

ಅಫಜಲಪುರ: ಪವಿತ್ರ ಶ್ರಾವಣದಲ್ಲಿ ಭಗವಂತನಿಗೆ ನಿಷ್ಕಲ್ಮಷ ಮನಸ್ಸಿನಿಂದ ಆರಾಧಿಸಿದರೆ ಸಕಲ ಇಷ್ಟಾರ್ಥ ಪ್ರಾಪ್ತಿಯಾಗುತ್ತವೆ. ನಿತ್ಯ ಲಿಂಗ ಪೂಜೆಯಿಂದ ಮನುಷ್ಯನ ಅಂತರಾತ್ಮ ಪರಿಶುದ್ಧಗೊಳ್ಳುತ್ತದೆ ಎಂದು ಗುರು ಮಳೇಂದ್ರ ಸಂಸ್ಥಾನ ಹಿರೇಮಠದ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು. ಶ್ರೀಮಠದಲ್ಲಿ ಸೋಮವಾರ ಬೆಳಗ್ಗೆ ಹಮ್ಮಿಕೊಂಡಿದ್ದ ಸಾಮೂಹಿಕ ಇಷ್ಟಲಿಂಗ ಇಷ್ಟಲಿಂಗ ಪೂಜೆಯಲ್ಲಿ ಮಾತನಾಡಿ, ದೇಶದ ಭವಿಷ್ಯದ ರೂವಾರಿಗಳಾದ ಯುವ ಸಮೂಹ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ಹಿರಿಯರು ಧಾರ್ಮಿಕ ಹಾಗೂ ನೈತಿಕ ಮೌಲ್ಯಗಳ ಬಗ್ಗೆ ತಿಳಿಸಬೇಕು. ಮಕ್ಕಳಿಗೆ ಶಿಸ್ತು, ಗೌರವ, ದಯೆ, ಕರುಣೆ ಮತ್ತು ಸಾಮಾಜಿಕ ಜವಾಬ್ದಾರಿ ಕಲಿಸಬೇಕು ಎಂದು ಹೇಳಿದರು. ಅಫಜಲಪುರ ದೇವಲ ಗಾಣಗಾಪುರ ನಗರ ಯೋಜನಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ ಕರಜಗಿ, ಪ್ರಮುಖರಾದ ಕಂಟೆಪ್ಪ ಬಳೂರಗಿ, ಶ್ರೀಶೈಲ ದೇಸಾಯಿ, ಸಂಗ್ರಾಮಗೌಡ ಪಾಟೀಲ್, ಬಸವರಾಜ ಅಂದೋಡಗಿ, ಪ್ರಶಾಂತ ಹಿರೇಮಠ, ಮಲ್ಲಿಕಾರ್ಜುನ ವಾಲಿ, ರಾಜಕುಮಾರ ಹಿರೇಮಠ, ಅಶೋಕ ಭೂತಿ, ಸಂತೋಷ ರಾಂಪೂರ ಇತರರಿದ್ದರು.