕವಾಗಿ ಕೃಷಿ ಜಮೀನನ್ನು ಪಾಲು- ವಿಭಾಗದ ನೆಪದಲ್ಲಿ 11ಇ ನಕ್ಷೆಗಾಗಿ/ಸ್ವಾವಲಂಬಿ ಮುಖೇನ ಅರ್ಜಿ ಸಲ್ಲಿಸಿ ಒಂದೇ ಸರ್ವೇ ನಂಬರಿನಲ್ಲಿ ಅನುವಂಶಿಕರಿಗೆ ಒಬ್ಬರ ಹೆಸರನ್ನು ಅನೇಕ ಬಾರಿ ಪುನರಾವರ್ತನೆ ಆಗುವಂತೆ ಒಂದೂ ಕಾಲು ಗುಂಟೆ ಅಥವಾ 2 ಗುಂಟೆ ಇತ್ಯಾದಿಗಳಿಗೆ 11ಇ ನಕ್ಷೆ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ 11ಇ ನಕ್ಷೆಗಳನ್ನು ಪಡೆದು ನಿವೇಶನಗಳನ್ನಾಗಿ ವಿಂಗಡಿಸಿ, ಮಾರಾಟ ಮಾಡುತ್ತಿರುವುದು
ಅದರಲ್ಲಿಯೂ ಚನ್ನರಾಯಪಟ್ಟಣ, ಮದ್ದೂರು, ದಾವಣಗೆರೆ ಸೇರಿ ವಿವಿಧ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಈ ರೀತಿ ತಲಾ 5 ಗುಂಟೆಗೂ ಕಡಿಮೆ ವಿಸ್ತೀರ್ಣಕ್ಕೆ ಒಂದೇ ಸರ್ವೇ ನಂಬರಿನಲ್ಲಿ ವಿಭಾಗದ ಉದ್ದೇಶಕ್ಕಾಗಿ 11ಇ ನಕ್ಷೆ ಪಡೆದು ಅದರಂತೆ ಪ್ರತ್ಯೇಕ ಭೂ ಪರಿರ್ವನತೆ ಮಂಜೂರಾತಿ ಕೋರಿ ಜಿಲ್ಲಾಧಿಕಾರಿಗಳಿಗೆ ಅರ್ಜಿಗಳನ್ನು ಸಲ್ಲಿಸಿ ಭೂ ಪರಿವರ್ತನೆ ಮಾಡಿಸಿಕೊಳ್ಳುತ್ತಿದ್ದಾರೆ. ಈ ರೀತಿ ಕಡಿಮೆ ವಿಸ್ತೀರ್ಣಕ್ಕೆ ತುಂಡು-ತುಂಡು ಮಾಡಿ ಭೂಮಿ ಮಾರಾಟ ಅಥವಾ ರೆವಿನ್ಯೂ ಬಡಾವಣೆ ನಿರ್ಮಾಣ ಮಾಡಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ನಗರಾಭಿವೃದ್ಧಿ ಕಾಯ್ದೆಯಡಿ ನಿಯಮಬದ್ಧವಾಗಿ ಅನುಮೋದನೆ ಪಡೆಯದೆ ಕೃಷಿ ಭೂಮಿಯನ್ನು ಸೈಟು, ಕಟ್ಟಡ ನಿರ್ಮಾಣಕ್ಕೆ ಪರಿವರ್ತಿಸುತ್ತಿರುವುದು ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 95ರ ಉಲ್ಲಂಘನೆಯಾಗಿದೆ.
ಆದ್ದರಿಂದ ತುಂಡು ತುಂಡು ಜಮೀನಿಗೆ 11ಇ ನಕ್ಷೆಗಳನ್ನು ಪಡೆದು ಹಿಸ್ಸೆಗಳನ್ನು ದುರಸ್ತಿಪಡಿಸಿ ಭೂಪರಿವರ್ತನೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಇಂತಹ ಅರ್ಜಿಗಳನ್ನು ಗುರುತಿಸಿ ಭೂಪರಿವರ್ತನೆಗೆ ಆದೇಶ ನೀಡದೆ ಹಿಸ್ಸೆಗಳನ್ನು ರದ್ದುಪಡಿಸಿ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ಕಟ್ಟಾಜ್ಞೆ ಮಾಡಿದೆ.

ಪಿತ್ರಾರ್ಜಿತ ಆಸ್ತಿ, ವಿಭಾಗ ಪತ್ರಕ್ಕೆ ಅವಕಾಶ

ಕೃಷಿ ಭೂಮಿಯನ್ನು ಪಿತ್ರಾರ್ಜಿತವಾಗಿ ಅಥವಾ ಅನುವಂಶಿಕವಾಗಿ ಸ್ಪೀಕರಿಸಿದ ಹಕ್ಕು ಒಳಗೊಂಡ ಜಮೀನಿನ ವಿಭಾಗಕ್ಕೆ 11ಇ ನಕ್ಷೆ ಕೋರಿ ಅರ್ಜಿ ಸಲ್ಲಿಸಬಹುದು. ಪಾಲುದಾರರಿಗೆ 5 ಗುಂಟೆಗಿಂತ ಕಡಿಮೆ ವಿಸ್ತೀರ್ಣಕ್ಕೆ 1ಕ್ಕಿಂತ ಹೆಚ್ಚು ಬ್ಲಾಕ್ ಸೃಜಿಸಲು ಅವಕಾಶ ಇರುವುದಿಲ್ಲ. ಇದಲ್ಲದೆ, ಅದೇ ಸರ್ವೇ ನಂಬರಿಗೆ ಒಂದಕ್ಕಿಂತ ಹೆಚ್ಚು ಬಾರಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಇಂತಹ ಆಸ್ತಿಯನ್ನು ವಿಭಾಗ ಪತ್ರ ಮಾಡಿಕೊಳ್ಳುವ ಉದ್ದೇಶದಿಂದ ನಿಗದಿಗಿಂತ ಕಡಿಮೆ ಗುಂಟೆಯಲ್ಲಿ 11ಇ ನಕ್ಷೆ ಪಡೆಯಲು ಅವಕಾಶ ಇರಲಿದೆ.

ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ

ತುಂಡು ಜಮೀನಿಗೆ 11ಇ ನಕ್ಷೆ ಪಡೆದು ಭೂಪರಿವರ್ತನೆಗೆ ಸಲ್ಲಿಸಿದಾಗ ಭೂದಾಖಲೆಗಳ ಉಪನಿರ್ದೇಶಕರು ನಿಯಮಾನುಸಾರ ಸ್ವಯಂಪ್ರೇರಿತ ಮೇಲ್ಮನವಿ ದಾಖಲಿಸಿಕೊಂಡು ಹಿಸ್ಸೆಗಳನ್ನು ರದ್ಧುಪಡಿಸಬೇಕು. ಬದಲಿಗೆ ಅಕ್ರಮವಾಗಿ ನಕ್ಷೆ, ದುರಸ್ತಿ ಮಾಡಿದ ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಶಿಸ್ತುಕ್ರಮ ತೆಗೆದುಕೊಳ್ಳುವುದಾಗಿ ಕಂದಾಯ ಇಲಾಖೆ ಎಚ್ಚರಿಕೆ ನೀಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net