ಬದುಕಿಗೆ ಬೆಳಕಾದವರು: ಶಿಕ್ಷಕರ ಬಗ್ಗೆ ಸಚಿವರ ಮನದಾಳದ ಮಾತು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಕಠಿಣ ಶಿಸ್ತು ನಮ್ಮನ್ನು ಗಟ್ಟಿ ಮಾಡುತ್ತೆ

ನಾನು ಹುಟ್ಟಿ ಬೆಳೆದ ಕನಕಪುರದ ಮಣ್ಣಿನಿಂದ ಹಿಡಿದು, ಇವತ್ತು ನಾಡಿನ ಸೇವೆ ಮಾಡುವ ಈ ಜವಾಬ್ದಾರಿಯ ತನಕ ನಡೆದುಬಂದ ದಾರಿಯನ್ನು ನೆನಪಿಸಿಕೊಂಡರೆ ನನ್ನ ಕಣ್ಣಮುಂದೆ ಮೊದಲು ಬರುವುದೇ ನನ್ನ ಗುರುಗಳ ಮಾರ್ಗದರ್ಶನ. ಶಾಲೆಯಲ್ಲಿ ಕಲಿಯುವಾಗ ನಮಗೆ ಮೇಷ್ಟ್ರುಗಳ ಬೆಲೆ ಅಷ್ಟು ಗೊತ್ತಾಗಲ್ಲ. ಆದರೆ ಬದುಕಿನ ಏಳುಬೀಳುಗಳನ್ನೆಲ್ಲ ದಾಟಿ ಈ ಮಟ್ಟಕ್ಕೆ ಬಂದು ನಿಂತಾಗ, ಆವತ್ತು ನಮ್ಮನ್ನು ತಿದ್ದಿ ತೀಡಿದ ಅವರ ಬೆಲೆ ಎಷ್ಟಿತ್ತು ಎಂದು ಅರ್ಥವಾಗುತ್ತದೆ. ಅಧಿಕಾರ, ಸ್ಥಾನಮಾನ ಏನೇ ಬರಲಿ, ಅಕ್ಷರ ಕಲಿಸಿದ ಗುರುಗಳ ಮುಂದೆ ನಾವೆಂದಿಗೂ ಕೈಮುಗಿದು ನಿಲ್ಲುವ ಶಿಷ್ಯರು ಮಾತ್ರ.

ಚಿಕ್ಕಂದಿನಲ್ಲಿ ನಾನೊಬ್ಬ ತುಂಟ ಹುಡುಗ. ಓದಿಗಿಂತ ಆಟ, ಚರ್ಚೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲೇ ಹೆಚ್ಚು ಆಸಕ್ತಿ. ಆದರೆ ನನಗೆ ಐದರಿಂದ ಏಳನೇ ತರಗತಿವರೆಗೆ ಕಲಿಸಿದ ಗುರುಗಳು, ನನ್ನೊಳಗಿನ ನಾಯಕತ್ವದ ಗುಣಗಳನ್ನು ಆಗಲೇ ಗುರುತಿಸಿ ಪೋ›ತ್ಸಾಹಿಸಿದರು. ಓಡುವ ಕುದುರೆ ಮೇಲೆ ಯಾರಾದರೂ ಸವಾರಿ ಮಾಡಬಹುದು, ಆದರೆ ಓಡಲಾರದ ಕುದುರೆಯನ್ನು ರೇಸ್​ಗೆ ಅಣಿಗೊಳಿಸುವುದು ನಿಜವಾದ ಶಿಕ್ಷರಿಂದ ಮಾತ್ರ ಸಾಧ್ಯ.

ನಮ್ಮೊಳಗಿನ ಸಾಧ್ಯತೆಗಳು ನಮಗೇ ತಿಳಿಯುವ ಮೊದಲೇ ಶಿಕ್ಷಕರು ಅದನ್ನು ಗುರುತಿಸುತ್ತಾರೆ. ಇನ್ನು ನ್ಯಾಷನಲ್ ಪಬ್ಲಿಕ್ ಸ್ಕೂಲ್​ನಲ್ಲಿ ನನಗಾದ ಅನುಭವ ನನ್ನ ಬದುಕನ್ನೇ ಬದಲಿಸಿಬಿಟ್ಟಿತು. ಶಾಲೆಯ ಕಟ್ಟುನಿಟ್ಟಾದ ಓದಿಗೆ ಹೊಂದಿಕೊಳ್ಳೋದಕ್ಕೆ ಆಗದಿದ್ದಾಗ, ಡಾ.ಕೆ.ಪಿ.ಗೋಪಾಲಕೃಷ್ಣ ಸರ್ ನನಗೆ ಟಿಸಿ ಕೊಟ್ಟು ಕಳುಹಿಸಿಬಿಟ್ಟರು. ಹುಡುಗಾಟದ ವಯಸ್ಸಲ್ಲಿ ಅದು ಬೇಸರ ತಂದಿದ್ದು ನಿಜ. ಆದರೆ ಅದೇ ನೋವು ನನ್ನಲ್ಲಿ ಒಂದು ಹಠ ಹುಟ್ಟಿಸಿತು. ಸೋಲೊಪ್ಪಿಕೊಳ್ಳದೆ ಮುಂದೆ ಸಾಗೋಕೆ, ಮುಂದೆ ನಾನೇ ದೊಡ್ಡ ಶಿಕ್ಷಣ ಸಂಸ್ಥೆಗಳನ್ನು ಕಟ್ಟಬೇಕು ಅನ್ನೋ ಛಲ ತಂದುಕೊಟ್ಟಿತು.

ನಾನು ಶಾಸಕನಾಗಿ ವಿಧಾನಸಭೆಗೆ ಬಂದು, ಅಲ್ಲಿದ್ದ ಘಟಾನುಘಟಿ ನಾಯಕರಾದ ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್, ಬಂಗಾರಪ್ಪ, ವೀರಪ್ಪ ಮೊಯ್ಲಿ, ಎಸ್.ಎಂ ಕೃಷ್ಣ, ನಂಜೇಗೌಡ, ಎಂ ಸಿ ನಾಣಯ್ಯ, ಎ.ಕೆ ಸುಬ್ಬಯ್ಯ ಅವರ ವಾಗ್ಚಾತುರ್ಯ, ಪಾಂಡಿತ್ಯ ಕಂಡಾಗ ವಿದ್ಯೆಯ ಮಹತ್ವ ಅರಿವಾಯಿತು. ಹೀಗಾಗಿ 46ನೇ ವಯಸ್ಸಿನಲ್ಲಿ ಎಂಎ ಪೊಲಿಟಿಕಲ್ ಸೈನ್ಸ್ ಪರೀಕ್ಷೆ ಬರೆದು ಪಾಸು ಮಾಡಿದೆ. ಪ್ರೀತಿಯಿಂದ ತಿದ್ದೋ ಮಾತಷ್ಟೇ ಅಲ್ಲ, ಮಕ್ಕಳನ್ನು ದಾರಿಗೆ ತರೋಕೆ ಮಾಡುವ ಕಠಿಣ ಶಿಸ್ತು ನಮ್ಮನ್ನು ಗಟ್ಟಿ ಮಾಡುತ್ತೆ ಅನ್ನೋದಕ್ಕೆ ನನ್ನ ಬದುಕೇ ಸಾಕ್ಷಿ.

| ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ
.........................
232 ಗ್ರೇಡ್-2 ತಹಶೀಲ್ದಾರ್‌ಗಳಿಗೆ ಗ್ರೇಡ್-1 ಹುದ್ದೆಗೆ ಭಡ್ತಿ : ಡಿಸಿಎಂ ಡಾ.ಜಿ. ಪರಮೇಶ್ವರ್
ಜ್ಞಾನಸಂಪತ್ತಿನ ಕೃಷ್ಣಶಾಸ್ತ್ರಿ

ನನ್ನ ಜೀವನದಲ್ಲಿ ಇಬ್ಬರು ಉಪಾಧ್ಯಾಯರನ್ನು ಸ್ಮರಿಸಿಕೊಳ್ಳುತ್ತೇನೆ. ಒಬ್ಬರು ನಾನು ಹೈಸ್ಕೂಲ್​ನಲ್ಲಿ ವ್ಯಾಸಂಗ ಮಾಡುವಾಗ ರಾಮಯ್ಯ ಎಂಬ ಕನ್ನಡ ಮೇಷ್ಟ್ರು ಇದ್ದರು. ಅವರು ಎಷ್ಟು ಶಿಸ್ತು ಮತ್ತು ಖಡಕ್ ಆಗಿ ಇದ್ದರು ಅಂತ ಹೇಳಿದ್ರೆ ಬಹುಶಃ ನಮಗೆಲ್ಲ ಒಂದು ರೀತಿಯಲ್ಲಿ ಆ ಶಿಸ್ತು, ಸಂಯಮ, ಸೂಕ್ಷ್ಮವಾಗಿ ವಿಚಾರಗಳನ್ನು ನೋಡುವಂಥ ಸ್ವಭಾವ ಬಂದಿದ್ದರೆ ಅದಕ್ಕೆ ಅವರೇ ಕಾರಣ. ಮತ್ತೊಬ್ಬ ಉಪಾಧ್ಯಾಯರನ್ನು ಸ್ಮರಿಸುವೆ. ನಾನು ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಗೆ ಸೇರಿದ ಮೇಲೆ ಅಲ್ಲಿ ಕೃಷ್ಣಶಾಸ್ತ್ರಿ ಎಂಬುವರು ನನಗೆ ಪೊ›ಫೆಸರ್ ಆಗಿದ್ದರು. ಕೃಷ್ಣಶಾಸ್ತ್ರಿಯವರು ಅಮೆರಿಕದಲ್ಲಿ ವ್ಯಾಸಂಗ ಮಾಡಿ ಅಲ್ಲೇ ಕೆಲಸ ಮಾಡುತ್ತಿದ್ದವರು. ಬೆಂಗಳೂರಿಗೆ ಬಂದು ವಿಶ್ವವಿದ್ಯಾಲಯದಲ್ಲಿ ಉಪಾಧ್ಯಾಯರಾಗಿ, ಪೊ›ಫೆಸರ್ ಆಗಿ, ನಂತರ ವಿಭಾಗ ಮುಖ್ಯಸ್ಥರಾಗಿ, ನಿರ್ದೇಶಕರಾಗಿ ನಿವೃತ್ತಿ ಹೊಂದಿದರು, ಅಷ್ಟು ಅಗಾಧ ಜ್ಞಾನಸಂಪತ್ತು ಇದ್ದಂಥ ಪೊ›ಫೆಸರ್​ರನ್ನು ನನ್ನ ಜೀವನದಲ್ಲಂತೂ ಮತ್ತೆ ನೋಡಲೇ ಇಲ್ಲ. ಕೃಷಿ ವಿಶ್ವವಿದ್ಯಾಲಯದಲ್ಲಿ ಸಾಕಷ್ಟು ಬದಲಾವಣೆ ತಂದರು. ನನ್ನ ಜೀವನದಲ್ಲಿ ಕೂಡ ಅವರು ಬದಲಾವಣೆಯನ್ನು ತಂದರು. ಇವತ್ತು ನಾನೇನಾದರೂ ಈ ಸ್ಥಾನದಲ್ಲಿ ಈ ರೀತಿ ಇದ್ದೇನೆ ಅಂತ ಹೇಳಿದರೆ ಅದಕ್ಕೆ ಈ ಇಬ್ಬರು ಮಹನೀಯರು ಕಾರಣ.

| ಡಾ. ಜಿ.ಪರಮೇಶ್ವರ್ ಉಪ ಮುಖ್ಯಮಂತ್ರಿ
...............................
ಅಜಯ್ ಸಿಂಗ್ (ಕರ್ನಾಟಕ ರಾಜಕಾರಣಿ) - ವಿಕಿಪೀಡಿಯಾ
ಮರೆಯಲಾಗದ ಮಾರ್ಗದರ್ಶನ

ಬೆಂಗಳೂರಿನ ಸದಾಶಿವನಗರದ ಪೂರ್ಣಪ್ರಜ್ಞ ಎಜುಕೇಶನ್ ಟ್ರಸ್ಟ್ ಶಾಲೆ ನನ್ನ ಬದುಕಿಗೆ ಅಡಿಪಾಯ ಹಾಕಿದ ಸ್ಥಳ. ಇಂದು ನಾನು ಯಾವ ಸ್ಥಾನದಲ್ಲಿದ್ದರೂ, ಅದರ ಹಿಂದೆ ನನ್ನ ಶಿಕ್ಷಕರ ಆಶೀರ್ವಾದ ಮತ್ತು ಮಾರ್ಗದರ್ಶನವೇ ಇದೆ. ನಮ್ಮ ಶಾಲೆಯ ಪ್ರಾಂಶುಪಾಲರಾಗಿದ್ದ ಎಲ್.ವಿ.ಆರ್. ಅಯ್ಯಂಗಾರ್ ಅವರು ನನಗೆ ಇನ್ನೂ ಕಣ್ಣಮುಂದೆ ಕಾಣಿಸುತ್ತಾರೆ. ಪ್ರತಿದಿನ ಸೂಟು-ಬೂಟು ಧರಿಸಿ ಶಿಸ್ತಿನಿಂದ ಶಾಲೆಗೆ ಬರುತ್ತಿದ್ದರು. ಅವರನ್ನು ಕಂಡರೆ ನಮಗೆ ಸಹಜವಾಗಿಯೇ ಗೌರವ ಮೂಡುತ್ತಿತ್ತು. ಅವರು ಪ್ರಾಂಶುಪಾಲರಷ್ಟೇ ಅಲ್ಲ, ನಮ್ಮ ಬದುಕಿಗೆ ದಾರಿದೀಪವಾಗಿದ್ದರು. ‘ಹಣ ಸಂಪಾದನೆಗಿಂತ ವಿದ್ಯೆ ಸಂಪಾದನೆ ದೊಡ್ಡದು. ಪರಿಶ್ರಮದಿಂದ ಓದಿ, ಜೀವನದಲ್ಲಿ ದೊಡ್ಡವರಾಗಿ’ ಎಂಬ ಅವರ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿ ಮೊಳಗುತ್ತವೆ. ಪ್ರಾಂಶುಪಾಲರಾಗಿದ್ದರೂ ಸ್ವತಃ ತರಗತಿಗೆ ಬಂದು ಪಾಠ ಮಾಡುತ್ತಿದ್ದರು. ಪುಸ್ತಕದ ಪಾಠದ ಜೊತೆಗೆ ಬದುಕಿನ ಪಾಠವನ್ನೂ ಕಲಿಸುತ್ತಿದ್ದರು. ಅವರ ಪ್ರತಿಯೊಂದು ಮಾತು, ಪ್ರತಿಯೊಂದು ಸಲಹೆ ನನ್ನ ವ್ಯಕ್ತಿತ್ವವನ್ನು ರೂಪಿಸಿತು. ನಾನು ಇಂದು ಈ ಎತ್ತರಕ್ಕೆ ಬೆಳೆಯಲು ಅವರ ಮಾರ್ಗದರ್ಶನವೇ ಪ್ರಮುಖ ಕಾರಣ. ನಮ್ಮ ಶಾಲೆಯ ಮತ್ತೊಬ್ಬ ಶಿಕ್ಷಕಿ ಗೀತಾ ಪದ್ಮನಾಭನ್ ಅವರನ್ನೂ ಸದಾ ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತೇನೆ. ಅವರು ವಿದ್ಯೆಯನ್ನಷ್ಟೇ ಅಲ್ಲ, ವಿನಯ, ಶಿಸ್ತು, ಮಾನವೀಯತೆ ಮತ್ತು ಉತ್ತಮ ನಡವಳಿಕೆಯ ಮೌಲ್ಯಗಳನ್ನು ಕಲಿಸಿದರು.

| ಅಜಯ್ ಸಿಂಗ್ ಸಣ್ಣ ನೀರಾವರಿ, ವಿಜ್ಞಾನ ತಂತ್ರಜ್ಞಾನ ಸಚಿವ
............................
ವಿಜಯಾನಂದ್ ಕಾಶಪ್ಪನವರ್ - ವಿಕಿಪೀಡಿಯಾ
ಜೋಶಿ ಸರ್ ಮನೆಗೇ ಬಂದಿದ್ರು!

ನಿಜ ಹೇಳಬೇಕೆಂದರೆ ಐದನೇ ತರಗತಿಯಿಂದಲೇ ಶಾಲೆಗೆ ಹೋಗುವುದು ಬೇಡ ಎಂಬ ದೃಢನಿರ್ಧಾರಕ್ಕೆ ಬಂದಿದ್ದೆ. ತಂದೆ ಎಸ್.ಆರ್. ಕಾಶಪ್ಪನವರ್ ಅವರಂತೆ ನಾನು ಕೂಡ ಒಬ್ಬ ಯಶಸ್ವಿ ಕೃಷಿಕನಾಗ ಬೇಕೆಂಬ ಕನಸು ಕಂಡಿದ್ದೆ. ಆದರೆ, ಅಂದು ನನಗೆ ದೇವರ ರೂಪದಲ್ಲಿ ಕಂಡಿದ್ದು ಪ್ರಾಥಮಿಕ ಶಾಲೆಯ ಶಿಕ್ಷಕ ಪ್ರಹ್ಲಾದ್ ಜೋಶಿ ಅವರು. ನಾನು ಶಾಲೆಗೆ ಬರುತ್ತಿಲ್ಲವೆಂಬ ವಿಷಯ ತಿಳಿದ ಗುರುಗಳು, ತಕ್ಷಣವೇ ಮನೆಗೆ ಬಂದು ನಮ್ಮ ತಂದೆಯವರನ್ನು ವಿಚಾರಿಸಿ ಮಗನನ್ನು ಶಾಲೆಗೆ ಕಳುಹಿಸಿ ಕೊಡಿ ಎಂದು ಮನವೊಲಿಸಿದರು. ಆಗ ತಂದೆಯವರು, ‘ಅವನು ಕೂಡ ಕೃಷಿಕನಾಗಬೇಕೆಂಬ ಕನಸು ಕಂಡಿದ್ದಾನೆ. ಸಾಧ್ಯವಾದರೆ ನೀವೇ ಬುದ್ಧಿ ಹೇಳಿ’ ಎಂದು ಗುರುಗಳ ಮೇಲೆ ಜವಾಬ್ದಾರಿ ಹಾಕಿದರು. ಆಗ ಜೋಶಿಯವರು, ‘ಏನೇ ತೊಂದರೆ ಇದ್ದರೂ ನಾನು ಸರಿಪಡಿಸುತ್ತೇನೆ. ಮೊದಲು ಶಾಲೆಗೆ ಬಾ’ ಎಂದು ಸ್ವಲ್ಪ ಏರಿದ ದನಿಯಲ್ಲಿ ಹೇಳಿದರು. ಮರುದಿನವೇ ಶಾಲೆಗೆ ಹೋದೆ. ನನ್ನನ್ನು ಪ್ರತಿ ಹಂತದಲ್ಲೂ ಬದ್ಧಿ ಹೇಳಿ, ಶಿಕ್ಷಣದ ಅಗತ್ಯವನ್ನು ಮನದಟ್ಟು ಮಾಡಿ ಕೊಟ್ಟರು. ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ ಮುಗಿಸಿದ ಬಳಿಕ ಬೆಂಗಳೂರಿನ ಎಂ.ಎಸ್ ರಾಮಯ್ಯ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗವನ್ನು ಪೂರ್ಣಗೊಳಿಸಿದೆ. ನಾನು ವೈದ್ಯನಾಗಬೇಕೆಂಬ ಕನಸನ್ನು ತಂದೆ ಮತ್ತು ತಾಯಿ ಕಂಡಿದ್ದರು. ಆದರೆ, ಮುಂದೆ ನಡೆದದ್ದು ಬೇರೆಯೇ ಆಗಿತ್ತು. ಅನಿವಾರ್ಯ ಕಾರಣದಿಂದ ಸಾರ್ವಜನಿಕ ಕ್ಷೇತ್ರಕ್ಕೆ ಕಾಲಿಟ್ಟೆ.

| ವಿಜಯಾನಂದ ಕಾಶಪ್ಪನವರ್ ಸಣ್ಣ ಕೈಗಾರಿಕೆ ಸಚಿವ
........................

ಪ್ರೋತ್ಸಾಹ ಮತ್ತು ಕಾಳಜಿ

ಬೆಂಗಳೂರಿನ ವಿಲ್ಸನ್ ಗಾರ್ಡನ್​ನ ಹೊಂಬೇಗೌಡ ಶಾಲಾ ದಿನಗಳಲ್ಲಿ ದೊರೆಸ್ವಾಮಿ, ತಾರಾಬಾಯಿ ಹಾಗೂ ಜಯಲಕ್ಷ್ಮಿ ಅವರು ನನ್ನ ವಿದ್ಯಾಭ್ಯಾಸಕ್ಕೆ ಅಪಾರವಾದ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಿದ್ದಾರೆ. ಅವರ ಬೋಧನೆ ಮತ್ತು ಕಾಳಜಿಯಿಂದ ವಿದ್ಯಾಭ್ಯಾಸದ ಮಹತ್ವವನ್ನ ಅರಿತುಕೊಳ್ಳಲು ಸಾಧ್ಯವಾಯಿತು. ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರೊ.ಇಸ್ರೇಲ್ ಹಾಗೂ ಪ್ರೊ.ವೆಂಕಟಸ್ವಾಮಿ ಅವರು ನನ್ನ ಕಾಲೇಜು ಶಿಕ್ಷಣಕ್ಕೆ ಮಾರ್ಗದರ್ಶನ ನೀಡಿದರು. ಅವರ ಬೋಧನೆ ಮತ್ತು ವ್ಯಕ್ತಿತ್ವವು ನನ್ನ ಜೀವನದಲ್ಲಿ ಉತ್ತಮ ಬದಲಾವಣೆಯನ್ನು ತಂದಿತು. ಈ ಎಲ್ಲ ಗೌರವಾನ್ವಿತ ಶಿಕ್ಷಕರ ಮಾರ್ಗದರ್ಶನ ಮತ್ತು ಬೆಂಬಲದಿಂದ ವಿದ್ಯಾಭ್ಯಾಸವನ್ನಷ್ಟೇ ಅಲ್ಲದೆ, ಸಾಮಾಜಿಕ ಜವಾಬ್ದಾರಿ, ಮಾನವೀಯತೆ, ಮಾನವ ಕಲ್ಯಾಣ, ಸಮಾಜದ ಬಗ್ಗೆ ಕಾಳಜಿ ಮತ್ತು ಉತ್ತಮ ನಾಗರಿಕ ಮೌಲ್ಯಗಳನ್ನು ಕಲಿತಿದ್ದೇನೆ.

| ರಾಮಲಿಂಗಾರೆಡ್ಡಿ ಅರಣ್ಯ ಸಚಿವ  
..............
ಸ್ವಾಮೀಜಿಯೇ ಪಾಠ ಮಾಡಿದರು

ಹೈಸ್ಕೂಲ್ ಶಿಕ್ಷಣವನ್ನು ತುಮಕೂರಿನ ಶ್ರೀ ಸಿದ್ದಗಂಗಾ ಮಠದಲ್ಲಿ ಪೂರೈಸಿದೆ. ಮಠದಲ್ಲಿ ನನಗೆ ಎಲ್ಲ ಶಿಕ್ಷಕರೂ ಅಚ್ಚುಮೆಚ್ಚು. ಇದರಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಪ್ರತಿದಿನ ಸ್ಮರಿಸುತ್ತೇನೆ. ಜ್ಞಾನ ಸಂಪಾದನೆಯ ಮೂಲಕ ಒಳ್ಳೆಯ ಜೀವನ ರೂಪಿಸಿಕೊಂಡಿದ್ದೇನೆ ಎಂದರೆ ಅದು ಶ್ರೀ ಶಿವಕುಮಾರ ಸ್ವಾಮೀಜಿ ಅವರಿಂದ ಎಂದು ಹೇಳಲು ಹೆಮ್ಮೆ ಇದೆ. ಶ್ರೀಗಳು ವಾರಕ್ಕೆ ಒಮ್ಮೆ ತರಗತಿಗೆ ಬಂದು ಇಂಗ್ಲಿಷ್ ಪಾಠ ಮಾಡುತ್ತಿದ್ದರು. ಆದರಿಂದ ಎಲ್ಲ ಶಿಕ್ಷಕರಿಗಿಂತ ಶಿವಕುಮಾರ ಶ್ರೀಗಳು ಹೇಳಿಕೊಟ್ಟ ಪಠ್ಯದ ಪಾಠ ಮತ್ತು ನೀತಿಪಾಠಗಳನ್ನೇ ಜೀವನದಲ್ಲಿ ಹೆಚ್ಚಾಗಿ ಅಳವಡಿಸಿ ಕೊಂಡಿದ್ದೇನೆ.

| ಎನ್. ಚಲುವರಾಯಸ್ವಾಮಿ ಜಲಸಂಪನ್ಮೂಲ ಇಲಾಖೆ ಸಚಿವ
......................................
ಎಲ್ಲರೊಳಗೊಂದಾಗು... ಎಂಬ ಸ್ಪೂರ್ತಿಮಾತು

ನನಗೆ ಸಮಾನತೆಯ ಪಾಠ ಕಲಿಸಿದ ಮೊದಲ ಗುರು ಧಾರ್! ಆದರೆ ಸಚ್ಚಾರಿತ್ರ್ಯವಂತರಾಗಿ ಬದುಕುವಂತೆ ಹೇಳಿಕೊಟ್ಟವರು ಎಸ್.ವಿ.ಮಲ್ಲಪ್ಪ. ನಾನಾಗ ಬೀದರ್​ನ ಮಾಣಿಕ್ ಪಬ್ಲಿಕ್ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದೆ. ಅಲ್ಲಿ ಧಾರ್ ಎಂಬ ಪ್ರಾಚಾರ್ಯರಿದ್ದರು. ಆಗ ನನ್ನ ತಂದೆ ಶಾಸಕರಾಗಿದ್ದರು. ಒಂದು ದಿನ ಮನೆಯಿಂದ ಊಟದ ಕ್ಯಾರಿಯರ್ ಬಂದಿತು. ಆಗ ಧಾರ್ ನನ್ನನ್ನು ಕರೆದು, ‘ನೀನೊಬ್ಬ ಕ್ಯಾರಿಯರ್ ಊಟ ಮಾಡಿದರೆ ಮಿಕ್ಕವರಿಗೆ ಬೇಸರ ಆಗಬಹುದು’ ಎಂದರು. ನನಗೂ ಹೌದೆನಿಸಿತು. ‘ಎಲ್ಲರೊಳಗೊಂದಾಗು...’ ಎಂಬ ಡಿವಿಜಿ ಅವರ ಮಾತಿನಂತೆ ನಡೆದುಕೊಂಡೆ. ನನ್ನ ಮಕ್ಕಳಿಗೂ ಇದನ್ನೇ ಹೇಳಿಕೊಟ್ಟೆ. ನನ್ನ ಪುತ್ರ ಡಾ.ಗುರುಪ್ರಸಾದ್ ಎಂಬಿಬಿಎಸ್, ಎಂಡಿ ಮಾಡಿ ಘಟಿಕೋತ್ಸವಕ್ಕೆ ಹೋಗುವ ತನಕ ಅವರ ಸಹಪಾಠಿಗಳಿಗೆ ಅವನು ನನ್ನ ಮಗ ಎಂದು ತಿಳಿದಿರಲಿಲ್ಲ. ಕಲ್ಬುರ್ಗಿಯ ಪಿಡಿಎ ಕಾಲೇಜ್ ಆಫ್ ಇಂಜಿನಿಯರಿಂಗ್​ನಲ್ಲಿ ಓದುತ್ತಿದ್ದಾಗ ಎಸ್.ವಿ.ಮಲ್ಲಪ್ಪ ಎಂಬ ಪ್ರಾಚಾರ್ಯರಿದ್ದರು. ನಿತ್ಯಹಾಸ್ಟೆಲ್ ಕೊಠಡಿಗೆ, ಆಟದ ಮೈದಾನಕ್ಕೆ ಬಂದು ನಮ್ಮನ್ನು ಗಮನಿಸುತ್ತಿದ್ದರು. ನಶೆಮುಕ್ತವಾಗಿ, ಚಾರಿತ್ರ್ಯವಂತರಾಗಿ ಸಮಾಜ ಕೊಂಡಾಡುವಂತೆ ಬದುಕಬೇಕು ಎಂದು ಸದಾ ಸ್ಪೂರ್ತಿ ತುಂಬುತ್ತಿದ್ದರು.

| ಈಶ್ವರ ಖಂಡ್ರೆ ಪಂಚಾಯತ್ ರಾಜ್ ಸಚಿವ
.....................
ಇವನು ರಾಜಕಾರಣಿ ಆಗುತ್ತಾನೆ!

ನಾನೋ ತುಂಬ ತುಂಟ! ನನ್ನ ಗೆಳೆಯರ ಬಳಗವೂ ದೊಡ್ಡದಿತ್ತು. ಶಾಲೆಗೆ ಚಕ್ಕರ್ ಹೊಡೆದು ಸ್ನೇಹಿತರ ಜತೆ ಸಿನಿಮಾಕ್ಕೆ, ಈಜಾಡಲು ಬಾವಿಗೆ ಹೋಗುತ್ತಿದ್ದೆ. ಹಾಗಂತ ಓದಿನಲ್ಲಿ ಹಿಂದೇನೂ ಇರಲಿಲ್ಲ. ಒಮ್ಮೆ ಗೆಳೆಯರ ಜತೆ ಈಜಾಡಲು ಬಾವಿಗೆ ಹೋಗಿದ್ದೆ. ಜತೆಗಿದ್ದವರು ಒಂದು ರೂಪಾಯಿ ನಾಣ್ಯ ಬಾವಿಗೆ ಎಸೆಯುತ್ತಿದ್ದರು. ನಾನು ಬಾವಿಯಲ್ಲಿ ಮುಳುಗಿ ಅದನ್ನು ಮೇಲೆತ್ತಿಕೊಂಡು ಬರುತ್ತಿದ್ದೆ. ಇದು ಹೇಗೋ ಶಾಲೆಯಲ್ಲಿ ಗೊತ್ತಾಗಿಬಿಡ್ತು. ‘ಹುಷಾರಾಗಿರು, ಅಂತಹ ಸಾಹಸ ಮಾಡಬೇಡ’ ಎಂದು ಹೇಳಿ ಎಚ್ಚರಿಸಿದ್ದು ನಮ್ಮ ಶಿಕ್ಷಕರು. ಆ ಘಟನೆ ಇನ್ನೂ ನೆನಪಿದೆ. ನಾನು ಓದಿದ್ದು ದಾವಣಗೆರೆ ಡಿಆರ್​ಆರ್ ಶಾಲೆಯಲ್ಲಿ. ಅಲ್ಲಿ ಮಂಜನಾಥ್ ಎಂಬ ಪ್ರಾಚಾರ್ಯರು, ಎಂ.ಆರ್.ಗೋಪಾಲಕೃಷ್ಣ ಹಾಗೂ ಪ್ರಭುದೇವ ಪೂಜಾರ್ ಎಂಬ ಶಿಕ್ಷಕರಿದ್ದರು. ‘ಇವನು ರಾಜಕಾರಣಿ ಆಗುತ್ತಾನೆ’ ಎಂದು ನನಗೆ ಪಾಠ ಹೇಳಿದ ಶಿಕ್ಷಕರು ಆಗಲೇ ಗುರುತಿಸಿ ಬಿಟ್ಟಿದ್ದರು. ಅದು ನಿಜವೂ ಆಗಿದೆ. ‘ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ಸಾರ್ವಜನಿಕ ಸೇವೆ ಮಾಡಬೇಕು’ ಎಂದು ಹೇಳುತ್ತಿದ್ದರು. ನಾನಿಂದು ಈ ಮಟ್ಟಕ್ಕೆ ಬೆಳೆದಿದ್ದರೆ, ನಿಸ್ವಾರ್ಥದಿಂದ ಸಮಾಜಸೇವೆ ಮಾಡುತ್ತಿದ್ದರೆ ನನಗೆ ಪಾಠ ಕಲಿಸಿದ ಶಿಕ್ಷಕರು ಕಾರಣ ಎಂಬುದು ನಿಸ್ಸಂದೇಹ.

| ಎಸ್.ಎಸ್.ಮಲ್ಲಿಕಾರ್ಜುನ್ ತೋಟಗಾರಿಕೆ ಸಚಿವ
.........................

ದಾರಿದೀಪವಾದ ಟೀಚರ್

ನಾನು ವಿದ್ಯಾಭ್ಯಾಸ ಪೂರೈಸಿದ ಸಂಡೂರಿನ ಎಸ್​ಆರ್​ಎಸ್ ಶಾಲೆಯ ಎಲ್ಲ ಶಿಕ್ಷಕರು ಸಹ ನನ್ನನ್ನು ಹಲವು ವಿಷಯಗಳಲ್ಲಿ ತಿದ್ದಿ ತೀಡಿದ್ದಾರೆ. ಬಾಲ್ಯದಲ್ಲೇ ಅವರುಗಳೆಲ್ಲ ಕಲಿಸಿದ ನೀತಿಪಾಠಗಳು, ನೈತಿಕ ಮೌಲ್ಯಗಳು ಈಗಲೂ ನನ್ನನ್ನು ಪೊರೆಯುತ್ತಿವೆ. ಅದರಲ್ಲೂ ನಮ್ಮ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿ, ಪ್ರಾಂಶುಪಾಲರಾಗಿ ಅಮೋಘ ಸೇವೆಸಲ್ಲಿಸಿ ನಿವೃತ್ತರಾದ ಮಹಾಲಕ್ಷ್ಮಿ ಅವರು ನನ್ನ ಪಾಲಿನ ಆಲ್​ಟೈಮ್ ಬೆಸ್ಟ್ ಟೀಚರ್. ಅವರ ಇಂಗ್ಲಿಷ್ ಬೋಧನೆಯ ಶೈಲಿ, ಸುಲಭವಾಗಿ ಅರ್ಥವಾಗುವಂತೆ ಹೇಳಿಕೊಡುತ್ತಿದ್ದ ರೀತಿ, ಭಾಷೆ ಕಲಿಯಲು ಅವರು ನೀಡುತ್ತಿದ್ದ ಪೋ›ತ್ಸಾಹ ನಿಜಕ್ಕೂ ಅದ್ಭುತವಾಗಿತ್ತು. ಅಂದಿನ ಅವರ ಶ್ರಮ ಇಂದು ನನಗೆ ದಾರಿದೀಪ.

| ಸಂತೋಷ್ ಲಾಡ್ ಕಾರ್ವಿುಕ ಸಚಿವ
.................

ಪಾಠ ಕಲಿಸಿದ ಡಸ್ಟರ್ ಪೆಟ್ಟು!

ನಾನು ಓದಿದ್ದು ದಾವಣಗೆರೆಯ ಮಹಾತ್ಮಾ ಗಾಂಧಿ ಸರ್ಕಾರಿ ಶಾಲೆಯಲ್ಲಿ. ಅಲ್ಲೊಬ್ಬರು ಗಣಿತ ಮೇಸ್ಟ್ರು ಇದ್ದರು. ಬಹಳ ಬಿಗಿ. ನಾನು ನೋಡಿದರೆ ಲಾಸ್ಟ್ ಬೆಂಚ್ ವಿದ್ಯಾರ್ಥಿ. ಗಣಿತದಲ್ಲಿ ನಾನು ಅಷ್ಟಕ್ಕಷ್ಟೇ. ಒಮ್ಮೆ ಅವರು ಪಾಠ ಮಾಡುತ್ತಿದ್ದರು. ನಾನು ಹಿಂದಿನ ಬೆಂಚ್​ನಲ್ಲಿ ಹುಡುಗರ ಜತೆ ಮಾತಾಡ್ತಾ ಕೂತಿದ್ದೆ. ಮೇಸ್ಟ್ರು ಕೈಯಲ್ಲಿದ್ದ ಡಸ್ಟರ್ ಬೀಸಿ ಎಸೆದರು. ಅದು ಬಂದು ನನ್ನ ಹಣೆಗೆ ಬಿತ್ತು. ರಕ್ತವೂ ಬಂತು. ಅವತ್ತೇ ನನಗೆ ಜ್ಞಾನೋದಯ ಆಯಿತು. ಅವರು ಎಸೆದ ಡಸ್ಟರ್ ನಾನು ಓದಲಿ ಅಂತ ಎಸೆದಿದ್ದು ಎಂದು ಅರ್ಥ ಮಾಡಿಕೊಂಡೆ. ಹಿಂದಿನ ಬೆಂಚ್​ನಿಂದ ಮುಂದಿನ ಬೆಂಚ್​ಗೆ ಬಂದೆ. ಯಾವಾಗ ಮೇಸ್ಟ್ರ ದೃಷ್ಟಿ ಬಿತ್ತೋ ಕಬ್ಬಿಣದ ಕಡಲೆ ಆಗಿದ್ದ ಗಣಿತವೂ ಸುಲಭವಾಗತೊಡಗಿತು. ಈ ಮಟ್ಟಕ್ಕೆ ನಾನು ಬೆಳೆಯಲು ಇಮಾಂ ಮೇಸ್ಟ್ರು ಹಾಗೂ ಇಂಗ್ಲಿಷ್ ಕಲಿಸುತ್ತಿದ್ದ ಪದ್ಮಾ ಟೀಚರ್ ಕಾರಣ. ನನ್ನಲ್ಲಿ ಅಕ್ಷರದ ಬೀಜ ಬಿತ್ತಿದವರು ಅವರೇ.

| ಬಸವಂತಪ್ಪ ಮೀನುಗಾರಿಕೆ ಸಚಿವ
...................

ಗಣಿತ ಶಿಕ್ಷಕ ಅಚ್ಚುಮೆಚ್ಚು

ನನಗೆ ಕಾಲೇಜು ದಿನಗಳಿಗಿಂತ ಹೈಸ್ಕೂಲ್​ನಲ್ಲಿ ಪಾಠ ಹೇಳಿಕೊಟ್ಟ ಶಿಕ್ಷಕರೇ ಅಚ್ಚುಮೆಚ್ಚು. ಇದರಲ್ಲಿ ಗಣಿತ ಶಿಕ್ಷಕರಾದ ಬಾಲಕೃಷ್ಣ ಗಜೇಂದ್ರಗಡ ಅವರು ನನ್ನ ಜೀವನಕ್ಕೆ ತಿರುವು ಕೊಟ್ಟವರು. ಹೈಸ್ಕೂಲ್​ನಲ್ಲಿ ಓದುತ್ತಿದ್ದಾಗ ಗಣಿತ ಪಠ್ಯದಲ್ಲಿ ಬಹಳ ಹಿಂದೆ ಉಳಿದಿದ್ದೆ. ಎಷ್ಟೇ ಓದಿದರೂ ಮತ್ತು ಅಭ್ಯಾಸ ಮಾಡಿದರೂ ತಲೆಗೆ ಹೋಗುತ್ತಿರಲಿಲ್ಲ. ಆಗ ಬಾಲಕೃಷ್ಣ ಸರ್, ನಾನು ಗಣಿತವನ್ನು ಅರ್ಥ ಮಾಡಿಕೊಳ್ಳಲು ಎಲ್ಲಿ ತೊಂದರೆ ಅನುಭವಿಸುತ್ತಿದ್ದೆ ಎಂಬುದನ್ನು ಗುರುತಿಸಿ ಸರಳವಾಗಿ ಅರ್ಥ ಮಾಡಿಸಿಕೊಟ್ಟರು. ಇದರಿಂದ ಬಾಲಕೃಷ್ಣ ಸರ್ ಅವರನ್ನು ಈಗಲೂ ನೆನಪಿಸಿಕೊಳ್ಳುತ್ತೇನೆ. ಪ್ರತಿ ಬಾರಿ ಸಭೆ, ಸಮಾರಂಭಗಳಲ್ಲಿ- ನಾವು ಯಾವಾಗಲೂ ವೈದ್ಯರು ಮತ್ತು ಶಿಕ್ಷಕರನ್ನು ಗೌರವಿಸಬೇಕೆಂದು ಹೇಳುತ್ತೇನೆ. ಏಕೆಂದರೆ ವೈದ್ಯರು ನಮಗೆ ಜೀವನ ಕೊಡುವಂಥ ದೇವರು. ಶಿಕ್ಷಕರನ್ನು ಯಾಕೇ ಗೌರವಿಸಬೇಕೆಂದರೆ ಅವರು ನಮ್ಮ ಜೀವನವನ್ನು ರೂಪಿಸುವಂಥವರು. ಆದರಿಂದ ಈ ಇಬ್ಬರನ್ನೂ ನಾನು ಯಾವಾಗಲೂ ಗೌರವಿಸುತ್ತೇನೆ ಮತ್ತು ಪೂಜಿಸುತ್ತೇನೆ.

| ಶಿವರಾಜ ಎಸ್. ತಂಗಡಗಿ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವ
................................

ಜೀವನದ ದಿಕ್ಕನ್ನೇ ಬದಲಿಸಿದ ವೀರತ್ತಯ್ಯ ಮೇಷ್ಟ್ರು

ನಮ್ಮ ಕುಡುಕುಂದಿ ಗ್ರಾಮದಲ್ಲಿ ಎಸ್​ಎಸ್​ಎಲ್​ಸಿ ಪಾಸಾದ ಮೊದಲ ವ್ಯಕ್ತಿ ನಾನು. ಅದಕ್ಕೆ ಕಾರಣ ನನ್ನ ಶಿಕ್ಷಕ ವೀರತ್ತಯ್ಯ ಮೇಷ್ಟ್ರು. ಅವರು ನನ್ನ ಬದುಕಿನ ದಿಕ್ಕನ್ನೇ ಬದಲಿಸಿದವರು. ಗಂಡಸಿ ಸರ್ಕಾರಿ ಪ್ರೌಢಶಾಲೆಯಲ್ಲಿ ಅವರು ಶಿಕ್ಷಕರಾಗಿದ್ದರು. ಒಂದು ದಿನ ನಾನು ಗಂಡಸಿ ಆಟದ ಮೈದಾನದಲ್ಲಿ ಆಟವಾಡುತ್ತಿದ್ದೆ. ಶಾಲೆಗೆ ಹೋಗಿರಲಿಲ್ಲ. ಆಗ ಅಲ್ಲಿಗೆ ಬಂದ ಮೇಷ್ಟ್ರು ನನ್ನನ್ನು ಕರೆದು, ‘ವಿದ್ಯೆ ಎಷ್ಟು ಮುಖ್ಯ ಗೊತ್ತಾ? ನಿನಗೆ ಛಲ ಇದೆ, ಓದು ಮುನ್ನುಗ್ಗು’ ಎಂದು ಬೈದು, ಬುದ್ಧಿ ಹೇಳಿ, ಬೆನ್ನು ತಟ್ಟಿ ಶಾಲೆಗೆ ಕರೆದುಕೊಂಡು ಹೋದರು. ಆ ಒಂದು ದಿನ, ಆ ಒಂದು ಮಾತು ನನ್ನ ಬದುಕಿಗೆ ತಿರುವಾಯಿತು. ಆ ಕಾಲದಲ್ಲಿ ನಮ್ಮ ಭಾಗದಲ್ಲಿ ಬಹಳಷ್ಟು ಮಕ್ಕಳು ಎಸ್​ಎಸ್​ಎಲ್​ಸಿ ಮುಟ್ಟುವ ಮೊದಲೇ ಓದನ್ನು ಬಿಡುತ್ತಿದ್ದರು. ನಮ್ಮ ಕುಡುಕುಂದಿ ಗ್ರಾಮದಲ್ಲಿ ಯಾರೂ ಎಸ್​ಎಸ್​ಎಲ್​ಸಿ ಪಾಸಾಗಿರಲಿಲ್ಲ. ‘ನೀನು ಪಾಸಾಗಬೇಕು’ ಎಂಬ ಮೇಷ್ಟ್ರ ಮಾತನ್ನು ಮನಸ್ಸಿನಲ್ಲಿಟ್ಟುಕೊಂಡು ಕಷ್ಟಪಟ್ಟು ಓದಿದೆ. ಕೊನೆಗೆ ಪರೀಕ್ಷೆ ಬರೆದು ಪಾಸಾದೆ. ಫಲಿತಾಂಶ ಬಂದ ದಿನ ಕುರಿ ಮೇಯಿಸಲು ಹೋಗಿದ್ದೆ. ‘ಶಿವಲಿಂಗೇಗೌಡ ಪಾಸಾಗಿದ್ದಾನೆ. ನಮ್ಮೂರಿನ ಅಪಕೀರ್ತಿ ಹೋಗಿದೆ’ ಎಂದು ಇಡೀ ಊರು ಸಂಭ್ರಮಿಸಿತ್ತು. ಸಂಜೆ ಕುರಿಗಳನ್ನು ಹೊಡೆದುಕೊಂಡು ಊರಿಗೆ ಬಂದಾಗ, ಗ್ರಾಮಸ್ಥರೆಲ್ಲ ಸಂಭ್ರಮಿಸಿದರು. ಆ ಕ್ಷಣ, ಆ ಪ್ರೀತಿ, ಆ ಗೌರವವನ್ನು ನಾನು ಇಂದಿಗೂ ಮರೆತಿಲ್ಲ.

| ಶಿವಲಿಂಗೇಗೌಡ ಅಬಕಾರಿ ಸಚಿವ
......................
ತಿಮ್ಮಾರೆಡ್ಡಿ ಮೇಸ್ಟ್ರೇ ಆದರ್ಶ

ಅಕ್ಷರದ ಜತೆಗೆ ಸಮಾಜಸೇವೆಯ ಬೀಜ ಬಿತ್ತಿದವರು ನೆಚ್ಚಿನ ಶಿಕ್ಷಕರಾದ ತಿಮ್ಮಾರೆಡ್ಡಿ ಅವರು. ಚಿತ್ರದುರ್ಗ ಸಮೀಪದ ಕಡಬನಕಟ್ಟೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ ಅವರು ನನಗೆ ಶಿಸ್ತು, ಸಂಯಮ, ಸಮಾಜಸೇವೆಗೆ ಅಡಿಪಾಯ ಹಾಕಿದರು. ರಾಮಾಯಣ, ಮಹಾಭಾರತದ ಕಥೆಗಳನ್ನು ಹೇಳುವ ಮೂಲಕ ಆದರ್ಶ, ಸಾಮಾಜಿಕ, ರಾಜಕೀಯ ವಿಚಾರಗಳನ್ನು ತಿಳಿಸಿಕೊಟ್ಟಿದ್ದರು. ನಾನು ಬಳಿಕ ಇಂಜಿನಿಯರ್ ಆಗಿ ರಾಜಕಾರಣಕ್ಕೆ ಕಾಲಿಟ್ಟರೂ ಈಗಲೂ ಅವರೇ ನನಗೆ ಆದರ್ಶ. ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗುತ್ತಿದ್ದೇನೆ ಎಂಬ ಹೆಮ್ಮೆ ಇದೆ. ಅಂದಿನ ಶಾಲಾ ದಿನಗಳು ಇಂದಿಗೂ ಕಣ್ಣಮುಂದೆ ಬರುತ್ತದೆ. ಅವರ ನಿಸ್ವಾರ್ಥ ಪ್ರಯತ್ನದ ರೂಪವಾಗಿ ನನಗೊಂದು ರೂಪ ಬಂದಿದೆ. ಶಿಕ್ಷಕರ ಮಹತ್ವ ಎಷ್ಟೆಂಬುದು ಅರಿವಾಗಿದೆ.

| ಟಿ. ರಘುಮೂರ್ತಿ ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ
....................

ಜೀವನ ಪಾಠ ಕಲಿಸಿದರು

ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮ ಪುರಿಗಾಲಿಯಲ್ಲಿ ಪಡೆದೆ. ಈ ಸಂದರ್ಭದಲ್ಲಿ ಚೌಡಪ್ಪ ಶೆಟ್ಟಿ ಎಂಬ ಶಿಕ್ಷಕರು ಸಾಕಷ್ಟು ಪ್ರಭಾವ ಬೀರಿದರು. ಪಠ್ಯಕ್ರಮದ ಜತೆಗೆ ಮಕ್ಕಳ ಕಥೆಗಳು, ರಾಮಾಯಣ, ಮಹಾಭಾರತದ ಜತೆಗೆ ಆದರ್ಶ ಕಥೆಗಳ ಮೂಲಕ ಪ್ರೇರಣೆ ತುಂಬಿದರು. ರಾಜಕೀಯ ಕ್ಷೇತ್ರದಲ್ಲಿ ಬಡವರ, ಹಿಂದುಳಿದವರ ಪರವಾಗಿ ಕೆಲಸ ಮಾಡಲು ಅವರದ್ದೇ ಪ್ರೇರಣೆ. ಸಮಾಜದ ಹಿಂದುಳಿದ ವರ್ಗಗಳಿಗೆ ಸಂವಿಧಾನದ ಚೌಕಟ್ಟಿನಲ್ಲಿ ಪಾರದರ್ಶಕವಾಗಿ ಕೆಲಸ ಮಾಡುವ ಗುಣವನ್ನು ಚೌಡಪ್ಪ ಶೆಟ್ಟಿ ಗುರುಗಳಿಂದ ಕಲಿತಿದ್ದೇನೆ. ಅವರ ಆದರ್ಶಗಳನ್ನು ನನ್ನ ಕಾರ್ಯಚಟುವಟಿಕೆಗಳಲ್ಲಿ ಅಳವಡಿಸಿಕೊಂಡಿದ್ದೇನೆ.

| ಪಿ.ಎಂ.ನರೇಂದ್ರ ಸ್ವಾಮಿ ಕೃಷಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net