ಮೆಟ್ರಿ ಗ್ರಾಮದ ಸರ್ಕಾರಿ ಆಸ್ಪತ್ರೆ ಎದುರಿಗೆ ನೀರಿನ ಪೈಪ್ ದುರಸ್ತಿಗೊಳಿಸುತ್ತಿರುವುದು.
Published on:
Copied
Follow Us
ಕಂಪ್ಲಿ:ಮೆಟ್ರಿ ಗ್ರಾಮದ 4ನೇ ವಾರ್ಡ್‌ನ ಭಜನೆ ಮಂದಿರ, ಸರ್ಕಾರಿ ಆಸ್ಪತ್ರೆ ಎದುರಿನ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ನೀರು ಬರುತ್ತಿಲ್ಲ. ಮೋಟರ್ ಸುಟ್ಟು ಹೋಗಿದ್ದರೂ ಸಿಬ್ಬಂದಿ ಬಂದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಹಳೆಯ ಮೋಟರ್‌ಗಳನ್ನೇ ಅಳವಡಿಸುವುದರಿಂದ ಪದೇ ಪದೆ ಸುಟ್ಟು ಹೋಗುತ್ತಿವೆ. ಸರ್ಕಾರಿ ಆಸ್ಪತ್ರೆ ಎದುರಿಗೆ ಪೈಪ್ ದುರಸ್ತಿಗಾಗಿ ಗುಂಡಿ ತೋಡಿರುವುದಾಗಿ ಗ್ರಾಮಸ್ಥರಾದ ಸಾಧು ಅಂಜಿನಿ, ತಾಯಪ್ಪ, ಲೋಕಿ, ಕೋಳಿ ಜಡೆಪ್ಪ, ಪಕ್ಕಿರಪ್ಪ, ಶಿವರಾಮ ಹೇಳಿದ್ದು, ಸಮರ್ಪಕ ನೀರು ಪೂರೈಸುವಂತೆ ಒತ್ತಾಯಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಪಿಡಿಒ ಬೀರಲಿಂಗ, ಕಾರ್ಯದರ್ಶಿ ಎಚ್.ಹುಲುಗಪ್ಪ, ಭಾನುವಾರ ರಾತ್ರಿ ಏಕಕಾಲಕ್ಕೆ ಎರಡು ಮೋಟರ್ ಸುಟ್ಟಿವೆ. ಗ್ರಾಮಾಡಳಿತದಿಂದ ಪೆಟ್ರೋಲ್ ಬಂಕ್ ಹತ್ತಿರ ಹಾಗೂ ಸರ್ಕಾರಿ ಆಸ್ಪತ್ರೆ ಎದುರಿನ ಮೋಟರ್‌ಗಳನ್ನು ದುರಸ್ತಿಗೊಳಿಸಿ ನೀರು ಪೂರೈಕೆಗೆ ಸಜ್ಜುಗೊಳಿಸಲಾಗಿದೆ.
ಜನರಲ್ಲಿ ತಾಳ್ಮೆ ಇಲ್ಲ. ಜನರ ಸಹಕಾರ ಇಲ್ಲದಿರುವುದರಿಂದ ನೀರು ಪೂರೈಕೆಯಲ್ಲಿ ತೊಂದರೆಯಾಗುತ್ತಿದೆ. ಗುಂಡಿ ಅಗೆದು ಅವರೇ ನೀರಿನ ಸಂಪರ್ಕ ಪಡೆದುಕೊಳ್ಳುತ್ತಾರೆ. ಸಮಯಕ್ಕೆ ಅನುಸಾರವಾಗಿ ನೀರು ಪೂರೈಸುತ್ತಿದ್ದರೂ, ಕೆಲವರು ಬೀಗ ಒಡೆದು, ಸ್ವತಃ ಮೋಟರ್ ಆನ್ ಮಾಡಿಕೊಂಡು ನೀರು ಬಿಟ್ಟುಕೊಳ್ಳುತ್ತಾರೆ.
ಜನರ ಅಸಹಕಾರದಿಂದ ಪದೇ ಪದೆ ಮೋಟರ್ ಸುಡುತ್ತಿವೆ. ಜನರು ಸಹಕರಿಸಿದರೆ ಸಮರ್ಪಕವಾಗಿ ನೀರು ಪೂರೈಸಲು ಸಾಧ್ಯ ಎಂದು ತಿಳಿಸಿದರು.