ವಾಸನೆ ಬಂದ ಮಾತ್ರಕ್ಕೆ ಮದ್ಯ ಸೇವಿಸಿದ್ದಾರೆ ಎಂದಲ್ಲ| High court

High court
High court
Published on

ಪ್ರಮುಖ ಮುಖ್ಯಾಂಶಗಳು

  • ಅಪಘಾತ ಪರಿಹಾರ ಪ್ರಕರಣದಲ್ಲಿ ಹೈಕೋರ್ಟ್​ ಅವಲೋಕನ
ಬೆಂಗಳೂರು: ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮೃತನ ಹೊಟ್ಟೆಯಲ್ಲಿ ಮದ್ಯದ ವಾಸನೆ ಇತ್ತು ಎಂಬ ಅಂಶವೊಂದನ್ನೇ ಆಧರಿಸಿ, ಅಪಘಾತದ ವೇಳೆ ಚಾಲಕ ಮದ್ಯದ ಪ್ರಭಾವದಲ್ಲಿದ್ದ ಎಂದು ಅಪಘಾತ ಪರಿಹಾರ ವಿಮೆ ನಿರಾಕರಿಸಲಾಗದು ಎಂದು ಹೈಕೋರ್ಟ್​ ಹೇಳಿದೆ.
2006ರಲ್ಲಿ ಸಂಭವಿಸಿದ ಅಪಘಾತ ಪ್ರಕರಣವೊಂದರಲ್ಲಿ ಮೃತಪಟ್ಟ ಚಾಲಕನ ಕುಟುಂಬಕ್ಕೆ ಪರಿಹಾರ ನಿರಾಕರಿಸಿದ್ದ ಅಪಘಾತ ಪರಿಹಾರ ನ್ಯಾಯಮಂಡಳಿ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ವಿ.ಹೊಸಮನಿ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ. ಪ್ರಕರಣವನ್ನು ನ್ಯಾಯಮಂಡಳಿಗೆ ವಾಪಸ್​ ಕಳಿಸಿರುವ ಪೀಠ, ಹೊಸದಾಗಿ ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿದೆ.
ಮದ್ಯ ಸೇವಿಸಿರುವುದು ಮತ್ತು ಮದ್ಯದ ಪ್ರಭಾವದಲ್ಲಿರುವುದು ಎರಡೂ ಭಿನ್ನ ಸಂಗತಿಗಳು. ಮೋಟಾರು ವಾಹನ ಕಾಯ್ದೆಯ ಸೆಕ್ಷನ್​ 185ರಲ್ಲಿ ಮದ್ಯದ ಪ್ರಮಾಣಕ್ಕೆ ಮಿತಿ ನಿಗದಿಪಡಿಸಲಾಗಿದೆ. ಇದರಿಂದ ಮದ್ಯ ಸೇವನೆ ಮತ್ತು ಅದರ ಪ್ರಭಾವಕ್ಕೆ ಒಳಗಾಗಿರುವುದು ಒಂದೇ ಸಂಗತಿಯಲ್ಲ ಎಂದು ಸ್ಪಷ್ಟವಾಗುತ್ತದೆ. ಕೇವಲ ಮದ್ಯದ ವಾಸನೆ ಆಧರಿಸಿ ಮೃತನು ಮದ್ಯದ ಪ್ರಭಾವದಲ್ಲಿದ್ದ ಎಂದು ಊಹಿಸಲು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ. 

ಜೀರ್ಣವಾಗದಿದ್ದರೂ ವಾಸನೆ:

ಅಪಘಾತಕ್ಕೆ ಪ್ರತ್ಯಕ್ಷ ಸಾಯಾಗಿದ್ದವರನ್ನು ವಿಚಾರಣೆ ನಡೆಸಿಲ್ಲ. ಚಾಲಕ ಮದ್ಯದ ಪ್ರಭಾವದಲ್ಲಿದ್ದ ಎಂಬ ವಾದಕ್ಕೆ ಮರಣೋತ್ತರ ಪರೀಕ್ಷೆ ವರದಿ ಮಾತ್ರ ಆಧಾರವಿದೆ. ಆದರೆ, ಹೊಟ್ಟೆಯಲ್ಲಿ ಜೀರ್ಣವಾಗದ ಆಹಾರ ಹುದುಗುವಿಕೆಯಿಂದಲೂ ಮದ್ಯದ ವಾಸನೆ ಬರಬಹುದಾಗಿದೆ ಎಂಬ ಸಾಧ್ಯತೆಯನ್ನು ವೈದ್ಯರ ವರದಿಯೂ ತಳ್ಳಿಹಾಕಿಲ್ಲ. ಆದ್ದರಿಂದ, ಮದ್ಯದ ವಾಸನೆ ಇತ್ತು ಎಂಬ ವೈದ್ಯರ ಹೇಳಿಕೆ ಆಧರಿಸಿ ಮೃತ ಚಾಲಕ ಮದ್ಯದ ಪ್ರಭಾವದಲ್ಲಿದ್ದರು ಎಂದು ನಿರ್ಧರಿಸಿರುವ ನ್ಯಾಯಮಂಡಳಿಯ ಕ್ರಮ ಸರಿಯಲ್ಲ ಎಂದು ಹೈಕೋರ್ಟ್​ ಹೇಳಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net